'ಸರ್ವ ಜನಾಂದ ಶಾಂತಿಯ ತೋಟ' ಆಶಯದೊಂದಿಗೆ 'ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ' ಪ್ರಣಾಳಿಕೆ ಬಿಡುಗಡೆ ಮಾಡಿದೆ ಕಾಂಗ್ರೆಸ್. ಮುಸ್ಲಿಮರಿಗೆ ಶೇ.4 ಮೀಸಲಾತಿ ಜಾರಿಗೆ ತರುವ ಭರವಸೆಯೊಂದಿಗೆ ಮಿತಿಯನ್ನು ಶೇ.75ಕ್ಕೆ ಏರಿಸಿದೆ. ಇದು ನಿಜವಾಗಲೂ ಕಾರ್ಯಸಾಧುವೇ?
ಪವನ್ ಕೆ ಲಕ್ಷ್ಮೀಕಾಂತ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮೇ.03): 2023ರ ಚುನಾವಣೆ ಕಾವು ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ರಂಗೇರಿಸುತ್ತಿದೆ. ಈಗಾಗಲೇ ಆಡಳಿತರೂಡ ಬಿಜೆಪಿ ಪಕ್ಷ ಸೇರಿ ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ಪಕ್ಷಗಳ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಈ ನಡುವೆ ಮುಂದಿನ ಅವಧಿಗೆ ತಮ್ಮನ್ನ ರಾಜ್ಯದ ಜನರು ಕೈ ಹಿಡಿಯಲು ಮೂರು ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿವೆ. ಮೂರು ಪಕ್ಷಗಳ ಪ್ರಣಾಳಿಕೆ ಪೈಕಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಹೊಸ ಚರ್ಚೆಗೆ ಕಾಂಗ್ರೆಸ್ ಪಕ್ಷ ಎಲ್ಲಾ ವಲಯಗಳು ಸೇರಿ ನೂರಕ್ಕೂ ಹೆಚ್ಚು ಭರವಸೆಗಳನ್ನು ನೀಡಿದೆ. ಈ ಪೈಕಿ ಕಾಂಗ್ರೆಸ್ ತಂದಿರುವ ಮೀಸಲಾತಿ ಅಸ್ತ್ರ ಜನರಿಗೆ ಗೊಂದಲ ಉಂಟು ಮಾಡಿದೆ.
ತನ್ನ ಪ್ರಣಾಳಿಕೆಯಲ್ಲಿ ಎಸ್‌ಸಿ ಸಮುದಾಯಕ್ಕೆ ಶೇ 15 ರಿಂದ 17ಕ್ಕೆ, ಎಸ್‌ಟಿ ಸಮುದಾಯಕ್ಕೆ ಶೇ 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ.4ರ ಮೀಸಲಾತಿಯನ್ನು ಮರುಸ್ಥಾಪನೆ ಮಾಡಿ ಲಿಂಗಾಯತ, ಒಕ್ಕಲಿಗ ಮತ್ತು ಮತ್ತಿತರ ಸಮುದಾಯಗಳ ಆಶೋತ್ತಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ.50 ರಿಂದ ಶೇ.75 ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಭರವಸೆನೀಡಿದೆ. ಈ ಭರವಸೆ ನಿಜಕ್ಕೂ ಸಾಧ್ಯವೇ, ಹಾಗಾದರೆ ಈ ಹಿಂದೆ ಯಾವುದಾದರೂ ಸರ್ಕಾರ ಈ ರೀತಿ ಮೀಸಲಾತಿಯನ್ನ ಹೆಚ್ಚಿಸಿದ್ಯಾ ಎಂಬ ಪ್ರಶ್ನೆ ನಮ್ಮನ್ನ ಕಾಡಲಿದೆ.
ಭಜರಂಗ ದಳ-ಪಿಎಫ್ಐ ನಿಷೇಧದಿಂದ ಏನು ಲಾಭ: ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಎಚ್‌ಡಿಕೆ ವ್ಯಂಗ್ಯ
ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಇಎಸ್ಡಬ್ಲ್ಯು ಅಡಿ ನೀಡಿರುವ ಶೆ.10ರಷ್ಟು ಮೀಸಲಾತಿ ಸೇರಿ ಶೇ.60ರಷ್ಟು ಮೀಸಲಾತಿ ವ್ಯವಸ್ಥೆ ಇದೆ. ಆದರೆ ಸಂವಿಧಾನದಲ್ಲಿ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. 2018ರಲ್ಲಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಸಮುದಾಯಗಳಿಗೆ ಶೇ.10 ರಷ್ಟು ಮೀಸಲಾತಿ ನೀಡಿದೆ. ಈ ನಡುವೆ ಇನ್ನುಳಿದ ಶೇ.15ರಷ್ಟು ಮೀಸಲಾತಿ ಏರಿಕೆ ಮಾಡಲು ಸಾಧ್ಯತೆ ಇದೆಯಾ ಎಂಬ ಪ್ರಶ್ನೆ ರಾಜ್ಯದ ಮತದಾರರ ಮುಂದಿದೆ.
ಕಾಂಗ್ರೆಸ್ ಪಕ್ಷದ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಈ ಹಿಂದೆ ತಮಿಳು ನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಮೀಸಲಾತಿ ಏರಿಸಿದೆ. ತಮಿಳುನಾಡಿನಲ್ಲಿ 1994ರಲ್ಲಿ ಶೇ.50ರಿಂದ ಶೇ.69ಕ್ಕೆ ಮಾಡಲಾಗಿದೆ. 9ನೇ ಶಡ್ಯುಲ್ಡ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಒದಗಿಸಿದೆ. ಈ ನಡುವೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಠಿಯಲ್ಲಿ ಅಲ್ಲಿನ ಬಹುಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿಕೊಂಡಿದೆ. 9ನೇ ಶೆಡ್ಯುಲ್ಡ್ ಎನ್ನುವುದು ಕೇವಲ ಭೂ ವಿವಾದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ತಮಿಳುನಾಡು ಸರ್ಕಾರ ಕೊಟ್ಟಿರುವ ಮೀಸಲಾತಿ ನೋಡುವುದಾದರೆ ಹಿಂದುಳಿದ ವರ್ಗಗಳಿಗೆ ಶೇ.30ರಷ್ಟು ಮತ್ತು ಅತಿ ಹಿಂದುಳಿದ ವರ್ಗಗಳಿಗೆ ಶೇ.30 ರಷ್ಟು, ಎಸ್ಸಿಗೆ ಶೇ.18ರಷ್ಟು, ಎಸ್ಟಿಗೆ ಶೇ. 1ರಷ್ಟು, ಜನರಲ್ ಕ್ಯಾಟಗರಿಗೆ ಶೇ.31ರಷ್ಟು ಮೀಲಸಾತಿ ನೀಡುವ ಮೂಲಕ ಮೀಸಲಾತಿ ಪ್ರಮಾಣವನ್ನ ಶೇ. 69ಕ್ಕೆ ಏರಿಸಿದ್ದಾರೆ.
ಇದೇ ರೀತಿ ಆಂಧ್ರ ಪ್ರದೇಶ ಸರ್ಕಾರವು 2004ರಲ್ಲಿ ಮುಸ್ಲಿಮರಿಗೆ 4 ಪ್ರತಿಶತ ಮೀಸಲಾತಿಯನ್ನು ಸಕ್ರಿಯಗೊಳಿಸುವ ಕಾನೂನನ್ನು ಪರಿಚಯಿಸಿತು. ಈ ಕಾನೂನನ್ನು 2010 ರಲ್ಲಿ ಮಧ್ಯಂತರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಈ ಮೂಲಕ ಆಂಧ್ರ ಪ್ರದೇಶದಲ್ಲಿ ಮೀಸಲಾತಿ ಶೇಕಡ 50% ರಷ್ಟಿದೆ. ಮಹಿಳೆಯರಿಗೆ ಒಟ್ಟಾರೆ 1/3 ಮೀಸಲಾತಿ ಸೇರಿದಂತೆ, ಶಿಕ್ಷಣ (Education) ಮತ್ತು ಸರ್ಕಾರಿ ಉದ್ಯೋಗಗಳಲ್ಲಿ (Government Jobs) ಆಂಧ್ರಪ್ರದೇಶದಲ್ಲಿ 66.66% ಸೀಟುಗಳನ್ನು ಕಾಯ್ದಿರಿಸಲಾಗಿದೆ. ಪರಿಶಿಷ್ಟ ಜಾತಿಗಳು 15%, ಪರಿಶಿಷ್ಟ ಪಂಗಡಗಳು 6%, ಹಿಂದುಳಿದ ವರ್ಗಗಳು A, B, C, D ಎಂದು ಆಧರಿಸಿ ಶೇ.27%ರಷ್ಟು ಮೀಸಲಾತಿ ನೀಡಿದೆ.
ದೈಹಿಕ ಅಂಗವಿಕಲರು 3% (ತಲಾ 1%), ಮಾಜಿ- ಸೈನಿಕರು 1%, ಮಹಿಳೆಯರಿಗೆ ಎಲ್ಲಾ ವರ್ಗದಲ್ಲಿ ಶೇ. 33.33% ಮಿಸಲಾತಿ ನೀಡಿದೆ. ಆಂಧ್ರಪ್ರದೇಶ BC ಕೋಟಾವು ಜಾತಿಗಳಿಗೆ ಉಪ-ಕೋಟಾಗಳನ್ನು ಹೊಂದಿದೆ, A, B, C ಮತ್ತು Dನಲ್ಲಿ ವರ್ಗೀಕರಿಸಲಾಗಿದೆ. ಅಂಗವಿಕಲರು, ಮಾಜಿ ಸೈನಿಕರು, ಸಾಮಾನ್ಯ ವರ್ಗದಲ್ಲಿ 16.66% ಮಹಿಳೆಯರು ಒಟ್ಟು ಮೀಸಲಾತಿ ಶೇಕಡಾವಾರು 66.66% ಮೀಲಸಾತಿ ನೀಡಲಾಗಿದೆ. ಇದೀಗ ರಾಜ್ಯ ಕಾಂಗ್ರೆಸ್ ನಾಯಕರು ಸಹ ಇದೇ ತಂತ್ರ ಉಪಯೋಗಿಸಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಮಾಡಿಸಿದ ಜಾತಿ ಜನಗಣತಿ ಆಧಾರದಲ್ಲಿಯೇ ಮೀಸಲಾತಿ ಹೆಚ್ಚಳಕ್ಕೆ ಪ್ಲಾನ್ ಮಾಡಿದೆ.
ಆದರೆ ಸದ್ಯ ರಾಜ್ಯ ಸರ್ಕಾರ ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ 2ಸಿ ಮತ್ತು 2ಡಿ ಅಡಿಯಲ್ಲಿ ಮೀಸಲಾತಿಯನ್ನ ನೀಡಿದೆ. ಈ ತಿದ್ದುಪಡಿ ಕೇಂದ್ರ ಸರ್ಕಾರ ಮಾನ್ಯಗೊಳಿಸುವ ಬಗ್ಗೆ ಯಾವುದೇ ವಾಗ್ದಾನವನ್ನ ನೀಡಿಲ್ಲ. ಈ ನಡುವೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜಾರಿಗೆ ತಂದಿರುವ ಮೀಸಲಾತಿ ಭರವಸೆ ಜಾರಿಗೆ ಆಗುತ್ತಾ ಎಂಬುದನ್ನ ಕಾದು ನೋಡಬೇಕಿದೆ. ಈ ನಡುವೆ ಕಾಂಗ್ರೆಸ್ ತನ್ನ ಭರವಸೆಯಂತೆ ಮೀಸಲಾತಿ ಹೆಚ್ಚಿಸಿದರೂ, ಕೇಂದ್ರ ಸರ್ಕಾರ ಈ ಬಿಲ್ ಪಾಸ್ ಮಾಡಬೇಕು ಆದರೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಇದಕ್ಕೆಲ್ಲಾ ಸೊಪ್ಪು ಹಾಕುತ್ತಾ ಎನ್ನುವುದೇ ಅನುಮಾನ.
ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಕಾಂಗ್ರೆಸ್ ಮ್ಯಾನಿಫೆಸ್ಟೋ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಈ ನಡುವೆ ಕೇಂದ್ರ ಸರ್ಕಾರ ಒಪ್ಪಿ, ರಾಷ್ಟ್ರಪತಿ ಅಂಗೀಕಾರಕ್ಕೆ ಕಳಿಸಬೇಕಾಗುತ್ತದೆ. ರಾಷ್ಟ್ರಪತಿ ಅಂತಿಮ ಮುದ್ರೆ ನಂತರವೂ ಈ ಕರಡನ್ನು ಸುಪ್ರೀಂ ಕೋರ್ಟ್ ಮೂಲಕ ಪ್ರಶ್ನಿಸಬಹುದು. ಸುಪ್ರೀಂಕೋರ್ಟ್ ಸರ್ಕಾರದ ಮೀಸಲಾತಿ ಕ್ರಮ ಒಪ್ಪಿದರೆ ಮಾತ್ರ ಅಧಿಕೃತವಾಗಿ ಮೀಸಲಾತಿಯೂ ಆಯಾ ಸಮುದಾಯಗಳಿಗೆ ಸಿಗಲಿದೆ. ತಮಿಳುನಾಡು ಸರ್ಕಾರ ಮೀಸಲಾತಿ ವಿಚಾರವಾಗಿ 9ನೇ ಶಡ್ಯುಲ್ಡ್ ಬಳಸಿ ಮೀಸಲಾತಿ ನೀಡಿತ್ತು. ಇದನ್ನೂ ಸುಪ್ರೀಂಕೋರ್ಟ್ ಅಲ್ಲಗೆಳೆದಿತ್ತು ಎಂಬುದನ್ನ ನಾವು ನೆನಪಿಸಿಕೊಳ್ಳಬೇಕು.
ತಮಿಳುನಾಡು ಮತ್ತು ಆಂಧ್ರಪ್ರದೇಶದ ಸರ್ಕಾರ ಮೀಸಲಾತಿ ಅನುಷ್ಠಾನ ಮಾಡುವಾಗ ಆಯಾ ಪಕ್ಷಗಳ ಬೆಂಬಲಿತ ಸರ್ಕಾರ ಇದ್ದ ಕಾರಣ ಈ ಮೀಸಲಾತಿಯೂ ಜಾರಿಗೆ ಬಂದಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ಮೀಸಲಾತಿಯನ್ನ ಜಾರಿಗೆ ತಂದಲ್ಲಿ ಕೇಂದ್ರ ಸರ್ಕಾರ ಒಪ್ಪುತ್ತಾ? ಇಲ್ಲವೇ ತುಪ್ಪ ಸವರುವ ಕೆಲಸ ಆಗುತ್ತಾ ಎನ್ನುವ ಅನುಮಾನ ಕಾಡಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.