ಖರ್ಗೆ ತವರಲ್ಲಿ ಕಮಲ ಅರಳಿಸಲು ಬಿಜೆಪಿ ಯತ್ನ: ಚಿತ್ತಾಪುರದಲ್ಲಿ ಪ್ರಿಯಾಂಕ್ ಜೊತೆ ಮಣಿಕಂಠ ಜಂಗಿಕುಸ್ತಿ

By Kannadaprabha News  |  First Published May 8, 2023, 1:58 PM IST

ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ‘ತೊಗರಿ ಕಣಜ’ ಕಲಬುರಗಿ ಜಿಲ್ಲೆಯಲ್ಲಿ ಈಗ ನಿಧಾನವಾಗಿ ಕಮಲ ಅರಳುತ್ತಿದೆ. 2018ರ ಚುನಾವಣೆಯಲ್ಲಿ 9 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆದ್ದು, ಗೆಲುವಿನ ನಗೆ ಬೀರಿತ್ತು. 


ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.08): ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ‘ತೊಗರಿ ಕಣಜ’ ಕಲಬುರಗಿ ಜಿಲ್ಲೆಯಲ್ಲಿ ಈಗ ನಿಧಾನವಾಗಿ ಕಮಲ ಅರಳುತ್ತಿದೆ. 2018ರ ಚುನಾವಣೆಯಲ್ಲಿ 9 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆದ್ದು, ಗೆಲುವಿನ ನಗೆ ಬೀರಿತ್ತು. ಕಲಬುರಗಿಯವರೇ ಆಗಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಸಹಜವಾಗಿಯೇ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಹೀಗಾಗಿ, ಕಾಂಗ್ರೆಸ್‌, ತನ್ನ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದು ಜಿಲ್ಲೆಯನ್ನು ‘ಕೈ’ವಶ ಮಾಡಿಕೊಳ್ಳುವ ಹವಣಿಕೆಯಲ್ಲಿದೆ. ಇದೇ ವೇಳೆ, ಎಐಸಿಸಿ ಅಧ್ಯಕ್ಷರ ತವರಲ್ಲೇ ಕಮಲ ಅರಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಆ ಮೂಲಕ ಖರ್ಗೆಯವರಿಗೆ ನೇರವಾಗಿ ಪಂಥಾಹ್ವಾನ ನೀಡಿದೆ.

Tap to resize

Latest Videos

undefined

ಅಫಜಲ್ಪುರ
ಬಿಜೆಪಿ, ಕಾಂಗ್ರೆಸ್‌ಗೆ ಬಂಡಾಯದ ಬಿಸಿ:
ಪಕ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿ ಆಧಾರಿತವಾಗಿ ಚುನಾವಣೆ ನಡೆಯುವುದು ಅಫಜಲ್ಪುರ ಕ್ಷೇತ್ರದ ವಿಶೇಷತೆ. ಟಿಕೆಟ್‌ ಬೇಡವೆಂದರೂ ಹಾಲಿ ಶಾಸಕ ಎಂ.ವೈ.ಪಾಟೀಲರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಅರ್ಜಿ ಸಲ್ಲಿಸಿದ್ದರೂ ತಮ್ಮನ್ನು ಪರಿಗಣಿಸಲಿಲ್ಲ ಎಂದು ಮುನಿಸಿಕೊಂಡಿರುವ ಮಂಜೂರ್‌ ಪಟೇಲ್‌, ಅಫ್ತಾಬ್‌ ಪಟೇಲ್‌, ರಾಜೇಂದ್ರ ಪಾಟೀಲ ರೇವೂರ್‌ ಸೇರಿ ಹಲವರು ತಟಸ್ಥರಾಗಿದ್ದಾರೆ. ಇದು ಕಾಂಗ್ರೆಸ್‌ಗೆ ತೊಡಕಾಗುವ ಸಾಧ್ಯತೆಯಿದೆ. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌, ಇಲ್ಲಿನ ಬಿಜೆಪಿ ಅಭ್ಯರ್ಥಿ. ಒಬಿಸಿ ಮತಗಳ ಮೇಲೆ ಕಣ್ಣಿಟ್ಟೇ ಪಕ್ಷ ಇವರನ್ನು ಕಣಕ್ಕಿಳಿಸಿದರೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ಇವರ ಕಿರಿಯ ಸಹೋದರ ನಿತಿನ್‌ ಗುತ್ತೇದಾರ್‌ ಬಂಡಾಯವೆದ್ದು ಕಣದಲ್ಲಿದ್ದಾರೆ. ನಿತಿನ್‌ ಯಾರ ಮತಗಳ ಬುಟ್ಟಿಗೆ ಕೈ ಹಾಕುತ್ತಾರೆ ಎಂಬುದರ ಮೇಲೆ ಮಾಲೀಕಯ್ಯ, ಎಂ.ವೈ.ಪಾಟೀಲರ ಭವಿಷ್ಯ ನಿಂತಿದೆ. ಪಿಎಸ್‌ಐ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಆರ್‌.ಡಿ.ಪಾಟೀಲ್‌ ಸಮಾಜವಾದಿ ಪಕ್ಷದಿಂದ, ಶಿವಕುಮಾರ್‌ ನಾಟೀಕಾರ್‌ ಜೆಡಿಎಸ್‌ನಿಂದ ಸ್ಪರ್ಧೆಯಲ್ಲಿದ್ದಾರೆ.

ಟ್ರಬಲ್‌ ಶೂಟರ್‌ ಡಿ.ಕೆ.​ಶಿ​ವ​ಕು​ಮಾರ್‌ ಮಣಿ​ಸಲು ಸಾಮ್ರಾಟ್‌ ಅಶೋಕಾಸ್ತ್ರ ಪ್ರಯೋ​ಗ

ಆಳಂದ
ಗುತ್ತೇದಾರ್‌, ಪಾಟೀಲ್‌ ನಡುವೆ ಮತ್ತೆ ಜಿದ್ದಾಜಿದ್ದಿ:
ಬಿಜೆಪಿಯಿಂದ ಶಾಸಕ ಸುಭಾಶ್‌ ಗುತ್ತೇದಾರ್‌ ಮತ್ತೆ ಕಣದಲ್ಲಿದ್ದಾರೆ. ಇವರಿಗೆ ಕಾಂಗ್ರೆಸ್‌ನ ಬಿ.ಆರ್‌.ಪಾಟೀಲ್‌ ಎದುರಾಳಿ. ಹಿಂದುತ್ವದ ಪ್ರಭಾವ ತುಸು ಹೆಚ್ಚಾಗಿರುವ ಆಳಂದದಲ್ಲಿ ಬಿಜೆಪಿಗೆ ತನ್ನದೇ ಆದ ಓಟ್‌ ಬ್ಯಾಂಕ್‌ ಇದ್ದರೂ ಪ್ರಬಲ ಲಿಂಗಾಯತ, ಎಸ್ಸಿ-ಎಸ್ಟಿ, ಒಬಿಸಿ ಮತಗಳನ್ನು ಅದೆಷ್ಟುಪಡೆಯುತ್ತದೆ ಎಂಬುದರ ಮೇಲೆ ಆ ಪಕ್ಷದ ಗೆಲುವು ನಿಂತಿದೆ. ಇನ್ನು, ಪ್ರಬಲ ಲಿಂಗಾಯತ ಕೋಮಿಗೆ ಸೇರಿರುವ ಬಿ.ಆರ್‌.ಪಾಟೀಲ್‌ ಕಣದಲ್ಲಿರುವುದರಿಂದ ಈ ಸಮಾಜದ ಮತ ವಿಭಜನೆ ಕಷ್ಟ. ಜೆಡಿಎಸ್‌ನಿಂದ ಮಹೇಶ್ವರಿ ವಾಲಿ ಕಣದಲ್ಲಿದ್ದಾರೆ.

ಸೇಡಂ
ಕಾಗಿಣಾ ತೀರದಲ್ಲಿ ಚತುಷ್ಕೋನ ಹಣಾಹಣಿ:
ಕಾಗಿಣಾ ನದಿ ತೀರದ ಸೇಡಂ ಕ್ಷೇತ್ರದಲ್ಲಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ಬಿಜೆಪಿಯಿಂದ ಪುನರಾಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ. ಇವರಿಗೆ ಕಾಂಗ್ರೆಸ್‌ನಿಂದ ಡಾ.ಶರಣಪ್ರಕಾಶ ಪಾಟೀಲ್‌, ಜೆಡಿಎಸ್‌ನಿಂದ ಹೊಸಮುಖ ಬಾಲರಾಜ್‌ ಗುತ್ತೇದಾರ್‌, ಕೆಆರ್‌ಪಿಪಿಯಿಂದ ಜಿ.ಲಲ್ಲೇಶ ರೆಡ್ಡಿ (ಜನಾರ್ದನ ರೆಡ್ಡಿ ಅಳಿಯ) ಪ್ರಮುಖ ಎದುರಾಳಿಗಳು. ಹೀಗಾಗಿ, ಸೇಡಂನಲ್ಲಿ ಈ ಬಾರಿ ಹೊಸ ರಾಜಕೀಯ ಸಮೀಕರಣ ಸೃಷ್ಟಿಯಾಗಿದೆ. ಚತುಷ್ಕೋನ ಸ್ಪರ್ಧೆಯಲ್ಲಿ ಬಾಲರಾಜ್‌ ಹಾಗೂ ಲಲ್ಲೇಶ್‌ ರೆಡ್ಡಿ ಪಡೆಯುವ ಮತಗಳ ಮೇಲೆ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ನಿಂತಿದೆ.

ಚಿತ್ತಾಪುರ (ಮೀಸಲು)
ಪ್ರಿಯಾಂಕ್‌ ವರ್ಸಸ್‌ ಮಣಿಕಂಠ ಜಂಗಿಕುಸ್ತಿ:
ಎಸ್ಸಿ ಮೀಸಲು ಕ್ಷೇತ್ರ ಚಿತ್ತಾಪುರದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಶಾಸಕ ಪ್ರಿಯಾಂಕ್‌ ಖರ್ಗೆ, ಈ ಬಾರಿಯೂ ಕಾಂಗ್ರೆಸ್‌ ಹುರಿಯಾಳು. ಕೋಲಿ ಸಮಾಜದ ಮುಖಂಡ, ಮಾಜಿ ಸಚಿವ ಬಾಬೂರಾವ್‌ ಚಿಂಚನಸೂರ್‌, ಮಾಜಿ ಶಾಸಕ ಹೆಬ್ಬಾಳ, ಜಿ.ಪಂ. ಮಾಜಿ ಸದಸ್ಯ ಅರವಿಂದ ಅವರು ಕಾಂಗ್ರೆಸ್‌ಗೆ ಬಂದಿರುವುದು ಖರ್ಗೆಗೆ ಹೊಸ ಹುಮ್ಮಸ್ಸು ನೀಡಿದೆ. ಇವರನ್ನು ಮಣಿಸಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ, ಬಂಜಾರಾ ಸಮಾಜದ ಮಣಿಕಂಠ ರಾಠೋಡ್‌ರನ್ನು ಕಣಕ್ಕಿಳಿಸಿದೆ. ಆದರೆ, ಮಣಿಕಂಠ ರಾಠೋಡ್‌ ಅವರು ಅಪರಾಧ ಹಿನ್ನೆಲೆಯವರೆಂದು ಪಕ್ಷದಲ್ಲೇ ಅನೇಕರ ಬೇಸರಕ್ಕೆ ಕಾರಣವಾಗಿದೆ. ಇನ್ನು, ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿರುವ ಸುಭಾಶಚಂದ್ರ ರಾಠೋಡ್‌ ಇಲ್ಲಿ ಜೆಡಿಎಸ್‌ ಅಭ್ಯರ್ಥಿ.

ಜೇವರ್ಗಿ
ಅಜಯ್‌ ಸಿಂಗ್‌ಗೆ ಜೆಡಿಎಸ್‌ ತೊಡರುಗಾಲು:
ಬಿಜೆಪಿ ಇಲ್ಲಿ ಹೊಸಮುಖ ಶಿವರಾಜ ಪಾಟೀಲ್‌ ರದ್ದೇವಾಡಗಿ ಅವರನ್ನು ಕಣಕ್ಕಿಳಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬಿಜೆಪಿ ತಮಗೆ ಟಿಕೆಟ್‌ ನೀಡಲಿಲ್ಲ ಎಂದು ಮುನಿಸಿಕೊಂಡಿರುವ ದೊಡ್ಡಪ್ಪಗೌಡ ಅವರು ಜೆಡಿಎಸ್‌ ಸೇರಿ, ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಇನ್ನು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಶಾಸಕ ಡಾ.ಅಜಯ್‌ ಸಿಂಗ್‌, ಕಾಂಗ್ರೆಸ್‌ ಹುರಿಯಾಳು. ಜೆಡಿಎಸ್‌ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಅವರು ಕಾಂಗ್ರೆಸ್‌ಗೆ ಬಂದಿರುವುದು ಡಾ.ಅಜಯ್‌ ಸಿಂಗ್‌ಗೆ ಅನುಕೂಲ. ಆದರೆ, ಜೆಡಿಎಸ್‌ನಿಂದ ದೊಡ್ಡಪ್ಪಗೌಡರು ಕಣಕ್ಕೆ ಇಳಿದಿರುವುದು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಗೆ ತೊಡಕಾಗುವ ಸಾಧ್ಯತೆಯಿದೆ.

ಕಲಬುರಗಿ (ಉತ್ತರ)
ಫಾತೀಮಾಗೆ ಚಂದು ಪಾಟೀಲ್‌ ಟಕ್ಕರ್‌:
ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿರುವ ರೋ ಖನೀಜ್‌ ಫಾತೀಮಾ ವಿರುದ್ಧ ಉದ್ಯಮಿ ಚಂದು ಪಾಟೀಲರನ್ನು ಬಿಜೆಪಿ ಕಣಕ್ಕಿಳಿಸಿ ಪೈಪೋಟಿ ನೀಡುತ್ತಿದೆ. ಜೆಡಿಎಸ್‌ನಿಂದ ನಾಸಿರ್‌ ಹುಸೇನ್‌ ಅಭ್ಯರ್ಥಿ. ಬಿಜೆಪಿಯ ಚಂದು ಪಾಟೀಲ್‌ ಗೆಲ್ಲಬೇಕಾದರೆ ಹಿಂದು ಮತಗಳ ಜೊತೆಗೆ ಮುಸ್ಲಿಂ ಮತಬುಟ್ಟಿಗೂ ಕೈ ಹಾಕುವುದು ಅನಿವಾರ್ಯ. ಪಾಲಿಕೆಯ ಹೆಚ್ಚಿನ ಸದಸ್ಯರು ಬಿಜೆಪಿಯವರಿದ್ದು ಇದು ಚಂದು ಪಾಟೀಲ್‌ಗೆ ವರವಾಗಲಿದೆ. ಎಸ್ಸಿ, ಒಬಿಸಿ ಮತಗಳ ಜೊತೆಗೆ ಅಲ್ಪಸಂಖ್ಯಾತ ಮತಗಳನ್ನೂ ಪಡೆಯುವ ತವಕದಲ್ಲಿರುವ ಖನೀಜ್‌ ಫಾತೀಮಾ, ಗೆಲುವು ತಮ್ಮದೇ ಎನ್ನುತ್ತಿದ್ದಾರೆ. ಆದರೆ, ಕೈ, ಕಮಲದ ನಡುವೆ ಪೈಪೋಟಿ ಇರುವುದು ಮಾತ್ರ ಸತ್ಯ.

ಕಲಬುರಗಿ ಗ್ರಾಮೀಣ (ಮೀಸಲು)
ಮತ್ತಿಮೂಡ್‌ ಜೊತೆ ರೇವು ನಾಯಕ ಕುಸ್ತಿ:
ಶಾಸಕ ಬಸವರಾಜ ಮತ್ತಿಮೂಡ್‌ ಅವರು ಬಿಜೆಪಿಯಿಂದ ಪುನರಾಯ್ಕೆ ಬಯಸಿ, ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಕುಸ್ತಿಪಟು, ಬಂಜಾರಾ ಸಮುದಾಯದ ರೇವು ನಾಯಕ ಬೆಳಮಗಿ ಕಣದಲ್ಲಿ ಇರುವುದರಿಂದ ಇದು ‘ಖಡ್ಯಾದ ಕುಸ್ತಿ’ ಅಖಾಡವಾಗಿದೆ. ಬಿಜೆಪಿಯಲ್ಲಿದ್ದ ಲಿಂಗಾಯಿತ ಮುಖಂಡ ರವಿ ಬಿರಾದಾರ್‌ ತಮ್ಮ ಬಳಗದೊಂದಿಗೆ ಕಾಂಗ್ರೆಸ್‌ ಸೇರಿರುವುದು ರೇವು ನಾಯಕರಿಗೆ ಪ್ಲಸ್‌ ಪಾಯಿಂಟ್‌. ಜೆಡಿಎಸ್‌ ಇಲ್ಲಿ ಯಾರನ್ನೂ ಕಣಕ್ಕಿಳಿಸಿಲ್ಲ.

ಎಚ್ಡಿಕೆ, ರೇವಣ್ಣ ಪ್ರತಿಷ್ಠೆ ಕ್ಷೇತ್ರದಲ್ಲಿ ಕೈ, ಕಮಲ ಪೈಪೋಟಿ: ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ

ಕಲಬುರಗಿ ದಕ್ಷಿಣ
ಈ ಬಾರಿ ದಕ್ಷಿಣಾಧಿಪತಿ ಯಾರು?:
ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಯ ದತ್ತಾತ್ರೇಯ ಪಾಟೀಲ್‌ ರೇವೂರ್‌ ಎದುರು ಕಾಂಗ್ರೆಸ್‌ ಪಕ್ಷ ಅಲ್ಲಂಪ್ರಭು ಪಾಟೀಲರನ್ನು ಕಣಕ್ಕಿಳಿಸಿ, ಪೈಪೋಟಿ ನೀಡುತ್ತಿದೆ. ಲಿಂಗಾಯತ ಆದಿ ಬಣಜಿಗ ಸಮುದಾಯದ ದತ್ತಾತ್ರೇಯ ಪಾಟೀಲರು ತಮ್ಮ ಸಮುದಾಯದ ಮತಗಳೊಂದಿಗೆ ಬಿಜೆಪಿಯ ಮತಬ್ಯಾಂಕ್‌, ನಿರ್ಣಾಯಕ ಬ್ರಾಹ್ಮಣರ ಮತಗಳನ್ನು ಹೆಚ್ಚು ಅವಲಂಬಿಸಿದ್ದಾರೆ. ಕಾಂಗ್ರೆಸ್‌ ಕೂಡಾ ಬ್ರಾಹ್ಮಣ ಮತಗಳ ಮೇಲೆ ಕಣ್ಣಿಟ್ಟಿದ್ದು, ಹೆಚ್ಚಿನ ಮತಗಳನ್ನು ಪಡೆಯುವ ಹವಣಿಕೆಯಲ್ಲಿದೆ. ಜೆಡಿಎಸ್‌ನಿಂದ ಕೃಷ್ಣಾರೆಡ್ಡಿ ಕಣದಲ್ಲಿದ್ದಾರೆ.

ಚಿಂಚೋಳಿ ಮೀಸಲು
ಡಾ.ಅವಿನಾಶ್‌ಗೆ ಸುಭಾಶ ರಾಠೋಡ ಟಕ್ಕರ್‌:
ಇಲ್ಲಿ ಪುನರಾಯ್ಕೆ ಬಯಸಿರುವ ಡಾ.ಅವಿನಾಶ ಜಾಧವ್‌ ಬಿಜೆಪಿಯಂದ ಮತ್ತೆ ಕಣದಲ್ಲಿದ್ದಾರೆ. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಸುಭಾಶ ರಾಠೋಡ ಕಣಕ್ಕೆ ಇಳಿದಿದ್ದಾರೆ. ಕಣದಲ್ಲಿರುವ ಇಬ್ಬರೂ ಅಭ್ಯರ್ಥಿಗಳು ಬಂಜಾರಾ ಸಮಾಜಕ್ಕೆ ಸೇರಿದವರೇ ಆಗಿರುವುದರಿಂದ ಇಲ್ಲಿ ಬಂಜಾರಾ ಮತ ವಿಭಜನೆ ಸಹಜ. ಲಿಂಗಾಯಿತ, ಓಬಿಸಿ, ಎಸ್ಟಿಸಮಾಜದ ಮತಗಳನ್ನು ಹೆಚ್ಚು ಪಡೆಯುವವರಿಗೆ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಪಜಾ ಸಮುದಾಯದ ಸಂಜೀವನ ಯಾಕಾಪೂರ ಕಣದಲ್ಲಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!