ಕೇಂದ್ರ ಗೃಹ ಸಚಿವ ಮೊನ್ನೆ ಕರ್ನಾಟಕಕ್ಕೆ ಭೇಟಿ ನೀಡಿದ್ದು ಸರಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು. ರಾಜಕೀಯವಾಗಿ ಅಂಥದ್ದೇನೂ ಮಹತ್ವವಿಲ್ಲದ ಭೇಟಿ. ಆ ಕಾರಣಕ್ಕಾಗಿಯೇ ಈ ಭೇಟಿಗೆ ಅಷ್ಟು ರಾಜಕೀಯ ಮಹತ್ವ ನೀಡಲಿಲ್ಲ. ಆದರೆ, ಅಮಿತ್ ಶಾ ಬರುವಾಗ, ಹೋಗುವಾಗ ಜೊತೆಗೆ ನಳೀನ್ ಕುಮಾರ್ ಕಟೀಲ್ ಅವರನ್ನು ಕರೆದುಕೊಂಡು ಹೋಗಿದ್ದು, ಹಲವು ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ರಾಜಕೀಯ ವರದಿಗಾರ ರವಿ ಶಿವರಾಮ್ ವಿಶ್ಲೇಷಿಸಿದ್ದು ಹೀಗೆ.
- ರವಿ ಶಿವರಾಮ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿಮಾನದಲ್ಲಿ ಪ್ರಯಾಣಿಸುವಾಗ ಇರಬಹುದು, ಕಾರಲ್ಲಿ ಓಡಾಡುವಾಗ ಇರಬಹುದು, ಸಾಮಾನ್ಯವಾಗಿ ತಮ್ಮ ಜೊತೆ ಸ್ವಪಕ್ಷದ ಮುಖಂಡರನ್ನು ಕೂರಿಸಿಕೊಳ್ಳುವುದೇ ಇಲ್ಲ. ಅಷ್ಟು ಅಗತ್ಯ ಇದೆ ಎಂದಾಗ ಮಾತ್ರವೇ ಅವರ ಪಕ್ಕದಲ್ಲಿ ಒಂದು ಸೀಟ್ ಬಿಟ್ಟು ಕೊಡ್ತಾರೆ. ಅದು ಅವರಿಬ್ಬರ ವರ್ಕಿಂಗ್ ಸ್ಟೈಲ್. ಹೀಗಾಗಿ ಮೋದಿ - ಅಮಿತ್ ಶಾ ಜೊತೆ ವಿಮಾನದಲ್ಲಿ ಒಮ್ಮೆ ಯಾವಾಗಾದರೂ ಒಟ್ಟಿಗೆ ಬಂದರೆ, ಅದನ್ನು ಬಹಳ ಹೆಮ್ಮೆಯಿಂದ, ಗರ್ವದಿಂದ ಉಲ್ಲಾಸ, ಉತ್ಸಾಹದಿಂದ ಹೇಳಿಕೊಳ್ತಾರೆ ಕೆಲವು ಬಿಜೆಪಿಗರು. ಅಂತಹುದ್ರಲ್ಲಿ ಮೊನ್ನೆ ಸಂಕಲ್ಪಸಿದ್ದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಜೊತೆಯಲ್ಲಿಯೇ ನಳೀನ್ ಕುಮಾರ್ ಕಟೀಲ್ ಅವರನ್ನು ದೆಹಲಿಯಿಂದ ಕರೆದುಕೊಂಡು ಬಂದಿದ್ರು. ಮಾತ್ರವಲ್ಲ ಮರಳಿ ಅದೇ ವಿಮಾನದಲ್ಲಿ ತಮ್ಮ ಜೊತೆಗೇ ದೆಹಲಿಗೆ ಕರೆದುಕೊಂಡು ಹೋಗಿ ಬಿಟ್ರು! ಇದೇನು ಮಹಾ ಸಂಗತಿ ಅಂತ ಸಾಮಾನ್ಯವಾಗಿ ಎಲ್ಲರಿಗೂ ಅನಿಸಿಬಿಡತ್ತೆ ನಿಜ. ಆದ್ರೆ ಮೋದಿ ಅಮಿತ್ ಶಾ ಯಾರನ್ನೇ ಆಗಲಿ, ಸುಮ್ ಸುಮ್ನೆ ಮಾತಾಡಿಸೋದಾಗ್ಲಿ, ಜೊತೆಗೆ ಕರೆದುಕೊಂಡು ಓಡಾಡೋದಾಗ್ಲಿ ಮಾಡೊದಿಲ್ಲ. ಹಾಗೆ ಮಾಡಿದರು ಎಂದ್ರೆ ಅಲ್ಲಿ ಏನಾದರೂ ಒಂದು ಸಂದೇಶ ಇದ್ದೇ ಇರುತ್ತೆ. ಜೊತೆಗೆ ಬಲವಾದ ಕಾರಣ ಇದ್ದೇ ಇರುತ್ತದೆ. ಹಾಗಾದರೆ ಮೊನ್ನೆ ಅಮಿತ್ ಶಾ ಜೊತೆ ಕಟೀಲ್ ಬಂದಿದ್ದು ಯಾಕೆ ಮಹತ್ವ ಪಡೆಯುತ್ತಿದೆ ಎಂದು ನೋಡಿದರೆ, ಒಂದು ಮಂಗಳೂರು ಕೊಲೆ ಪ್ರಕರಣ, ಇನ್ನೊಂದು ಕಾರ್ಯಕರ್ತರ ರಾಜೀನಾಮೆ, ಮತ್ತೊಂದು ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗ್ತಾರೆ ಎನ್ನುವ ಗುಸು-ಗುಸು.
ಅಮಿತ್ ಶಾ ಕಟೀಲ್‌ಗೆ ಏನಂದ್ರು?
ದೆಹಲಿಯಲ್ಲಿ ಅಮಿತ್ ಶಾ ನಿವಾಸಕ್ಕೆ ತೆರಳಿದ್ದ ಕಟೀಲ್ ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆ ಬಗ್ಗೆ ಅಮಿತ್ ಮಾಹಿತಿ ನೀಡಿದ್ರಂತೆ. ಜೊತೆಗೆ ಪ್ರಕರಣದ ತನಿಖೆಯನ್ನು NIAಗೆ ವಹಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆಯೂ ಕೇಳಿದ್ರಂತೆ. ಪ್ರವೀಣ್ ಕೊಲೆ ಮತ್ತು ಅದರ ಬಳಿಕ ನಡೆದ ವಿದ್ಯಮಾನಗಳ ಬಗ್ಗೆ ಕಟೀಲ್ ಮಾತು ಮುಂದಿರಿಸುತ್ತಿದ್ದಂತೆ, ನನಗೆ ಎಲ್ಲಾ ಮಾಹಿತಿ ಇದೆ ಅಂದ್ರಂತೆ ಅಮಿತ್ ಶಾ. ಅದಾದ ಮೇಲೆ ನಾನು ಕರ್ನಾಟಕಕ್ಕೆ ಬರಬೇಕಾ ಎಂದು ಕಟೀಲ್ ಅಮಿತ್ ಶಾ ಬಳಿ ಕೇಳಿದಾಗ, ಹೌದು ಬರಬೇಕು ನನ್ನ ಜೊತೆಯೇ ಬಾ, ರಾತ್ರಿ ಒಟ್ಟಿಗೆ ಹೋಗೊಣ ಎಂದ್ರಂತೆ ಕೇಂದ್ರ ಗೃಹ ಮಂತ್ರಿಗಳು.
ಕಟೀಲ್‌ರನ್ನು ಜೊತೆಗೆ ಕರೆದುಕೊಂಡು ಕೊಟ್ಟ ಸಂದೇಶವೇನು?
ಸದ್ಯದ ರಾಜಕೀಯ ವಿದ್ಯಮಾನ, ಕರಾವಳಿ ಭಾಗದ ಘಟನೆ ಮತ್ತು ಕಟೀಲ್ ಅಧ್ಯಕ್ಷ ಸ್ಥಾನ ಬದಲಾಗತ್ತೆ ಎನ್ನುವ ಕಿರುದನಿಗೆ ಅಮಿತ್ ಶಾ ನಡೆ ಒಂದು ಸಂದೇಶ ಹೌದು. ಕರಾವಳಿಯಲ್ಲಿ ಪ್ರವೀಣ್ ಹತ್ಯೆ ಆದಾಗ ಕಟೀಲ್ ಮೇಲೆ ಕಾರ್ಯಕರ್ತರು ಗರಂ ಆಗಿದ್ರು. ಸ್ವಪಕ್ಷೀಯರಲ್ಲಿ ಕರಾವಳಿ ಭಾಗದ ಕೆಲವು ಜನಪ್ರತಿನಿಧಿಗಳು ಇವೆಲ್ಲದ್ದಕ್ಕೂ ಕಟೀಲ್ ಒಬ್ಬರೇ ಕಾರಣ ಎನ್ನುವಂತೆ ಬಿಂಬಿಸುವ ಪ್ರಯತ್ನವನ್ನೂ ಮಾಡಿದ್ದರು ಎನ್ನುವುದನ್ನು ಬಿಜೆಪಿ ಆಂತರಿಕ ವಲಯ ಮಾತಾಡಿಕೊಳ್ಳತ್ತಿದೆ. ಒಬ್ಬ ಶಾಸಕರಂತೂ ಪ್ರವೀಣ್ ಕೊಲೆಯಲ್ಲೂ ತನ್ನನ್ನು ತಾನೇ ಸೋಶಿಯಲ್ ಮೀಡಿಯಾದಲ್ಲಿ ವೈಭವಿಕರಿಸಿಕೊಂಡು ಹೀರೊ ಆಗಲು ಹೊರಟಿದ್ದರು ಎನ್ನುವ ಆರೋಪವನ್ನೂ ಬಿಜೆಪಿಯ ಒಳ ದನಿ ಮಾತಾಡುತ್ತಿದೆ. ಇವೆಲ್ಲವೂ ಪಕ್ಷದ ಗಮನಕ್ಕೆ ಬಂದಿದೆ ಎನ್ನುತ್ತಿವೆ ಮೂಲಗಳು. ಇನ್ನು ರಾಜ್ಯಾಧ್ಯಕ್ಷ ಕಟೀಲ್ ಬದಲಾವಣೆ ಮಾಡ್ತಾರೆ, 2023ರ ವಿಧಾನಸಭೆ ಚುನಾವಣೆಗೆ ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಾರೆ ಎಂಬೆಲ್ಲ ಸುದ್ದಿ ಹರಿದಾಡುತ್ತಿರೋದು ನಿಜ. ಆದ್ರೆ ವಾಸ್ತವವಾಗಿ ನೋಡೊದಾದ್ರೆ ಹೈಕಮಾಂಡ್ ಕಟೀಲ್‌ರನ್ನು ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ಬಿಜೆಪಿ ಸಂಘಟನಾ ವಿಭಾಗ. ಕಟೀಲ್ ಅವರನ್ನು ಬದಲಾವಣೆ ಮಾಡ್ತಾರಾ ಎಂಬುದನ್ನೂ ಕೆಲವು ಪ್ರಮುಖರನ್ನು ಆಪ್ತವಾಗಿ ಕೇಳಿದ್ರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಬಿ ಫಾರ್ಮ್‌ಗೆ ಸಹಿ ಹಾಕೋದು ನಳೀನ್ ಕುಮಾರ್ ಕಟೀಲ್ ಅವರೇ ಎನ್ನುವ ಅತಿ ವಿಶ್ವಾಸದ ಮಾತುಗಳನ್ನು ಹೇಳ್ತಾರೆ. ಅದು ಬಿಡಿ. ಈಗ ಅಮಿತ್ ಶಾ ತಮ್ಮ ಜೊತೆ ಕಟೀಲ್ ಅವರನ್ನು ಕರೆದುಕೊಂಡು ಬರುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಇಲ್ಲ, ಮಂಗಳೂರು ಕೊಲೆ ಪ್ರಕರಣದಲ್ಲಿ ನಿಮ್ಮದೊಂದೇ ತಪ್ಪಿಲ್ಲ. ನಿಮಗೆ ಹೈಕಮಾಂಡ್ ಶ್ರೀರಕ್ಷೆ ಇದೆ ಎನ್ನುವ ಸಂದೇಶ ನೀಡಿದಂತೆ ಕಾಣ್ತಾ ಇರೋದು ಸುಳ್ಳಲ್ಲ. ಆದರೂ ಅಮಿತ್ ಶಾ ಮೋದಿ ನಡೆ ಮೀನಿನ ಹೆಜ್ಜೆಯಂತೆ ಅಲ್ವಾ?
ಕರ್ನಾಟಕದಲ್ಲಿ ಸಿದ್ದು ಅಶ್ವಮೇಧದ ಕುದುರೆ ಕಟ್ಟೋರು ಯಾರು?
12 ಬಾರಿ ರಾಜ್ಯ ಸುತ್ತಿದ ಕಟೀಲ್
ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕ ಬಿಎಸ್ ಯಡಿಯೂರಪ್ಪ. ಆಡು ಮುಟ್ಟದ ಸೊಪ್ಪಿಲ್ಲ, ಯಡಿಯೂರಪ್ಪ ಸುತ್ತದೇ ಇರುವ ತಾಲೂಕುಗಳಿಲ್ಲ ಎಂಬಂತೆ ಅವರು ರಾತ್ರಿ ಮಲಗುವಾಗ ಮಾತ್ರ ಕಾಲಿಗೆ ಕಟ್ಟಿದ ಚಕ್ರ ತೆಗೆದಿಡುತ್ತಿದ್ದರು ಎನ್ನುವಷ್ಟರ ಮಟ್ಟಿಗೆ ಅವರ ಓಡಾಟ, ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪ ಬಳಿಕ ಅತಿ ಹೆಚ್ಚು ರಾಜ್ಯದಲ್ಲಿ ಓಡಾಟ ಮಾಡಿದ್ದು ಕಟೀಲ್ ಅಂತೆ. ಇಲ್ಲಿ ತನಕ ಮೂರು ವರ್ಷಗಳಲ್ಲಿ ಬರೋಬ್ಬರಿ ಪ್ರತಿ ಸಂಘಟನಾ ಜಿಲ್ಲೆಗೂ ಸುಮಾರು 10-12 ಬಾರಿ ಪ್ರವಾಸ ಮಾಡಿ ಮುಗಿಸಿದ್ದಾರಂತೆ ಕಟೀಲ್. ಜಿಲ್ಲೆಯಿಂದ ಜಿಲ್ಲೆಗೆ ಕಾರಿನಲ್ಲೇ ಓಡಾಟ ಮಾಡುವ ಕಟೀಲ್, ವಿಮಾನ ಏರೋದು ದೆಹಲಿ ಪ್ರವಾಸಕ್ಕೆ ಮಾತ್ರ ಎನ್ನುತ್ತಾರೆ ಬಿಜೆಪಿ ಪ್ರಮುಖರು.
ಸಿದ್ದು, ಡಿಕೆಶಿ ಆಲಿಂಗನ ನೋಡಿ ಖುಷಿ: ಇಬ್ಬರ ಒಗ್ಗಟ್ಟಿನಿಂದ ಮುಂದೆ ಪಕ್ಷ ಅಧಿಕಾರಕ್ಕೆ, ರಾಹುಲ್ ಗಾಂಧಿ
ಕಟೀಲ್ ಯಾಕೆ ಬಿರುಸಾಗಿ ಹೇಳಿಕೆ ನೀಡೊದಿಲ್ಲ?
ಸಾಮಾನ್ಯವಾಗಿ ಪಕ್ಷದ ಅಧ್ಯಕ್ಷರು ಯಾರಾಗಿರ್ತಾರೊ, ಅವರು ಮುಂದಿನ ಸಿಎಂ ಅಭ್ಯರ್ಥಿ ಎನ್ನುವಂತೆ ಬಿಂಬಿತವಾಗ್ತಾರೆ. ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯಿಂದ ತಮ್ಮ ವರ್ತನೆ, ನಡೆ ನುಡಿಯಲ್ಲಿ ಅದನ್ನು ಪ್ರಚೂರ ಪಡಿಸುವ ಪ್ರಯತ್ನ ಮಾಡ್ತಾರೆ. ಆದ್ರೆ ಕಟೀಲ್ ಇದೆಲ್ಲದರಿಂದ ನ್ಯೂಟ್ರಲ್. ಮಾಧ್ಯಮದವರ ಒತ್ತಾಯಕ್ಕೆ ಆಗೊಮ್ಮೆ ಈಗೊಮ್ಮೆ ಕ್ಯಾಮzರಾ ಮುಂದೆ ಬಂದು ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್‌ಗೆ ಒಂದಿಷ್ಟು ಬೈದು ಹೋಗ್ತಾರೆ, ಬಿಟ್ಟರೆ ಮತ್ತೆ ತನ್ನನ್ನು ತಾನು ವೈಭವಿಕರಿಸಿಕೊಳ್ಳುವ ಸಿಎಂ ಜೊತೆ ರೇಸ್‌ಗೆ ಬಿದ್ದವರಂತೆ ಕಟೀಲ್ ಇಲ್ಲಿ ತನಕ ನಡಿಯಲ್ಲಿ ತೋರಿಲ್ಲ. ಕೇವಲ ಪಕ್ಷ ಸಂಘಟನೆ ಓಡಾಟ ಬಿಟ್ರೆ ಕಟೀಲ್‌ರ ನಡೆ ಪಕ್ಷದ ಶಿಸ್ತಿನ ಕಾರ್ಯಕರ್ತ ಅಷ್ಟೇ. ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ತಾವು ಹೇಳಿದ ಅಧಿಕಾರಿಯೇ ಬೇಕೆಂದು ಸಿಎಂ ಮನಗೆ ಹೋಗೊದಿಲ್ಲ. ಪಕ್ಷದ ಅಧ್ಯಕ್ಷ ಅಂದ್ರೆ ಸಹಜವಾಗಿ ಅವರ ಮಾತಿಗೆ ಸಹಜವಾದ ಹೆಚ್ವಿನ ಭಾರ ಇರುತ್ತದೆ. ಆದ್ರೆ ಕಟೀಲ್ ಎತ್ತರದ ಪೋಸ್ಟ್‌ನಲ್ಲಿ ಇದ್ದರೂ ಯಾರಿಗೂ ಯಾವುದಕ್ಕೂ ರೆಕ್ಮಂಡ್ ಮಾಡೋದಿಲ್ಲ ಎನ್ನುವ ಮಾತನ್ನು ಬಿಜೆಪಿಗರು ಓಪನ್ ಆಗಿಯೇ ಹೇಳ್ತಾರೆ.
ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡದಿದ್ರೆ ಕಾರಣ ಏನು?
ಉದಾಹರಣೆ ನೀಡಿ ವಿಷಯ ಪ್ರಸ್ತಾಪ ಮಾಡೋದಾದರೆ, ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಆಗಬೇಕಾದರೆ ಹರಸಾಹಸ ಪಟ್ಟಿದ್ರು. ಡಿಕೆಶಿ ಈ ಬಾರಿ ಅಧ್ಯಕ್ಷ ಆಗೆ ಬಿಡ್ತಾರೆ ಎನ್ನುವಾಗ ಜಿ ಪರಮೇಶ್ವರ್ ಎರಡನೇ ಅವಧಿಗೆ ಮುಂದುವರಿದ್ರು. 2018 ಚುನಾವಣೆ ಮುಕ್ತಾಯ ಆಯ್ತು ಈ ಬಾರಿ ಬಹುಶಃ ಡಿಕೆಶಿ ಅಧ್ಯಕ್ಷರಾಗಿ ಆಯ್ಕೆ ಆಗ್ತಾರೆ ಎನ್ನುವಾಗ ಸಿದ್ದರಾಮಯ್ಯರ ಕೈ ಕೆಲಸ ಮಾಡಿ, ದಿನೇಶ್ ಗುಂಡೂರಾವ್ ಅಧ್ಯಕ್ಷ ಆಗಿ ನೇಮಕ ಆದ್ರು. ದಿನೇಶ್ ಗುಂಡೂರಾವ್ ಅಧ್ಯಕ್ಷ ಆಗಿದ್ದರ ಬೇಸರ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಂತೆ ಇರುವ ಡಿಕೆಶಿಗೆ ಎಷ್ಟಿತ್ತೆಂದರೆ ಒಮ್ಮೆ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಡಿಕೆಶಿ ಹೀಗೆ ಹೇಳಿದ್ರು. 'ದಿನೇಶ್ ಗುಂಡೂರಾವ್ ಅಂತ ನೀವು ಗೌರವ ಕೊಡಿ ಎನ್ನಲ್ಲ. ಆದ್ರೆ ಕೆಪಿಸಿಸಿ ಅಧ್ಯಕ್ಷ ಎಂದು ನೀವು ಗೌರವ ಕೊಡಬೇಕು. ಕೆಪಿಸಿಸಿ ಅಧ್ಯಕ್ಷರ ಪೋಸ್ಟಿಗೆ ಅಷ್ಟು ಗೌರವ ಇದೆ,' ಎಂದು ಕಾರ್ಯಕರ್ತರ ಉದ್ದೇಶಿಸಿ ಭಾಷಣ ಮಾಡಿದ್ರು. ಬಳಿಕ ದಿನೇಶ್ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಜವಬ್ದಾರಿ ಹೊತ್ತು ರಾಜೀನಾಮೆ ನೀಡಿದ್ರು. ಬಳಿಕ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರು. ಈಗ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಸಿಎಂ ಕುರ್ಚಿಗೆ ನಡೆಯುತ್ತಿರುವ ತಿಕ್ಕಾಟ ದಿನ ಬೆಳಗಾದರೆ ನೋಡುತ್ತಿದ್ದೇವೆ. ಸ್ವತಃ ರಾಹುಲ್ ಗಾಂಧಿ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ಬುದ್ದಿ ಹೇಳಿದ್ದು ಮಾತ್ರವಲ್ಲ, ಮೊನ್ನೆ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಕೈ ಸನ್ನೆ ಮಾಡಿ ಇಬ್ಬರೂ ಅಪ್ಪಿಕೊಳ್ಳಿ ಎಂದು ಡಿಕೆಶಿಗೆ ಸೂಚನೆ ನೀಡಿದ ಕಾರಣ ಇಬ್ಬರು ಪ್ರೀತಿಯಿಂದ ಅಪ್ಪಿಕೊಂಡಂತೆ ಕ್ಯಾಮೆರಾ ಮುಂದೆ ಪೋಸ್ ನೀಡಿದ್ರು.
ಕಾಂಗ್ರೆಸ್ ಪರಿಸ್ಥಿತಿ ಹೀಗಾದರೆ ಬಿಜೆಪಿಯೊಳಗೆ ಚುನಾವಣಾ ಸಮಯದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿದ್ರೆ ಡಿಕೆಶಿ ಮತ್ತು ಸಿದ್ದರಾಮಯ್ಯ ರೀತಿ ಪಕ್ಷದೊಳಗೆ ಪೈಪೋಟಿ ಏರ್ಪಡಬಹುದು ಎನ್ನುವ ಆತಂಕ ಇದೆ. ಸಿಟಿ ರವಿ, ಸುನೀಲ್ ಕುಮಾರ್, ಶೋಭಾ ಕರಂದ್ಲಾಜೆ ಅಂತಹ ಮಾಸ್ ಫಾಲೊವರ್ಸ್ ಹೊಂದಿರುವ ನಾಯಕರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದ್ರೆ ಒಳಗೊಳಗೆ ಪಕ್ಷದ ಸಂಘಟನೆ ಮತ್ತು ಸರ್ಕಾರದ ನಡುವೆ ಒಂದು ಕಂದಕ ಏರ್ಪಡಬಹುದು. ಕಾಂಗ್ರೆಸ್‌ನಲ್ಲಿ ಆದಂತೆ ಮುಂದಿನ ಸಿಎಂ ರೇಸ್‌ಗೆ ಒಳಗೊಳಗೆ ಪೈಪೋಟಿ ಶುರುವಾಗಿ ಬಿಡಬಹುದು, ಎನ್ನುವ ಒಳಸುಳಿ ಬಿಜೆಪಿ ಹೈಕಮಾಂಡ್‌ಗೆ ಸಿಕ್ಕಿದಂತೆ ಕಾಣುತ್ತಿದೆ. ಹೀಗಾಗಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಕಟೀಲ್ ಚುನಾವಣೆ ಮುಗಿಯುವ ತನಕ ಮುಂದುವರಿಸೋಣ ಎನ್ನುವ ಯೋಚನೆ ಹೈಕಮಾಂಡ್ ಮಾಡಿದಂತಿದೆ.
India Gate: ಡಿಕೆಶಿಗೇಕೆ ಈಗ ಒಕ್ಕಲಿಗರ ಮೇಲೆ ಕಣ್ಣು? ಏನೀ ಲೆಕ್ಕಾಚಾರ..?
ಚುನಾವಣೆ ಸಮಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಜಟಿಲ ಯಾಕೆ?
ಚುನಾವಣೆ ಸಮಯದಲ್ಲಿ ಹೊಸದಾಗಿ ಅಧ್ಯಕ್ಷರ ಬದಲಾವಣೆ ಮಾಡಿದರೆ ಪಕ್ಷಕ್ಕೆ ಕಷ್ಟ ಯಾಕೆ ಎಂದರೆ, ಹೊಸ ಅಧ್ಯಕ್ಷ ನೇಮಕವಾಯಿತು ಎಂದುಕೊಳ್ಳಿ ಆಗ, ಮಂಡಲ ಅಧ್ಯಕ್ಷ, ಜಿಲ್ಲಾಧ್ಯಕ್ಷರಿಂದ ಹಿಡಿದು ಪದಾಧಿಕಾರಿಗಳ ಬದಲಾವಣೆ ಹಾಗೂ ಪಕ್ಷದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಕೋರ್ ಕಮಿಟಿ ಸದಸ್ಯರನ್ನು ಬದಲಾವಣೆ ಮಾಡಬೇಕಾಗುತ್ತದೆ. ಸಂಘಟನೆಯ ಸ್ವರೂಪ ಜವಬ್ದಾರಿ ಎಲ್ಲವೂ ಅದಲು ಬದಲು ಆದಾಗ ಅದು ಚುನಾವಣೆ ಸಮಯದಲ್ಲಿ ಪಕ್ಷ ಸಂಘಟನೆಗೆ ವ್ಯತಿರಿಕ್ತವಾಗಬಹುದು. ಈ ಕಾರಣಕ್ಕೆ ಕಟೀಲ್ ಮುಂದುವರಿಯಬಹುದು ಎನ್ನುತ್ತಿವೆ ಮೂಲಗಳು. ಬಲಿಷ್ಠ ಹೈಕಮಾಂಡ್ ಮುಂದೆ ರಾಜ್ಯ ಬಿಜೆಪಿ ವೀಕ್ ಆಗಿದೆ ಎನ್ನುವ ಆರೋಪ ಹೊತ್ತಿರುವ ರಾಜ್ಯ ಬಿಜೆಪಿಗೆ ಹೈಕಮಾಂಡ್ ಯಾವ ಟಾನಿಕ್ ನೀಡತ್ತೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇದೆ ನಿಜ. ಆದ್ರೆ ಅಧ್ಯಕ್ಷರ ಬದಲಾವಣೆ ಮಾಡ್ತಾರಾ ಎನ್ನುವ ಪ್ರಶ್ನೆ ಮುಂದಿಟ್ಟು ವಿಮರ್ಶೆ ಮಾಡಿದ್ರೆ ಈ ಎಲ್ಲಾ ಉತ್ತರಗಳು ಸಿಗುತ್ತವೆ.