Asianet Suvarna News Asianet Suvarna News

India Gate: ಡಿಕೆಶಿಗೇಕೆ ಈಗ ಒಕ್ಕಲಿಗರ ಮೇಲೆ ಕಣ್ಣು? ಏನೀ ಲೆಕ್ಕಾಚಾರ..?

ಬಿಜೆಪಿ ಗೆಲ್ಲಬೇಕಾದರೆ ಸಾಧ್ಯವಾದಷ್ಟುಲಿಂಗಾಯತರನ್ನು ಉಳಿಸಿಕೊಂಡು ಅಹಿಂದ ವೋಟ್‌ಬ್ಯಾಂಕ್‌ನ ಸಣ್ಣ ಹಿಂದುಳಿದ ಜಾತಿಗಳನ್ನು ಸೆಳೆಯಬೇಕು. ಕಾಂಗ್ರೆಸ್‌ ಗೆಲ್ಲಬೇಕಾದರೆ ಅಹಿಂದ ಗಟ್ಟಿಯಾಗಿ ಉಳಿಸಿಕೊಂಡು ಪ್ರಬಲ ಸಮುದಾಯದ ವೋಟ್‌ಬ್ಯಾಂಕನ್ನು ಸಾಧ್ಯವಾದಷ್ಟುಎಳೆದು ತರಬೇಕು. ಇದು ಸಾಧ್ಯವಾಗದಿದ್ದಲ್ಲಿ ಪದ್ಮನಾಭ ನಗರದ ಕಡೆ ಓಡಬೇಕು.

 

Explained why DK Shivakumar Plays Vokkaliga Card hls
Author
Bengaluru, First Published Jul 22, 2022, 11:38 AM IST

India Gate Column by Prashant Natu

ಕಳೆದ ವಾರದವರೆಗೂ ಪಕ್ಷ ಪೂಜೆ, ಸಂಘಟನೆ ಎಂದು ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್‌ ಈಗ ಏಕಾಏಕಿ ಒಕ್ಕಲಿಗ ಸಮುದಾಯದ ನಾಯಕನಾಗುವ ಬಗ್ಗೆ ಮಾತನಾಡಲು ಶುರುಮಾಡಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ ಮೂರು ಮಾಸ್‌ ಲೀಡರ್‌ಗಳು ಇದ್ದರು. ಒಕ್ಕಲಿಗರ ಬೆಂಬಲದಿಂದ ದೇವೇಗೌಡ, ಲಿಂಗಾಯತರ ಬೆಂಬಲದಿಂದ ಯಡಿಯೂರಪ್ಪ, ಕುರುಬರ ಬೆಂಬಲದಿಂದ ಸಿದ್ದರಾಮಯ್ಯ. ಆದರೆ ಈಗ ಒಕ್ಕಲಿಗರ ಬೆಂಬಲ ದೊರೆತರೆ ತಾವು 4ನೇ ಮಾಸ್‌ ಲೀಡರ್‌ ಆಗಿ ಹೊರಹೊಮ್ಮಬಹುದು ಎಂದು ಡಿಕೆಶಿ ಹೊರಟಿದ್ದಾರೆ.

ಕಳೆದ 18 ವರ್ಷಗಳಿಂದ ಒಕ್ಕಲಿಗರಲ್ಲಿ ಶೇ.60 ಮತ ಬೀಳುತ್ತಿರುವುದು ದೇವೇಗೌಡರ ಕುಟುಂಬಕ್ಕೆ. ಡಿಕೆಶಿ, ಆರ್‌.ಅಶೋಕ್‌, ಅಶ್ವತ್ಥನಾರಾಯಣ ಇವರೆಲ್ಲ ಒಕ್ಕಲಿಗ ನಾಯಕರು ಹೌದಾದರೂ ಅವರ ಹೆಸರಿನ ಮೇಲೆ ಅವರ ಕ್ಷೇತ್ರಗಳಲ್ಲಿ ಮಾತ್ರ ಒಕ್ಕಲಿಗರು ವೋಟು ಹಾಕುತ್ತಾರೆ. ಮೊದಲಿಗೆ ಹೋಲಿಸಿದರೆ ಕುಮಾರಸ್ವಾಮಿ ಜನಪ್ರಿಯತೆ ಸ್ವಲ್ಪ ಇಳಿಮುಖವಾಗಿದೆ ಎಂಬುದು ನಿಜ. ದೇವೇಗೌಡ ಇರುವಾಗ, ಅದರಲ್ಲೂ ಕಾಂಗ್ರೆಸ್‌ನಲ್ಲಿ ಒಕ್ಕಲಿಗರು ಅಷ್ಟಾಗಿ ಇಷ್ಟಪಡದ ಸಿದ್ದರಾಮಯ್ಯ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವಾಗ ಒಕ್ಕಲಿಗರು ಅಷ್ಟುಸುಲಭವಾಗಿ ಕಾಂಗ್ರೆಸ್‌ಗೆ ಶಿಫ್ಟ್‌ ಆಗುತ್ತಾರಾ ಅನ್ನುವುದು ಪ್ರಶ್ನಾರ್ಥಕ.

India gate:ಸಿದ್ದರಾಮೋತ್ಸವ, ಸಿದ್ದು ಜೊತೆ ಹಿರಿಯ ನಾಯಕರು, ಮುಲಾಜಿಗೆ ಬಿದ್ರಾ ಡಿಕೆಶಿ.?

ಕಾಂಗ್ರೆಸ್‌ಗೆ ಅಹಿಂದ ಜತೆ ‘ಪ್ಲಸ್‌’ ಬೇಕು

1983ರಲ್ಲಿ ಜನತಾದಳ ಅಧಿಕಾರ ಹಿಡಿದ ನಂತರ ಕಾಂಗ್ರೆಸ್‌ ಅಧಿಕಾರ ಪಡೆದಿದ್ದು 1989ರಲ್ಲಿ ಜನತಾ ಪಾರ್ಟಿಯ ವಿಘಟನೆ ಕಾರಣದಿಂದ. ಇನ್ನು 1999ರಲ್ಲೂ ಜನತಾದಳದ ವಿಘಟನೆ ಕಾರಣದಿಂದ ಅಧಿಕಾರಕ್ಕೇರಿದ ಕಾಂಗ್ರೆಸ್‌ 2013ರಲ್ಲೂ ಬಿಜೆಪಿ ವಿಘಟನೆಯಿಂದಾಗಿ ಅಧಿಕಾರಕ್ಕೇರಿತು. ಹೀಗಾಗಿಯೇ 2018ರಲ್ಲಿ ಸಿದ್ದರಾಮಯ್ಯ ಲಿಂಗಾಯತ-ವೀರಶೈವ ಎಂದು ಧರ್ಮ ವಿಭಾಗಿಸಿ ವೋಟ್‌ ಬ್ಯಾಂಕ್‌ ಒಡೆಯಲು ಪ್ರಯತ್ನ ಮಾಡಿದರೂ ಅದು ಸಾಧ್ಯ ಆಗಲಿಲ್ಲ. ಹೀಗಾಗಿಯೇ ಮೋದಿ ಮತ್ತು ಅಮಿತ್‌ ಶಾ ಯಡಿಯೂರಪ್ಪನವರನ್ನು ಕೆಳಗೆ ಇಳಿಸಿದರೂ ಕೂಡ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿ ವೋಟ್‌ ಬ್ಯಾಂಕ್‌ ಒಡೆಯದಂತೆ ನೋಡಿಕೊಂಡಿದ್ದಾರೆ.

ಹೀಗಿರುವಾಗ ಒಂದು ವೇಳೆ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ಸಿಗಬೇಕಾದರೆ ಅಹಿಂದ ವೋಟ್‌ ಬ್ಯಾಂಕ್‌ನ ಜೊತೆಗೆ ಇನ್ನಷ್ಟುಲಿಂಗಾಯತರು ಅಥವಾ ಒಕ್ಕಲಿಗರ ಮತಗಳು ಬೇಕು. ಹಿಂದುತ್ವದ ಸಂಬಂಧ ಇರುವ ಲಿಂಗಾಯತರು ಬಿಜೆಪಿ ಬಗ್ಗೆ ಅಷ್ಟುಖುಷಿ ಇಲ್ಲದಿದ್ದರೂ ಮೋದಿ ಕಾರಣದಿಂದ ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಗುಳೆ ಹೋಗುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಹೇಗಾದರೂ ಮಾಡಿ ದೇವೇಗೌಡರ ಬುಟ್ಟಿಯಿಂದ ಸ್ವಲ್ಪ ಒಕ್ಕಲಿಗ ಮತಗಳು ಬಿದ್ದರೆ ಮುಖ್ಯಮಂತ್ರಿ ಆಗಬೇಕು ಎಂಬ ತಮ್ಮ ಬಹು ದಿನಗಳ ಇಚ್ಛೆಗೆ ಇಂಬು ಸಿಗುತ್ತದೆ ಎಂದು ಡಿಕೆಶಿ ಮೈಚಳಿ ಬಿಟ್ಟು ಸಮುದಾಯದ ಬೆಂಬಲ ಕೋರುತ್ತಿದ್ದಾರೆ.

ಕುತೂಹಲದ ಜಾತಿ ಸಮೀಕರಣಗಳು

ಸ್ವಾತಂತ್ರ್ಯ ಬಂದಾಗ ಕಾಂಗ್ರೆಸ್‌ಗೆ ಎಲ್ಲ ಸಮುದಾಯಗಳು ದಂಡಿಯಾಗಿ ಮತ ನೀಡುತ್ತಿದ್ದವು. ಆದರೆ ಪಂಡಿತ್‌ ನೆಹರು ತೀರಿಕೊಂಡ ನಂತರ 1967ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ 9 ರಾಜ್ಯಗಳಲ್ಲಿ ಸೋಲು ಕಂಡಿತು. ಅಲ್ಲಿಂದ ಮುಂದೆ ಪ್ರಬಲ ಜಮೀನುದಾರ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗತೊಡಗಿದವು. ಸಿಂಡಿಕೇಟ್‌ನ ನಿಜಲಿಂಗಪ್ಪ, ಮೊರಾರ್ಜಿ ದೇಸಾಯಿ, ಎಸ್‌.ಕೆ.ಪಾಟೀಲ್‌, ಚೌಧರಿ ಚರಣ ಸಿಂಗ್‌ ಹೀಗೆ 1969ರಲ್ಲಿ ಕಾಂಗ್ರೆಸ್‌ನಿಂದ ದೂರ ಹೋದ ಬಹುತೇಕರು ಜಮೀನುದಾರ ಸಮುದಾಯದವರು. ಇದಾದ ಮೇಲೆ ಇಂದಿರಾ ಗಾಂಧಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ತಂದಾಗ ಜಮೀನು ಕಳೆದುಕೊಂಡ ಸಮುದಾಯಗಳು ಕಾಂಗ್ರೆಸ್‌ನಿಂದ ಹೊರಹೋಗತೊಡಗಿದರು.

Maharashtra Politics: ಮಹಾರಾಷ್ಟ್ರಕ್ಕೆ ಫಡ್ನವೀಸ್ ಏಕೆ ಸಿಎಂ ಆಗಲಿಲ್ಲ?

ಆಗ ಇಂದಿರಾ ಕರ್ನಾಟಕದಲ್ಲಿ ಅತಿ ಸಣ್ಣ ಸಮುದಾಯದ ದೇವರಾಜ ಅರಸರ ಕೈಗೆ ನಾಯಕತ್ವ ಕೊಟ್ಟು 1972 ಮತ್ತು 1977ರ ಎರಡು ಚುನಾವಣೆ ಗೆದ್ದರು. ಸಿಂಡಿಕೇಟ್‌ ಆಗಿ ಹೊರಬಿದ್ದ ನಾಯಕರು ಮತ್ತು ಅರಸು ಪಾಲಿಟಿಕ್ಸ್‌ನಿಂದ ಮುನಿಸಿಕೊಂಡ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಜನತಾ ಪಾರ್ಟಿಯ ರೂಪ ತಾಳಿದ ನಂತರವೇ 1983ರಲ್ಲಿ ಮೊದಲ ಬಾರಿ ಕಾಂಗ್ರೆಸ್ಸೇತರ ಸರ್ಕಾರ ಬಂತು. ಜನತಾ ಪಾರ್ಟಿ ಸರ್ಕಾರ ಬರಲು ಕಾಂಗ್ರೆಸ್‌ನ ವಿಭಜನೆಯ ಕಾರಣ ಕೂಡ ಇತ್ತು. ಆದರೆ 6 ವರ್ಷಗಳಲ್ಲಿ ಅಂದರೆ 1989ರ ವೇಳೆಗೆ ಲಿಂಗಾಯತರು, ಒಕ್ಕಲಿಗರು ಪರಸ್ಪರ ಹೆಗಡೆ ಮತ್ತು ದೇವೇಗೌಡರ ಗುಂಪುಗಳಾಗಿ ಒಡೆದವು.

ಆಗ ಕಾಂಗ್ರೆಸ್‌ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್‌ ನೇತೃತ್ವದಲ್ಲಿ ಹೋದಾಗ 224ರಲ್ಲಿ 178 ಸ್ಥಾನ ಪಡೆಯಿತು. ಪುನಃ ನಮ್ಮದು ತಪ್ಪಾಯಿತು ಎಂದು ಗೌಡ ಹಾಗೂ ಹೆಗಡೆ ಜೊತೆಗೆ ಓಡಾಡಿದರು, ಮತ್ತು ಕಾಂಗ್ರೆಸ್‌ ಕಚ್ಚಾಟದಿಂದ 1994ರಲ್ಲಿ ಮತ್ತೆ ಜನತಾ ದಳ ಅಧಿಕಾರಕ್ಕೆ ಬಂತು. ಆದರೆ 99ರ ವೇಳೆಗೆ ಪಟೇಲ್‌ ಮತ್ತು ಹೆಗಡೆ ಒಂದು ಬಣ, ದೇವೇಗೌಡ ಇನ್ನೊಂದು ಬಣವಾದರು. ಆಗ ಕಾಂಗ್ರೆಸ್‌ ಒಕ್ಕಲಿಗ ಎಸ್‌.ಎಂ.ಕೃಷ್ಣ ಕೈಗೆ ಪಾಂಚಜನ್ಯ ನೀಡಿದ್ದರಿಂದ 132 ಸ್ಥಾನ ಗೆದ್ದಿತು.

ಈಗಲೂ ಕೂಡ ದೇವೇಗೌಡರ ಜೊತೆ ಮುನಿಸಿಕೊಂಡು ದೂರವಾದ ಲಿಂಗಾಯತರು ಯಡಿಯೂರಪ್ಪ ನೇತೃತ್ವದಲ್ಲಿ ಪ್ರಬಲ ಬಿಜೆಪಿಯಾಗಿ ಹೊರಹೊಮ್ಮಿದ್ದರೆ, ಒಕ್ಕಲಿಗರ ಇನ್ನೊಂದು ಧ್ರುವ ಹೆಚ್ಚಾನುಹೆಚ್ಚು ದೇವೇಗೌಡರ ಬಳಿಯೇ ಇದೆ. ಈಗ ಕಾಂಗ್ರೆಸ್‌ಗೆ ಇರುವ ಆತಂಕ ಮೋದಿ ಕಾರಣದಿಂದ ಕೈಬಿಟ್ಟು ಹೋಗುವ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳದ್ದು. ಆ ನಷ್ಟಸರಿ ತೂಗಿಸಬೇಕಾದರೆ ಪ್ರಬಲ ಸಮುದಾಯಗಳ ಮತಗಳು ಇನ್ನಷ್ಟುಬರಬೇಕು. ಅದು ಸಾಧ್ಯವಾ ಎಂಬುದೇ ಭವಿಷ್ಯದ ಪ್ರಶ್ನೆ.

ಒಕ್ಕಲಿಗರು, ಕುರುಬರು ಒಟ್ಟಿಗೆ?

2019ರಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಲೋಕಸಭೆಗೆ ಮೈತ್ರಿ ನಡೆದಿತ್ತು. ಆದರೆ ಅದು ವಿಫಲ ಆಗಿದ್ದು ತಳ ಮಟ್ಟದಲ್ಲಿ ಒಕ್ಕಲಿಗರು ಮತ್ತು ಕುರುಬರ ನಡುವೆ ವೋಟುಗಳು ವರ್ಗಾವಣೆ ಆಗದೇ ಇದ್ದುದರಿಂದ. ತುಮಕೂರಿನಲ್ಲಿ ದೇವೇಗೌಡರಿಗೆ ಕುರುಬ ಮತ್ತು ಇತರ ಹಿಂದುಳಿದವರು ಕೈಕೊಟ್ಟರೆ ಮೈಸೂರಿನಲ್ಲಿ ಸಿದ್ದು ಮೇಲಿನ ಮುನಿಸಿನಿಂದ ಒಕ್ಕಲಿಗರು ಪ್ರತಾಪ್‌ ಸಿಂಹ ಜೊತೆ ಇನ್ನಷ್ಟುಗಟ್ಟಿಯಾಗಿ ನಿಂತರು. ಅಷ್ಟೇ ಯಾಕೆ 2018ರಲ್ಲೂ ಸಿದ್ದು ಚಾಮುಂಡೇಶ್ವರಿಯಿಂದ ಸೋಲಲು ಒಕ್ಕಲಿಗರು ಕಾರಣ.

ಬಾಳಾಠಾಕ್ರೆ ಕಟ್ಟಿದ ಹಿಂದುತ್ವದ ಸೌಧವನ್ನು ಬಲಿ ಕೊಟ್ಟರೇ ಮಗ, ಮೊಮ್ಮಗ?

ಆದರೆ ಬಾದಾಮಿಯಿಂದ 1600 ವೋಟುಗಳಿಂದ ಮಾತ್ರ ಗೆಲ್ಲಲು ಲಿಂಗಾಯತರ ಕ್ರೋಢೀಕರಣ ಕಾರಣ. ಆದರೆ ಈಗ ಮತ್ತೊಮ್ಮೆ ಸಿದ್ದು ಅಹಿಂದ ಮತ ತಮ್ಮ ಹೆಸರಿನ ಮೇಲೆ ಕ್ರೂಢೀಕರಣಕ್ಕೆ ಹೊರಟರೆ ಡಿಕೆಶಿ ಒಕ್ಕಲಿಗರನ್ನು ತಮಗಾಗಿ ವೋಟು ಮಾಡಿ ಎಂದು ಕೇಳುತ್ತಿದ್ದಾರೆ. ಮೈಸೂರು ಕರ್ನಾಟಕ ಭಾಗದಲ್ಲಿ ಒಕ್ಕಲಿಗರು, ಕುರುಬರು ಕೊನೆ ಬಾರಿ ಒಟ್ಟಿಗೆ ಬಂದಿದ್ದು 2004ರಲ್ಲಿ. ಆಗ ದೇವೇಗೌಡ, ಸಿದ್ದು ಒಟ್ಟಿಗಿದ್ದರು. ಈಗ ಸಿದ್ದು, ಡಿಕೆಶಿ ಇಬ್ಬರೂ ಒಂದೇ ಪಕ್ಷದಲ್ಲಿದ್ದರೂ ಮುಖ್ಯಮಂತ್ರಿ ರೇಸ್‌ನಲ್ಲಿ ಒಬ್ಬರನ್ನೊಬ್ಬರು ಹಿಂದೆ ನೂಕುವ ಗಡಿಬಿಡಿಯಲ್ಲಿದ್ದಾರೆ. ಹಾಗಿದ್ದಾಗ ಎರಡು ಸಮುದಾಯಗಳು ಹೇಗೆ ವೋಟು ಹಾಕುತ್ತವೆ ಅನ್ನುವುದು 2023ರ ದೊಡ್ಡ ಕುತೂಹಲ.

ಬಿಜೆಪಿಗೂ ಪ್ಲಸ್‌ ಬೇಕು?

2018ರಲ್ಲಿ ಬಿಜೆಪಿ ಬಳಿ ಯಡಿಯೂರಪ್ಪ ನಾಯಕತ್ವ ಇದ್ದುದರಿಂದ ಸಿದ್ದು ಹೂಡಿದ ಲಿಂಗಾಯತ-ವೀರಶೈವ ಧರ್ಮ ಇಬ್ಭಾಗದ ಬಾಣ ತಿರುಗಿ ಹೊಡೆಯಿತು. ಲಿಂಗಾಯತರ ಉಪ ಜಾತಿಗಳಲ್ಲಿ ಯಡಿಯೂರಪ್ಪಗಿದ್ದ ಜನಪ್ರಿಯತೆ ಮುಂದೆ ಧರ್ಮ ಇಬ್ಭಾಗದ ಪ್ರಶ್ನೆ ಪ್ರಸ್ತುತತೆಯನ್ನೇ ಕಳೆದುಕೊಂಡಿತು.

ಆದರೆ 2023ರಲ್ಲಿ ಯಡಿಯೂರಪ್ಪ ನಾಯಕತ್ವ ಇಲ್ಲ, ಇನ್ನೊಬ್ಬ ಲಿಂಗಾಯತ ಬೊಮ್ಮಾಯಿ ಕರ್ಣಧಾರತ್ವ ಏನು ಫಲ ನೀಡುತ್ತದೆಯೋ ಗೊತ್ತಿಲ್ಲ. ಹೀಗಾಗಿ ಬಿಜೆಪಿ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳನ್ನು ಹಿಂದುತ್ವ ಮತ್ತು ಮೋದಿ ಹೆಸರಿನ ಮೇಲೆ ಸೆಳೆಯಲು ನೋಡುತ್ತಿದೆ. ಚುನಾವಣಾ ರಾಜಕೀಯ ಹೇಗಿದೆ ಎಂದರೆ, ಬಿಜೆಪಿ ಗೆಲ್ಲಬೇಕಾದರೆ ಸಾಧ್ಯವಾದಷ್ಟುಲಿಂಗಾಯತರನ್ನು ಉಳಿಸಿಕೊಂಡು ಅಹಿಂದ ವೋಟ್‌ಬ್ಯಾಂಕ್‌ನ ಸಣ್ಣ ಹಿಂದುಳಿದ ಜಾತಿಗಳನ್ನು ಸೆಳೆಯಬೇಕು. ಕಾಂಗ್ರೆಸ್‌ ಗೆಲ್ಲಬೇಕಾದರೆ ಅಹಿಂದ ಗಟ್ಟಿಯಾಗಿ ಉಳಿಸಿಕೊಂಡು ಪ್ರಬಲ ಸಮುದಾಯದ ವೋಟ್‌ಬ್ಯಾಂಕನ್ನು ಸಾಧ್ಯವಾದಷ್ಟುಎಳೆದು ತರಬೇಕು. ಇದು ಸಾಧ್ಯವಾಗದಿದ್ದಲ್ಲಿ ಪದ್ಮನಾಭ ನಗರದ ಮನೆ ಮುಂದೆ ‘ಭವತಿ ಭಿಕ್ಷಾಂ ದೇಹಿ’ ಅನ್ನಲು ತಯಾರಾಗಬೇಕು.

ಅರುಣ್‌ಕುಮಾರ್‌ಗೆ ಸಿಟ್ಟೇ ಮುಳುವು

ಕರ್ನಾಟಕದಲ್ಲಿ ಬಿಜೆಪಿಗೆ ಆರ್‌ಎಸ್‌ಎಸ್‌ ಮತ್ತು ವಿದ್ಯಾರ್ಥಿ ಪರಿಷತ್‌ನಿಂದ ಬಂದವರಲ್ಲಿ ಯಶಸ್ವಿ ಆದವರೇ ಹೆಚ್ಚು. 1987ರಲ್ಲಿ ಎಬಿವಿಪಿಯಿಂದ ಬಿಜೆಪಿಗೆ ಬಂದ ಅನಂತಕುಮಾರ್‌ ರಾಜ್ಯ ಸಂಘಟನಾ ಕಾರ್ಯದರ್ಶಿಯಿಂದ ಕೇಂದ್ರ ಮಂತ್ರಿವರೆಗೆ ದೊಡ್ಡದಾಗಿ ಬೆಳೆದರು. 2007ರಲ್ಲಿ ಆರ್‌ಎಸ್‌ಎಸ್‌ನ ವಿಭಾಗ ಪ್ರಚಾರಕರಿಂದ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಬಿ.ಎಲ್‌.ಸಂತೋಷ್‌ ಇವತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ. ಯಡಿಯೂರಪ್ಪ ಜೊತೆಗೆ ರಾಜ್ಯ ಬಿಜೆಪಿಗೆ ಅತಿ ಹೆಚ್ಚು ಕೊಡುಗೆ ನೀಡಿದ ಪಟ್ಟಿಯಲ್ಲಿ ಅನಂತ್‌ ಮತ್ತು ಸಂತೋಷ್‌ ಬರುತ್ತಾರೆ. ಆದರೆ 4 ವರ್ಷದಲ್ಲೇ ಪ್ರಚಾರಕ ಅರುಣ್‌ಕುಮಾರ್‌ರನ್ನು ವಾಪಸು ಬಿಜೆಪಿಯಿಂದ ಸಂಘಕ್ಕೆ ಕರೆಸಿಕೊಳ್ಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಸಿಟ್ಟು ನಿಯಂತ್ರಣ ಮಾಡಿಕೊಳ್ಳದ ಅರುಣ್‌ರ ಸ್ವಭಾವ.

ಸಿಎಂ ಫೈಲಿಗೊಬ್ಬ ಅಧಿಕಾರಿ

ಕಳೆದ ವಾರ ಜೆ.ಪಿ.ನಗರಕ್ಕೆ ಹೋಗಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ತಾವೇ ಫೋನ್‌ ಮಾಡಿ ಕೇಶವ ಕೃಪಾಕ್ಕೆ ಹೋಗಿ ಸಂಘದ ಹಿರಿಯ ಪ್ರಚಾರಕರಾದ ಮುಕುಂದ್‌ ಮತ್ತು ಮಂಗೇಶ ಬೆಂಡೆಯವರನ್ನು ಭೇಟಿಯಾಗಿ ಬಂದಿದ್ದಾರೆ. ಆಗ ಸಂಘದ ಹಿರಿಯರು, ‘ಬಿಜೆಪಿ ಸಚಿವರು, ಶಾಸಕರು, ನೀವು ಫೈಲುಗಳನ್ನು ನೋಡುವುದಿಲ್ಲ, ಸಹಿ ಮಾಡುವುದಿಲ್ಲ ಎಂದು ದೂರು ಹೇಳುತ್ತಾರೆ, ಹೀಗಾದರೆ ಹೇಗೆ? ಇದು ಚುನಾವಣೆ ವರ್ಷ’ ಎಂದಿದ್ದಾರೆ.

ಆಗ ಬೊಮ್ಮಾಯಿ, ಅಧ್ಯಯನ ಮಾಡುತ್ತೇನೆ. ಆದ್ದರಿಂದ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ ಕೊನೆಗೆ ಫೈಲ್‌ ತುರ್ತು ವಿಲೇವಾರಿಗೆ ಒಬ್ಬ ರೆವಿನ್ಯೂ ಸರ್ವಿಸ್‌ನ ಅಧಿಕಾರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿ ಬಂದಿದ್ದಾರೆ. ಒಂದು ಅಂದಾಜಿನ ಪ್ರಕಾರ ಬೊಮ್ಮಾಯಿ ಕಚೇರಿಯಲ್ಲಿ 5800 ಕಡತಗಳು ವಿಲೇವಾರಿ ಆಗದೇ ಉಳಿದುಕೊಂಡಿವೆ. ಇದರಲ್ಲಿ ಪರಿಹಾರ ನಿಧಿಯ 1000ಕ್ಕೂ ಹೆಚ್ಚು ಫೈಲುಗಳು ಸೇರಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios