ರಮೇಶ ಜಾರಕಿಹೊಳಿ ಈ ಕ್ಷೇತ್ರದಿಂದ ಸತತವಾಗಿ 6 ಬಾರಿ ಆಯ್ಕೆಯಾಗುತ್ತ ಬಂದಿದ್ದಾರೆ. ಇಲ್ಲಿ ರಮೇಶ ಜಾರಕಿಹೊಳಿಗೆ ಸಮರ್ಥ ಪ್ರತಿಸ್ಪರ್ಧಿಗಳೇ ಇಲ್ಲ.
ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಗೋಕಾಕದಲ್ಲಿ ಪಕ್ಷ ಗೌಣ, ವೈಯಕ್ತಿಕ ಪ್ರತಿಷ್ಠೆಯೇ ಮೇಲು. ಗೋಕಾಕ ಎಂದರೆ ತಕ್ಷಣವೇ ನೆನಪಿಗೆ ಬರುವುದು ಕರದಂಟು, ಜಲಪಾತ. ಇದರ ಜೊತೆಗೆ ಜಾರಕಿಹೊಳಿ ಕುಟುಂಬ.
ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದ ಗೋಕಾಕ, 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿದೆ. ರಮೇಶ ಜಾರಕಿಹೊಳಿ ಈ ಕ್ಷೇತ್ರದಿಂದ ಸತತವಾಗಿ 6 ಬಾರಿ ಆಯ್ಕೆಯಾಗುತ್ತ ಬಂದಿದ್ದಾರೆ. ಇಲ್ಲಿ ರಮೇಶ ಜಾರಕಿಹೊಳಿಗೆ ಸಮರ್ಥ ಪ್ರತಿಸ್ಪರ್ಧಿಗಳೇ ಇಲ್ಲ. ಬಿಜೆಪಿಯಿಂದ ಈ ಬಾರಿಯೂ ಅವರೇ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಈ ಮಧ್ಯೆ, ಪಕ್ಷ ಬಯಸಿದರೆ ಈ ಬಾರಿ ಗೋಕಾಕದಿಂದ ಸ್ಪರ್ಧೆಗೆ ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿಕೆ ನೀಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಇದನ್ನು ಓದಿ: ಸಾಹುಕಾರ್ Vs ಹೆಬ್ಬಾಳ್ಕರ್: ಸಾಹುಕಾರನ ವಿರುದ್ಧ ಗೋಕಾಕ್‌ನಿಂದ ಸ್ಪರ್ಧಿಸ್ತಾರಾ ಲಕ್ಷ್ಮೀ ಹೆಬ್ಬಾಳ್ಕರ್?
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ರಮೇಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಸಿಡಿ ಹಗರಣ ಪ್ರಕರಣದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ ಘಟಾನುಘಟಿ ನಾಯಕರಿಗೆ ರಮೇಶ ಜಾರಕಿಹೊಳಿ ಟಾರ್ಗೆಟ್ ಆಗಿದ್ದಾರೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಗೋಕಾಕ ಕ್ಷೇತ್ರ, ರಮೇಶ ಜಾರಕಿಹೊಳಿಯ ಭದ್ರಕೋಟೆ. ಕ್ಷೇತ್ರದಲ್ಲೇ ಮತ್ತೊಮ್ಮೆ ತಮ್ಮ ಅಸ್ತಿತ್ವ ಸಾಧಿಸಲು ಅವರು ಪಣ ತೊಟ್ಟಿದ್ದಾರೆ. ಆದರೆ, ಈ ಬಾರಿ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಇದಕ್ಕೆ ಪಂಚಮಸಾಲಿ ಸಮುದಾಯ ಕೈಜೋಡಿಸಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಮತ್ತೆ ದೆಹಲಿಗೆ, ಇಂದು ಅಮಿತ್ ಶಾ ಭೇಟಿ ಸಂಭವ
ಇನ್ನು, ಕಾಂಗ್ರೆಸ್‌ನಿಂದ ಅಶೋಕ ಪೂಜಾರಿ ಟಿಕೆಟ್ ಆಕಾಂಕ್ಷಿ. ಇವರ ಜೊತೆಗೆ ಪಂಚಮಸಾಲಿ ಸಮುದಾಯದ ಚಂದ್ರಶೇಖರ ಕೊಣ್ಣೂರ, ಪ್ರಕಾಶ ಭಾಗೋಜಿ ಕೂಡ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ರಮೇಶ ಜಾರಕಿಹೊಳಿಗೆ ಈ ಬಾರಿ ತಕ್ಕ ಪಾಠ ಕಲಿಸಲು ಪಂಚಮಸಾಲಿ ಸಮಾಜ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಇದಕ್ಕೆ ಪ್ರತಿತಂತ್ರವಾಗಿ ರಮೇಶ ಜಾರಕಿಹೊಳಿ, ಅಹಿಂದ ಮೊರೆ ಹೋಗಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈ ನಡುವೆಯೇ ಪಕ್ಷ ಬಯಸಿದರೆ ಗೋಕಾಕ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿಕೆ ನೀಡಿದ್ದಾರೆ.
ಗೋಕಾಕದಿಂದ ಲಕ್ಷ್ಮೀ ಹೆಬ್ಬಾಳಕರ ಅವರನ್ನೇ ಕಣಕ್ಕಿಳಿಸುವಂತೆ ಪಂಚಮಸಾಲಿ ಸಮುದಾಯದ ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ ಚುನಾವಣೆಗೆ ಸ್ಪರ್ಧಿಸಿದರೆ, ಜೆಡಿಎಸ್ ಕೂಡ ಪಕ್ಷಾತೀತವಾಗಿ ಬೆಂಬಲ ನೀಡುವುದಾಗಿ ಹೇಳಿದೆ.
ಇದನ್ನೂ ಓದಿ: Belagavi: ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸಹೋದರರ ಸವಾಲ್! ರಮೇಶ್ Vs ಸತೀಶ್!
ಕ್ಷೇತ್ರದ ಹಿನ್ನೆಲೆ:
1967ರಲ್ಲಿ ಅಸ್ತಿತ್ವಕ್ಕೆ ಬಂದ ಗೋಕಾಕ ಕ್ಷೇತ್ರದಿಂದ ಮೊದಲ ಬಾರಿ ಕಾಂಗ್ರೆಸ್‌ನ ಎಲ್.ಎಸ್.ನಾಯ್ಕ್ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈವರೆಗೆ 9 ಬಾರಿ ಕಾಂಗ್ರೆಸ್, ಮೂರು ಬಾರಿ ಜನತಾ ಪರಿವಾರ, ಒಂದು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಗೋಕಾಕ, 1999ರಿಂದ ರಮೇಶ ಜಾರಕಿಹೊಳಿ ಹಿಡಿತದಲ್ಲಿದೆ. 1985ರ ಚುನಾವಣೆಯಲ್ಲಿ ಜೆಎನ್‌ಪಿಯ ಎಂ.ಎಲ್.ಮುತ್ತೆಣ್ಣವರ ವಿರುದ್ಧ ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಸೋಲು ಕಂಡಿದ್ದರು. ನಂತರ, 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ ಜಾರಕಿಹೊಳಿ, ಗೆಲುವು ಸಾಧಿಸಿದ್ದರು.
ಜಾತಿವಾರು ಲೆಕ್ಕಾಚಾರ:
ಇಲ್ಲಿ ಸುಮಾರು 75 ಸಾವಿರದಷ್ಟಿರುವ ಲಿಂಗಾಯತ ಮತಗಳೇ ನಿರ್ಣಾಯಕ. ಉಳಿದಂತೆ, ಎಸ್‌ಸಿ/ಎಸ್‌ಟಿಯವರು 54,000, ಮುಸ್ಲಿಮರು 31,000, ಕುರುಬರು 22,000, ಉಪ್ಪಾರರು 13,000, ಮರಾಠರು 10,000 ಇದ್ದಾರೆ.
ಇದನ್ನೂ ಓದಿ: India Gate: ಅಮಿತ್ ಶಾಗೆ ರಮೇಶ್ ಸಿಡಿ ತೋರಿಸಿದರೋ ಅಥವಾ ಆಡಿಯೋ ಕೇಳಿಸಿದರೋ?