ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪದೇಪದೆ ರಾಜಕೀಯ ವೈರಾಗ್ಯದ ಮಾತುಗಳನ್ನಾಡುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿ ಮಾತ್ರವಲ್ಲ ಸ್ವ ಪಕ್ಷದಲ್ಲಿಯೇ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜೂ.19): ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪದೇಪದೆ ರಾಜಕೀಯ ವೈರಾಗ್ಯದ ಮಾತುಗಳನ್ನಾಡುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿ ಮಾತ್ರವಲ್ಲ ಸ್ವ ಪಕ್ಷದಲ್ಲಿಯೇ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸಿದವರು.
ನಾಲ್ಕನೇ ಬಾರಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುವುದನ್ನು ಬಿಟ್ಟು ‘ನನಗೆ ರಾಜಕಾರಣ ಸಾಕಾಗಿದೆ, ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶ’ ಎಂದು ಸ್ಪರ್ಧೆ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಸುರೇಶ್ ಅವರಿಗೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ರಾಜಕೀಯ ವೈರಾಗ್ಯ ಮೂಡಲು ಕಾರಣವಾಗಿರುವ ಆ ನೋವು, ಬೇಸರ, ದುಗುಡ, ಆತಂಕವಾದರು ಏನೆಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಸಹೋದರ ಸಿಎಂ ಆಗದಿರುವ ನೋವು: ಸಹೋದರ ಡಿ.ಕೆ.ಶಿವಕುಮಾರ್ ಪ್ರತಿ ಹೆಜ್ಜೆಗೂ ನೆರಳಾಗಿ, ಅವರ ಕಷ್ಟಸುಖಗಳಲ್ಲಿ ಬೆನ್ನಾಗಿ ಡಿ.ಕೆ.ಸುರೇಶ್ ನಿಲ್ಲುವವರು. ಇದು ಡಿ.ಕೆ.ಶಿವಕುಮಾರ್ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಸಾಬೀತು ಕೂಡ ಆಗಿದೆ. ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರಾದವರು ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಆಗುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಕನಸು ಕಟ್ಟಿಕೊಂಡು ಡಿ.ಕೆ.ಸುರೇಶ್ ಹಗಲಿರುಳು ಶ್ರಮಿಸಿದರು.
ಆದರೆ, ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದರು. ಇದರಿಂದ ಆಘಾತಕ್ಕೊಳಗಾದ ಡಿ.ಕೆ.ಸುರೇಶ್ ಹೈಕಮಾಂಡ್ ಸಂಧಾನ ಸೂತ್ರ ತಮಗೆ ಸಮಾಧಾನ ತಂದಿಲ್ಲ ಎಂದು ಕಾಂಗ್ರೆಸ್ ವರಿಷ್ಠರ ತೀರ್ಮಾನದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಡಿಕೆಶಿ ಮುಖ್ಯಮಂತ್ರಿ ಆಗಲಿಲ್ಲ ಎಂಬ ನೋವು ಸುರೇಶ್ ಅವರಿಗೆ ಹೆಚ್ಚು ಬಾಧಿಸಿದಂತೆ ಕಾಣುತ್ತಿದೆ. ಇದರಿಂದಾಗಿ ಚುನಾವಣೆ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಚರ್ಚೆಗಳು ನಡೆದಿವೆ.
ಒತ್ತಡ ಹೇರಲೆಂಬ ಆಶಯವೆ: ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಆಕಾಂಕ್ಷಿಗಳು ಯಾರೂ ಇಲ್ಲ. ಜೊತೆಗೆ ಡಿ.ಕೆ.ಸುರೇಶ್ ಅವರನ್ನು ಹೊರತು ಪಡಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಬರುವ ಸಮರ್ಥ ಅಭ್ಯರ್ಥಿ ಮತ್ತೊಬ್ಬರು ಸಿಗುವುದು ಕಷ್ಟಸಾಧ್ಯ. ಇದು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಮುಖಂಡ ಹಾಗೂ ಕಾರ್ಯಕರ್ತನಿಗೂ ತಿಳಿದಿದೆ. ಸಂಸತ್ ಚುನಾವಣೆಯಲ್ಲಿ ತಾವಾಗಿ ತಾವು ಸ್ಪರ್ಧೆ ಮಾಡುವುದಕ್ಕಿಂತ ಪಕ್ಷದ ಮುಖಂಡರು - ಕಾರ್ಯಕರ್ತರು ಮಾತ್ರವಲ್ಲ ಪಕ್ಷದ ವರಿಷ್ಠರೂ ತಮ್ಮ ಸ್ಪರ್ಧೆಗೆ ಒತ್ತಡ ಹೇರಬೇಕು. ಇದರಿಂದ ಕುಟುಂಬ ರಾಜಕಾರಣದ ಅಪಮಾನವೂ ದೂರವಾಗುತ್ತದೆ. ಕಾರ್ಯಕರ್ತರು ರಣೋತ್ಸಾಹದಿಂದ ಕೆಲಸ ಮಾಡುತ್ತಾರೆ ಎಂಬ ಲೆಕ್ಕಾಚಾರವೂ ಅಡಗಿರಬಹುದು ಎನ್ನಲಾಗಿದೆ.
ಆಂಬಿಷನ್ ಫುಲ್‌ಫಿಲ್ ಮಾಡಲಾಗದ ಸ್ಥಿತಿ: ವಿಧಾನಸಭಾ ಚುನಾವಣೆಯನ್ನು ಡಿ.ಕೆ.ಸುರೇಶ್ ಕಾಂಗ್ರೆಸ್ ಪಕ್ಷದೊಳಗಿದ್ದ ಹತ್ತಾರು ಬಣಗಳನ್ನು ಒಗ್ಗೂಡಿಸಿಕೊಂಡು ಎದುರಿಸಿದರು. ಪ್ರತಿಯೊಬ್ಬ ಮುಖಂಡರು - ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಗೆದ್ದು ಕಾಂಗ್ರೆಸ್ ಸರ್ಕಾರ ಬರಲು ಕಾರಣವಾಯಿತು. ಆದರೀಗ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ದುಡಿದ ಮುಖಂಡರು ನಿಗಮ ಮಂಡಳಿಗಳಲ್ಲಿ ಸ್ಥಾನಮಾನ, ಸರ್ಕಾರಿ ಹುದ್ದೆಯಲ್ಲಿರುವ ತಮ್ಮ ಸಂಬಂಧಿಕರು, ಪರಿಚಯಸ್ಥರ ವರ್ಗಾವಣೆ, ಕಾಮಗಾರಿಯ ಗುತ್ತಿಗೆಗಾಗಿ ಬೆನ್ನು ಬಿದ್ದಿದ್ದಾರೆ. ಮುಖಂಡರ ಆಂಬಿಷನ್ ಅನ್ನು ಫುಲ್‌ಫಿಲ್ ಮಾಡಲಾಗದೆ ಸಂಸದ ಸುರೇಶ್ ಇಕ್ಕಟ್ಟಿಗೆ ಸಿಲುಕಿದಂತಿದೆ.
ಚುನಾವಣೆಗಳು ದುಬಾರಿ ಆಗುತ್ತಿರುವ ಚಿಂತೆ: ಸ್ಥಳೀಯ ಸಂಸ್ಥೆಯಿಂದ ಹಿಡಿದು ಲೋಕಸಭೆವರೆಗಿನ ಪ್ರತಿಯೊಂದು ಚುನಾವಣೆಗಳು ಚುನಾವಣೆಯಿಂದ ಚುನಾವಣೆಗೆ ದುಬಾರಿ ಆಗುತ್ತಲೇ ಇದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಡಿಕೆ ಸಹೋದರರು ತಂತ್ರಗಾರಿಕೆ ಹೆಣೆಯುವುದರ ಜೊತೆಗೆ ಆರ್ಥಿಕ ಶಕ್ತಿಯನ್ನು ತುಂಬಿದರು. ಸಾಮಾನ್ಯವಾಗಿ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 70ರಷ್ಟುಜನರಿಗೆ ಅಂದರೆ 2 ಲಕ್ಷ ಮತದಾರರು ಇದ್ದರೆ 1.40 ಲಕ್ಷ ಮತದಾರರ ಕೈಗೆ ಕಾಣಿಕೆ ತಲುಪಿಸಬೇಕು. ಇನ್ನು ಲೋಕಸಭಾ ಚುನಾವಣೆಯಲ್ಲಿ 25 ಲಕ್ಷ ಮತದಾರರಿದ್ದು, ಶೇಕಡ 70ರಷ್ಟುಅಂದರು 17.50 ಲಕ್ಷ ಮತದಾರರಿಗೆ ಕಾಣಿಕೆ ನೀಡಬೇಕಾಗುತ್ತದೆ. ವಿಧಾನಸಭಾ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಖರ್ಚು ಮತ್ತಷ್ಟುದುಬಾರಿ ಆಗಲಿರುವ ಕಾರಣ ಜನರ ದೃಷ್ಟಿಯಲ್ಲಿ ಭ್ರಷ್ಟರಂತೆ ಕಾಣುತ್ತೇವೆಂಬ ಚಿಂತೆ ಸುರೇಶ್ ಅವರಿಗೆ ಕಾಡುತ್ತಿರಬೇಕು.
ಮೈತ್ರಿಯಲ್ಲಿ ಚಕ್ರವ್ಯೂಹ ರಚನೆಯ ಆತಂಕ: ಶತ್ರುವಿನ ಶತ್ರು ಮಿತ್ರ ಎಂಬ ಗಾದೆ ಮಾತಿನಂತೆ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುವ ಮಾತುಗಳು ಕೇಳಿ ಬರುತ್ತಿವೆ. ಈ ದೋಸ್ತಿ ರಚನೆಗೊಂಡಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅಥವಾ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪೈಕಿ ಒಬ್ಬರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಇದು ನಿಜವಾದರೆ ಸುರೇಶ್ ತಮ್ಮ ಗೆಲುವಿಗಾಗಿ ಸಾಕಷ್ಟುಶ್ರಮ ವಹಿಸಬೇಕಾಗುತ್ತದೆ.
ವಿಧಾನಸಭಾ ಚುನಾವಣೆಯಲ್ಲಿ ಡಿಕೆ ಸಹೋದರರ ನಡೆಸಿದ ತಂತ್ರಗಾರಿಕೆಯಿಂದಾಗಿ ಜೆಡಿಎಸ್ ಹೀನಾಯ ಸೋಲು ಕಂಡಿತು. ಇದರಿಂದ ಸಿಡಿದೆದ್ದಿರುವ ದಳಪತಿಗಳು ಕಮಲ ಪಾಳಯದೊಂದಿಗೆ ಚಕ್ರವ್ಯೂಹ ರಚಿಸಿ ಡಿ.ಕೆ.ಸುರೇಶ್ ಅವರನ್ನು ಹಣಿಯುವ ತವಕದಲ್ಲಿದ್ದಾರೆ. ಆದರೆ, ಕಳೆದ ಸಂಸತ್ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಶಾಸಕರ ಪ್ರಾಬಲ್ಯ ಹೆಚ್ಚಾಗಿದ್ದರು ಚಕ್ರವ್ಯೂಹದ ಆತಂಕ ಸುರೇಶ್ ಅವರಿಗೆ ಕಾಡುತ್ತಿರಬೇಕು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಡಿಕೆಸು ರಾಜಕೀಯ ಹಾದಿ: ಸಂಸತ್ ಚುನಾವಣೆ ಮೂಲಕವೇ ಡಿ.ಕೆ.ಸುರೇಶ್ ರಾಜಕಾರಣಕ್ಕೆ ಪ್ರವೇಶ ಮಾಡಿದವರು. ಸಂಸದರಾಗುವುದಕ್ಕೂ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿಯೂ ಸ್ಪರ್ಧೆ ಕೂಡ ಮಾಡಿದವರಲ್ಲ. ಕನಕಪುರ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಶಿವಕುಮಾರ್ ಅವರ ಗೆಲುವುಗಾಗಿ ರಣತಂತ್ರಗಳನ್ನು ಹೆಣೆದು ಗೆಲುವಿಗಾಗಿ ಶ್ರಮಿಸುತ್ತಿದ್ದರು.
ಜನಸ್ನೇಹಿ ಆಡಳಿತ ನೀಡಿ, ಇಲ್ಲ ನಿಮ್ಮ ದಾರಿ ನೋಡಿಕೊಳ್ಳಿ: ಸಂಸದ ಸುರೇಶ್ ಖಡಕ್ ವಾರ್ನಿಂಗ್
2013ರಲ್ಲಿ ಕ್ಷೇತ್ರದ ಸಂಸದರಾಗಿದ್ದ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ನ ಅನಿತಾ ಕುಮಾರಸ್ವಾಮಿ ಅವರನ್ನು ಡಿ.ಕೆ.ಸುರೇಶ್ ಮಣಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಪಿ.ಮುನಿರಾಜುಗೌಡ ಅವರನ್ನು ಸುರೇಶ್ ಸೋಲಿಸಿದರು. ಕಳೆದ (2019)ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ಬಿಜೆಪಿಯ ಅಶ್ವತ್ಥ ನಾರಾಯಣಗೌಡ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ರಾಜ್ಯದಿಂದ ಆಯ್ಕೆಯಾದ ಕಾಂಗ್ರೆಸ್‌ನ ಏಕೈಕ ಸಂಸದ ಎಂಬ ಹಿರಿಮೆಗೂ ಪಾತ್ರರಾದವರು.
ರಾಜಕೀಯ ನನಗೆ ಸರಿ ಎನಿಸುತ್ತಿಲ್ಲ. ಕೆಲಸ ಮಾಡಲು ನೆಮ್ಮದಿ ಇಲ್ಲ. ನನಗೆ ರೆಸ್ಟ್ ಬೇಕು. ನನಗೆ ಅಧಿಕಾರ ಬೇಡ ಎಂದು ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಅಂದು ಕೊಂಡಿದ್ದೇನೆ. ರಾಜಕಾರಣಿಗಳ ಬಗ್ಗೆ ಜನರಲ್ಲಿಯೂ ಮರ್ಯಾದೆ ಇಲ್ಲ. ಒಳಗಡೆಯೂ ಮರ್ಯಾದೆ ಇಲ್ಲ. ನಾನು ಅರ್ಜಿ ಹಾಕಿದರೆ ಪಕ್ಷ ಟಿಕೆಟ್ ಕೊಡುತ್ತದೆ. ಇಲ್ಲವೆಂದರೆ ಬೇರೆಯವರಿಗೆ ಕೊಡುತ್ತದೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಬೇರೆಯವರಿಗೆ ಅವಕಾಶ ಆಗಬೇಕು ಎಂಬ ಉದ್ದೇಶ ನನಗಿದೆ. ನನ್ನ ಮನಸ್ಸಿನಲ್ಲಿರುವ ವಿಚಾರವನ್ನು ಕಾರ್ಯಕರ್ತರ ಬಳಿ ತಿಳಿಸಿದ್ದೇನೆ.
-ಡಿ.ಕೆ.ಸುರೇಶ್, ಸಂಸದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ