ಕಾಂಗ್ರೆಸ್‌ ಮತ್ತು ಪ್ರಶಾಂತ್‌ ಕಿಶೋರ್‌ ನಡುವಿನ ಮಾತುಕತೆ ಮುರಿದು ಬೀಳಲು ನಿಜವಾದ ಕಾರಣ ಏನು?

By Prashant Natu  |  First Published Apr 29, 2022, 10:14 AM IST

2010ರಲ್ಲಿ ಕಾರ್ಯಕ್ರಮವೊಂದಕ್ಕೆ ಪ್ರಶಾಂತ್‌ ಕಿಶೋರ್‌ (Prashant Kishor) ಬರೆದುಕೊಟ್ಟಿದ್ದ ಮೋದಿ (Modi) ಭಾಷಣಕ್ಕೆ ಬಹಳ ಪ್ರಶಂಸೆ ವ್ಯಕ್ತವಾಗಿ ಆತ ಮೋದಿ ಭಾಷಣ ತಯಾರು ಮಾಡುವ ತಂಡ ಸೇರಿಕೊಂಡರು. ಮೋದಿ ಮತ್ತು ಪಿ.ಕೆ. ನಡುವಿನ ಆತ್ಮೀಯತೆ ಎಷ್ಟುಬೆಳೆಯಿತು ಎಂದರೆ ಗುಜರಾತ್‌ ಸಿಎಂ (Gujarat CM) ನಿವಾಸದಲ್ಲೇ ಪ್ರಶಾಂತ್‌ ಇರತೊಡಗಿದರು. 2014ರಲ್ಲಿ ಮೋದಿ ಪ್ರಚಂಡ ಗೆಲುವಿಗೂ ಕಿಶೋರ್‌ ಪ್ರಮುಖ ಕಾರಣವಾಗಿದ್ದರು. ಆದರೆ ನಂತರ ನಡೆದಿದ್ದೇ ಬೇರೆ.


ಸೋಲಿನ ಮೇಲೆ ಸೋಲುಗಳು, ವೋಟು ತರದ ಗಾಂಧಿ ಹೆಸರು, ನೋಟು ಕೊಡದ ಉದ್ಯಮಿಗಳು, ಮುನಿಸಿಕೊಂಡಿರುವ ಭಟ್ಟಂಗಿಗಳು ಮತ್ತು ಹತಾಶೆಯಲ್ಲಿರುವ ಸಾಮಾನ್ಯ ಕಾಂಗ್ರೆಸ್‌ ಕಾರ್ಯಕರ್ತರು. ಆದರೆ ಇದೆಲ್ಲದರ ಮಧ್ಯೆಯೂ ಕಾಂಗ್ರೆಸ್‌ ಪಕ್ಷವನ್ನು ತಮ್ಮ ಖಾಸಗಿ ಸ್ವತ್ತು ಎಂಬಂತೆ ಭಾವಿಸಿರುವ ಗಾಂಧಿಗಳು ಬದಲಾವಣೆಗೆ ತಯಾರಾಗುತ್ತಿಲ್ಲ ಎನ್ನುವುದು ಐತಿಹಾಸಿಕ ವಿಪರ್ಯಾಸ. ಪ್ರಶಾಂತ್‌ ಕಿಶೋರ್‌ ಅವರನ್ನು ಸಲಹೆಗಾರರಾಗಿ ಇಟ್ಟುಕೊಳ್ಳಬೇಕೋ ಅಥವಾ ಪಕ್ಷದ ಪದಾಧಿಕಾರಿ ಮಾಡಬೇಕೋ ಅನ್ನುವುದು ಆ ಪಕ್ಷದ ಆಂತರಿಕ ವಿಷಯ ಹೌದು.

ಆದರೆ ಪಕ್ಷಕ್ಕೆ ಕುಟುಂಬದ ಹೊರಗಿನ ಅಧ್ಯಕ್ಷನನ್ನು ತನ್ನಿ, ಜೊತೆಗೆ ಆಂತರಿಕ ಚುನಾವಣೆ ನಡೆಸಿ ಎನ್ನುವ ಸಲಹೆ ಪರಿಗಣಿಸಲು ಕೂಡ ತಯಾರಾಗದೇ ಇರುವುದರ ಮೂಲಕ ಕಾಂಗ್ರೆಸ್‌ ಪಕ್ಷ ಇತಿಹಾಸದಲ್ಲಿ ಒಮ್ಮೆ ಮಾತ್ರ ಬರುವ ಅವಕಾಶವನ್ನು ದೂರ ತಳ್ಳುತ್ತಿದೆ. ಖಾಸಗಿ ಕುಟುಂಬದ ಮಾಲಿಕತ್ವದ ಕಂಪನಿಗಳು ಕೂಡ ಕಾಲಕ್ಕೆ ತಕ್ಕಂತೆ ಬದಲಾಗಿ ವೃತ್ತಿಪರ ಸಿಇಒಗಳನ್ನು ತಂದು ಕಂಪನಿಯನ್ನು ಲಾಭದ ಅಂಚಿಗೆ ತಂದು ನಿಲ್ಲಿಸಿದ ಉದಾಹರಣೆಗಳಿವೆ.

Tap to resize

Latest Videos

1990 ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ ಓಡಿಸಿದ ಘಟನೆಗೆ ಕಾರಣವೇನು?

ಆದರೆ ಎಲ್ಲಿ ಹೊರಗಿನ ಬುದ್ಧಿವಂತ ಪ್ರಶಾಂತ್‌ ಕಿಶೋರ್‌ (Prashant Kishor) ಬಂದು ಪಕ್ಷವನ್ನು ಕೈಗೆ ತೆಗೆದುಕೊಳ್ಳುತ್ತಾರೋ ಎಂದು ಹೆದರಿ ಕಾಂಗ್ರೆಸ್‌ ಮತ್ತು ಸೋನಿಯಾ ಗಾಂಧಿ (Sonia Gandhi) ಮತ್ತೊಮ್ಮೆ ‘ಸಮಸ್ಯಾ ಭಗಾವೋ ಸಮಿತಿ ರಚಾವೋ’ ಎಂದು ತಮ್ಮ ಮಾತು ಕೇಳುವ ಆ್ಯಂಟನಿ ಅವರನ್ನು ಇಟ್ಟುಕೊಂಡು ಕಮಿಟಿ ರಚಿಸಿದ್ದಾರೆ. ಒಟ್ಟು ಸುಮಾರು 40 ಗಂಟೆಗಳ ಸಭೆಗಳ ನಂತರವೂ ಕಾಂಗ್ರೆಸ್‌ ಮತ್ತು ಸಮಸ್ಯೆಗಳು ಎಲ್ಲಿದ್ದವೋ ಅಲ್ಲೇ ನಿಂತುಕೊಂಡಿವೆ.

ಪಿಕೆಗೆ ಕಾಂಗ್ರೆಸ್ಸೇ ಏಕೆ ಬೇಕು?

ಹೇಳಿಕೇಳಿ ಪ್ರಶಾಂತ್‌ ಕಿಶೋರ್‌ ಒಬ್ಬ ಅತೀವ ಮಹತ್ವಾಕಾಂಕ್ಷೆಯ ವೃತ್ತಿಪರ ರಣತಂತ್ರಗಾರ. ಮೋದಿ ವಿರುದ್ಧದ ಕುರುಕ್ಷೇತ್ರದಲ್ಲಿ ಒಮ್ಮೆ ಮಮತಾ, ಇನ್ನೊಮ್ಮೆ ನಿತೀಶ್‌ ಕುಮಾರ್‌, ಮಗದೊಮ್ಮೆ ಅಮರಿಂದರ್‌ ಸಿಂಗ್‌, ಜಗನ್‌ ರೆಡ್ಡಿ, ಸ್ಟಾಲಿನ್‌, ಕೇಜ್ರಿವಾಲ್ ಅವರನ್ನು ಗೆಲ್ಲಿಸಲು ಸಹಾಯ ಮಾಡಿದರೂ ಈಗ ಪ್ರಶಾಂತ್‌ ಕಿಶೋರ್‌ ಲಕ್ಷ್ಯ ಇರುವುದು 2024ರ ಲೋಕಸಭೆ ಚುನಾವಣೆಯ ಮೇಲೆ. ಮಮತಾ ಬ್ಯಾನರ್ಜಿ ಅವರನ್ನು ಇಟ್ಟುಕೊಂಡು ಬರೀ ಪ್ರಾದೇಶಿಕ ಪಕ್ಷಗಳಿಂದ ಬಿಜೆಪಿ ಮತ್ತು ಮೋದಿ ವಿರುದ್ಧ ಒಂದು ರಾಷ್ಟ್ರೀಯ ಪರ್ಯಾಯ ರೂಪಿಸಲು ಸಾಧ್ಯವಿಲ್ಲ. ಹೀಗಾಗಿ ಕೇರಳದಿಂದ ಕಾಶ್ಮೀರ, ಕಚ್‌ನಿಂದ ಗುವಾಹಟಿಯವರೆಗೆ ಕಾರ್ಯಕರ್ತರು ಮತ್ತು ನಾಯಕರನ್ನು ಹೊಂದಿರುವ ಕಾಂಗ್ರೆಸ್ಸಿನಲ್ಲಿ ಆಮ್ಲಜನಕ ತುಂಬಲು ಪ್ರಶಾಂತ್‌ ಕಿಶೋರ್‌ ಹರಸಾಹಸ ಪಡುತ್ತಿದ್ದಾರೆ.

1952ರಲ್ಲಿ ರಾಜಕೀಯ ಆರಂಭಿಸಿದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ದೇಶದ ಮತದಾರರು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿದ್ದು 1998ರಲ್ಲಿ, ಅಂದರೆ 46 ವರ್ಷಗಳ ನಂತರ. ಆದರೆ ಪಿ.ಕೆ. ಬಳಿ ಅಷ್ಟೆಲ್ಲಾ ಸಮಯವೂ ಇಲ್ಲ, ತಾಳ್ಮೆಯೂ ಇಲ್ಲ. ಅವರ ಬಳಿ ತಂತ್ರಗಳಿವೆ, ಮಂತ್ರವೂ ಗೊತ್ತಿದೆ. ಬೇಕಾಗಿರುವ ದೇಶವ್ಯಾಪಿ ಸಂಘಟನೆ ಕಾಂಗ್ರೆಸ್‌ ಮತ್ತು ಗಾಂಧಿಗಳ ಕೈಯಲ್ಲಿ ಮಾತ್ರ ಇದೆ. ಹೀಗಾಗಿಯೇ ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್ಸಿನ ಬೆನ್ನು ಹತ್ತಿದ್ದಾರೆ.

ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?

ಪಿಕೆಗೆ ರಾಹುಲ್ ನೋ ನೋ!

ಸೋಲು ಒಂದು ಪಕ್ಷವನ್ನು ಯಾವ ಸ್ಥಿತಿಗೆ ತಂದು ಇಡುತ್ತದೆ ನೋಡಿ. 137 ವರ್ಷ ಹಳೆಯ ಕಾಂಗ್ರೆಸ್‌ ಪಕ್ಷಕ್ಕೆ ಇವತ್ತು ಉದ್ಧಾರ ಆಗಬೇಕು ಅಂದರೆ ಮಂತ್ರದಂಡ ಬೇಕು ಎಂದು ಅನ್ನಿಸಿಬಿಟ್ಟಿದೆ. ಹೀಗಾಗಿ 40ರಿಂದ 50 ವರ್ಷ ಪೂರ್ತಿ ರಾಜಕಾರಣವನ್ನೇ ಮಾಡಿದ ಕಮಲನಾಥ್‌, ಅಂಬಿಕಾ ಸೋನಿ, ಭೂಪಿಂದರ ಸಿಂಗ್‌ ಹೂಡಾ ತರಹದ ನಾಯಕರು ಪ್ರಶಾಂತ್‌ ಕಿಶೋರ್‌ ಬಳಿ ಮಾತ್ರ ಆ ಸಾಮರ್ಥ್ಯ ಇದೆ ಎಂದು ಹೇಳಿದ್ದರಿಂದ, ಇಪ್ಪತ್ತು ನಿಮಿಷಕ್ಕಿಂತ ಹೆಚ್ಚಿಗೆ ಯಾರನ್ನೂ ಭೇಟಿ ಆಗದ ಸೋನಿಯಾ ಗಾಂಧಿ, ಪಿ.ಕೆ.ಗೆ ಬರೋಬ್ಬರಿ 8 ದಿನಗಳಲ್ಲಿ 20 ಗಂಟೆಗೂ ಹೆಚ್ಚು ಸಮಯ ನೀಡಿದ್ದರು. ಆಂತರಿಕ ಚುನಾವಣೆ, ದುಡ್ಡಿನ ಸಂಗ್ರಹಣೆ, 2.5 ಕೋಟಿ ಕಾರ್ಯಕರ್ತರನ್ನು ನೇಮಿಸಿಕೊಳ್ಳುವುದು ಹೀಗೆ ಎಲ್ಲದಕ್ಕೂ ಸೋನಿಯಾ ಒಪ್ಪಿಗೆ ಇತ್ತು.

ಆದರೆ ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷ ಮಾಡುವುದು ಮತ್ತು ಪ್ರಶಾಂತ್‌ ಕಿಶೋರ್‌ ಅವರನ್ನು ನೇರವಾಗಿ ಆ ಅಧ್ಯಕ್ಷರಿಗೆ ರಾಜಕೀಯ ಕಾರ್ಯದರ್ಶಿ ಮಾಡುವ ಪ್ರಸ್ತಾವನೆಗೆ ರಾಹುಲ್ ಗಾಂಧಿ ಮತ್ತು ಉಳಿದ ಹಿರಿಯರ ಒಪ್ಪಿಗೆ ಇರಲಿಲ್ಲ. ಸೋನಿಯಾ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡ ನಾಯಕರು ಹೇಳುವ ಪ್ರಕಾರ, ಪ್ರಶಾಂತ್‌ ಕಿಶೋರ್‌ ಅವರನ್ನು ಕರೆದುಕೊಂಡು ಬರುವುದಕ್ಕೆ ಪ್ರಿಯಾಂಕಾ ಗಾಂಧಿಗೆ ಇದ್ದ ಉತ್ಸಾಹ ರಾಹುಲ್ ಗಾಂಧಿಗೆ ಇರಲಿಲ್ಲವಂತೆ. ನೆಹರು-ಗಾಂಧಿ ಕುಟುಂಬದಲ್ಲಿ ಪಂಡಿತ್‌ ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಎಲ್ಲರೂ ರಾಜಕಾರಣದಲ್ಲಿ ಯಶಸ್ಸು ಅನುಭವಿಸಿದರು. ಆದರೆ ರಾಹುಲ್ ಗಾಂಧಿಗೆ ಮಾತ್ರ ಆ ಯಶಸ್ಸು ಸಿಗುತ್ತಿಲ್ಲ. ಅದಕ್ಕಾಗಿ ನಾಯಕತ್ವ ಬದಲಾವಣೆ ಮಾಡಿ ಎಂದು ಪಿ.ಕೆ. ಹೇಳುತ್ತಿದ್ದಾರೆ. ಆದರೆ ಪಕ್ಕಕ್ಕೆ ಸರಿಯಲು ರಾಹುಲ್ ತಯಾರಿಲ್ಲ.

ಕಾಂಗ್ರೆಸ್ಸಿನ ಆತಂಕ ಏನು?

ಒಂದು ಸತ್ಯ ಏನೆಂದರೆ, ಕಾಂಗ್ರೆಸ್ಸಿನಿಂದ ಹೊರಗಿರುವವರಿಗೆ ಗಾಂಧಿ ಕುಟುಂಬದ ಪಾರುಪತ್ಯ ಹೋಗಿ ಹೊಸಬರು ಸಾರಥ್ಯ ವಹಿಸಬೇಕು ಅನಿಸುತ್ತದೆ. ಆದರೆ ಕಾಂಗ್ರೆಸ್ಸಿನಲ್ಲಿರುವ ನಾಯಕರಿಗೆ ಅಧಿಕಾರ ಇರದೇ ಇದ್ದಾಗ ಗಾಂಧಿ ಕುಟುಂಬದ ಕುಡಿಯ ನೇತೃತ್ವ ಇರದೇ ಇದ್ದರೆ ಪಕ್ಷ ಒಡೆದು ಹೋಗಬಹುದು ಎಂಬ ಭಯವಿದೆ. ಜೈರಾಮ್ ರಮೇಶ್‌, ಅಶೋಕ್‌ ಗೆಹ್ಲೋಟ್‌, ಕಮಲನಾಥ್‌ ಹೀಗೆ ಯಾರಾದರೂ ಅಧ್ಯಕ್ಷರಾದರು ಅಂದುಕೊಳ್ಳೋಣ. ಸಿದ್ದರಾಮಯ್ಯ, ಊಮನ್‌ ಚಾಂಡಿ, ಸಚಿನ್‌ ಪೈಲಟ್‌, ಪೃಥ್ವಿರಾಜ್‌ ಚೌಹಾಣ್‌, ಭೂಪಿಂದರ್‌ ಹೂಡಾ ಮುಂತಾದವರು ಗಾಂಧಿಗಳ ಮಾತು ಕೇಳಿದಂತೆ ಉಳಿದವರ ಮಾತು ಕೇಳಲ್ಲ.

India Gate: ಟಿಕೆಟ್ ಹಂಚಿಕೆ, ರಣತಂತ್ರಗಳನ್ನು ಹೆಣೆಯುವುದರಲ್ಲಿ ಫ್ರೀ ಹ್ಯಾಂಡ್ ಕೊಡಿ ಎಂದ ಡಿಕೆಶಿ

ಆಗ ಜಗಳ, ಬಂಡಾಯ, ವಿಭಜನೆಯ ಆತಂಕ ಇದ್ದೇ ಇರುತ್ತದೆ. ಜೊತೆಗೆ ಗಾಂಧಿಗಳಿಗೂ ಪಿ.ವಿ.ನರಸಿಂಹರಾವ್‌, ಸೀತಾರಾಮ್  ಕೇಸರಿ, ಶರದ್‌ ಪವಾರ್‌ಗೆ ಅಧಿಕಾರ ಕೊಟ್ಟಾಗ ನಡೆದುಕೊಂಡ ರೀತಿಯ ನಂತರ ಯಾರ ಮೇಲೂ ಆ ವಿಶ್ವಾಸವಿಲ್ಲ. ಗಾಂಧಿಗಳಿಗೆ ಮನಮೋಹನ ಸಿಂಗ್‌ರಂಥವರು ಬೇಕು. ಆದರೆ ಅಂಥವರು ಸಿಗೋದೂ ಇಲ್ಲ, ಅದರಿಂದ ರಾಜಕೀಯವಾಗಿ ಉಪಯೋಗವೂ ಇಲ್ಲ. ಕಾಂಗ್ರೆಸ್‌ನದು ಈಗ ಹಾವೂ ಸಾಯಲ್ಲ, ಕೋಲೂ ಮುರಿಯೋಲ್ಲ ಎನ್ನುವ ಸ್ಥಿತಿ.

ಪಿಕೆ-ಮೋದಿ ಮಧ್ಯೆ ಏನಾಗಿದೆ?

2008ರಲ್ಲಿ ಅಮೆರಿಕದಲ್ಲಿ ಕುಳಿತುಕೊಂಡಿದ್ದ ಪ್ರಶಾಂತ್‌ ಕಿಶೋರ್‌ ಗುಜರಾತಲ್ಲಿ ಮಕ್ಕಳ ಅಪೌಷ್ಟಿಕತೆ ಬಗ್ಗೆ ಲೇಖನ ಬರೆದಿದ್ದರು. ಆಗ ಪಿ.ಕೆ.ಗೆ ಫೋನ್‌ ಮಾಡಿದ ನರೇಂದ್ರ ಮೋದಿ, ‘ಅಲ್ಲಿ ಕುಳಿತುಕೊಂಡು ಬರೆಯೋದು ಸುಲಭ, ಇಲ್ಲಿ ಬಾ ನನ್ನ ಜೊತೆ ಕೆಲಸ ಮಾಡು’ ಅಂದಾಗ ಪ್ರಶಾಂತ್‌ ಒಪ್ಪಿಕೊಂಡು ಗುಜರಾತಿಗೆ ಬಂದರು. 2010ರಲ್ಲಿ ಚೆನ್ನೈನಲ್ಲಿ ಚೊ.ರಾಮಸ್ವಾಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ.ಕೆ. ಬರೆದುಕೊಟ್ಟಿದ್ದ ಮೋದಿ ಭಾಷಣಕ್ಕೆ ಬಹಳ ಪ್ರಶಂಸೆ ವ್ಯಕ್ತವಾಗಿ ಕಿಶೋರ್‌, ಮೋದಿ ಭಾಷಣ ತಯಾರು ಮಾಡುವ ತಂಡ ಸೇರಿಕೊಂಡರು.

ಮೋದಿ ಮತ್ತು ಪಿ.ಕೆ. ನಡುವಿನ ಆತ್ಮೀಯತೆ ಎಷ್ಟುಬೆಳೆಯಿತು ಎಂದರೆ ಗುಜರಾತ್‌ ಮುಖ್ಯಮಂತ್ರಿಗಳ ನಿವಾಸದಲ್ಲೇ ಪ್ರಶಾಂತ್‌ ಇರತೊಡಗಿದರು. 2012ರ ಗುಜರಾತ್‌ ಬಿಜೆಪಿ ಚುನಾವಣಾ ರಣತಂತ್ರಗಾರರಾದ ಪ್ರಶಾಂತ್‌ ಕಿಶೋರ್‌ 2014ರಲ್ಲಿ ತನ್ನದೇ ಆದ ಐ-ಪ್ಯಾಕ್‌ ಎನ್ನುವ ಕಂಪನಿ ಸ್ಥಾಪಿಸಿ ಮೋದಿ ಟೀಮ್‌ನಲ್ಲಿ ಕೆಲಸ ಮಾಡಿದರು. ಆದರೆ 2014ರಲ್ಲಿ ಮೋದಿ ಪ್ರಧಾನಿ ಆದ ನಂತರ ಪಿ.ಕೆ.ಗೆ ಪ್ರಧಾನಿ ಕಾರ್ಯಾಲಯದಲ್ಲಿ ದೊಡ್ಡ ಹುದ್ದೆ ಬೇಕಿತ್ತು. ಆದರೆ ಅದಕ್ಕೆ ಅಮಿತ್‌ ಶಾ ವಿರೋಧ ಇತ್ತು. ಹೀಗಾಗಿ ಪ್ರಶಾಂತ್‌ ಕಿಶೋರ್‌ ಟೀಮ್‌ ಮೋದಿಯಿಂದ ದೂರವಾಯಿತು ಎಂದು ಮೋದಿ ಆಪ್ತರು ಹೇಳುತ್ತಾರೆ. ಆಗಿನಿಂದ ಪ್ರಶಾಂತ್‌ ಕಿಶೋರ್‌ ಅವರಿಗೆ ಇರುವ ಹಟ ಒಂದೇ; ಹೇಗಾದರೂ ಮಾಡಿ ಮೋದಿ ವಿರುದ್ಧ ಪರ್ಯಾಯ ಹುಟ್ಟುಹಾಕಬೇಕು ಎಂದು.

ಪಿಕೆ ಹೋದಲ್ಲೆಲ್ಲ ಜಗಳ ಏಕೆ?

ಇವತ್ತು ದೇಶದಲ್ಲಿ ಮೋದಿ ಮತ್ತು ಅಮಿತ್‌ ಶಾಗೆ ಚುನಾವಣಾ ರಣತಂತ್ರದಲ್ಲಿ ಪೈಪೋಟಿ ಕೊಡುವ ಶಕ್ತಿ ಇರುವುದು ಪ್ರಶಾಂತ್‌ ಕಿಶೋರ್‌ಗೆ ಮಾತ್ರ. ಹೀಗಾಗಿ ಮಮತಾರಿಂದ ಹಿಡಿದು ಕೇಜ್ರಿವಾಲ್ ವರೆಗೆ ಎಲ್ಲರೂ ಬಿಜೆಪಿ ಸೋಲಿಸಲು ಪಿ.ಕೆ. ಬೇಕು ಎಂದು ಬೆನ್ನು ಹತ್ತುತ್ತಾರೆ. ಪಿ.ಕೆ. ಮನಸ್ಸು ಮಾಡಿದ್ದರೆ ಆರಾಮಾಗಿ ರಾಜ್ಯಸಭೆಗೆ ಹೋಗಬಹುದಿತ್ತು. ಆದರೆ ಅವರಿಗೆ ಅದರಾಚೆಯ ರಾಜಕೀಯ ಮಹತ್ವಾಕಾಂಕ್ಷೆಯಿದೆ. ಆದರೆ ವೃತ್ತಿಪರವಾಗಿ ರಣತಂತ್ರ ಮಾಡುವ ಅವರಿಗೆ ರಾಜಕೀಯದಲ್ಲಿ ಬೇಕಾಗುವ ತಾಳ್ಮೆ ಮತ್ತು ತಂಡ ಆಟಗಾರನಾಗುವ ಗುಣಗಳಿಲ್ಲ.

ಮುಖದ ಮೇಲೆ ರಪ್ಪನೆ ಹೇಳುವ ಜಾಯಮಾನ ಮತ್ತು ನಾನು ಹೇಳಿದ್ದೇ ಆಗಬೇಕು ಅನ್ನುವ ಅವರ ಗುಣ ರಾಜಕಾರಣದಲ್ಲಿ ನಡೆಯುವುದಿಲ್ಲ.ಹೀಗಾಗಿ ಬಿಜೆಪಿ, ಜೆಡಿಯು, ತೃಣಮೂಲ ಕಾಂಗ್ರೆಸ್‌ ಹೀಗೆ ಎಲ್ಲೆಲ್ಲಿ ಪ್ರಶಾಂತ್‌ ಕಿಶೋರ್‌ ಕೈಹಾಕಿದ್ದಾರೋ ಅಲ್ಲಿ ಜಗಳಗಳಾಗಿವೆ. ಕಾಂಗ್ರೆಸ್‌ನಲ್ಲಿರುವ ಆತಂಕವೂ ಅದೇ. ನಾಳೆ ಗಾಂಧಿಗಳನ್ನು ಪಕ್ಕಕ್ಕೆ ಸರಿಸಿ ಸಂಘಟನೆ ವಶಕ್ಕೆ ತೆಗೆದುಕೊಂಡರೆ ಏನು ಮಾಡುವುದು ಎನ್ನುವ ಹೆದರಿಕೆಯೇ ಕಾಂಗ್ರೆಸ್‌ ಮತ್ತು ಪಿ.ಕೆ ನಡುವಿನ ಮಾತುಕತೆ ಮುರಿದು ಬೀಳಲು ಮುಖ್ಯ ಕಾರಣ.

ಗಾಂಧಿಗಳೇ ಅಧಿಕಾರದಲ್ಲಿದ್ದರೆ ವೋಟು ಬೀಳೋದಿಲ್ಲ, ಗಾಂಧಿಗಳು ಅಧಿಕಾರ ಬಿಟ್ಟರೆ ಪಕ್ಷ ಉಳಿಯೋದಿಲ್ಲ..!

ರಣತಂತ್ರ ಎಂಬ ಉದ್ದಿಮೆ

18 ವರ್ಷಗಳ ಹಿಂದೆ 2004ರಲ್ಲಿ ರಾಜಕೀಯ ಪಕ್ಷಗಳು ಹೆಚ್ಚೆಂದರೆ ಕ್ಷೇತ್ರವಾರು ಸರ್ವೇಗಳನ್ನು ಖಾಸಗಿ ಕಂಪನಿಯಿಂದ ಮಾಡಿಸಿಕೊಂಡು ಟಿಕೆಟ್‌ ಹಂಚಿಕೆ ವೇಳೆ ಉಪಯೋಗಿಸುತ್ತಿದ್ದವು. ಆದರೆ 2014ರಲ್ಲಿ ಮೋದಿ ಮತ್ತು ಪ್ರಶಾಂತ್‌ ಕಿಶೋರ್‌ ಜೊತೆಯಾಗಿ ಬಂದ ನಂತರ ಈಗ ಸರ್ವೇಗಳಿಂದ ಶುರುವಾಗಿ ಚುನಾವಣೆಗೆ ಮುಂಚೆ ಯಾವ ವಿಷಯ, ಯಾರು, ಎಷ್ಟು, ಎಲ್ಲಿ ಮಾತಾಡಬೇಕು ಎಂಬಲ್ಲಿಂದ ಹಿಡಿದು, ಪ್ರಚಾರ, ಹಣ ಹಂಚುವುದು, ಜಾಹೀರಾತು, ಸೋಶಿಯಲ… ಮೀಡಿಯಾದವರೆಗೆ ಖಾಸಗಿ ಕಂಪನಿಗಳು ರಾಜಕೀಯ ಪಕ್ಷಕ್ಕೆ ಸಹಾಯ ಮಾಡುತ್ತವೆ. ಹೀಗಾಗಿಯೇ ಕರ್ನಾಟಕದಂಥ ರಾಜ್ಯದಲ್ಲಿ 2004ರಲ್ಲಿ 40ರಿಂದ 50 ಕೋಟಿಯಲ್ಲಿ ಚುನಾವಣೆ ಮುಗಿಸುತ್ತಿದ್ದ ರಾಷ್ಟ್ರೀಯ ಪಕ್ಷಗಳು, ಇವತ್ತು 400ರಿಂದ 500 ಕೋಟಿ ಖರ್ಚು ಮಾಡುತ್ತವೆ. ಒಂದು ರೀತಿ ಅಮೆರಿಕದ ಚುನಾವಣಾ ನಿರ್ವಹಣೆ ಈಗ ಭಾರತದಲ್ಲೂ ನಡೆಯುತ್ತಿದೆ.

ಕತ್ತಿ ಟಿಕೆಟ್‌ ಮಿಸ್‌ ಹಿಂದೆಯೂ ಪಿಕೆ!

2014ರಲ್ಲಿ ಚಿಕ್ಕೋಡಿಯಿಂದ ಕತ್ತಿ ಕುಟುಂಬಕ್ಕೇ ಟಿಕೆಟ್‌ ಎಂದು ಯಡಿಯೂರಪ್ಪ ಫೈನಲ… ಮಾಡಿದ್ದರು. ಆದರೆ ಚಿಕ್ಕೋಡಿಯ ಚಿಕ್ಕ ಸಭೆಯಲ್ಲಿ ಉಮೇಶ್‌ ಕತ್ತಿ ‘ಇಲ್ಲಿ ಮೋದಿ ಗೀದಿ ಏನೂ ಇಲ್ಲ, ಎಲ್ಲ ನಾವೇ’ ಎಂದು ಹೇಳಿದರು ನೋಡಿ; ಚಿಕ್ಕೋಡಿಯಲ್ಲಿ ಬೀಡು ಬಿಟ್ಟಿದ್ದ ಪ್ರಶಾಂತ್‌ ಕಿಶೋರ್‌ ಅವರ ಐ-ಪ್ಯಾಕ್‌ ತಂಡದವರು ನೇರವಾಗಿ ಮೋದಿಗೆ ವಿಷಯ ಮುಟ್ಟಿಸಿದರು. ನಂತರ ಏನೇ ತಿಪ್ಪರಲಾಗ ಹಾಕಿದರೂ ಕತ್ತಿ ಕುಟುಂಬಕ್ಕೆ 2014 ಮತ್ತು 2019ರಲ್ಲಿ ಲೋಕಸಭೆಗೆ ಟಿಕೆಟ್‌ ಸಿಗಲಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!