Maharashtra Politics: ಮಹಾರಾಷ್ಟ್ರಕ್ಕೆ ಫಡ್ನವೀಸ್‌ ಏಕೆ ಸಿಎಂ ಆಗಲಿಲ್ಲ?

By Prashant NatuFirst Published Jul 2, 2022, 10:38 AM IST
Highlights

ದಿಲ್ಲಿ ಬಿಜೆಪಿ ಮೂಲಗಳು ಹೇಳುವ ಪ್ರಕಾರ, ಕಳೆದ ಎರಡು ತಿಂಗಳಿನಿಂದಲೇ ಏಕನಾಥ್‌ ಶಿಂಧೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆ ನೇರ ಸಂಪರ್ಕದಲ್ಲಿದ್ದರು. ಶಿಂಧೆ ತನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಮಾತ್ರ ಬಂಡಾಯ ಏಳುತ್ತೇನೆ ಎಂದು ಹೇಳಿದ್ದರು.

India Gate Column by Prashant Natu

ರಾಮ-ರಾವಣರ ಯುದ್ಧ ನಡೆದಿದ್ದೇ ಸೀತೆಗಾಗಿ. ಸಮುದ್ರಕ್ಕೆ ಸೇತುವೆ ಕಟ್ಟಿಲಂಕೆಗೆ ಹೋಗಿ ಯುದ್ಧ ಮಾಡುವ ಶ್ರೀರಾಮ ಅಯೋಧ್ಯೆಗೆ ಮರಳಿದ ಮೇಲೆ ಮಾತ್ರ ಅಗಸನ ಮಾತು ಕೇಳಿ ಸೀತೆಯನ್ನು ಕಾಡಿಗೆ ತಳ್ಳುತ್ತಾನೆ. ಮರ್ಯಾದಾ ಪುರುಷೋತ್ತಮ ಅನ್ನಿಸಿಕೊಂಡ ಶ್ರೀರಾಮ ಹಾಗೇಕೆ ಮಾಡಿರಬಹುದು ಎಂಬುದು ಚರ್ಚೆಯ ವಿಷಯ.

ಅದೇ ರೀತಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಒಡಕು ಬಂದಿದ್ದೇ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಆಗಬೇಕೋ ಅಥವಾ ದೇವೇಂದ್ರ ಫಡ್ನವೀಸ್‌ ಆಗಬೇಕಾ ಎಂಬ ಬಗ್ಗೆ. ಅದೇ ದ್ವೇಷಕ್ಕೆ ಉದ್ಧವ್‌ ಠಾಕ್ರೆ ಸೇನಾಧಿಪತಿ ಏಕನಾಥ್‌ ಶಿಂಧೆಯನ್ನು ಬೆಂಬಲಿಸಿದ ಬಿಜೆಪಿ ಕೊನೆ ಗಳಿಗೆಯಲ್ಲಿ ಯಾವ ಫಡ್ನವೀಸ್‌ಗಾಗಿ ಇಷ್ಟೆಲ್ಲ ನಡೆಯಿತೋ ಅವರನ್ನು ಉಪಮುಖ್ಯಮಂತ್ರಿ ಮಾಡಿ 39 ಶಾಸಕರ ನೇತೃತ್ವ ಇರುವ ಏಕನಾಥ್‌ರನ್ನು ಮುಖ್ಯಮಂತ್ರಿ ಮಾಡಿದ ತರ್ಕ ಇನ್ನು ಅರ್ಥವಾಗುತ್ತಿಲ್ಲ, ಕೆಲವರಿಗೆ ಅರ್ಥ ಆದರೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೊನೆಗೆ ಇದೆಲ್ಲ ನೋಡಿದ ಮೇಲೆ ಉಳಿಯುವ ಕಟ್ಟಕಡೆಯ ಪ್ರಶ್ನೆ ಹೀಗೂ ಉಂಟೇ?

ಬಾಳಾಠಾಕ್ರೆ ಕಟ್ಟಿದ ಹಿಂದುತ್ವದ ಸೌಧವನ್ನು ಬಲಿ ಕೊಟ್ಟರೇ ಮಗ, ಮೊಮ್ಮಗ.?

ಶಿಂಧೆ ಶಾ ಮಾತುಕತೆ

ದಿಲ್ಲಿ ಬಿಜೆಪಿ ಮೂಲಗಳು ಹೇಳುವ ಪ್ರಕಾರ, ಕಳೆದ ಎರಡು ತಿಂಗಳಿನಿಂದಲೇ ಏಕನಾಥ್‌ ಶಿಂಧೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆ ನೇರ ಸಂಪರ್ಕದಲ್ಲಿದ್ದರು. ಶಿಂಧೆ ತನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಮಾತ್ರ ಬಂಡಾಯ ಏಳುತ್ತೇನೆ ಎಂದು ಹೇಳಿದ್ದರು. ಅದಕ್ಕೆ ಶಾ ಸಮ್ಮತಿ ಸಿಕ್ಕ ಮೇಲೆಯೇ ಶಿಂಧೆ ಸೂರತ್‌ನ ಹೋಟೆಲ…ಗೆ ಹೋಗಿದ್ದರು. ದೇವೇಂದ್ರ ಫಡ್ನವೀಸ್‌ಗೆ ಎಲ್ಲ ವಿಷಯವೂ ಗೊತ್ತಿತ್ತು, ಆದರೆ ಮುಖ್ಯಮಂತ್ರಿ ಷರತ್ತಿನ ಒಂದು ವಿಷಯ ಹೇಳಿರಲಿಲ್ಲ. ಆದರೆ ಅದನ್ನು ದೇವೇಂದ್ರಗೆ ಜೆ.ಪಿ.ನಡ್ಡಾ ಹೇಳಿದ್ದು ಗುರುವಾರ ಬೆಳಿಗ್ಗೆ ಫೋನ್‌ ಮೂಲಕ.

ಅದು ಗೋವಾದಿಂದ ಶಿಂಧೆ ಮುಂಬೈಗೆ ಬಂದು ಇಳಿಯುವ ಒಂದು ಗಂಟೆ ಮುಂಚೆ. ರಾತ್ರಿ ಉದ್ಧವ್‌ ರಾಜೀನಾಮೆ ನೀಡಿದ ನಂತರ ದೇವೇಂದ್ರ ಮನೆಯಲ್ಲಿ ಸಂಭ್ರಮದ ವಾತಾವರಣ ಇತ್ತು. ಒಂದು ರೀತಿ ಮರು ಪಟ್ಟಾಭಿಷೇಕದ ತಯಾರಿ ಶುರು ಆಗಿತ್ತು. ಆದರೆ ನಡ್ಡಾ ಕಡೆಯಿಂದ ಫೋನ್‌ ಬಂದಾಗ ದೇವೇಂದ್ರ ಫಡ್ನವೀಸ್‌ ಹಾಗಾದರೆ ನಾನು ಸರ್ಕಾರದಲ್ಲಿ ಇರಲ್ಲ ಎಂದು ಹೇಳಿದಾಗ, ನಡ್ಡಾ ಆಮೇಲೆ ನೋಡೋಣ ಇವತ್ತು ಶಿಂಧೆ ಒಬ್ಬರು ಪ್ರಮಾಣ ವಚನ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

ಆದರೆ ಬೇಸರದಲ್ಲಿದ್ದ ದೇವೇಂದ್ರ ಪತ್ರಿಕಾಗೋಷ್ಠಿಯಲ್ಲಿ ನಾನು ಸರ್ಕಾರ ಸೇರಲ್ಲ ಎಂದು ಹೇಳಿದಾಗ, ದಿಲ್ಲಿ ನಾಯಕರಿಗೆ ಏನೋ ಡ್ಯಾಮೇಜ್‌ ಆಗುತ್ತದೆ ಎಂದು ಅರಿವಾಗಿತ್ತು. ಹೀಗಾಗಿ ಸ್ವತಃ ನಡ್ಡಾ, ದಿಲ್ಲಿ ನಾಯಕರು ಕ್ಯಾಮರಾ ಎದುರು ಬಂದು ನಿರ್ದೇಶನ ಕೊಡುತ್ತಿದ್ದೇವೆ ಎಂದು ಹೇಳಿದ ಮೇಲೆಯೇ ದೇವೇಂದ್ರ ಉಪಮುಖ್ಯಮಂತ್ರಿ ಆಗಲು ಒಪ್ಪಿಕೊಂಡರು. ದೇವೇಂದ್ರಗೆ ಬೇಸರವಾಗಿದೆ ಎಂದು ಕ್ಯಾಮರಾದÜಲ್ಲಿ ಕಂಡ ಮುಖ ಸ್ಪಷ್ಟವಾಗಿ ಹೇಳುತ್ತಿತ್ತು. ಆದರೆ ದೇವೇಂದ್ರಗೆ ತ್ಯಾಗಮಯಿ ಪಟ್ಟಕಟ್ಟಿಮೋದಿ, ನಡ್ಡಾ ಮತ್ತು ಅಮಿತ್‌ ಶಾ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರು.

2024 ರ ಚುನಾವಣೆ ಮೇಲೆ ಕಣ್ಣು?

ಮಹಾರಾಷ್ಟ್ರದ ಬಿಜೆಪಿ ಮೂಲಗಳು ಹೇಳುವ ಪ್ರಕಾರ ಅಲ್ಲಿ ಬಿಜೆಪಿಗೆ ಒಂದು ಮಿತ್ರ ಪಕ್ಷವಾಗಿ ಶಿವಸೇನೆ ಬೇಕು, ಆದರೆ ಠಾಕ್ರೆ ಕುಟುಂಬದ ಹಿಡಿತ ಬೇಡ. ಹೀಗಾಗಿಯೇ 2019ರಲ್ಲಿ ಉದ್ಧವ್‌ ಠಾಕ್ರೆಯನ್ನು ಮುಖ್ಯಮಂತ್ರಿ ಮಾಡಲು ತಯಾರಾಗದ ಬಿಜೆಪಿ 2022ರಲ್ಲಿ ಯಾವುದೇ ಸೂತ್ರ ಇಲ್ಲದ ಶಿಂಧೆಯನ್ನು ಮಾತ್ರ ಮುಖ್ಯಮಂತ್ರಿ ಆಗಿ ಒಪ್ಪಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ 2024ರ ಲೋಕಸಭಾ ಚುನಾವಣೆ. ಈಗಿನ ಪ್ರಕಾರ ಅಲ್ಲಿ ಬಿಜೆಪಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆದರೆ ಅನುಕೂಲ ಜಾಸ್ತಿ ಎಂಬ ಮನಸ್ಥಿತಿಯಲ್ಲಿದೆ.

2019ರಲ್ಲಿ ಬಿಜೆಪಿ ಮತ್ತು ಶಿವಸೇನೆ ಲೋಕಸಭೆಯಲ್ಲಿ 48ರ ಪೈಕಿ 41 ಸೀಟು ಗೆದ್ದಿದ್ದವು. ವೋಟಿನ ಪ್ರಮಾಣ ನೋಡಿದರೆ ಬಿಜೆಪಿ 27 ಪ್ರತಿಶತ, ಶಿವಸೇನೆ 23 ಪ್ರತಿಶತ ವೋಟು ಪಡೆದಿದ್ದವು. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನೆ ಮೈತ್ರಿ ಆದರೆ ಮೋದಿ ಅಲೆಯಲ್ಲಿಯೂ ಬಿಜೆಪಿ 30 ಸೀಟು ಗಳಿಸಬಹುದು. ಹೀಗಾಗಿ ಈಗ ರಾಜ್ಯ ಸರ್ಕಾರ ಕೈಗೆ ಬಂದು ಠಾಕ್ರೆ ಕುಟುಂಬ ಕೂಡ ವರ್ಚಸ್ಸು ಕಳೆದುಕೊಂಡರೆ ತನಗೆ ಕಳೆದ ಬಾರಿ ಬಂದ 50 ಶೇಕಡಾ ಮತಗಳು ಅಬಾಧಿತವಾಗಿ ಬರುತ್ತವೆ ಎಂಬುದು ಲೆಕ್ಕಾಚಾರ.

5 ತಿಂಗಳ ನಂತರ ನಡೆಯಲಿರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಇದ್ದರೆ ಬಿಜೆಪಿಗೆ ಲಾಭ ಜಾಸ್ತಿ. ಜೊತೆಗೆ ಪಾಲಿಕೆಯಲ್ಲಿ ಶಿವಸೇನೆಯನ್ನು ಕಳಾಹೀನ ಮಾಡಿದರೆ ಠಾಕ್ರೆ ಕುಟುಂಬ ನಗಣ್ಯವಾಗುತ್ತದೆ. ಆಗ ಶಿವಸೇನೆಯ ಹಿಂದುತ್ವವಾದಿ ಮತದಾರರು ಬಿಜೆಪಿಗೆ ವಾಲುವುದರಿಂದ ಬಿಜೆಪಿಗೆ ದೀರ್ಘಕಾಲಿನ ಲಾಭ ಜಾಸ್ತಿ. ಹೀಗಾಗಿ ಬಿಜೆಪಿ ಅಷ್ಟೊಂದು ಆಸ್ಥೆಯಿಂದ ಶಿಂಧೆ ನೇತೃತ್ವದ ಬಣಕ್ಕೆ ಅಧಿಕಾರ ಹಿಡಿಯಲು ನೆರವು ನೀಡಿದೆ. ಆದರೆ ಇದೆಲ್ಲವನ್ನು ದೇವೇಂದ್ರ ಫಡ್ನವೀಸ್‌ರನ್ನು ಮುಖ್ಯಮಂತ್ರಿ ಮಾಡಿ ಕೂಡ ಸಾಧಿಸಬಹುದಿತ್ತು ಎಂಬ ಪ್ರಶ್ನೆಗೆ ತರ್ಕ ಶುದ್ಧ ಸ್ವೀಕಾರಾರ್ಹ ಉತ್ತರ ಸಿಗುತ್ತಿಲ್ಲ.

 18 ಕ್ರಿಮಿನಲ್ ಕೇಸ್, 11 ಕೋಟಿ ಆಸ್ತಿ, 6 ಕಾರು, ಪಿಸ್ತೂಲ್-ರಿವಾಲ್ವರ್ ಇರಿಸಿಕೊಂಡಿರುವ ಮಹಾ 'ಸರ್ಕಾರ್'!

ಮರಾಠಾ ಮುಖ್ಯಮಂತ್ರಿ?

2014ರಲ್ಲಿ ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್‌ರನ್ನು ಮುಖ್ಯಮಂತ್ರಿ ಮಾಡಿದಾಗ ಅನೇಕರ ಹುಬ್ಬೇರಿದ್ದವು. ಇದಕ್ಕೆ ಮುಖ್ಯ ಕಾರಣ ಮರಾಠರ ಆಕ್ರೋಶ. ಮರಾಠರ ಬೇಸರದ ಕಾರಣದಿಂದಲೇ ಬಾಳಾ ಠಾಕ್ರೆ ಕೂಡ 1997ರಲ್ಲಿ ಬ್ರಾಹ್ಮಣ ಮನೋಹರ ಜೋಷಿಯನ್ನು ಬದಲಿಸಿ ನಾರಾಯಣ ರಾಣೆಯನ್ನು ಮುಖ್ಯಮಂತ್ರಿ ಮಾಡಿದ್ದರು. ಆದರೆ ದೇವೇಂದ್ರಗೆ ಜಾತಿ ಬೆಂಬಲ ಇಲ್ಲದಿದ್ದರೂ ಕೂಡ ಮರಾಠಾ ಮೀಸಲಾತಿ, ದಲಿತ ಚಳವಳಿ ವಿಷಯಗಳನ್ನು ಜಾಣತನದಿಂದ ನಿಭಾಯಿಸಿದರು. ಆದರೆ 2019ರಲ್ಲಿ ಮಾತ್ರ ಶರದ್‌ ಪವಾರ್‌ ನೇರವಾಗಿಯೇ ಬ್ರಾಹ್ಮಣ ಮುಖ್ಯಮಂತ್ರಿ ಬೇಕಾ? ಮರಾಠಾ ಬೇಕಾ? ಎಂಬ ಪರೋಕ್ಷ ಪ್ರಶ್ನೆ ಇಟ್ಟುಕೊಂಡು ಸಕ್ರಿಯವಾಗಿ ಓಡಾಡಿದಾಗ ಬಿಜೆಪಿಗೆ 10 ರಿಂದ 15 ಸೀಟು ಕಡಿಮೆ ಆಗಿದ್ದವು.

2019ರಲ್ಲಿ ಬಿಜೆಪಿಗೆ ಉದ್ಧವ್‌ ಠಾಕ್ರೆ ಕಾಂಗ್ರೆಸ್‌ ಜೊತೆ ಹೋಗಿಯಾರು ಎಂದು ಅನ್ನಿಸಿರಲಿಲ್ಲ, ಆದರೆ ಈಗ ಮರಳಿ ಬ್ರಾಹ್ಮಣ ದೇವೇಂದ್ರ ಫಡ್ನವೀಸ್‌ ಮುಖ್ಯಮಂತ್ರಿ ಆಗುವುದಕ್ಕಿಂತ ಮರಾಠಾ ಸಮುದಾಯದ ಶಿವಸೈನಿಕ ಒಬ್ಬ ಮುಖ್ಯಮಂತ್ರಿ ಆದರೆ ಠಾಕ್ರೆ ಜೊತೆಗೆ ಶರದ್‌ ಪವಾರರನ್ನೂ ಕೂಡ ಎದುರಿಸಬಹುದು ಎಂದು ಬಿಜೆಪಿಗೆ ಅನ್ನಿಸಿದೆ.

ಬ್ರಾಹ್ಮಣ ವರ್ಸಸ್‌ ಮರಾಠಾ

ಮಹಾರಾಷ್ಟ್ರದಲ್ಲಿ ಶಿವಾಜಿ ಕಾಲವಾದ ನಂತರದಿಂದಲೇ ಮರಾಠಾ ಸಮುದಾಯದ ರಾಜಕೀಯ ನೇತೃತ್ವಕ್ಕೂ, ಬ್ರಾಹ್ಮಣ ಸಮುದಾಯಕ್ಕೂ ಒಂದು ತರಹದ ವೈಮನಸ್ಸು ಇದೆ. ಇದಕ್ಕೆ ಮುಖ್ಯ ಕಾರಣ ಶಿವಾಜಿ ನಂತರದಲ್ಲಿ ಮರಾಠಾ ರಾಜ ಮನೆತನವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತೆ ಮಾಡಿ, ಕೊಂಕಣದಿಂದ ಬಂದ ಪೇಶ್ವೆ ಗಳು ರಾಜ್ಯಭಾರ, ಸೇನೆ ಖಜಾನೆ ಎಲ್ಲವನ್ನು ಕೈಗೆ ತೆಗೆದುಕೊಂಡರು ಎನ್ನುವ ಸಿಟ್ಟು. ಹೀಗಾಗಿ ಶಿವಾಜಿ ಗುರು ಸಮರ್ಥ ರಾಮದಾಸರು ಎಂದು ಯಾರೋ ಬರೆದಿದ್ದು ಮಹಾರಾಷ್ಟ್ರದಲ್ಲಿ ರಾದ್ಧಾಂತಕ್ಕೆ ಕಾರಣ ಆಗಿತ್ತು.

ಶಿವಾಜಿಗೆ ಶಸ್ತ್ರ ವಿದ್ಯೆ ಕಲಿಸಿದ್ದು ಬ್ರಾಹ್ಮಣ ದಾದಾಜಿ ಕೊಂಡದೇವ ಎಂದು ಕೆಲವರು ಹೇಳಿದರೆ ಅದು ಅಲ್ಲಿ ವಿವಾದವಾಗುತ್ತದೆ. ಶರದ್‌ ಪವಾರರಿಗೆ ನಿಷ್ಠೆ ಇರುವ ಸಂಭಾಜಿ ಬ್ರಿಗೇಡ್‌ ಅಂತೂ ಶಿವಾಜಿ ಇತಿಹಾಸವನ್ನು ಬ್ರಾಹ್ಮಣ ಸಮುದಾಯದ ಇತಿಹಾಸಕಾರರು ತಪ್ಪಾಗಿ ಚಿತ್ರಿಸಿದ್ದಾರೆ ಎಂದು ಆಗಾಗ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೀಗಾಗಿ 2014ರಲ್ಲಿ ಮೋದಿ ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ ಮಾಡಿದಾಗ ಶರದ್‌ ಪವಾರ್‌ 2019ರಲ್ಲಿ ಅದನ್ನೇ ಆಸ್ತ್ರ ಮಾಡಿಕೊಂಡು ಓಡಾಡಿದ್ದರು. ಆದರೆ ಬಹುತೇಕ ರಾಷ್ಟ್ರೀಯ ಬಿಜೆಪಿ ಗುಜರಾತ್‌ನಲ್ಲಿ ಪಟೇಲರು, ಕರ್ನಾಟಕದಲ್ಲಿ ಲಿಂಗಾಯಿತರನ್ನು ಓಲೈಸಲು ಅವರದ್ದೇ ಸಮುದಾಯದ ಮುಖ್ಯಮಂತ್ರಿ ಮಾಡಿದಂತೆ, ಮಹಾರಾಷ್ಟ್ರದಲ್ಲಿ ಕೂಡ ಮರಾಠಾ ಮುಖ್ಯಮಂತ್ರಿ ಇದ್ದರೇನೇ ಲಾಭ ಜಾಸ್ತಿ ಎಂಬ ನಿರ್ಧಾರಕ್ಕೆ ಬಂದು, ಫಡ್ನವೀಸ್‌ಗಿಂತ ಶಿಂಧೆಯನ್ನು ಮುಖ್ಯಮಂತ್ರಿ ಮಾಡುವುದರಿಂದ ರಾಜಕೀಯ ಲಾಭ ಜಾಸ್ತಿ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ.

ಗುರುವಿನ ಸೇಡು ಶಿಷ್ಯನಿಂದ

1999ರಲ್ಲಿ ಏಕನಾಥ್‌ ಶಿಂಧೆ ತನ್ನ 13ವರ್ಷದ ಮಗ ಮತ್ತು ಮಗಳು ಆಟವಾಡುತ್ತಿದ್ದಾಗ ಆದ ಅಪಘಾತದಲ್ಲಿ ಜೀವ ಕಳೆದುಕೊಂಡಾಗ, ಪುತ್ರ ಶೋಕದಿಂದ ವ್ಯಾಕುಲರಾಗಿ ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆಗ ಏಕನಾಥ್‌ ಹಾಗೆ ಮಾಡಬೇಡ ಬಾ ಎಂದು ಹೊರಗೆ ಕರೆದುಕೊಂಡು ಬಂದವರು ಥಾಣೆಯಲ್ಲಿ ಶಿವಸೇನೆ ಕಟ್ಟಿಬೆಳೆಸಿದ ಆನಂದ ದಿN. ಥಾಣೆಯಲ್ಲಿ ದಿN ಬಯಸದೇ ಕಡ್ಡಿ ಕೂಡ ಅಲುಗಾಡುತ್ತಾ ಇರಲಿಲ್ಲ. ಆದರೆ ಇದು ಬಾಳಾ ಠಾಕ್ರೆ ಸುತ್ತಮುತ್ತಲಿನ ಜನರಿಗೆ ಇಷ್ಟಆಗುತ್ತಿರಲಿಲ್ಲ.

ಕ್ರಮೇಣ ಠಾಕ್ರೆ ವರ್ಸಸ್‌ ದಿಘೆ ಜಗಳ ಒಳಗಿಂದೊಳಗೆ ಶುರು ಆಯಿತು. ದಿN ಆಪ್ತರು ಹೇಳುವ ಪ್ರಕಾರ ನಾರಾಯಣ ರಾಣೆ ಬಂದು ನೀವು ಶಿವಸೇನೆಯ ಥಾಣೆ ಜಿಲ್ಲಾ ಪ್ರಮುಖ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದ ನಂತರ 15 ನಿಮಿಷದಲ್ಲಿ ದಿಘೆ ಹೃದಯಾಘಾತದಿಂದ ನಿಧನರಾದರು. ಥಾಣೆಯ ಶಿವಸೈನಿಕರಿಗೆ ಎಷ್ಟುಸಂತಾಪ ಆಗಿತ್ತು ಎಂದರೆ ಆ ಆಸ್ಪತ್ರೆಯನ್ನು ಪೂರ್ತಿ ಒಡೆದು ಹಾಕಿ ಥಾಣೆ ಮೂರು ದಿನ ಬಂದ್‌ ಆಗಿತ್ತು. ಆದರೆ ಈಗ ದಿಘೆ ಶಿಷ್ಯ ಠಾಕ್ರೆ ಪುತ್ರನ ವಿರುದ್ಧ ಬಂಡಾಯ ಹೂಡಿ ಮುಖ್ಯಮಂತ್ರಿ ಆಗಿದ್ದಾರೆ. ಅಷ್ಟೇ ಅಲ್ಲ ಪ್ರಮಾಣವಚನದಲ್ಲಿ ಠಾಕ್ರೆ ಜೊತೆಗೆ ಆನಂದ ದಿಘೆ ಹೆಸರು ಕೂಡ ತೆಗೆದುಕೊಂಡಿದ್ದಾರೆ. ಇತಿಹಾಸದ ಒಂದು ವಿಶೇಷತೆ ಎಂದರೆ ಅದು ಯಾವತ್ತಿಗೂ ಒಂದು ಪೂರ್ತಿ ಸುತ್ತು ಹೊಡೆಯುತ್ತಾ ಇರುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!