India Gate: ನಾಯಕತ್ವ ಬದಲಿಸಲು ಬಿಜೆಪಿ ಸಿದ್ಧವಿಲ್ಲ, ಹೈಕಮಾಂಡ್‌ ಲೆಕ್ಕಾಚಾರ ಏನು?

By Prashant Natu  |  First Published May 6, 2022, 11:54 AM IST

2 ಬಾರಿ ಬೆಂಗಳೂರಿಗೆ ಬಂದು ಹೋದರೂ ಅಮಿತ್‌ ಶಾ ಆಗಲಿ, ಹೊಸಪೇಟೆಗೆ ಬಂದಿದ್ದ ಜೆ.ಪಿ.ನಡ್ಡಾ ಆಗಲಿ ಸಂಪುಟ ಸರ್ಕಸ್‌ ಬಗ್ಗೆ ಏನೂ ಹೇಳಿಲ್ಲ. ಆದಷ್ಟುಬೇಗ ಮಾಡಿ ಎಂದು ಸ್ವತಃ ಯಡಿಯೂರಪ್ಪ ಹೇಳಿದಾಗಲೂ ದಿಲ್ಲಿ ನಾಯಕರು ಮಾಡೋಣ ಎಂದಿದ್ದಾರೆಯೇ ಹೊರತು ಯಾವಾಗ, ಏನು, ಹೇಗೆ, ಎಂದು ಬಿಡಿಸಿ ಹೇಳಿಲ್ಲ. ಬೊಮ್ಮಾಯಿ ಸಾಹೇಬರು ಸಕ್ರಿಯರಾಗಿ ಹೋಗಿ ಎಲ್ಲರನ್ನು ಒಪ್ಪಿಸಬೇಕು, ಅವರಿಗೂ ಏನು ಬಹಳ ಮನಸ್ಸಿದ್ದಂತಿಲ್ಲ.


India Gate Column by Prashant Natu

1970ರ ಅಂತ್ಯದಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕದ ಮೊದಲ ಉಪಗ್ರಹ ಸ್ಕೈಲ್ಯಾಬ್‌ ಬೀಳುತ್ತದೆ ಎಂಬ ಊಹಾಪೋಹ ಎದ್ದಿತ್ತು. ಹೀಗಾಗಿ ಜನರು ಹೊಲ, ಮನೆ, ಜಾನುವಾರು ಮಾರಿ ಕಾಶಿಗೆ ಹೋಗುವ ತಯಾರಿಯಲ್ಲಿದ್ದರು. ಒಂದು ರೀತಿಯಲ್ಲಿ ಕರ್ನಾಟಕದ ಬಿಜೆಪಿ ಕಥೆಯೂ ಹಾಗೆಯೇ ನಡೆಯುತ್ತಿದೆ. ಅಮಿತ್‌ ಶಾ ಬರುತ್ತಾರೆ, ಹಾಗಂತೆ ಹೀಗಂತೆ, ಬೊಮ್ಮಾಯಿ ಅವರನ್ನು ತೆಗೆಯುತ್ತಾರಂತೆ, ಗುಜರಾತ್‌ ಮಾದರಿಯಲ್ಲಿ ಹೊಸ ಮುಖ್ಯಮಂತ್ರಿ ಬರ್ತಾರಂತೆ, ಆಗ ಯುವ ಮಂತ್ರಿಗಳು ಬರುತ್ತಾರೆ, 4 ಉಪ ಮುಖ್ಯಮಂತ್ರಿ ಆಗುತ್ತಾರೆ.

Tap to resize

Latest Videos

ಹೀಗೆ ಸುದ್ದಿ ಆಗಿದ್ದೇ ಆಗಿದ್ದು. ಕುತೂಹಲ ಎಂದರೆ ಈ ಎಲ್ಲ ತರಹೇವಾರಿ ಸುದ್ದಿಗಳು ಬರುವುದು ರಾಜ್ಯ ಬಿಜೆಪಿ ಹಿರಿಯ ನಾಯಕರ ಅಂಗಳದಿಂದಲೇ. ಆದರೆ ಬೆಂಗಳೂರಿಗೆ ಬಂದಿದ್ದ ಅಮಿತ್‌ ಶಾ ನಾಯಕತ್ವದ ಬಗ್ಗೆ ಆಗಲಿ ಸಂಪುಟ ಪುನಾರಚನೆ ಬಗ್ಗೆ ಆಗಲಿ ಎಲ್ಲಿಯೂ ತುಟಿಪಿಟಕ್‌ ಅಂದಿಲ್ಲ. ಅಮಿತ್‌ ಶಾ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿರುವುದು 2023ರ ದೃಷ್ಟಿಯಿಂದ ರಾಜ್ಯದಲ್ಲಿ ಒಂದು ವಾತಾವರಣ ನಿರ್ಮಿಸಲು. ಒಳ ಕಾರಸ್ಥಾನಗಳಲ್ಲಿ ಮುಳುಗಿಹೋಗಿರುವ ರಾಜ್ಯ ಬಿಜೆಪಿಯನ್ನು ಚುನಾವಣೆಗೆ ತಯಾರು ಮಾಡಲು.

ಯಾವುದೇ ರಾಷ್ಟ್ರೀಯ ಪಕ್ಷದ ಪ್ರಮುಖರು ಬೆಂಗಳೂರಿಗೆ ಬಂದು ನಾಯಕತ್ವ ಮತ್ತು ಸಂಪುಟ ವಿಷಯವನ್ನು ಸ್ಥಳೀಯ ನಾಯಕರ ಜೊತೆ ಚರ್ಚಿಸಲು ಹೋಗುವುದಿಲ್ಲ. ಅದೇನಿದ್ದರೂ ದಿಲ್ಲಿಯಲ್ಲಿ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಮತ್ತು ಆರ್‌ಎಸ್‌ಎಸ್‌ ನಾಯಕರು ಕುಳಿತು ನಡೆಸಬೇಕಾದ ಪ್ರಕ್ರಿಯೆ. ಅದೇನೋ ಗೊತ್ತಿಲ್ಲ, ಅಧಿಕಾರದಲ್ಲಿದ್ದಾಗ ರಾಜ್ಯ ಬಿಜೆಪಿ ನಾಯಕರಿಗೆ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಿಟ್ಟು ಬೇರೆ ವಿಷಯಗಳಲ್ಲಿ ಆಸಕ್ತಿಯೇ ಇಲ್ಲ. ರಾಜ್ಯ ನಾಯಕರಿಗೆ ಇರುವ ತರಾತುರಿ ದಿಲ್ಲಿಯವರಿಗೆ ಇದ್ದಂತೆ ಕಾಣುವುದಿಲ್ಲ.

ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಮಾತುಕತೆ ಮುರಿದು ಬೀಳಲು ನಿಜವಾದ ಕಾರಣ ಏನು?

ನಿರ್ಧಾರಕ್ಕೆ ಬೊಮ್ಮಾಯಿ ಮೀನಮೇಷ

ಯಡಿಯೂರಪ್ಪ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ ಮಾತಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅತಿಯಾದ ವೇಗದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಬೊಮ್ಮಾಯಿ ಪ್ರತಿಯೊಂದಕ್ಕೂ ದಿಲ್ಲಿ ಮತ್ತು ಆರ್‌ಎಸ್‌ಎಸ್‌ ಅಭಿಪ್ರಾಯ ಎದುರುನೋಡುತ್ತಾರೆ. ಅಲ್ಲಿಂದ ಸಿಗ್ನಲ್‌ ಬರದಿದ್ದರೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮೀನಮೇಷ ಎಣಿಸುತ್ತಾರೆ. ಬೊಮ್ಮಾಯಿ ಸಂಪುಟದ ಹಿರಿಯ ಸಚಿವರೊಬ್ಬರು ಹೈಕಮಾಂಡ್‌ಗೆ ತಿಳಿಸಿರುವ ಪ್ರಕಾರ ಮುಖ್ಯಮಂತ್ರಿ ಟೇಬಲ… ಮೇಲೆ 4 ಸಾವಿರ ಫೈಲ್‌ಗಳು ಬಾಕಿ ಉಳಿದಿವೆಯಂತೆ!

ಬೊಮ್ಮಾಯಿ ನಿಷ್ಠರಾಗಿರುವ ಸಚಿವರೇ ಇಲಾಖಾ ಕಡತಗಳು ಪಾಸ್‌ ಆಗಲು ಸ್ವತಃ ತಾವು ಮೂರು ತಿಂಗಳು ಕಾಯುವ ಸ್ಥಿತಿಯಿದೆ ಎಂದು ಖಾಸಗಿಯಾಗಿ ಹೇಳಿಕೊಳ್ಳುತ್ತಾರೆ. ಹೀಗಾದರೆ ಅಧಿಕಾರಿಗಳು ಹೇಗೆ ಕಿಮ್ಮತ್ತು ಕೊಡುತ್ತಾರೆ ಎಂಬ ಪ್ರಶ್ನೆ ಅನೇಕ ಸಚಿವರದು. ದಿಲ್ಲಿ ನಾಯಕರವರೆಗೆ ಇವೆಲ್ಲ ವಿಷಯಗಳು ತಲುಪಿವೆ. ಅಮಿತ್‌ ಶಾ, ಜೆ.ಪಿ.ನಡ್ಡಾ, ಸಂಘದ ಕಡೆಯಿಂದ ಮುಕುಂದ್‌ ಅನೇಕ ಬಾರಿ ಬೊಮ್ಮಾಯಿ ಬಳಿ ಕೆಲಸಕ್ಕೆ ವೇಗ ಕೊಡಿ ಎಂದು ಹೇಳಿಯೂ ಇದ್ದಾರೆ. ಆದರೆ ಬೊಮ್ಮಾಯಿ ಬದಲಾದಂತಿಲ್ಲ.

ಹೈಕಮಾಂಡ್‌ ಲೆಕ್ಕಾಚಾರ ಏನು?

ಯಡಿಯೂರಪ್ಪ ಹೆಸರಿನ ಮೇಲೆ ಹೇಗೆ ಪ್ರತಿ ಕ್ಷೇತ್ರದಲ್ಲಿ ವೋಟು ಬೀಳುತ್ತಿದ್ದವೋ ಆ ರೀತಿ ಕರ್ನಾಟಕ ಬಿಜೆಪಿಯಲ್ಲಿ ವೋಟು ಹಾಕಿಸುವ ಶಕ್ತಿ ಯಾವ ಬಿಜೆಪಿ ನಾಯಕರಿಗೂ ಇಲ್ಲ. ಆದರೆ ಯಡಿಯೂರಪ್ಪನವರನ್ನು ಚೆನ್ನಾಗಿ ನೋಡಿಕೊಂಡು ಬೊಮ್ಮಾಯಿ ರೂಪದಲ್ಲಿ ಲಿಂಗಾಯತ ಮುಖ್ಯಮಂತ್ರಿಯನ್ನು ಮುಂದುವರೆಸಿದರೆ ಕನಿಷ್ಠ ಪಕ್ಷ ಮುಂಬೈ, ಹೈದರಾಬಾದ್‌ ಮತ್ತು ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 2018 ಮತ್ತು 2019ರಲ್ಲಿ ವೋಟು ಹಾಕಿರುವ ಲಿಂಗಾಯತರು ದೂರ ಹೋಗುವುದಿಲ್ಲ ಎಂಬುದು ದಿಲ್ಲಿ ನಾಯಕರ ಲೆಕ್ಕಾಚಾರ. ಜೊತೆಗೆ ಮೋದಿ ಮತ್ತು ಹಿಂದುತ್ವದ ಮೇಲೆ ಹಿಂದುಳಿದವರು ಜೊತೆಗೆ ಬಂದು 2018ರಲ್ಲಿ ಬಂದಿದ್ದ ಶೇ.36ರ ಒಂದು ಪರ್ಸೆಂಟ್‌ ಆಚೆ ಈಚೆ ವೋಟು ಪಡೆದರೂ ಬಿಜೆಪಿ ಸುಲಭವಾಗಿ 75ರಿಂದ 85 ಸೀಟು ಪಡೆಯುತ್ತದೆ.

ಟಿಕೆಟ್ ಹಂಚಿಇಕೆ, ರಣತಂತ್ರಗಳನ್ನು ಹೆಣೆಯುವುದರಲ್ಲಿ ಫ್ರೀ ಹ್ಯಾಂಡ್ ಕೊಡಿ ಎಂದ ಡಿಕೆಶಿ

ಆಗ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಏರಲು ಸಾಧ್ಯ ಆಗೋದಿಲ್ಲ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‌ ಬೊಮ್ಮಾಯಿ ಮೇಲೆ ಎಷ್ಟೇ ಒತ್ತಡ ಹಾಕಿದರೂ ಲಿಂಗಾಯತರನ್ನು ಬಿಟ್ಟು ಉಳಿದವರನ್ನು ತಂದು ಕೂರಿಸುವ ಸಾಹಸಕ್ಕೆ ಬಿಜೆಪಿ ಕೈಹಾಕುತ್ತಿಲ್ಲ. ಒಂದು ಗಮನಿಸಬೇಕಾದ ಸಂಗತಿ ಎಂದರೆ ಎಷ್ಟೇ ಭ್ರಷ್ಟಾಚಾರದ ಆರೋಪ ಬಂದರೂ 2008ರಲ್ಲಿ ಬಿಜೆಪಿಗೆ ಬಂದಿದ್ದ ಮತಗಳು 2013 ರಲ್ಲಿ ಬಿಜೆಪಿಯಿಂದ ಯಡಿಯೂರಪ್ಪ, ರಾಮುಲು ನಡುವೆ ಒಡೆದು ಹೋಗಿ ಕಾಂಗ್ರೆಸ್‌ ಗೆದ್ದಿತ್ತು ಅನ್ನೋದು ಬಿಟ್ಟರೆ, ಬಿಜೆಪಿ ಮತಗಳು ಸಾರಾಸಗಟಾಗಿ ಕಾಂಗ್ರೆಸ್‌ಗೆ ವರ್ಗಾವಣೆ ಆಗಿರಲಿಲ್ಲ. 2013ರಲ್ಲಿ ಮೋದಿ ಹೆಸರು ಇರಲಿಲ್ಲ, 2023ರಲ್ಲಿ ಮೋದಿ ಹೆಸರು ಕೂಡ ಇದೆ. ಹೀಗಾಗಿ ಎಷ್ಟೇ ಒತ್ತಡ ಬಂದರೂ ದಿಲ್ಲಿ ಬಿಜೆಪಿ ನಾಯಕರು ಏನೇನು ಹೊರಗೆ ಬರುತ್ತೋ ಬರಲಿ, ಆಮೇಲೆ ನೋಡೋಣ ಎಂಬ ಮನಸ್ಥಿತಿಯಲ್ಲಿದ್ದಾರೆ ಅನ್ನಿಸುತ್ತದೆ.

ಈ ಹಂತದಲ್ಲಿ ಬೇರೆ ಆಯ್ಕೆಗಳಿಲ್ಲ

ಬೊಮ್ಮಾಯಿ ಆಡಳಿತದ ಬಗ್ಗೆ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ ಇಬ್ಬರಿಗೂ ‘ಸಂತೋಷ’ವೇನಿಲ್ಲ. ಆದರೆ ಇಲ್ಲಿಯವರೆಗೆ ಎಲ್ಲಿಯೂ ದಿಲ್ಲಿ ಹಂತದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ವೋಟ್‌ಬ್ಯಾಂಕ್‌ ಜೊತೆಗಿರುವಾಗ ಬೇರೆ ಒಕ್ಕಲಿಗ, ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿಗಳನ್ನು ತಂದು ಕೂರಿಸಿದರೆ ಪ್ರಯೋಜನವಿಲ್ಲ. ಲಿಂಗಾಯತ ಸಮುದಾಯದಲ್ಲಿ ಬೊಮ್ಮಾಯಿ ಅವರನ್ನು ತೆಗೆದು ಕೂರಿಸಿದರೆ ಉಪಯೋಗ ಆಗಬಹುದು ಎಂಬ ಹೆಸರುಗಳಿಲ್ಲ.

ಜಗದೀಶ್‌ ಶೆಟ್ಟರ್‌ರನ್ನು ಒಮ್ಮೆ ನೋಡಿ ಆಗಿದೆ. ಬೆಲ್ಲದಗೆ ಅನುಭವ ಇಲ್ಲ, ಯತ್ನಾಳಗೆ ಜನಪ್ರಿಯತೆ ಇದೆ, ಆದರೆ ಸಂಘದ ಒಪ್ಪಿಗೆ ಇಲ್ಲ. ನಿರಾಣಿಗೆ ಎಲ್ಲ ಬಿಜೆಪಿ ನಾಯಕರ ಬೆಂಬಲ ಇಲ್ಲ. ಹೀಗಾಗಿ ಈಗ ಯಾವುದೇ ನಿರ್ಣಯ ತೆಗೆದುಕೊಳ್ಳುವ ತರಾತುರಿಯಲ್ಲಿ ದಿಲ್ಲಿ ನಾಯಕರು ಇಲ್ಲ. ಆದರೆ ಭ್ರಷ್ಟಾಚಾರದ ಪ್ರಕರಣಗಳು ಹೊರಗೆ ಬರುತ್ತಾ ಹೋದರೆ ಮುಂದೇನು ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಬಹುತೇಕ ಎಲ್ಲವೂ ಬೊಮ್ಮಾಯಿ ಅವರ ಭವಿಷ್ಯದ ಪ್ರಬಂಧನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.

1990 ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತರನ್ನು ಹೆದರಿಸಿ ಓಡಿಸಿದ ಘಟನೆಗೆ ಕಾರಣವೇನು?

ಸಿಟ್ಟಿಗೆದ್ದ ಅಮಿತ್‌ ಶಾ!

ಅಮಿತ್‌ ಶಾ ಬರುತ್ತಾರೆ ಎಂದು ಪೂರ್ತಿ ಉತ್ಸಾಹದಲ್ಲಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪದಾಧಿಕಾರಿಗಳ ಸಭೆ ಆಯೋಜಿಸಿದ್ದರು. ಆದರೆ ಸೋಮವಾರ ರಾತ್ರಿ ಬೆಂಗಳೂರಿಗೆ ಬಂದ ಅಮಿತ್‌ ಶಾ ವೇಳಾಪಟ್ಟಿನೋಡಿ 15 ದಿನದ ಹಿಂದೆ ಕೋರ್‌ ಕಮಿಟಿ ಜೊತೆ ಕುಳಿತಿದ್ದೆ, ಇನ್ನೂ ಚುನಾವಣಾ ತಯಾರಿಯ ವರದಿ ಕೊಟ್ಟಿಲ್ಲ, ಈಗಲೂ ನಾನೇ ಮೋರ್ಚಾ ಅಧ್ಯಕ್ಷರ ಜೊತೆ ಕುಳಿತುಕೊಳ್ಳಬೇಕಾ? ಉಸ್ತುವಾರಿಗಳು ಇದ್ದಾರೆ, ಸಂಘಟನಾ ಕಾರ್ಯದರ್ಶಿ ಇದ್ದಾರೆ, ಅವರು ಬೈಠಕ್‌ ತೆಗೆದುಕೊಳ್ಳಲಿ ಎಂದು ಸಿಟ್ಟಿನಿಂದ ಹೇಳಿದ್ದರಿಂದ ಪದಾಧಿಕಾರಿಗಳ ಸಭೆ ರದ್ದಾಯಿತು.

ಎಲ್ಲರೂ ಬೆಂಗಳೂರು ತಲುಪಿದ್ದಾರೆ. ಹಾಗೇ ಬಿಡುವುದು ಸರಿಯಲ್ಲ ಎಂದು ಅರುಣ್‌ ಸಿಂಗ್‌, ನಳಿನ್‌ ಕಟೀಲ್‌ ಅವರು ಬೊಮ್ಮಾಯಿಗೆ ಹೇಳಿದ್ದರಿಂದ ಶಾಸಕರು ಮತ್ತು ಸಂಸದರ ಜೊತೆಗೆ ಪದಾಧಿಕಾರಿಗಳನ್ನು ಕೂಡ ಮುಖ್ಯಮಂತ್ರಿಗಳ ನಿವಾಸಕ್ಕೆ ಊಟಕ್ಕೆ ಕರೆಯಲಾಯಿತು. ಅಲ್ಲಿಗೆ ಲೇಟಾಗಿ ಬಂದ ಅಮಿತ್‌ ಶಾ ಎಲ್ಲರೂ ಏಳಿ, ಊಟ ಮಾಡೋಣ ಎಂದು ಎಬ್ಬಿಸಿಬಿಟ್ಟರು. ಊಟಕ್ಕೆ ಕುಳಿತಾಗಲೂ ಕೂಡ ಪಕ್ಕದಲ್ಲಿದ್ದ ಪ್ರಹ್ಲಾದ ಜೋಶಿ ಮತ್ತು ಬೊಮ್ಮಾಯಿ ಅನೌಪಚಾರಿಕವಾಗಿ ಹೇಳಿದ್ದಕ್ಕೆ ಶಾ ಸಾಹೇಬರು ತಲೆಯಾಡಿಸುತ್ತಿದ್ದರೇ ಹೊರತು ರಾಜಕಾರಣದ ಬಗ್ಗೆ ಏನೂ ಮಾತಾಡಲಿಲ್ಲವಂತೆ.

ಸಂಪುಟ ಪುನಾರಚನೆ ಕತೆ ಏನು?

ಎರಡು ಬಾರಿ ಬೆಂಗಳೂರಿಗೆ ಬಂದು ಹೋದರೂ ಕೂಡ ಅಮಿತ್‌ ಶಾ ಆಗಲಿ, ಹೊಸಪೇಟೆಗೆ ಬಂದಿದ್ದ ಜೆ.ಪಿ.ನಡ್ಡಾ ಆಗಲಿ ಸಂಪುಟ ಸರ್ಕಸ್‌ ಬಗ್ಗೆ ಏನೂ ಹೇಳಿಲ್ಲ. ಆದಷ್ಟುಬೇಗ ಮಾಡಿ ಎಂದು ಸ್ವತಃ ಯಡಿಯೂರಪ್ಪ ಹೇಳಿದಾಗಲೂ ಕೂಡ ದಿಲ್ಲಿ ನಾಯಕರು ಮಾಡೋಣ ಎಂದಿದ್ದಾರೆಯೇ ಹೊರತು ಯಾವಾಗ? ಏನು? ಹೇಗೆ? ಎಂದು ಬಿಡಿಸಿ ಹೇಳಿಲ್ಲ.

ಬೊಮ್ಮಾಯಿ ಸಾಹೇಬರು ಸಕ್ರಿಯರಾಗಿ ಹೋಗಿ ಎಲ್ಲರನ್ನು ಒಪ್ಪಿಸಬೇಕು, ಅವರಿಗೂ ಏನು ಬಹಳ ಮನಸ್ಸಿದ್ದಂತೆ ಕಾಣುತ್ತಿಲ್ಲ. ಸುಮ್ಮನೆ ಗೊಂದಲ ಮೈಮೇಲೆ ಯಾಕೆ? ನಡೆದಷ್ಟುದಿನ ನಡೆಯಲಿ ಎಂದು ಸುಮ್ಮನೆ ಇದ್ದರೂ ಆಶ್ಚರ್ಯವಿಲ್ಲ. ಸಂಘದ ಕೆಲ ಉನ್ನತ ಮೂಲಗಳು ಹೇಳುವ ಪ್ರಕಾರ ಕೆಲ ಹಿರಿಯರಿಗೆ ಪಕ್ಷದ ಕೆಲಸ ಕೊಟ್ಟು 8ರಿಂದ 10 ಯುವಕರಿಗೆ ಮಂತ್ರಿ ಮಾಡುವ ಆಲೋಚನೆ ಇದೆ. ಆದರೆ ಯಾವಾಗ ಎಂಬ ಪ್ರಶ್ನೆಗೆ ಸಂಘದ ನಾಯಕರ ಬಳಿ ಕೂಡ ಉತ್ತರವಿಲ್ಲ. ಅದೇನಿದ್ದರೂ ಕೇವಲ ಮೋದಿ ಮತ್ತು ಶಾ ಇಬ್ಬರಿಗೆ ಮಾತ್ರ ಗೊತ್ತು.

ಗಾಂಧಿಗಳೇ ಅಧಿಕಾರದಲ್ಲಿದ್ದರೆ ವೋಟು ಬೀಳೋದಿಲ್ಲ, ಗಾಂಧಿಗಳು ಅಧಿಕಾರ ಬಿಟ್ರೆ ಪಕ್ಷ ಉಳಿಯೋದಿಲ್ಲ...!

ಪ್ರಹ್ಲಾದ್‌ ಭಾಯಿ ಕೋ ಬುಲಾವ್‌!

ಬದಲಾದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಮೋದಿ ಬರಲಿ, ಅಮಿತ್‌ ಶಾ ಬರಲಿ, ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವರನ್ನು ಜೊತೆಗೆ ಇಟ್ಟುಕೊಂಡೇ ಓಡಾಡುತ್ತಾರೆ. ಯಾರು ಏನೇ ವಿಷಯ ಇದ್ದರೂ, ಘಟಾನುಘಟಿಗಳಿಗೆ ಮನವರಿಕೆ ಮಾಡುವುದು ಇದ್ದರೂ ಪ್ರಹ್ಲಾದ್‌ ಭಾಯಿ ಕೋ ಬುಲಾವ್‌ ಎನ್ನುತ್ತಾರೆ. ಬಾಡಿ ಲಾಂಗ್ವೇಜ್‌ ನೋಡಿದಾಗ ಕೂಡ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಜೊತೆಗೆ ಜೋಶಿ ಆತ್ಮೀಯತೆ 3 ವರ್ಷಗಳಲ್ಲಿ ಜಾಸ್ತಿಯಾಗಿದೆ ಎಂದು ಎದ್ದು ಕಾಣುತ್ತದೆ. ಸಂಸದೀಯ ವ್ಯವಹಾರದಲ್ಲಿ ಮತ್ತು ಗಣಿ ಕಲ್ಲಿದ್ದಲಿನಲ್ಲಿ ಕೈ ಕೆಸರು ಮಾಡಿಕೊಳ್ಳದೇ ಇರುವುದು ಕೂಡ ಜೋಶಿ ಪ್ರಭಾವ ಹೆಚ್ಚಲು ಮುಖ್ಯ ಕಾರಣ. ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರ ಜೊತೆಗೆ ಜೋಶಿಗೆ ತೀರ ಸಲುಗೆ, ಆಪ್ತತೆ ಇರಲಿಲ್ಲ. ಆದರೆ ಬೊಮ್ಮಾಯಿ ಮತ್ತು ಜೋಶಿ ನಡುವೆ ಭಾಳ ದೋಸ್ತಿ ಇದೆ. ಇನ್ನೊಂದು ಕಡೆ ಬೊಮ್ಮಾಯಿ ಹಟಾವೋ ಎಂದು ದಿಢೀರ್‌ ಸಕ್ರಿಯರಾಗಿರುವ ಜಗದೀಶ ಶೆಟ್ಟರ್‌ ಮತ್ತು ಜೋಶಿ ನಡುವೆ 30 ವರ್ಷದ ಗೆಳೆತನವಿದೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!