ಒಕ್ಕಲಿಗರ ನಡುವೆ ಜಿದ್ದಾಜಿದ್ದಿ ಕದನ; 3 ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕೆ

By Shrilakshmi Shri  |  First Published Nov 30, 2019, 4:07 PM IST

ಯಶವಂತಪುರ ಸಮೀಕ್ಷೆ | ಒಕ್ಕಲಿಗರ ನಡುವೆ ಜಿದ್ದಾಜಿದ್ದಿ ಕದನ | ಮೂರೂ ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕೆ | ಒಕ್ಕಲಿಗರೇ ನಿರ್ಣಾಯಕ | ಬಿಜೆಪಿ- ಜೆಡಿಎಸ್‌ ಪೈಪೋಟಿ | ಸೋಮಶೇಖರ್‌ಗೆ ಹ್ಯಾಟ್ರಿಕ್‌ ಜಯದ ತವಕ, ಜೆಡಿಎಸ್‌ನ ಜವರಾಯಿಗೆ ಹ್ಯಾಟ್ರಿಕ್‌ ಸೋಲು ತಪ್ಪಿಸುವ ಧಾವಂತ


- ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು (ನ. 30): ಯಶವಂತಪುರ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿರುವ ಕ್ಷೇತ್ರ. ಮೂರೂ ಪ್ರಮುಖ ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳೇ ಎದುರಾಳಿಗಳಾಗಿದ್ದಾರೆ. ಹೀಗಾಗಿ ‘ಒಕ್ಕಲಿಗರ ಕದನ’ ಎಂದೇ ಬಿಂಬಿತವಾಗಿರುವ ಯಶವಂತಪುರ ಉಪ ಚುನಾವಣಾ ಕದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Tap to resize

Latest Videos

undefined

ಉಪ ಚುನಾವಣೆ ಎದುರಿಸುತ್ತಿರುವ ಕ್ಷೇತ್ರಗಳ ಪೈಕಿ 2ನೇ ಅತಿ ಹೆಚ್ಚು ಮತದಾರರ (4.80 ಲಕ್ಷ) ಕ್ಷೇತ್ರ ಯಶವಂತಪುರ. ನಗರ ಹಾಗೂ ಗ್ರಾಮೀಣ ಸೊಗಡಿನ ಸಮ್ಮಿಶ್ರಣದ ಕ್ಷೇತ್ರದಲ್ಲಿ ಕಳೆದ ಎರಡು ಬಾರಿ (2013, 2015) ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಎಸ್‌.ಟಿ. ಸೋಮಶೇಖರ್‌ ಪ್ರಸಕ್ತ ಉಪ ಚುನಾವಣೆಯಲ್ಲಿ ಬಿಜೆಪಿ ಹುರಿಯಾಳು. ಹೀಗಾಗಿ ಕ್ಷೇತ್ರದ ರಾಜಕೀಯ ಚಿತ್ರಣವೇ ತಲೆಕೆಳಗಾಗಿದ್ದು, ಪಕ್ಷಗಳ ಬಲಾಬಲವೂ ಭಾರಿ ಪ್ರಮಾಣದಲ್ಲಿ ಅದಲು ಬದಲಾಗಿದೆ.

ಹ್ಯಾಟ್ರಿಕ್‌ ಯಾರಿಗೆ?

ಹ್ಯಾಟ್ರಿಕ್‌ ಸೋಲಿನ ಬಳಿಕ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಎಸ್‌.ಟಿ. ಸೋಮಶೇಖರ್‌ ಬಿಜೆಪಿಯಿಂದ ಗೆಲ್ಲುವ ಮೂಲಕ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಲು ತುಡಿಯುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ ಅಭ್ಯರ್ಥಿ ಟಿ.ಎನ್‌. ಜವರಾಯಿಗೌಡ ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ.

ಕ್ಷೇತ್ರದಲ್ಲಿ ಏಕಾಏಕಿ ಬಲ ಕುಸಿದಂತೆ ಕಾಣುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ತನ್ನ ಅಭ್ಯರ್ಥಿ ಗೆಲ್ಲುವುದಕ್ಕಿಂತ ಪಕ್ಷಾಂತರ ಮಾಡಿದ ಸೋಮಶೇಖರ್‌ರನ್ನು ಸೋಲಿಸಬೇಕು ಎಂಬುದು ಗುರಿ. ಹೀಗಾಗಿ ಪಿ. ನಾಗರಾಜ್‌ (ಪಾಳ್ಯ ನಾಗರಾಜ್‌) ಅವರನ್ನು ಅನಿರೀಕ್ಷಿತ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಂತಿದೆ.

ಕೆ ಆರ್ ಪುರ ಉಪಚುನಾವಣೆ: ಕಾಂಗ್ರೆಸ್‌ ಮತ ಛಿದ್ರವಾದರೆ ಬೈರತಿಗೆ ಸಲೀಸು

ಉತ್ತರಹಳ್ಳಿ ಕ್ಷೇತ್ರವಾಗಿದ್ದ ‘ಯಶವಂತಪುರ’ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2008ರಲ್ಲಿ ಮೊದಲ ಚುನಾವಣೆ ಎದುರಿಸಿತ್ತು. ಯಶವಂತಪುರ ಕ್ಷೇತ್ರ ಎದುರಿಸಿದ ಮೊದಲ ಚುನಾವಣೆಯಲ್ಲಿ ಎಸ್‌.ಟಿ. ಸೋಮಶೇಖರ್‌ (ಕಾಂಗ್ರೆಸ್‌) ಅವರನ್ನು 1,082 ಮತಗಳ ಕಡಿಮೆ ಅಂತರದಿಂದ ಸೋಲಿಸಿದ್ದ ಶೋಭಾ ಕರಂದ್ಲಾಜೆ ಬಿಜೆಪಿಗೆ ಶುಭಾರಂಭ ನೀಡಿದ್ದರು. ಆ ಬಳಿಕ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. 2013, 2018ರಲ್ಲಿ ನಡೆದ ಎರಡೂ ಚುನಾವಣೆಯಲ್ಲಿ ಬಿಜೆಪಿ ಕ್ರಮವಾಗಿ 12,747 ಹಾಗೂ 59,308 ಮತಗಳನ್ನಷ್ಟೇ ಪಡೆದಿತ್ತು. ಕ್ಷೇತ್ರದಲ್ಲಿ ಕಳೆದ ಐದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಸೋಮಶೇಖರ್‌ ಹ್ಯಾಟ್ರಿಕ್‌ ಸೋಲಿನ ನಂತರ ಸತತ ಎರಡು ಗೆಲುವು ದಾಖಲಿಸಿದ್ದಾರೆ. ಕಳೆದ ಎರಡೂ ಚುನಾವಣೆಯಲ್ಲೂ ಸೋಮಶೇಖರ್‌ ಅವರಿಗೆ ಜೆಡಿಎಸ್‌ನ ಜವರಾಯಿ ಗೌಡ ಪ್ರತಿಸ್ಪರ್ಧಿಯಾಗಿದ್ದರು. ಹೀಗಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಾಬಲ್ಯದ ಕ್ಷೇತ್ರ ಎಂದೇ ಯಶವಂತಪುರ ಹೆಸರಾಗಿತ್ತು.

ಬಿಜೆಪಿ ಪ್ರಾಬಲ್ಯ ಹೆಚ್ಚಳ:

ಇದೀಗ ಎಸ್‌.ಟಿ. ಸೋಮಶೇಖರ್‌ ಏಕಾಏಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗುವ ಮೂಲಕ ಬಿಜೆಪಿ ಸೇರ್ಪಡೆಯಾಗಿ ಕಮಲದ ಅಭ್ಯರ್ಥಿಯಾಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯರು, ಮುಖಂಡರು ಬಹುತೇಕ ಬಿಜೆಪಿಗೆ ವಲಸೆ ಹೋಗಿದ್ದಾರೆ.

ಕ್ಷೇತ್ರದ 5 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 3 ಹಾಗೂ ಬಿಜೆಪಿ 2 ವಾರ್ಡ್‌ನಲ್ಲಿ ಗೆಲುವು ಸಾಧಿಸಿತ್ತು. ಸೋಮಶೇಖರ್‌ ಪಕ್ಷಾಂತರದ ಬೆನ್ನಲ್ಲೇ ಬಿಬಿಎಂಪಿ ಕಾಂಗ್ರೆಸ್‌ ಸದಸ್ಯರಾದ ಹೇರೋಹಳ್ಳಿ ವಾರ್ಡ್‌ನ ರಾಜಣ್ಣ, ಹೆಮ್ಮಿಗೆಪುರ ವಾರ್ಡ್‌ನ ಆರ್ಯ ಶ್ರೀನಿವಾಸ್‌ ಅವರು ಬಿಜೆಪಿ ಪರ ಬಹಿರಂಗ ಪ್ರಚಾರಕ್ಕೆ ಇಳಿದಿದ್ದಾರೆ.

ಇನ್ನು ಬಿಜೆಪಿ ಸದಸ್ಯರಾದ ಕೆಂಗೇರಿ ವಾರ್ಡ್‌ ವಿ.ವಿ. ಸತ್ಯನಾರಾಯಣ, ಉಲ್ಲಾಳ ವಾರ್ಡ್‌ನ ಶಾರದಾ ಅವರು ಸಹ ಎಸ್‌.ಟಿ. ಸೋಮಶೇಖರ್‌ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಸೋಮಶೇಖರ್‌ ಮೂಲಕ ಬಿಜೆಪಿ ಪ್ರಾಬಲ್ಯವೂ ಕ್ಷೇತ್ರದಲ್ಲಿ ಏಕಾಏಕಿ ಹೆಚ್ಚಾಗಿದೆ.

ಬಿಎಸ್‌ವೈ ತವರಿನಲ್ಲಿ ಬಿಜೆಪಿಗೆ ಕಠಿಣ ಪರೀಕ್ಷೆ; 2 ಸೋಲಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌

ಜಗ್ಗೇಶ್‌ ಬೇಸರ ಶಮನ

ಎಸ್‌.ಟಿ. ಸೋಮಶೇಖರ್‌ ಬಿಜೆಪಿ ಅಭ್ಯರ್ಥಿಯಾದ ಪ್ರಾರಂಭದಲ್ಲಿ ಹಲವು ವಿಘ್ನಗಳು ಎದುರಾಗಿದ್ದವು. 2018ರ ಬಿಜೆಪಿ ಅಭ್ಯರ್ಥಿ ಹಾಗೂ ನಟ ಜಗ್ಗೇಶ್‌ ಟಿಕೆಟ್‌ ತಪ್ಪಿದ್ದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲೂ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು.

ಬಳಿಕ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಬಳಿಕ ಯಡಿಯೂರಪ್ಪ ನಿವಾಸದಿಂದ ಹೊರ ಬಂದ ಜಗ್ಗೇಶ್‌ ಅವರು ಸೋಮಶೇಖರ್‌ ಅವರನ್ನು ಗೆಲ್ಲಿಸಲು ಕೃಷಿ ಮಾಡುವುದಾಗಿ ಸ್ಪಷ್ಟಪಡಿಸಿದ್ದರು. ಜತೆಗೆ ಶೋಭಾ ಕರಂದ್ಲಾಜೆ ಅವರೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿದ್ದ ಗೊಂದಲ ಬಹುತೇಕ ಕಡಿಮೆಯಾಗಿದೆ.

ಒಕ್ಕಲಿಗರ ವೋಟು ಯಾರಿಗೆ?

2013ರಲ್ಲಿ 29 ಸಾವಿರ ಮತಗಳಿಂದ ಸೋಲೊಪ್ಪಿಕೊಂಡಿದ್ದ ಟಿ.ಎನ್‌. ಜವರಾಯಿಗೌಡ 2018ರಲ್ಲಿ ಸೋಲಿನ ಅಂತರವನ್ನು (10,711) ಕುಗ್ಗಿಸಿಕೊಂಡಿದ್ದರು. ಇದೇ ಹುಮ್ಮಸ್ಸಿನಲ್ಲಿ ಮತ್ತೊಮ್ಮೆ ಜೆಡಿಎಸ್‌ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದಾರೆ. ಜವರಾಯಿಗೌಡ ಅವರಿಗೆ ದೇವೇಗೌಡರ ಕುಟುಂಬದ ಶ್ರೀರಕ್ಷೆಯೇ ಆಧಾರ. ಕ್ಷೇತ್ರದಲ್ಲಿ ಇನ್ನೂ ವೈಯಕ್ತಿಕ ವರ್ಚಸ್ಸು ಮೂಡದಿರುವ ಹಿನ್ನೆಲೆಯಲ್ಲಿ ದೇವೇಗೌಡರ ಕುಟುಂಬದ ಬೆನ್ನಿಗಿರುವ ಒಕ್ಕಲಿಗ ಮತಗಳನ್ನೇ ಬಹುವಾಗಿ ನೆಚ್ಚಿದ್ದಾರೆ.

ಗಣಿನಾಡಿಗೆ ಮತ್ತೆ ಸಿಂಗ್‌ ಆಗ್ತಾರಾ ಕಿಂಗ್‌? ಗೆಲುವಿನ ಸರಣಿಗೆ ತಡೆಹಾಕಲು ಕಾಂಗ್ರೆಸ್‌ ಕಸರತ್ತು

ಬಿಜೆಪಿ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್‌ ಕೂಡ ಒಕ್ಕಲಿಗರೇ. ಹೀಗಾಗಿ ಅವರು ಅವರು ಕ್ಷೇತ್ರದಲ್ಲಿ ‘ಎಸ್‌.ಟಿ. ಸೋಮಶೇಖರ್‌ಗೌಡ’ ಎಂದೇ ದೊಡ್ಡ ಪ್ರಮಾಣದಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಐದು ಬಾರಿ ಚುನಾವಣೆ ಎದುರಿಸಿರುವ ಸೋಮಶೇಖರ್‌ ಅವರು ತಮ್ಮದೇ ಆದ ಪ್ರಬಲ ನೆಟ್‌ವರ್ಕ್ ಅನ್ನು ಕ್ಷೇತ್ರದಲ್ಲಿ ಹೊಂದಿದ್ದಾರೆ. ಎರಡನೇ ಹಾಗೂ ಮೂರನೇ ಹಂತದ ನಾಯಕರನ್ನು ತಕ್ಕಮಟ್ಟಿಗೆ ಬೆಳೆಸಿ ಜತೆಯಲ್ಲಿಟ್ಟುಕೊಂಡಿದ್ದಾರೆ. ಈ ನೆಟ್‌ವರ್ಕ್ ಸೋಮಶೇಖರ್‌ ಗೆಲುವಿಗೆ ಟೊಂಕ ಕಟ್ಟಿನಿಂತಿದೆ. ಹೀಗಾಗಿಯೇ ಒಕ್ಕಲಿಗ ಮತಗಳು ಸಂಪೂರ್ಣವಾಗಿ ಒಂದೇ ಕಡೆ ವಾಲುವುದಿಲ್ಲ ಎಂಬ ಪ್ರಬಲ ನಂಬಿಕೆ ಹೊಂದಿದ್ದಾರೆ. ಜತೆಗೆ, ಕ್ಷೇತ್ರದಲ್ಲಿ ಬಿಜೆಪಿಯೂ ತನ್ನದೇ ಆದ ಮತಬ್ಯಾಂಕ್‌ ಹೊಂದಿದೆ. ಕ್ಷೇತ್ರದಲ್ಲಿ ಸುಮಾರು 70 ಸಾವಿರದಷ್ಟುಲಿಂಗಾಯತ ಹಾಗೂ ಬ್ರಾಹ್ಮಣ ಮತಗಳಿವೆ.

ಜೆಡಿಎಸ್‌ಗೆ ಅನುಕಂಪದ ನಿರೀಕ್ಷೆ

ಬಿಜೆಪಿಯ ಸಂಘಟಿತ ಪ್ರಚಾರ ಜಾಲ ಈ ಕ್ಷೇತ್ರಕ್ಕೆ ವಿಶೇಷ ಗಮನ ಕೊಟ್ಟಿದೆ. ನೇರ ಪ್ರಚಾರ ಮಾತ್ರವಲ್ಲದೆ, ಪರಿವಾರದ ಸಂಘಟನೆಗಳ ಮೂಲಕವೂ ಮತದಾರರನ್ನು ನೇರವಾಗಿ ಸಂಪರ್ಕಿಸುವ ವ್ಯವಸ್ಥಿತ ಪ್ರಯತ್ನ ನಡೆಸಿದೆ. ಜತೆಗೆ, ಲಾಗಾಯ್ತಿನಿಂದಲೂ ಯಶವಂತಪುರ ಹಾಗೂ ಹಳೆಯ ಉತ್ತರ ಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದ ಎಂ.ಶ್ರೀನಿವಾಸ್‌, ಆರ್‌. ಅಶೋಕ್‌, ಶೋಭಾ ಕರಂದ್ಲಾಜೆ, ನಟ ಜಗ್ಗೇಶ್‌ ಎಲ್ಲರೂ ಸೋಮಶೇಖರ್‌ ಪರ ಪ್ರಚಾರಕ್ಕೆ ಇಳಿದಿದ್ದಾರೆ.

ಸೋಮಶೇಖರ್‌ ಕಳೆದ ಎರಡು ಸರ್ಕಾರಗಳಲ್ಲಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಿರುವುದಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೆ, ಆಯ್ಕೆಯಾದರೇ ಮಂತ್ರಿಯಾಗಿ ಮತ್ತೆ ಅಭಿವೃದ್ಧಿ ಮಾಡುವ ಕನಸು ಕಟ್ಟಿಕೊಡುತ್ತಿದ್ದಾರೆ. ಇವೆಲ್ಲ ಅವರಿಗೆ ಪ್ಲಸ್‌ ಆಗಲಿದೆ.

ಇರುವ ದೊಡ್ಡ ಮೈನಸ್‌ ಅಂದರೆ ಪಕ್ಷಾಂತರ ಹಾಗೂ ಅನರ್ಹತೆ ಆರೋಪ. ನಗರದಲ್ಲಿರುವ 12 ತ್ಯಾಜ್ಯ ಸಂಸ್ಕರಣಾ ಘಟಕಗಳ ಪೈಕಿ 5 ಘಟಕಗಳನ್ನು ಯಶವಂತಪುರಕ್ಕೇ ತಂದ ಅಪಕೀರ್ತಿ. ಇದನ್ನೇ ಮುಂದಿಟ್ಟುಕೊಂಡು ಜೆಡಿಎಸ್‌ ಪ್ರಚಾರದಲ್ಲಿ ತೊಡಗಿದೆ. ಕ್ಷೇತ್ರದಲ್ಲಿನ ಒಕ್ಕಲಿಗರು ದೇವೇಗೌಡ ಕುಟುಂಬದ ಕೃಪೆಯಿಂದಾಗಿ ತಮಗೆ ಒಲಿಯುತ್ತಾರೆ ಹಾಗೂ ಸತತ ಎರಡು ಬಾರಿ ಸೋಲಿನ ಅನುಕಂಪ ಈ ಬಾರಿ ವರ್ಕ್ ಔಟ್‌ ಆಗುತ್ತದೆ ಎಂಬುದು ಜವರಾಯಿಗೌಡ ಅವರ ನಂಬಿಕೆ. ಆದರೆ, ನೇರವಾಗಿ ಮತದಾರರನ್ನು ಮುಟ್ಟುವಂತಹ ಪ್ರಬಲ ನೆಟ್‌ವರ್ಕ್ ಕೊರತೆ ಅವರನ್ನು ಕಾಡುತ್ತಿದೆ. ಒಟ್ಟಾರೆ ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ವಿಭಜನೆಯಾಗುವುದೋ ಅಥವಾ ಇಲ್ಲವೋ ಎಂಬುದರ ಮೇಲೆ ಫಲಿತಾಂಶ ನಿಂತಿದೆ.

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!