ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳಿರುವಾಗಲೇ ಕಲಬುರಗಿ ಜಿಲ್ಲೆಯಲ್ಲಿ ರಾಜಕೀಯ ರಂಗೇರಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಗದ್ದುಗೆ ಹತ್ತಿದ ಬೆನ್ನಲ್ಲೇ ಜೋಶ್‌ನಲ್ಲಿರುವ ಕಾಂಗ್ರೆಸ್ ಈ ಬಾರಿ ಯುದ್ದೋತ್ಸಾಹದಲ್ಲಿದೆ.
ಶೇಷಮೂರ್ತಿ ಅವಧಾನಿ
ಕಲಬುರಗಿ (ನ.26): ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳಿರುವಾಗಲೇ ಕಲಬುರಗಿ ಜಿಲ್ಲೆಯಲ್ಲಿ ರಾಜಕೀಯ ರಂಗೇರಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಗದ್ದುಗೆ ಹತ್ತಿದ ಬೆನ್ನಲ್ಲೇ ಜೋಶ್‌ನಲ್ಲಿರುವ ಕಾಂಗ್ರೆಸ್ ಈ ಬಾರಿ ಯುದ್ದೋತ್ಸಾಹದಲ್ಲಿದ್ದರೆ, ತಾನು ಸಂಘಟಿಸಿರುವ ವಿಜಯ ಸಂಕಲ್ಪ ಯಾತ್ರೆ ಹಾಗೂ ಒಬಿಸಿ ಸಮಾವೇಶ ಯಶ ಕಂಡಿರುವ ಖುಷಿಯಲ್ಲಿ ಕೇಸರಿ ಪಡೆ ಕೂಡಾ ಕಲಬುರಗಿಯ ಇನ್ನಷ್ಟು ಕ್ಷೇತ್ರಗಳಲ್ಲಿ ಕಮಲ ಅರಳಿಸುವ ಉಮೇದಿನಲ್ಲಿದೆ. ಇವೆರಡರ ನಡುವೆಯೇ ಜೆಡಿಎಸ್ ಈಗಾಗಲೇ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳನ್ನು ಘೋಷಿಸಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಸಿದ್ಧವಾಗಿದೆ.
ಒಟ್ಟು 9 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರು, ಇತರೆ ಹಿಂದುಳಿದ ವರ್ಗ(ಕುರುಬರು ಅಧಿಕ), ದಲಿತರು ಹಾಗೂ ಮುಸ್ಲಿಂ ಸಮುದಾಯದವರೇ ನಿರ್ಣಾಯಕರು. ಒಂದು ಕ್ಷೇತ್ರದಲ್ಲಿ ಮಾತ್ರ ಬ್ರಾಹ್ಮಣ ಮತದಾರರು ನಿರ್ಣಾಯಕರು. ಸಂಘಟನಾತ್ಮಕವಾಗಿ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಗಟ್ಟಿಯಾಗಿದ್ದರೆ, ಜೆಡಿಎಸ್‌ಗೆ ನಾಯಕತ್ವದ ಕೊರತೆ ಕಾಡುತ್ತಿದೆ. ಎಲ್ಲಾ 9 ಕ್ಷೇತ್ರಗಳಲ್ಲಿ ಹೋರಾಟ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದೆ.
Ticket Fight: ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‌ಗೆ ಜಿದ್ದಾಜಿದ್ದಿ ಪೈಪೋಟಿ
1.ಚಿತ್ತಾಪುರ: ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧೆಗೆ 9 ಬಿಜೆಪಿಗರು ಸಿದ್ಧ
ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಚಿತ್ತಾಪುರ (ಎಸ್‌ಸಿ ಮೀಸಲು) ಕ್ಷೇತ್ರ ಕಾಂಗ್ರೆಸ್‌ನ ದಟ್ಟಪ್ರಭಾವ ಹೊಂದಿದೆ. 5 ದಶಕಗಳಲ್ಲಿ 1 ಬಾರಿ ಬಿಜೆಪಿ, 3 ಬಾರಿ ಜನತಾ ಪರಿವಾರದ ಗೆಲುವು ಹೊರತುಪಡಿಸಿ ಉಳಿದೆಲ್ಲ ಬಾರಿ ಕಾಂಗ್ರೆಸ್‌ಗೆ ಒಲಿದ ಕ್ಷೇತ್ರವಿದು. ಪ್ರಿಯಾಂಕ್ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದರೆ, ಬಿಜೆಪಿಯಿಂದ ವಿಠ್ಠಲ್ ವಾಲ್ಮೀಕಿ ನಾಯಕ್, ಅರವಿಂದ ಚವ್ಹಾಣ್, ಧರ್ಮಣ್ಣ ದೊಡ್ಮನಿ ಇಟಗಾ, ಸುರೇಶ ರಾಠೋಡ್, ಬಸವರಾಜ ಬೆಣ್ಣೂರ, ದೇವೀಂದ್ರನಾಥ ನಾದ, ಸುನಿಲ್ ವಲ್ಯಾಪೂರೆ, ಮಣಿಕಂಠ ರಾಠೋಡ್ ಟಿಕೆಟ್ ಆಕಾಂಕ್ಷಿಗಳು. ತಂದೆಯನ್ನು ಸೋಲಿಸಿರುವೆ, ಈಗ ಮಗನನ್ನೂ ಸೋಲಿಸುವೆ ಎಂದು ಗುಡುಗಿರುವ ಹಾಲಿ ಸಂಸದ ಡಾ. ಉಮೇಶ ಜಾಧವ್ ಕೂಡ ಚಿತ್ತಾಪುರದ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಯಾರೂ ಉತ್ಸಾಹ ತೋರುತ್ತಿಲ್ಲ.
2.ಜೇವರ್ಗಿ: ಬಿಜೆಪಿಯಲ್ಲಿನ ಒಡಕೇ ಇಲ್ಲಿ ಕಾಂಗ್ರೆಸ್‌ಗೆ ಲಾಭ
ಜೇವರ್ಗಿಯಿಂದ ಮಾಜಿ ಸಿಎಂ ಧರಂಸಿಂಗ್ ಪುತ್ರ ಡಾ.ಅಜಯ್ ಸಿಂಗ್ ಕಳೆದೆರಡು ಬಾರಿ ಸತತವಾಗಿ ಆಯ್ಕೆಯಾಗಿದ್ದು, ಇದೀಗ 3ನೇ ಬಾರಿ ಕಣಕ್ಕಿಳಿಯುವ ತವಕದಲ್ಲಿದ್ದಾರೆ. ವೀರಶೈವ ಲಿಂಗಾಯತ, ಲಿಂಗಾಯತ ಗಾಣಿಗ, ಓಬಿಸಿ (ಕುರುಬರು ಸಿಂಹಪಾಲು), ದಲಿತ, ಮುಸ್ಲಿಮರು ನಿರ್ಣಾಯಕರಾಗಿರುವ ಇಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ಸಂಕಲ್ಪ ಮಾಡಿದೆ. ಆದರೆ ಗುಂಪುಗಾರಿಕೆಯೇ ಪಕ್ಷಕ್ಕೆ ಸಮಸ್ಯೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಜಿಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ಕುರಿ-ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಮನಿ, ಪಕ್ಷದ ಒಬಿಸಿ ಮೋರ್ಚಾದ ಶೋಭಾ ಬಾಣಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಜೆಡಿಎಸ್‌ನಿಂದ ಕೇದಾರಲಿಂಗಯ್ಯ, ರಾವೂಫ್ ಹವಾಲ್ದಾರ್ ಆಕಾಂಕ್ಷಿಗಳು. ಏತನ್ಮಧ್ಯೆ ಆಂದೋಲ ಸಿದ್ಧಲಿಂಗ ಸ್ವಾಮೀಜಿ ಕೂಡಾ ಕಣಕ್ಕಿಳಿಯುವ ಒಲವು ತೋರಿದ್ದು, ಸ್ವತಂತ್ರವಾಗಿಯೋ ಅಥವಾ ರಾಜಕೀಯ ಪಕ್ಷದಿಂದಲೋ ಎಂಬುದು ಕುತೂಹಲ ಮೂಡಿಸಿದೆ.
3.ಕಲಬುರಗಿ ದಕ್ಷಿಣ: ಕಾಂಗ್ರೆಸ್ ಟಿಕೆಟ್‌ಗೆ ಬೀಗರ ಪೈಪೋಟಿ!
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ದತ್ತಾತ್ರೇಯ ಪಾಟೀಲ್ ರೇವೂರ್ ಮತ್ತೆ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ ಬಳಸಿಕೊಳ್ಳಲು ಹಲವು ಹೊಸ ಮುಖಗಳು ಟಿಕೆಟ್‌ಗಾಗಿ ಪೈಪೋಟಿಯಲ್ಲಿವೆ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು, ದಲಿತರು, ಬ್ರಾಹ್ಮಣರು, ಒಬಿಸಿ ಮತಗಳು ಅಧಿಕ. ಈ ಪೈಕಿ ಬ್ರಾಹ್ಮಣ, ಲಿಂಗಾಯತ ಸಮುದಾಯದ ಉಪ ಜಾತಿ ಆದಿ ಲಿಂಗಾಯತ ಮತಗಳೇ ನಿರ್ಣಾಯಕ. ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್, ಹೈಕಶಿ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಪುತ್ರ ಸಂತೋಷ ಬಿಲಗುಂದಿ, ಮಾಜಿ ಮೇಯರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ನೀಲಕಂಠ ಮೂಲಗೆ, ಮಾಜಿ ಜಿಪಂ ಸದಸ್ಯ ಸಂತೋಷ ಪಾಟೀಲ್ ದಣ್ಣೂರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು. ಈ ಪೈಕಿ ಅಲ್ಲಂಪ್ರಭು ಪಾಟೀಲ್ ಹೆಸರು ಮುಂಚೂಣಿಯಲ್ಲಿದೆ. ಸಂತೋಷ ಬಿಲಗುಂದಿ ಅಲ್ಲಂಪ್ರಭು ಪಾಟೀಲರ ಅಳಿಯ. ಹೀಗಾಗಿ ಕಾಂಗ್ರೆಸ್ ಟಿಕೆಟ್‌ಗಾಗಿ ಬೀಗರ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ಸಂಘಟನೆ ಕೊರತೆ ಕಾಡುತ್ತಿರುವ ಜೆಡಿಎಸ್‌ನಿಂದ ಕೃಷ್ಣಾರೆಡ್ಡಿ ಟಿಕೆಟ್ ಆಕಾಂಕ್ಷಿ. ಆಮ್ ಆದ್ಮಿ ಪಕ್ಷದಿಂದ ಸಿದ್ದು ಪಾಟೀಲ್ ಕಣಕ್ಕಿಳಿಯುವ ತವಕದಲ್ಲಿದ್ದಾರೆ.
4.ಕಲಬುರಗಿ ಉತ್ತರ: ಈ ಬಾರಿ ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ?
ಕಲಬುರಗಿ ಉತ್ತರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರೇ ಇದ್ದರೂ ಪಕ್ಷ ಸಂಘಟನೆ ಕೊರತೆ ಸೇರಿ ಹಲವು ಕಾರಣದಿಂದಾಗಿ ಸೊರಗಿದೆ. ಮಾಜಿ ಮಂತ್ರಿ, ದಿ.ಖಮರುಲ್ ಇಸ್ಲಾಂ ಪತ್ನಿ ಕನೀಜ್ ಫಾತೀಮಾ ಇಲ್ಲಿನ ಶಾಸಕರು. ಈ ಬಾರಿ ಅವರು ಪುತ್ರ ಫರಜುಲ್ ಇಸ್ಲಾಂಗೆ ಟಿಕೆಟ್ ಕೊಡಿಸುವ ಸಾಧ್ಯತೆ ಹೆಚ್ಚಿದೆ. ಖಮರುಲ್ ಇಸ್ಲಾಂ ಜೊತೆಗಾರ ಮುಸ್ಲಿಂ/ಮುಸ್ಲಿಂಮೇತರ ನಾಯಕರು ಈಗ ಕನೀಜ್ ಫಾತೀಮಾ ಜೊತೆಗಿಲ್ಲ. ಇನ್ನು ಬಿಜೆಪಿ ಟಿಕೆಟ್‌ಗಾಗಿ ಎಂಎಲ್‌ಸಿ ಬಿ.ಜಿ. ಪಾಟೀಲ್ ಪುತ್ರ ಹಾಗೂ ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಹಾಗೂ ಶಿವಕಾಂತ ಮಹಾಜನ್ ಪ್ರಬಲ ಆಕಾಂಕ್ಷಿಗಳು. ಜೆಡಿಎಸ್‌ನಿಂದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಉಸ್ತಾದ್ ನಾಸೀರ್ ಹುಸೇನ್ ಕಣಕ್ಕಿಳಿಯಲಿದ್ದಾರೆ.
5.ಕಲಬುರಗಿ ಗ್ರಾಮೀಣ: ಬಿಜೆಪಿ, ಕಾಂಗ್ರೆಸ್ ಟಿಕೆಟ್‌ಗೆ ಹಲವರ ಪೈಪೋಟಿ
ಜಿಲ್ಲೆಯ ಅತಿದೊಡ್ಡ ಪರಿಶಿಷ್ಟಜಾತಿ ಮೀಸಲು ಕ್ಷೇತ್ರವಿದು. ಈಗಿರುವ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಮತ್ತೆ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಕೂಡಾ ಆಕಾಂಕ್ಷಿ. ಇನ್ನು ಕಾಂಗ್ರೆಸ್ ಟಿಕೆಟ್‌ಗಾಗಿ ವಿಜಯಕುಮಾರ್ ಜಿ.ರಾಮಕೃಷ್ಣ, ಬಾಬೂರಾವ್ ಚವ್ಹಾಣ್, ರವಿ ಚವ್ಹಾಣ್, ಬಾಬೂ ಹೊನ್ನಾ ನಾಯಕ್, ವಿನೋದ ಶಾಣಪ್ಪ ಆಕಾಂಕ್ಷಿಗಳು. ಮಾಜಿ ಸಚಿವ ರೇವು ನಾಯಕ ಬೆಳಮಗಿ ಕಾಂಗ್ರೆಸ್ ಟಿಕೆಟ್ ಪೈಪೋಟಿಯಲ್ಲಿದ್ದಾರೆ. ರೇವು ನಾಯಕ ಈ ಕ್ಷೇತ್ರವನ್ನು ಹಿಂದೆ 6 ಬಾರಿ ಪ್ರತಿನಿಧಿಸಿದ್ದರು. ಬದಲಾದ ರಾಜಕೀಯದಲ್ಲಿ ಇವರಿಗೆ ಪಕ್ಷ ಟಿಕೆಟ್ ನೀಡದೆ ಹೋದಾಗ ಜೆಡಿಎಸ್‌ನಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಇಲ್ಲಿ ಗುಂಪು ರಾಜಕೀಯದ ಬೇಗುದಿ ಎದುರಿಸುತ್ತಿವೆ. ಜೆಡಿಎಸ್ ಇಲ್ಲಿ ಅಸ್ತಿತ್ವದಲ್ಲೇ ಇಲ್ಲ.
6.ಸೇಡಂ: ‘ಹಳೆ ಹುಲಿ’ಗಳಿಗೆ ’ಹೊಸ ಕಲಿ’ಯ ಸವಾಲ್!
ಕಾಗಿಣಾ ತೀರದ ಸೇಡಂನ ಹಾಲಿ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಪುನರಾಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜೆಡಿಎಸ್ ಹೊಸಮುಖ ಕಣಕ್ಕಿಳಿಸಲು ನಿರ್ಧರಿಸಿದ್ದು, ಈಗಾಗಲೇ ಬಾಲರಾಜ್ ಗುತ್ತೇದಾರ್ ಹೆಸರು ಘೋಷಿಸಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟುಸಂಘಟನಾತ್ಮಕ ಕೆಲಸಗಳನ್ನು ಮಾಡುತ್ತಿರುವ ಹೊಸ ಮುಖ ಬಾಲರಾಜ್ ಗುತ್ತೇದಾರ್ ಹಳೆಯ ಹುಲಿಗಳಿಗೆ ಸವಾಲಾಗುವ ಸಾಧ್ಯತೆ ಇದೆ. ಲಿಂಗಾಯತ, ಕೋಲಿ, ಪಜಾ (ಎಡ), ಈಡಿಗ, ಮುಸ್ಲಿಂ ಮತಗಳೇ ಇಲ್ಲಿ ನಿರ್ಣಾಯಕ.
7.ಅಫಜಲ್ಪುರ: ಬಿಜೆಪಿ, ಕಾಂಗ್ರೆಸ್ ಟಿಕೆಟ್‌ಗಾಗಿ ‘ಅಣ್ತಮ್ಮ’ ಪೈಪೋಟಿ
ಅಫಜಲ್ಪುರ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್‌ನ ಎಂ.ವೈ.ಪಾಟೀಲ್ ಅನಾರೋಗ್ಯ ಕಾರಣದಿಂದ ಈ ಬಾರಿ ತಮ್ಮ ಪುತ್ರ ಅರುಣ ಪಾಟೀಲರನ್ನು ಕಣಕ್ಕಿಳಿಸುವ ಇರಾದೆಯಲ್ಲಿದ್ದಾರೆ. ಆದರೆ ಇದಕ್ಕೆ ಪಕ್ಷದೊಳಗೇ ಅಸಮಾಧಾನ ಎದ್ದಿದೆ. ಎಂ.ವೈ.ಪಾಟೀಲರು ಕಣಕ್ಕಿಳಿಯದಿದ್ದರೆ ನಮಗೆ ಟಿಕೆಟ್ ಕೊಡಿ ಎಂದು ಆಕಾಂಕ್ಷಿಗಳಾದ ಜೆ.ಎಂ.ಕೊರಬು, ರಾಜೇಂದ್ರ ಪಾಟೀಲ್ ರೇವೂರ್, ಪಪ್ಪು ಪಟೇಲ್, ಮಕ್ಬುಲ್ ಪಟೇಲ್ ಹೈಕಮಾಂಡ್‌ಗೆ ಅರ್ಜಿ ಹಾಕಿದ್ದಾರೆ. ಇತ್ತ ಹಾಲಿ ಶಾಸಕ ಎಂ.ವೈ. ಪಾಟೀಲ್ ಅರ್ಜಿ ಸಲ್ಲಿಸಿಲ್ಲ. ಆದರೆ ಅವರ ಪುತ್ರರಾದ ಅರುಣ ಎಂ.ವೈ. ಪಾಟೀಲ್, ಡಾ.ಸಂಜೀವ ಎಂ.ವೈ. ಪಾಟೀಲ್ ಅರ್ಜಿ ಹಾಕಿದ್ದಾರೆ. ಇತ್ತ ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಅಣ್ತಮ್ಮರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ , ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಸಹೋದರರು ಟಿಕೆಟ್‌ಗಾಗಿ ಪೈಪೋಟಿಗಿಳಿದಿದ್ದಾರೆ. ಮಾಲೀಕಯ್ಯ ಗುತ್ತೇದಾರ್ ಕಳೆದ ಬಾರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಜೆಡಿಎಸ್ ಇಲ್ಲಿ ಹೋರಾಟಗಾರ ಶಿವಕುಮಾರ್ ನಾಟೀಕಾರ್‌ರನ್ನು ಕಣಕ್ಕಿಳಿಸಲು ಮುಂದಾಗಿದೆ.
8.ಚಿಂಚೋಳಿ: ಬಿಜೆಪಿ ಅಭ್ಯರ್ಥಿ ನಿಗೂಢ!
ಚಿಂಚೋಳಿ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್ ವೈದ್ಯಕೀಯ ಸ್ನಾತಕೋತ್ತರ ಅಧ್ಯಯನದತ್ತ ಒಲವು ತೋರಿರುವುದರಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯೋದು ಅನುಮಾನ ಎನ್ನಲಾಗುತ್ತಿದೆ. ಕಲಬುರಗಿ ಸಂಸದರಾಗಿರುವ ಡಾ.ಉಮೇಶ ಜಾಧವ್ ಮತ್ತೆ ಅಭ್ಯರ್ಥಿಯಾಗುವ ಗುಸುಗುಸು ಇದೆ. ಆದರೆ ಇದಿನ್ನೂ ಸ್ಪಷ್ಟವಾಗಿಲ್ಲ. ಕಾಂಗ್ರೆಸ್‌ನಿಂದ ಸುಭಾಸ್ ರಾಠೋಡ್, ಗೋಪಾಲ ಕಟ್ಟೀಮನಿ, ಮಾಜಿ ಸಚಿವ ಬಾಬೂರಾವ್ ಚವ್ಹಾಣ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಸಂಜೀವನ ಯಾಕಾಪುರ ಹೆಸರು ಅಧಿಕೃತವಾಗಿ ಹೊರಬಿದ್ದಿದೆ. ಲಿಂಗಾಯತ, ದಲಿತ, ಕೋಲಿ, ಬಂಜಾರಾ ಮತಗಳು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ.
Ticket Fight: ಮಂಡ್ಯ ಜಿಲ್ಲೆ ಹಳೆ ಹುಲಿಗಳಿಗೆ ಹೊಸ ಕಲಿಗಳ ಟಕ್ಕರ್
9.ಆಳಂದ: ಕಣದಲ್ಲಿ ಹಳೆ ಹುಲಿಗಳ ಹಣಾಹಣಿ
ಆಳಂದ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಸುಭಾಷ್ ಗುತ್ತೇದಾರ್, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಆರ್. ಪಾಟೀಲ್ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಹಾಲಿ ಹಾಗೂ ಮಾಜಿಗಳಿಬ್ಬರೂ ಈ ಬಾರಿ ತಮ್ಮ ಪುತ್ರರಿಗೆ ಕ್ಷೇತ್ರ ಬಿಟ್ಟುಕೊಡಬಹುದೆಂಬ ಲೆಕ್ಕಾಚಾರವಿತ್ತಾದರೂ ಅದೀಗ ಉಲ್ಟಾಆಗಿದೆ. ಈ ನಡುವೆ ಬಿಜೆಪಿಯಿಂದ ಯುವಮೋರ್ಚಾ ಮಾಜಿ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕೂಡ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮುತ್ತಿದ್ದಾರೆ. ಜೆಡಿಎಸ್‌ನಿಂದ ಮುನ್ನಳ್ಳಿಯ ಮಹೇಶ್ವರಿ ವಾಲಿ ಹೆಸರು ಅಂತಿಮವಾಗಿದೆ. ಲಿಂಗಾಯತ, ದಲಿತ, ಒಬಿಸಿ (ಕುರುಬರು ಅಧಿಕ) ಮತಗಳಿಲ್ಲಿ ನಿರ್ಣಾಯಕ. ಇಲ್ಲಿ ಆಮ್ ಆದ್ಮಿ ಪಕ್ಷದಿಂದ, ಶ್ರಮ ಜೀವಿಗಳ ವೇದಿಕೆ ಅಧ್ಯಕ್ಷ, ಹೋರಾಟಗಾರ ಚಂದ್ರಶೇಖರ ಹಿರೇಮಠ ಕಣಕ್ಕಿಳಿಯುವ ಸಾಧ್ಯತೆಗಳಿದೆ.
ಕಲಬುರಗಿ ಜಿಲ್ಲೆ
ಒಟ್ಟು ಕ್ಷೇತ್ರ- 09
ಕಾಂಗ್ರೆಸ್- 04
ಬಿಜೆಪಿ- 05
ಜೆಡಿಎಸ್- 00