ಬೆಳಗಾವಿಯಲ್ಲಿ ಕಾಂಗ್ರೆಸ್ ಈ ಸಲ ಅಭೂತಪೂರ್ವ ಗೆಲುವು ದಾಖಲಿಸಿದೆ. ಕಳೆದ ಒಂದೂವರೆ ದಶಕದಿಂದ ಕೇಸರಿ ಕೋಟೆ ಎಂದೇ ಬಿಂಬಿತವಾಗಿದ್ದ ಬೆಳಗಾವಿಯನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ.
ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಮೇ.15): ಬೆಂಗಳೂರು ನಂತರ ಅತಿದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಕಾಂಗ್ರೆಸ್ ಈ ಸಲ ಅಭೂತಪೂರ್ವ ಗೆಲುವು ದಾಖಲಿಸಿದೆ. ಕಳೆದ ಒಂದೂವರೆ ದಶಕದಿಂದ ಕೇಸರಿ ಕೋಟೆ ಎಂದೇ ಬಿಂಬಿತವಾಗಿದ್ದ ಬೆಳಗಾವಿಯನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಕಾಂಗ್ರೆಸ್‍ನ ಈ ಭರ್ಜರಿ ಗೆಲುವಿಗೆ ಬಿಜೆಪಿ ಮಾಡಿಕೊಂಡ ಯಡವಟ್ಟೇ ಕಾರಣ ಎಂಬ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಬಿಜೆಪಿ ಮಾಡಿಕೊಂಡ ಯಡವಟ್ಟುಗಳೇನು? ಅದರ ಲಾಭ ಪಡೆದ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದು ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಇಬ್ಬರು ಹಾಲಿ ಶಾಸಕರಿಗೆ ಕೋಕ್
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬೆಳಗಾವಿಯಲ್ಲಿ 10 ಸ್ಥಾನ ಹಾಗೂ ಕಾಂಗ್ರೆಸ್ 8 ಸ್ಥಾನ ಪಡೆದಿತ್ತು. ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು 2019 ಬಿಜೆಪಿ ಸೇರಿದರು. ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲೂ ಭರ್ಜರಿ ಗೆಲುವು ತಮ್ಮದಾಗಿಸಿಕೊಂಡರು. ಬಳಿಕ ಜಿಲ್ಲೆಯಲ್ಲಿ ಬಿಜೆಪಿ 13 ಹಾಗೂ ಕಾಂಗ್ರೆಸ್‍ನಲ್ಲಿ ಐದು ಶಾಸಕರಿದ್ದರು.
2023ರ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ಹೊಸ ಪ್ರಯೋಗ ಮಾಡಿತು. ಹಾಲಿ ಶಾಸಕರಾದ ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ ಅವರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿತು. ಬೆಳಗಾವಿ ಉತ್ತರದಲ್ಲಿ ಡಾ. ರವಿ ಪಾಟೀಲ, ರಾಮದುರ್ಗದಲ್ಲಿ ಬೆಂಗಳೂರು ಮೂಲಕ ಚಿಕ್ಕರೇವಣ್ಣಗೆ ಬಿಜೆಪಿ ಟಿಕೆಟ್ ನೀಡಿತ್ತು.
ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿತು. ರಾಮದುರ್ಗದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದ್ದರೂ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಬದಲು ಚಿಕ್ಕ ಚಿಕ್ಕರೇವಣ್ಣಗೆ ಇಲ್ಲಿ ಬಿಜೆಪಿ ಟಿಕೆಟ್ ನೀಡಿ ಹೊಸ ಪ್ರಯೋಗ ಮಾಡಿತು. ಬೆಳಗಾವಿ ಉತ್ತರದಲ್ಲಿ ಲಿಂಗಾಯತ ಮತದಾರರು ನಿರ್ಣಾಯಕ ಎಂಬ ಕಾರಣಕ್ಕೆ ಮರಾಠಾ ಸಮುದಾಯದ ಬೆನಕೆ ಬದಲು ಡಾ. ರವಿ ಪಾಟೀಲಗೆ ಟಿಕೆಟ್ ನೀಡಲಾಗಿತ್ತು. ಆದರೆ ಅದರ ಲಾಭ ಬಿಜೆಪಿಗೆ ಆಗಲಿಲ್ಲ.
ಬೈಲಹೊಂಗಲದಲ್ಲಿ ಬಂಡಾಯದ ಎಫೆಕ್ಟ್
ಇನ್ನು ಕಳೆದ ಭಾರಿಯಂತೆ ಈ ಸಲವೂ ಬೈಲಹೊಂಗಲದಲ್ಲಿ ಬಿಜೆಪಿಯ ಬಂಡಾಯದ ಲಾಭ ಕಾಂಗ್ರೆಸ್‍ಗೆ ಆಯಿತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಡಾ. ವಿಶ್ವನಾಥ ಪಾಟೀಲಗೆ ಸಿಕ್ಕಿತ್ತು. ಆಗ ಜಗದೀಶ ಮೆಟಗುಡ್ಡ ಪಕ್ಷೇತರರಾಗಿ ಸ್ಪರ್ಧಿಸಿದ ಪರಿಣಾಮ ಕಾಂಗ್ರೆಸ್ ಗೆದ್ದಿತು. ಈ ಸಲ ಜಗದೀಶ ಮೆಟಗುಡ್ಡಗೆ ಬಿಜೆಪಿ ಟಿಕೆಟ್ ಸಿಗ್ತಿದ್ದಂತೆ ಡಾ. ವಿಶ್ವನಾಥ ಪಾಟೀಲ ಪಕ್ಷೇತರಾಗಿ ಸ್ಪರ್ಧಿಸಿದರು.
ಈ ಸಲವೂ ಕಾಂಗ್ರೆಸ್‍ನ ಮಹಾಂತೇಶ ಕೌಜಲಗಿ ವಿಜಯ ಸಾಧಿಸಿದರು. ಯಮಕನಮರಡಿಯಲ್ಲಿ ಕಳೆದ ಸಲ ಕಡಿಮೆ ಮತಗಳ ಅಂತರದಿಂದ ಪರಭವಗೊಂಡಿದ್ದ ಮಾರುತಿ ಅಷ್ಟಗಿ ಬದಲು ಈ ಸಲ ಬಸವರಾಜ್ ಹುಂದ್ರಿಗೆ ಬಿಜೆಪಿ ಟಿಕೆಟ್ ನೀಡಿತು. ಮಾರುತಿ ಅಷ್ಟಗಿ ಜೆಡಿಎಸ್‍ನಿಂದ ಸ್ಪರ್ಧಿಸಿದಕ್ಕೆ ಕಾಂಗ್ರೆಸ್‍ನ ಸತೀಶ ಜಾರಕಿಹೊಳಿ ದೊಡ್ಡಮಟ್ಟದ ಗೆಲುವು ತಮ್ಮದಾಗಿಸಿಕೊಂಡರು. ಬೆಳಗಾವಿ ಗ್ರಾಮೀಣದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ, ಮರಾಠಾ ಸಮುದಾಯಕ್ಕೆ ಸೇರಿದ್ದ ಧನಂಜಯ್ ಜಾಧವ್ ಬದಲಿಗೆ ಈ ಸಲ ರಮೇಶ ಜಾರಕಿಹೊಳಿ ಆಪ್ತ ನಾಗೇಶ ಮನ್ನೋಳ್ಕರ್‍ಗೆ ಬಿಜೆಪಿ ಟಿಕೆಟ್ ನೀಡಿತು.
ಹೆಬ್ಬಾಳ್ಕರ್ ಮಣಿಸಲು ಮರಾಠಾ ಅಸ್ತ್ರ ಬಿಜೆಪಿ ಪ್ರಯೋಗಿಸಿತೇ ಹೊರತು ಒಳ್ಳೆಯ ಫೇಸ್ ಇರುವ ವ್ಯಕ್ತಿಗೆ ಟಿಕೆಟ್ ನೀಡದ ಪರಿಣಾಮ ಕಾಂಗ್ರೆಸ್‍ನ ಲಕ್ಷ್ಮಿ ಹೆಬ್ಬಾಳ್ಕರ್ ಇಲ್ಲಿ ಮತ್ತೊಮ್ಮೆ ಗೆಲುವು ದಾಖಲಿಸಿದರು. ಅಲ್ಲದೇ ಕಳೆದ ಚುನಾವಣೆಗಿಂತ 7 ಸಾವಿರ ಹೆಚ್ಚಿನ ಮತಗಳ ಅಂತರದಿಂದ ಹೆಬ್ಬಾಳ್ಕರ್ ಗೆದ್ದರು. ಅಲ್ಲದೇ ಕಾಗವಾಡ, ಕುಡಚಿ, ಕಿತ್ತೂರಲ್ಲಿ ಶಾಸಕರ ಪರ್ಫಾಮೆನ್ಸ್ ಸರಿಯಿರದಿದ್ದರೂ ಈ ಮೂವರಿಗೆ ಟಿಕೆಟ್ ನೀಡಿ ಬಿಜೆಪಿ ಕೈಸುಟ್ಟಿಕೊಂಡಿತು. ಅತಿದೊಡ್ಡ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಮಾಡಿದ ಯಡವಟ್ಟಿನ ಪರಿಣಾಮ 13 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈ ಸಲ 7 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಮಾಮನಿ ಕುಟುಂಬಕ್ಕೆ ಸವದತ್ತಿ ಕೈತಪ್ಪಿದ್ದೇಗೆ?
ಸವದತ್ತಿ ಕ್ಷೇತ್ರ ಮಾಮನಿ ಕುಟುಂಬದ ಹಿಡಿತದಲ್ಲಿದ್ದ ಕ್ಷೇತ್ರ. 2004ರಿಂದ 2023ರವರೆಗೆ ಮಾಮನಿ ಕುಟುಂಬದ ಸದಸ್ಯರೇ ಇಲ್ಲಿ ಶಾಸಕರಾಗಿದ್ದಾರೆ. ಅದಕ್ಕೂ ಮುನ್ನ ಎರಡು ಸಲ ಇಲ್ಲಿ ಮಾಮನಿ ಕುಟುಂಬದ ಸದಸ್ಯರೇ ಗೆದ್ದಿದ್ದಾರೆ. ಒಟ್ಟು 6 ಸಲ ಮಾಮನಿ ಕುಟುಂಬದ ಸದಸ್ಯರು ಇಲ್ಲಿ ಗೆದ್ದಿದ್ದಾರೆ. ಇದೆ ಕ್ಷೇತ್ರದಿಂದ ಗೆದ್ದಿದ್ದ ರಾಜಣ್ಣ ಮಾಮನಿ ಕೂಡ ಈ ಹಿಂದೆ ಡೆಪ್ಯುಟಿ ಸ್ಪೀಕರ್ ಆಗಿದ್ದರು. 2004ರಲ್ಲಿ ವಿಶ್ವನಾಥ ಮಾಮನಿ ಪಕ್ಷೇತರರಾಗಿ, 2008-2013-2018ರಲ್ಲಿ ಡೆಪ್ಯುಟಿ ಸ್ಪೀಕರ್ ಆಗಿದ್ದ ಆನಂದ ಮಾಮನಿ ಇಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. ಅನಾರೋಗ್ಯದ ಕಾರಣಕ್ಕೆ ಆನಂದ ಮಾಮನಿ ಕೆಲ ತಿಂಗಳ ಹಿಂದೆಯಷ್ಟೇ ವಿಧಿವಶರಾಗಿದ್ದರು. ಅನುಕಂಪದ ಲಾಭ ಆಗಬಹುದು ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಆನಂದ ಮಾಮನಿ ಪತ್ನಿ ರತ್ನಾ ಮಾಮನಿಗೆ ಬಿಜೆಪಿ ಟಿಕೆಟ್ ನೀಡಿತು.
Karnataka election 2023: ಸಿಎಂ ಕುರ್ಚಿಗೆ ಎಲ್ಲರೂ ಆಸೆ ಪಡ್ಲಿ, ನನ್ನೊಂದಿಗೆ 135 ಶಾಸಕರಿದ್ದಾರೆ!
ರತ್ನಾ ಮಾಮನಿ ಬದಲು ಆನಂದ ಮಾಮನಿ ಅವರ ಸಹೋದರ ಸಂಬಂಧಿ ವಿರೂಪಾಕ್ಷ ಮಮಾನಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಇಲ್ಲಿ ಗೆಲ್ಲುವ ಸಾಧ್ಯತೆ ಇತ್ತು. ಈ ಹಿಂದೆ ಆನಂದ ಮಾಮನಿ ಗೆಲುವಿನಲ್ಲಿ ವಿರೂಪಾಕ್ಷ ಮಾಮನಿ ಪಾತ್ರವೂ ಮುಖ್ಯವಾಗಿರುತ್ತಿತ್ತು. ಈ ಸಲದ ಚುನಾವಣೆಗೆ ವಿರೂಪಾಕ್ಷ ಮಾಮನಿ ಕೂಡ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೇ ಕ್ಷೇತ್ರದ ಜನರಿಗೂ ಚಿರಪರಿಚಿತರಾಗಿದ್ದರು.
ಕಾಂಗ್ರೆಸ್ ಜಯದ ತಂತ್ರಗಳ ರೂವಾರಿ ಸುನೀಲ್ ಕನುಗೋಲು!
ಬಿಇ ಪದವೀಧರರಾಗಿದ್ದರೂ ಕ್ಷೇತ್ರದಲ್ಲಿದ್ದುಕೊಂಡು ಉದ್ಯಮದ ಜೊತೆಗೆ ಕಷ್ಟದಲ್ಲಿದ್ದವರಿಗೆ ಸಹಾಯ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು. ವಿರೂಪಾಕ್ಷ ಮಾಮನಿಗೆ ಟಿಕೆಟ್ ಕೈತಪ್ಪಿದಕ್ಕೆ ಸವದತ್ತಿ ಪುರಸಭೆಯ ಬಹುತೇಕ ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರಿದರು. ಅಲ್ಲದೇ ಮಾಮನಿ ಕುಟುಂಬದ ಮತಬ್ಯಾಂಕ್ ಕೂಡ ಕಾಂಗ್ರೆಸ್‍ನತ್ತ ಮುಖ ಮಾಡಿತು. ರತ್ನಾ ಮಾಮನಿ ಜನರ ಜೊತೆಗೆ ಸಂಪರ್ಕದಲ್ಲಿರದ ಕಾರಣಕ್ಕೆ ಬಿಜೆಪಿ ಹಿನ್ನಡೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಬಿಜೆಪಿಯ ಯಡವಟ್ಟಿನ ಲಾಭದ ಜೊತೆಗೆ ಲಕ್ಷ್ಮಣ ಸವದಿ ಸೇರ್ಪಡೆಯ ಬಲದ ಕಾರಣಕ್ಕೆ ಕಾಂಗ್ರೆಸ್ ಇಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.