ದಕ್ಷಿಣ ಏಷ್ಯನ್ ಗೇಮ್ಸ್ ಕೂಟದಲ್ಲಿ ಮೂರನೇ ದಿನವೂ ಭಾರತ ಪದಕಗಳನ್ನು ಭರ್ಜರಿಯಾಗೆಯೇ ಬೇಟೆಯಾಡಿದೆ. ಇದರೊಂದಿಗೆ ಪದಕಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಕಾಠ್ಮಂಡು[ಡಿ.05]: 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಸ್ಪರ್ಧಿಗಳ ಪದಕದ ಬೇಟೆ ಮುಂದುವರೆದಿದೆ. 3ನೇ ದಿನವಾದ ಬುಧವಾರ, ಭಾರತ 15 ಚಿನ್ನದೊಂದಿಗೆ ಒಟ್ಟು 29 ಪದಕ ಗೆದ್ದುಕೊಂಡಿತು.
32 ಚಿನ್ನ, 26 ಬೆಳ್ಳಿ, 13 ಕಂಚಿನೊಂದಿಗೆ ಒಟ್ಟು 71 ಪದಕಗಳನ್ನು ಗೆದ್ದಿರುವ ಭಾರತ, ಆತಿಥೇಯ ನೇಪಾಳವನ್ನು ಹಿಂದಿಕ್ಕಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 29 ಚಿನ್ನ ಸಮೇತ ಒಟ್ಟು 67 ಪದಕ ಗೆದ್ದಿರುವ ನೇಪಾಳ 2ನೇ ಸ್ಥಾನದಲ್ಲಿದ್ದರೆ, 9 ಚಿನ್ನದೊಂದಿಗೆ ಒಟ್ಟು 41 ಪದಕ ಜಯಿಸಿರುವ ಪಾಕಿಸ್ತಾನ 3ನೇ ಸ್ಥಾನಕ್ಕೇರಿದೆ.
ದಕ್ಷಿಣ ಏಷ್ಯನ್ ಗೇಮ್ಸ್: 2ನೇ ದಿನ ಭಾರತಕ್ಕೆ 27 ಪದಕ!
ಬುಧವಾರ ಭಾರತ ಅಥ್ಲೆಟಿಕ್ಸ್ನಲ್ಲಿ 5 ಚಿನ್ನ ಸೇರಿ ಒಟ್ಟು 10 ಪದಕ ಗಳಿಸಿತು. ಟೇಬಲ್ ಟೆನಿಸ್‌ನಲ್ಲಿ 3 ಚಿನ್ನ, 3 ಬೆಳ್ಳಿ, ಟೇಕ್ವಾಂಡೋನಲ್ಲಿ 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು, ಟ್ರಯಥ್ಲಾನ್ನಲ್ಲಿ 2 ಚಿನ್ನ, 2 ಬೆಳ್ಳಿ, 1 ಕಂಚು ಹಾಗೂ ಖೋ-ಖೋನಲ್ಲಿ 2 ಚಿನ್ನ ಗಳಿಸಿತು. ಫೈನಲ್‌ನಲ್ಲಿ ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ 16-9 ಅಂಕಗಳಲ್ಲಿ ಗೆದ್ದರೆ, ಮಹಿಳಾ ತಂಡ ನೇಪಾಳ ವಿರುದ್ಧ 17-5ರಲ್ಲಿ ಗೆಲುವು ಸಾಧಿಸಿತು.
ISL ಫುಟ್ಬಾಲ್: ಅಗ್ರಸ್ಥಾನಕ್ಕೆ ಏರಿದ ಬೆಂಗಳೂರು ಎಫ್‌ಸಿ
ಅಥ್ಲೆಟಿಕ್ಸ್‌ನ ಮೊದಲ ದಿನದ ಸ್ಪರ್ಧೆಯಲ್ಲಿ 10 ಪದಕ ಜಯಿಸಿದ್ದ ಭಾರತ, 2ನೇ ದಿನವೂ ಭರ್ಜರಿ ಪದಕ ಬೇಟೆ ನಡೆಸಿತು. ಇದೇ ವೇಳೆ ಭಾರತದ ಬ್ಯಾಡ್ಮಿಂಟನ್ ಆಟಗಾರರು ಆಕರ್ಷಕ ಪ್ರದರ್ಶನ ತೋರುತ್ತಿದ್ದು, ಒಟ್ಟು 8 ಪದಕಗಳನ್ನು ಖಚಿತ ಪಡಿಸಿಕೊಂಡಿದ್ದಾರೆ. ಕಬಡ್ಡಿಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನ ಗೆಲ್ಲುವ ನೆಚ್ಚಿನ ತಂಡಗಳೆನಿಸಿಕೊಂಡಿವೆ. ಈಜು, ವೇಟ್‌ಲಿಫ್ಟಿಂಗ್, ಕುಸ್ತಿ, ವುಶು, ಫುಟ್ಬಾಲ್, ಬಾಕ್ಸಿಂಗ್, ಆರ್ಚರಿ ಕ್ರೀಡೆಗಳಲ್ಲೂ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದೆ.
ಕ್ರೀಡಾಕೂಟದಲ್ಲಿ ಒಟ್ಟು 7 ರಾಷ್ಟ್ರಗಳ 2715 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಭಾರತದಿಂದ 487 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದು, ಪದಕ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಕಾಪಾಡಿಕೊಳ್ಳುವ ವಿಶ್ವಾಸದಲ್ಲಿದೆ. ಕಳೆದ ಆವೃತ್ತಿಯಲ್ಲಿ (2016) ಭಾರತ 188 ಚಿನ್ನದೊಂದಿಗೆ ಬರೋಬ್ಬರಿ 308 ಪದಕಗಳನ್ನು ಗೆದ್ದು ಅಗ್ರಸ್ಥಾನ ಪಡೆದಿತ್ತು.