
ನವದೆಹಲಿ: 9 ಸಾವಿರ ಕೋಟಿ ರು. ಸಾಲ ಮಾಡಿರುವ ಉದ್ಯಮಿ ವಿಜಯ ಮಲ್ಯ ಪರಾರಿಗೆ ಸಹಕಾರ ನೀಡಿದ್ದು ಸಿಬಿಐ. ಶ್ರೀರಕ್ಷೆ ಇದ್ದಿದ್ದು ಪ್ರಧಾನಿ ನರೇಂದ್ರ ಮೋದಿ ಅವರದ್ದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಮಲ್ಯ ಅವರಿಗೆ ಅನುಕೂಲವಾಗಲಿ ಎಂದೇ ‘ಅವರನ್ನು ವಶಕ್ಕೆ ಪಡೆಯಿರಿ’ ಎಂದು ಇದ್ದ ನೋಟಿಸನ್ನು ‘ಮಲ್ಯರ ಇರುವಿಕೆ ಮಾಹಿತಿ ನೀಡಿ’ಎಂದು ಸಿಬಿಐ ಬದಲಿಸಿತು. ಮಲ್ಯರ ‘ಗ್ರೇಟ್ ಎಸ್ಕೇಪ್’ಗೆ ಸಹಾಯ ಮಾಡಿದ್ದು ಸಿಬಿಐ. ಪ್ರಧಾನಿ ಅಡಿಯಲ್ಲೇ ಸಿಬಿಐ ಕೆಲಸ ಮಾಡುತ್ತದೆ. ಹೀಗಾಗಿಪ್ರಧಾನಿ ಶ್ರೀರಕ್ಷೆ ಇಲ್ಲದೇ ಸಿಬಿಐ ನೋಟಿಸ್ ಬದಲಾಗದು’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಜೇಟ್ಲಿ ವಿರುದ್ಧ ವಾಗ್ದಾಳಿ: ಇದೇ ವೇಳೆ ಹಣಕಾಸು ಸಚಿವರ ವಿರುದ್ಧದ ವಾಗ್ದಾಳಿ ಮುಂದುವರೆಸಿರುವ ರಾಹುಲ್ ‘ಜೇಟ್ಲಿ ಅವರು ತಮಗೆ ಗೊತ್ತಿದ್ದೂಗೊತ್ತಿದ್ದೂ ಮಲ್ಯ ಅವರನ್ನು ವಿದೇಶಕ್ಕೆ ಪಾರು ಮಾಡಲು ಸಹಕರಿಸಿದ್ದಾರೆ. ಮಲ್ಯ ಹಾಗೂ ಜೇಟ್ಲಿ ನಡುವೆ ಮಾ.೧ರಂದು ೧೫-೨೦ ನಿಮಿಷ ಸುದೀರ್ಘ ಸಭೆಯು ಸಂಸತ್ ಭವನದಲ್ಲಿ ನಡೆದಿದ್ದನ್ನು ಕಾಂಗ್ರೆಸ್ ಸಂಸದ ಪಿ.ಎಲ್. ಪುನಿಯಾ ಖುದ್ದು ವೀಕ್ಷಿಸಿದ್ದಾರೆ. ಇದು ಜೇಟ್ಲಿ ಅವರು ಮಲ್ಯಗೆ ಅನುಕೂಲ ಮಾಡಿಕೊಟ್ಟ ಸಂಕೇತ. ಜೇಟ್ಲಿ ಅವರು ಮಾ.1ರ ಸಂಸತ್ ಭವನದ ಸಿಸಿಟೀವಿ ಬಹಿರಂಗಪಡಿಸಲಿ’ ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಆದರೆ ಇದಕ್ಕೆ ಪ್ರತಿಯಾಗಿ ಕೆಲವು ಆರೋಪ ಮಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ಮಲ್ಯಗೆ ಅನುಕೂಲ ಮಾಡಿಕೊಟ್ಟಿದ್ದು ಬಿಜೆಪಿ ಅಲ್ಲ. ಅದು ಗಾಂಧಿ ಕುಟುಂಬ. ಮಲ್ಯ ಹಾಗೂ ಗಾಂಧಿ ಕುಟುಂಬದ ನಡುವೆ ಕೆಲವು ‘ಕೊಡುಕೊಳ್ಳುವಿಕೆ ವ್ಯವಹಾರ’ಗಳು ಯುಪಿಎ ಅವಧಿಯಲ್ಲಿ ನಡೆದ ಬಗ್ಗೆ ನಮ್ಮ ಬಳಿ ಕಾಗದಪತ್ರಗಳಿವೆ. ಮಲ್ಯ ಅವರ ಕಂಪನಿ ದಿವಾಳಿಯಾಗಿದ್ದರೂ ಬ್ಯಾಂಕ್‌ಗಳಿಗೆ ಪತ್ರ ಬರೆದು ಅವರಿಗೆ ಏನೂ ತೊಂದರೆಯಾಗದಂತೆ ಯುಪಿಎ ಸರ್ಕಾರ ನೋಡಿಕೊಂಡಿತು’ಎಂದು ಆರೋಪಿಸಿದ್ದಾರೆ.