
ನವದೆಹಲಿ: ಸಲಿಂಗಕಾಮವನ್ನು ನಿಷೇಧಿಸುವ ಸಂವಿಧಾನದ 377 ನೇ ವಿಧಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ಸರ್ವೋನ್ನತ ನ್ಯಾಯಾಲಯದ ಪಂಚ ಸದಸ್ಯ ಪೀಠ, ತೀರ್ಪನ್ನು ಮಂಗಳವಾರ ಕಾಯ್ದಿರಿಸಿದ್ದು, ಪರಿಚ್ಛೇದವನ್ನು ರದ್ದುಮಾಡುವ ಸುಳಿವು ನೀಡಿದೆ.
4 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ, ನ್ಯಾ| ರೋಹಿನ್ಟನ್ ನಾರಿಮನ್, ನ್ಯಾ| ಎ.ಎಂ. ಖಾನ್ವಿಲ್ಕರ್, ನ್ಯಾ| ಡಿ.ವೈ. ಚಂದ್ರಚೂಡ ಹಾಗೂ ನ್ಯಾ| ಇಂದೂ ಮಲ್ಹೋತ್ರಾ ಅವರಿದ್ಧ ಪೀಠ, ತೀರ್ಪನ್ನು ಕಾಯ್ದಿರಿಸಿತು. ನ್ಯಾ| ಮಿಶ್ರಾ ಅ. ೨ಕ್ಕೆ ನಿವೃತ್ತಿ ಹೊಂದಲಿದ್ದು, ಅಷ್ಟರೊಳಗೆ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.
ಇದಕ್ಕೂ ಮುನ್ನ ವಿಚಾರಣೆ ಸಂದರ್ಭದಲ್ಲಿ ‘ಮೂಲಭೂತ ಹಕ್ಕಿಗೆ ಚ್ಯುತಿ ಬರುತ್ತಿದೆ ಎಂದು ಮನವರಿಕೆಯಾದರೆ ನಾವು ಒಂದು ಕಾನೂನು, ಜಾರಿಗೆ ಬರಲು, ತಿದ್ದುಪಡಿ ಮಾಡಲು ಅಥವಾ ರದ್ದು ಮಾಡಲು ಬಹುಮತದ ಸರ್ಕಾರಕ್ಕೆ ಕಾಯುವುದಿಲ್ಲ’ ಎನ್ನುವ ಮೂಲಕ ೩೭೭ನೇ ವಿಧಿಯನ್ನು ರದ್ದು ಮಾಡುವ ಸುಳಿವು ನೀಡಿತು.