ನಿರ್ಮಾಣವಾಗಲಿದೆ ವಿಶ್ವದ ಅತಿ ಎತ್ತರದ ಶಿವನ ಮೂರ್ತಿ

By Web DeskFirst Published Nov 21, 2018, 11:14 AM IST
Highlights

ರಾಜಸ್ಥಾನದಲ್ಲಿ ಜಗತ್ತಿನ ಅತ್ಯಂತ ಎತ್ತರದ ಶಿವನ ಮೂರ್ತಿಯೊಂದರ ನಿರ್ಮಾಣ ಕಾಮಗಾರಿ ಮುಕ್ತಾಯವಾಗುವ ಹಂತ ತಲುಪಿದೆ. ಪಟೇಲರ ಪ್ರತಿಮೆ 597 ಅಡಿ ಎತ್ತರವಿದ್ದರೆ, ರಾಜಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಪರಶಿವನ ಪ್ರತಿಮೆ 351 ಅಡಿ ಇದೆ.

ಜೈಪುರ:  ದೇಶದ ಮೊದಲ ಉಪಪ್ರಧಾನಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರಿಗೆ ಗೌರವ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಗುಜರಾತಿನಲ್ಲಿ ಲೋಕಾರ್ಪಣೆಗೊಳಿಸಿದ್ದಾಯ್ತು. 

ಇದೀಗ ರಾಜಸ್ಥಾನದಲ್ಲಿ ಜಗತ್ತಿನ ಅತ್ಯಂತ ಎತ್ತರದ ಶಿವನ ಮೂರ್ತಿಯೊಂದರ ನಿರ್ಮಾಣ ಕಾಮಗಾರಿ ಮುಕ್ತಾಯವಾಗುವ ಹಂತ ತಲುಪಿದೆ. ಪಟೇಲರ ಪ್ರತಿಮೆ 597 ಅಡಿ ಎತ್ತರವಿದ್ದರೆ, ರಾಜಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಪರಶಿವನ ಪ್ರತಿಮೆ 351 ಅಡಿ ಇದೆ.

ಈಗಾಗಲೇ ಶೇ.85ರಷ್ಟುಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಮಾಚ್‌ರ್‍ ವೇಳೆಗೆ ಲೋಕಾರ್ಪಣೆ ಮಾಡಲು ಭರದ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನೆಯಾದ ಬಳಿಕ ಇದು ವಿಶ್ವದ ನಾಲ್ಕನೇ ಅತ್ಯಂತ ಎತ್ತರದ ಪ್ರತಿಮೆ ಎಂಬ ದಾಖಲೆಗೆ ಭಾಜನವಾಗಲಿದೆ.

ರಾಜಸ್ಥಾನದ ಉದಯ್‌ಪುರದಿಂದ 50 ಕಿ.ಮೀ. ದೂರದಲ್ಲಿರುವ ನಾಥದ್ವಾರದಲ್ಲಿನ ಗಣೇಶ್‌ ಟೇಕ್ರಿ ಎಂಬಲ್ಲಿ ಈ ಪ್ರತಿಮೆ ನಿರ್ಮಾಣವಾಗುತ್ತಿದೆ. 2012ರ ಆಗಸ್ಟ್‌ನಲ್ಲಿ ಅಂದಿನ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಪ್ರತಿಮೆ 20 ಕಿ.ಮೀ. ದೂರದವರೆಗೂ ಗೋಚರವಾಗುವುದು ವಿಶೇಷ. ಪ್ರತಿಮೆ ಜತೆಗೆ ರಂಗಮಂದಿರ ಹಾಗೂ ಉದ್ಯಾನವನ್ನೂ ನಿರ್ಮಿಸಲಾಗುತ್ತಿದೆ. ಇದು ಪ್ರವಾಸಿಗರ ಆಕರ್ಷಣೆಯ ತಾಣವಾಗುವುದು ನಿಶ್ಚಿತವಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಈ ಪ್ರತಿಮೆ ನಿರ್ಮಾಣಕ್ಕಾಗಿ 750 ಕಾರ್ಮಿಕರು ದುಡಿಯುತ್ತಿದ್ದಾರೆ. ಕಾಂಕ್ರಿಟ್‌ ಬಳಸಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಯೋಜನೆಯ ಉಸ್ತುವಾರಿ ಹೊತ್ತಿರುವ ರಾಜೇಶ್‌ ಮೆಹ್ತಾ ಎಂಬುವರು ತಿಳಿಸಿದ್ದಾರೆ. ಮೀರಜ್‌ ಗ್ರೂಪ್‌ ಎಂಬ ಸಂಸ್ಥೆ ಈ ಪ್ರತಿಮೆಯನ್ನು ನಿರ್ಮಿಸುತ್ತಿದೆ.

click me!