ಯುಪಿಎ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ಯಾರು..?

Published : Oct 06, 2018, 11:31 AM IST
ಯುಪಿಎ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ಯಾರು..?

ಸಾರಾಂಶ

ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಒಂದು ವೇಳೆ ಮಿತ್ರ ಪಕ್ಷಗಳು ಬಯಸಿದರೆ ತಾವು ಪ್ರಧಾನಿ ಅಭ್ಯರ್ಥಿಯಾಗುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. 

ನವದೆಹಲಿ :  ‘ಮಿತ್ರಪಕ್ಷಗಳು ಬಯಸಿದರೆ ಪ್ರಧಾನಮಂತ್ರಿ ಆಗುವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ದೇಶದ ಉನ್ನತ ಹುದ್ದೆಯ ಮೇಲೆ ಕಣ್ಣಟ್ಟಿರುವ ಬಗ್ಗೆ ಪುನರುಚ್ಚಾರ ಮಾಡಿದರು. ಆದರೆ, ‘ನನ್ನ ಮೊದಲ ಆದ್ಯತೆ ಎಂದರೆ ಬಿಜೆಪಿಯನ್ನು ಸೋಲಿಸಲು ಇತರ ಎಲ್ಲ ಪಕ್ಷಗಳು ಒಗ್ಗೂಡುವುದು’ ಎಂದು ಅವರು ಸ್ಪಷ್ಟಪಡಿಸಿದರು.

‘ಹಿಂದುಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗ’ದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನಾವು ಈಗಾಗಲೇ ಮಿತ್ರಪಕ್ಷಗಳೊಂದಿಗೆ ಮಾತನಾಡಿದ್ದೇವೆ. 2 ಸ್ತರದ ಪ್ರಕ್ರಿಯೆಯ ಬಗ್ಗೆ ನಾವು ತೀರ್ಮಾನಕ್ಕೆ ಬಂದಿದ್ದೇವೆ. ಮೊದಲನೆಯ ಪ್ರಕ್ರಿಯೆಯಲ್ಲಿ ಎಲ್ಲ ಮಿತ್ರಪಕ್ಷಗಳು ಬಿಜೆಪಿಯನ್ನು ಸೋಲಿಸಲು ಒಗ್ಗೂಡುವ ಬಗ್ಗೆ ನಿರ್ಧರಿಸಿದ್ದೇವೆ. ಚುನಾವಣೆ ಬಳಿಕ ಉದ್ಭವಿಸುವ ಪರಿಸ್ಥಿತಿಯ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದು ಎರಡನೇ ಪ್ರಕ್ರಿಯೆಯಾಗಲಿದೆ’ ಎಂದು ಹೇಳಿದರು.

ಈ ನಡುವೆ, ಪ್ರಧಾನಿಯಾಗುವ ಅವಕಾಶಗಳ ಬಗ್ಗೆ ರಾಹುಲ್‌ ಅವರನ್ನು ಕೇಳಿದಾಗ, ‘ಅವರು (ಮಿತ್ರಪಕ್ಷಗಳು) ಬಯಸಿದರೆ ಖಂಡಿತ ಆಗುವೆ’ ಎಂದು ಉತ್ತರಿಸಿದರು. ಇನ್ನು ‘ಮಂದಿರ ಸುತ್ತಾಟ’ದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್‌, ‘ನಾನು ಮಂದಿರ, ಮಸೀದಿ, ಗುರುದ್ವಾರಗಳಿಗೆ ಮೊದಲಿನಿಂದಲೂ ಹೋಗುವೆ. ಆದರೆ ಈಗ ಈ ಬಗ್ಗೆ ಸುದ್ದಿ ಮಾಡಲಾಗುತ್ತಿದೆಯಷ್ಟೇ. ಬಿಜೆಪಿಗೆ ನಾನು ದೇವಾಲಯಕ್ಕೆ ಹೋಗೋದು ಇಷ್ಟವಿಲ್ಲ. ಕೇವಲ ಬಿಜೆಪಿಯವರು ಮಾತ್ರ ದೇವಾಲಯಕ್ಕೆ ಹೋಗಬೇಕು ಎಂದು ಆ ಪಕ್ಷ ಇಚ್ಛಿಸುತ್ತದೆ’ ಎಂದು ಟೀಕಿಸಿದರು.

‘ನನ್ನ ಚರ್ಮ ಈಗ ದಪ್ಪವಾಗಿದೆ. ಟೀಕೆಗಳಿಗೆ ನಾನು ಅಂಜಲ್ಲ. ಆದರೆ ಟೀಕೆಗಳನ್ನು ನಾನು ಕೇಳಿಸಿಕೊಂಡು ಅರ್ಥೈಸಿಕೊಳ್ಳುತ್ತೇನೆ’ ಎಂದರು.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!