ಉಳ್ಳಾಗಡ್ಡಿ ಮಹಾತ್ಮೆ; ಈರುಳ್ಳಿಗೆ ಸರ್ಕಾರವನ್ನೇ ಬೀಳಿಸುವ ತಾಕತ್ತಿದೆ!

By Kannadaprabha NewsFirst Published Dec 8, 2019, 12:47 PM IST
Highlights

ಭಾರತೀಯ ಆಹಾರಗಳಲ್ಲಿ ಅವಿಭಾಜ್ಯವಾಗಿರುವ ಈರುಳ್ಳಿ ಬೆಲೆ ಶತಕ ದಾಟಿ ದ್ವಿಶಕದತ್ತ ಮುನ್ನುಗ್ಗುತ್ತಿದೆ. ಇತಿಹಾಸದಲ್ಲೇ ಅತೀ ಹೆಚ್ಚು ಬೆಲೆ ದಾಖಲಿಸುವ ಮೂಲಕ ಈರುಳ್ಳಿ ಜನ ಸಾಮಾನ್ಯನ ಕಣ್ಣಿನಲ್ಲಿ ಕಣ್ಣೀರು ಸುರಿಸುವಂತೆ ಮಾಡಿದೆ. ಅಷ್ಟಕ್ಕೂ ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಇನ್ನೆಷ್ಟುದಿನ ಗ್ರಾಹಕರು ಈರುಳ್ಳಿಗೆ ಬಂಗಾರದ ಬೆಲೆ ನೀಡಬೇಕು. ಈರುಳ್ಳಿ ಬೆಲೆಯಲ್ಲಿ ಪದೇ ಪದೇ ವ್ಯತ್ಯಯವಾಗಲು ಕಾರಣ ಏನು? ಉಳ್ಳಾಗಡ್ಡಿಗೆ ಇರುವ ಐತಿಹಾಸಿಕ, ರಾಜಕೀಯ ನಂಟೇನು? ‘ಬಂಗಾರದ ಉಳ್ಳಿ’ ಬಗೆಗಿನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿವೆ. 

ಭಾರತೀಯ ಆಹಾರಗಳಲ್ಲಿ ಅವಿಭಾಜ್ಯವಾಗಿರುವ ಈರುಳ್ಳಿ ಬೆಲೆ ಶತಕ ದಾಟಿ ದ್ವಿಶಕದತ್ತ ಮುನ್ನುಗ್ಗುತ್ತಿದೆ. ಇತಿಹಾಸದಲ್ಲೇ ಅತೀ ಹೆಚ್ಚು ಬೆಲೆ ದಾಖಲಿಸುವ ಮೂಲಕ ಈರುಳ್ಳಿ ಜನ ಸಾಮಾನ್ಯನ ಕಣ್ಣಿನಲ್ಲಿ ಕಣ್ಣೀರು ಸುರಿಸುವಂತೆ ಮಾಡಿದೆ. ಅಷ್ಟಕ್ಕೂ ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಇನ್ನೆಷ್ಟುದಿನ ಗ್ರಾಹಕರು ಈರುಳ್ಳಿಗೆ ಬಂಗಾರದ ಬೆಲೆ ನೀಡಬೇಕು. ಈರುಳ್ಳಿ ಬೆಲೆಯಲ್ಲಿ ಪದೇ ಪದೇ ವ್ಯತ್ಯಯವಾಗಲು ಕಾರಣ ಏನು? ಉಳ್ಳಾಗಡ್ಡಿಗೆ ಇರುವ ಐತಿಹಾಸಿಕ, ರಾಜಕೀಯ ನಂಟೇನು? ‘ಬಂಗಾರದ ಉಳ್ಳಿ’ ಬಗೆಗಿನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿವೆ.

ಈರುಳ್ಳಿ ಉತ್ಪಾದನೆಯಲ್ಲಿ ಭಾರತ ವಿಶ್ವಕ್ಕೇ ನಂ.2

ಚೀನಾವನ್ನು ಬಿಟ್ಟರೆ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮತ್ತು ರಫ್ತು ಮಾಡುವ ದೇಶ ಭಾರತ. ಅದರಲ್ಲೂ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಳುವರಿ ಕಡಿಮೆ.

7 ಲಕ್ಷದ ಈರುಳ್ಳಿ ಕಳ್ಳತನ: ಆನಿಯನ್‌ಗಾಗಿ ಆ್ಯಕ್ಸಿಡೆಂಟ್ ಹೈಡ್ರಾಮ..!

ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶ ಹೆಚ್ಚು, ಇಳುವರಿ ಕಡಿಮೆ. ಆದರೆ ಅಮೆರಿಕ, ದಕ್ಷಿಣ ಕೊರಿಯಾ, ಪಾಕಿಸ್ತಾನಗಳಲ್ಲಿ ಈರುಳ್ಳಿ ಬೆಳೆಯುವ ಪ್ರದೇಶ ಕಡಿಮೆ ಆದರೆ ಉತ್ಪಾದನೆ ಹೆಚ್ಚು. 2018-19ರ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 12 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ 2.3 ಕೋಟಿ ಟನ್‌ ಈರುಳ್ಳಿ ಉತ್ಪಾದಿಸಲಾಗುತ್ತದೆ. ಒಟ್ಟು 1.6ಕೋಟಿ ಟನ್‌ ಬಳಸಲಾಗುತ್ತದೆ.

ಬೆಲೆ ಏರಿಕೆಗೆ ಕಾರಣ ಏನು?

ದೇಶದಲ್ಲೇ ಅತೀ ಹೆಚ್ಚು ನೀರುಳ್ಳಿ ಬೆಳೆಯುವ ದಕ್ಷಿಣ ಭಾರತ ಹಾಗೂ ಮಧ್ಯ ಭಾರತದ ರಾಜ್ಯಗಳಲ್ಲಿ ಅತಿವೃಷ್ಟಿ, ಪ್ರವಾಹ ಉಂಟಾಗಿ ಸಾಕಷ್ಟುಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನು ಕೆಲವೆಡೆ ಬರದಿಂದಾಗಿ ಬೆಳೆಯೇ ಬೆಳೆದಿಲ್ಲ. ಕಳೆದ 5 ವರ್ಷಕ್ಕೆ ಹೋಲಿಸಿದರೆ ಈ ಬಾರಿ 40% ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ.

ಅಲ್ಲದೇ ಅತಿವೃಷ್ಠಿಯಿಂದಾಗಿ ಬೆಳೆದು ಕಟಾವು ಮಾಡಲಾಗಿದ್ದ ಬೆಳೆಗಳ ಸಾಗಣಿಕೆಯಲ್ಲಿ ವ್ಯತ್ಯಯ, ನೀರುಳ್ಳಿಯ ಅಭಾವವಿದ್ದರೂ ಮಧ್ಯವರ್ತಿಗಳು ಸಂಗ್ರಹಿಸಿಟ್ಟುಕೊಂಡಿದ್ದು ಬೆಲೆ ಏರಲು ಕಾರಣವಾಗಿದೆ. ಯಾವುದೇ ತರಕಾರಿ ಅಥವಾ ಸಾಮಾನುಗಳ ಬೆಲೆ ಪ್ರತೀ ಬಾರಿಯೂ ಹೆಚ್ಚಳವಾಗುವುದಿಲ್ಲ. ಕೆಲ ವಸ್ತುಗಳ ಬೆಲೆ ಹೆಚ್ಚಳವಾದರೂ ದಿನನಿತ್ಯ ಅವುಗಳನ್ನು ಬಳಸದಿರುವುದರಿಂದ ಬೆಲೆ ಹೆಚ್ಚಳದ ಬಿಸಿ ಅಷ್ಟಾಗಿ ತಟ್ಟುವುದಿಲ್ಲ. ಆದರೆ ಭಾರತೀಯ ಆಹಾರದಲ್ಲಿ ಈರುಳ್ಳಿ ಬೇಕೇ ಬೇಕು. ಹಾಗಾಗಿ ಈರುಳ್ಳಿ ಬೆಲೆ ಏರಿಕೆಯಾದಾಗ ಇದರ ಬಿಸಿ ಜನ ಸಾಮಾನ್ಯನಿಗೆ ಬೇಗ ತಟ್ಟುತ್ತದೆ.

ಈರುಳ್ಳಿ ಬೆಲೆ ಇಳಿಕೆಗೆ ಸರ್ಕಾರದ ಕ್ರಮ ಏನು?

ಈರುಳ್ಳಿ ಶತಕ ದಾಟಿ ದ್ವಿಶಕದತ್ತ ಹೊರಳುತ್ತಿರುವುದನ್ನು ನಿಯಂತ್ರಿಸಲು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉನ್ನತ ಮಟ್ಟದ ಸಭೆ ನಡೆಸಿ ಬೆಲೆ ಇಳಿಕೆಗೆ ಸೂಚನೆ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಎಂಎಂಟಿಸಿಗೆ ಈಗಾಗಲೇ 21000 ಟನ್‌ಗಳನ್ನು ಈರುಳ್ಳಿಯನ್ನು ಈಜಿಪ್ಟ್‌ ಮತ್ತು ಟರ್ಕಿ ದೇಶಗಳಿಂದ ಆಮದು ಮಾಡಿಕೊಳ್ಳಲು ಸೂಚಿಸಲಾಗಿದೆ. ಆಮದು ಪ್ರಕ್ರಿಯೆ ತ್ವರಿತಗೊಳಿಸಲು ಕೆಲವೊಂದು ನಿಯಮಗಳನ್ನು ಸಡಿಲ ಮಾಡಲಾಗಿದೆ.

ಈರುಳ್ಳಿ ರಫ್ತನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಈರುಳ್ಳಿ ದರ ದೇಶಾದ್ಯಂತ ಕೇಜಿಗೆ 150 ರು. ಗಡಿ ದಾಟಿರುವ ಕಾರಣ, ದರ ನಿಯಂತ್ರಣಕ್ಕಾಗಿ ಈರುಳ್ಳಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದೆ. ಮಂಗಳವಾರ ಈ ಸಂಬಂಧ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ಸಗಟು ಮಾರಾಟಗಾರರು 25 ಮೆಟ್ರಿಕ್‌ ಟನ್‌ ಹಾಗೂ ಚಿಲ್ಲರೆ ಮಾರಾಟಗಾರರು 5 ಮೆಟ್ರಿಕ್‌ ಟನ್‌ ಮಾತ್ರ ಮಾತ್ರ ದಾಸ್ತಾನು ಮಾಡಿಟ್ಟುಕೊಳ್ಳಬಹುದು. ಆದರೆ ವಿದೇಶದಿಂದ ಆಮದು ಮಾಡಿಕೊಳ್ಳುವ ವ್ಯಾಪಾರಿಗಳಿಗೆ ಯಾವುದೇ ದಾಸ್ತಾನು ಮಿತಿ ಇಲ್ಲ.

ಗಗನಮುಖಿಯಾದ ಈರುಳ್ಳಿ ದರ: ಬೆಳಗಾವಿಯಲ್ಲಿ ಏರಿಕೆ, ಗದಗನಲ್ಲಿ ಇಳಿಕೆ

ಮಾರ್ಚ್ವರೆಗೆ ಕಣ್ಣೀರೇ..!

ಸದ್ಯ ಈರುಳ್ಳಿ ಬೆಳೆಗಳು ಶೈಷ್ಯಾವಸ್ಥೆಯಲ್ಲೇ ಇದ್ದು, ಅವು ಬೆಳೆದು ಕಟಾವಿಗೆ ಬರಲು ಇನ್ನು ಎರಡರಿಂದ ಮೂರು ತಿಂಗಳು ಬೇಕು. ಹಾಗಾಗಿ ಮಾಚ್‌ರ್‍ ವರೆಗೆ ಈರುಳ್ಳಿ ಬೆಲೆ ಇಳಿಕೆಯಾಗುವುದು ಡೌಟು.

ಬೆಲೆ ಏರಿದರೂ ರೈತರಿಗಿಲ್ಲ ಲಾಭ!

ಈರುಳ್ಳಿ ಬೆಲೆ ಏರಿಕೆಯಾದರೂ ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಕಟಾವು ಮಾಡಿದ ಬೆಳೆಗಳನ್ನು ರೈತರು ಈಗಾಗಲೇ ಮಾರಿದ್ದು, ರೈತರ ಬಳಿ ಯಾವುದೇ ದಾಸ್ತಾನು ಇಲ್ಲ. ಹೊಸ ಬೆಳೆ ಬೆಳೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಅವು ಮಾರುಕಟ್ಟೆಗೆ ಬರುವ ವೇಳೆ ಈರುಳ್ಳಿ ಬೆಳೆ ಇಳಿಕೆಯಾಗಿರುತ್ತದೆ. ಹಾಗಾಗಿ ಬೆಲೆ ಎಷ್ಟೇ ಏರಿಕೆಯಾದರೂ ರೈತರಿಗೆ ಏನು ಪ್ರಯೋಜನ ಆಗದು.

ಆರ್‌ಬಿಐಗೂ ಈರುಳ್ಳಿ ಬಿಸಿ

ಜಿಡಿಪಿ ರು. ವರ್ಷದ ಕನಿಷ್ಠಕ್ಕೆ ಕುಸಿದಿರುವುದರಿಂದ ಬ್ಯಾಂಕುಗಳ ಬಡ್ಡಿ ದರವನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಕಡಿತಗೊಳಿಸುವ ನಿರೀಕ್ಷೆ ಇತ್ತು. ಈರುಳ್ಳಿ, ಟೊಮೆಟೋದಂತಹ ತರಕಾರಿಗಳ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹಣದುಬ್ಬರ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕಾಭಿವೃದ್ಧಿಗಿಂತ ಹಣದುಬ್ಬರಕ್ಕೇ ಆದ್ಯತೆ ನೀಡಿರುವ ಆರ್‌ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸದೇ ಇರಲು ನಿರ್ಧರಿಸಿದೆ.

ವರ್ಷಕ್ಕೆ ಮೂರು ಬೆಳೆ

ಭತ್ತದಂತೆ ಈರುಳ್ಳಿ ಕೂಡ ವರ್ಷಕ್ಕೆ ಮೂರು ಬಾರಿ ಬೆಳೆಯಬಹುದು. ಅತೀ ಹೆಚ್ಚು ಈರುಳ್ಳಿ ಬೆಳೆಯುವ ದಕ್ಷಿಣ ಭಾರತ, ಮಹಾರಾಷ್ಟ್ರ ಹಾಗೂ ಗುಜರಾತ್‌ನ ಕೆಲ ಭಾಗಗಳಲ್ಲಿ ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯಲಾಗುತ್ತದೆ. ಮುಂಗಾರು ಪೂರ್ವ, ಖಾರಿಫ್‌ (ಮುಂಗಾರು) ಹಾಗೂ ರಬಿ (ಹಿಂಗಾರು) ಹೀಗೆ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ರಾಜಸ್ಥಾನ, ಹರ್ಯಾಣ, ಪಂಜಾಬ್‌, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಉತ್ತರ ಪ್ರದೇಶದಲ್ಲಿ ಖಾರಿಫ್‌ ಹಾಗೂ ರಬಿ ಬೆಳೆಗಳನ್ನು ಮಾತ್ರ ಬೆಳೆಯಲಾಗುತ್ತದೆ. ಭಾರತದಲ್ಲಿ ಮುಂಗಾರು ದಕ್ಷಿಣದಿಂದ ಉತ್ತರಕ್ಕೆ ಚಲಿಸುವುದರಿಂದ ಕಟಾವಿಗೆ ಬರುವ ತಿಂಗಳಲ್ಲಿ ಕೂಡ ವ್ಯತ್ಯಾಸ ಉಂಟಾಗುತ್ತದೆ.

ಚುನಾವಣಾ ಪ್ರಚಾರದ ವಿಷಯವಾಗಿ ಸರ್ಕಾರವನ್ನೇ ಬೀಳಿಸಿದ್ದ ಉಳ್ಳಾಗಡ್ಡಿ!

ಈರುಳ್ಳಿ ಬೆಲೆ ಏರಿಕೆ ಒಂದು ಸಾಮಾನ್ಯ ಬಿಕ್ಕಟ್ಟು ಎಂದು ಪರಿಗಣಿಸುವಂತಿಲ್ಲ. ಏಕೆಂದರೆ ಈರುಳ್ಳಿ ಬೆಲೆ ಏರಿಕೆಯ ಬಿಸಿಯಿಂದ ಸರ್ಕಾರವೇ ಬಿದ್ದು ಹೋದ ಉದಾಹರಣೆ ಇದೆ. ರಾಜಕಾರಣಿಗಳಿಗೆ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದೂ ಇದೆ. 1980ರ ಸಾರ್ವತ್ರಿಕ ಚುನಾವಣೆ ವೇಳೆ ಈರುಳ್ಳಿ ಬೆಲೆ ಏರಿಕೆ ಚುನಾವಣಾ ವಿಷಯವಾಗಿತ್ತು. ಇಂದಿರಾ ಗಾಂಧಿ ಈರುಳ್ಳಿ ಬೆಲೆ ಏರಿಕೆಯ ಲಾಭ ಪಡೆದು ಮತ್ತೆ ಅಧಿಕಾರಕ್ಕೆ ಬಂದಿದ್ದರು. ಹೌದು ತುರ್ತು ಪರಿಸ್ಥಿತಿ ಹೇರಿದ ಅಪಖ್ಯಾತಿ ಅನುಭವಿಸುತ್ತಿದ್ದ ಇಂದಿರಾ ಗಾಂಧಿಯವರು ಅಧಿಕಾರದಿಂದ ಪದಚ್ಯುತರಾಗಿ ರಾಜಕೀಯ ಹಿನ್ನಡೆ ಅನುಭವಿಸುತ್ತಿದ್ದರು.

ಆಗ ಜನತಾ ಪಕ್ಷ ಅಧಿಕಾರಲ್ಲಿತ್ತು. ಚೌದರಿ ಚರಣ್‌ ಸಿಂಗ್‌ ಪ್ರಧಾನಿಯಾಗಿದ್ದರು. ಈ ವೇಳೆ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಇಂದಿರಾ ಗಾಂಧಿ ಈರುಳ್ಳಿ ಬೆಲೆ ನಿಯಂತ್ರಿಸುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂದು ಪ್ರಚಾರ ಕೈಗೊಂಡಿದ್ದರು. 1980ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮತ್ತೆ ಜಯಗಳಿಸಿ ಪ್ರಧಾನಿಯಾದರು. 1998ರಲ್ಲಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಉರುಳಲೂ ಮುಖ್ಯ ಕಾರಣವಾಗಿದ್ದೇ ಈರುಳ್ಳಿ ಬೆಲೆ ಏರಿಕೆ.

ಆಗ ಅಲ್ಲಿ ಸುಷ್ಮಾ ಸ್ವರಾಜ್‌ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಲ್ಲಿತ್ತು. ಆಗಲೂ ಈರುಳ್ಳಿ ಬೆಲೆ ಸಿಕ್ಕಾಪಟ್ಟೆಏರಿಕೆಯಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಶೀಲಾ ದೀಕ್ಷಿತ್‌ ನೇತೃತ್ವದ ಕಾಂಗ್ರೆಸ್‌ ಪಕ್ಷ ಚುನಾವಣಾ ವಿಷಯವಾಗಿ ಬಳಸಿಕೊಂಡು ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಯಿತು.

ಅತೀ ಪುರಾತನ ತರಕಾರಿ

ಈರುಳ್ಳಿ ಅತೀ ಪುರಾತಣ ತರಕಾರಿಗಳಲ್ಲಿ ಒಂದು. ವಿಜ್ಞಾನಿಗಳ ಪ್ರಕಾರ ಕಿ.ಪೂ 3500ದಲ್ಲೇ ಮಧ್ಯ ಏಷ್ಯಾದಲ್ಲಿ ಈರುಳ್ಳಿಗಳನ್ನು ಬೆಲೆಯಲಾಗುತ್ತಿತ್ತು. ಪುರಾತನ ನಾಗರಿಕತೆಗಳಲ್ಲಿ ಈರುಳ್ಳಿ ಮುಖ್ಯ ಬೆಳೆಯಾಗಿತ್ತು ಹಾಗೂ ಆಹಾರದಲ್ಲಿ ಬಳಸುವ ಮುಖ್ಯ ವಸ್ತುವಾಗಿತ್ತು ಎನ್ನುವುದು ಇತಿಹಾಸ ಪುಟಗಳ ಅಂಬೋಣ. ಈಜಿಪ್ಟ್‌, ಬ್ಯಾಬಿಲೋನ್‌, ಹಿಂದೂ ಹಾಗೂ ಪುರಾತನ ಚೀನೀ ನಾಗರಿಕತೆಗಳ ಕಾಲದಲ್ಲೂ ಈರುಳ್ಳಿ ಪ್ರಮುಖ ಬೆಳೆಯಾಗಿತ್ತು. ಮತ್ತು ಆಹಾರದ ಭಾಗವಾಗಿತ್ತು.

ಚಿರಂಜೀವಿಯ ಸಂಕೇತ ಈರುಳ್ಳಿ

ನೀರಿಗೆ ಕೊಳೆತು ಹೋಗುವ ಬಿಸಿಲಿಗೆ ಬಾಡುವ ಈರುಳ್ಳಿ ಚಿರಂಜೀವಿಯ ಸಂಕೇತ. ಹೌದು, ಈಜಿಪ್ಟಿಯನ್‌ ನಾಗರಿಕತೆಯಲ್ಲಿ ಈರುಳ್ಳಿಯನ್ನು ಜಿರಂಜೀವಿಯ ಸಂಕೇತ ಎಂದು ಭಾವಿಸಲಾಗಿತ್ತು. ಅಲ್ಲದೇ ಯಾರಾದರೂ ಸತ್ತರೆ ಅವರ ಅಂತ್ಯ ಕ್ರೀಯೆಯಲ್ಲೂ ಈರುಳ್ಳಿಯನ್ನು ಬಳಸಲಾಗುತ್ತಿತ್ತು. ಸಾಮಾನ್ಯ ಹಾಗೂ ಪುಷ್ಕಳ ಭೋಜನದಲ್ಲೂ ಈರುಳ್ಳಿ ಬಳಸುತ್ತಿದ್ದ ಈಜಿಪ್ಟನ್ನರು, ಸತ್ತ ಬಳಿಕ ಶವವನ್ನು ಕೆಡದಂತೆ ಮಾಡುವ ಮಮ್ಮಿಫಿಕೇಶನ್‌ ಪ್ರಕ್ರೀಯೆಯಲ್ಲೂ ಈರುಳ್ಳಿಗಳನ್ನು ಬಳಸಲಾಗುತ್ತಿತ್ತು.

ಅಲ್ಲದೇ ವಿಶ್ವದ ಅಚ್ಚರಿಗಳಲ್ಲಿ ಒಂದಾದ ಈಜಿಪ್ಟ್‌ನ ಪಿರಮಿಡ್‌ಗಳಲ್ಲೂ ಈರುಳ್ಳಿಯ ಚಿತ್ರಗಳಿವೆ. ಹಾಗೆಯೇ ಅಗ್ನಿವೇಶನ ಚರಕ ಸಂಹಿತೆಯಲ್ಲೂ ಈರುಳ್ಳಿಯ ಉಲ್ಲೇಖವಿದ್ದು, ಹಲವು ರೋಗಗಳನ್ನು ತಡೆಯಲು ಈರುಳ್ಳಿ ಸಹಕಾರಿ ಎಂದು ಹೇಳಿದ್ದಾನೆ. ಹೃದಯ, ಗಂಟು, ಜೀರ್ಣಕ್ರೀಯೆ ತೊಂದರೆಗಳಿಗೆ ಈರುಳ್ಳಿ ರಾಮಬಾಣ ಎಂದು ಹೇಳಲಾಗಿದೆ. ಪುರಾತನ ಗ್ರೀಸ್‌ ನಾಗರಿಕತೆಯಲ್ಲೂ ಬಹುಮುಖ್ಯ ಸ್ಥಾನ ಪಡೆದಿದ್ದ ಈರುಳ್ಳಿಯನ್ನು ಆಗಿನ ಫಿಸಿಯೋಗಳು ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದರು. ಈರುಳ್ಳಿ ಶಕ್ತಿ ವರ್ಧಕ ಎಂದು ಅವರು ನಂಬಿದ್ದರು.

ಈರುಳ್ಳಿ ವ್ಯಾಪಾರಿಗಳ ಮೇಲೆ ಐಟಿ ಕಣ್ಣು!

ಈರುಳ್ಳಿ ದರ ಶತಕ ದಾಟಿ ಮುನ್ನುಗ್ಗುತ್ತಿರುವ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣು ಈರುಳ್ಳಿ ವ್ಯಾಪಾರಿಗಳ ಮೇಲೆ ನೆಟ್ಟಿದೆ. ಮಹಾರಾಷ್ಟ, ಮದ್ಯಪ್ರದೇಶ ಹಾಗೂ ದೆಹಲಿಯಲ್ಲಿ ಈರುಳ್ಳಿ ವ್ಯಾಪಾರಿಗಳು ನಗದು ವ್ಯವಹಾರ, ವಹಿವಾಟು ನಿಗ್ರಹ, ಖಾತೆ ಪುಸ್ತಕದಲ್ಲಿ ಸುಳ್ಳು ಮಾಹಿತಿ, ನಗದು ವಹಿವಾಟಿನ ಮೇಲಿನ ನಿರ್ಬಂಧ ನಿಬಂಧನೆಗಳ ಉಲ್ಲಂಘನೆ ಮುಂತಾದ ಅವ್ಯವಹಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಅವರ ವಹಿವಾಟಿನ ಮೇಲೆ ಐಟಿ ಕಣ್ಣಿಟ್ಟಿದೆ ಎಂದಿ ಸಚಿವ ಅನುರಾಗ್‌ ಠಾಕೂರ್‌ ಲೋಕಸಭೆಯಲ್ಲಿ ಹೇಳಿದ್ದರು.

 

click me!