ಚಾಕಲೇಟ್ ಎಂದು ಪಟಾಕಿ ಸಿಡಿಸಿದ: 3 ವರ್ಷದ ಕಂದಮ್ಮನ ಮುಖಕ್ಕೆ 50 ಹೊಲಿಗೆಗಳು!

By Web DeskFirst Published Nov 8, 2018, 10:55 AM IST
Highlights

ಯುವಕನೊಬ್ಬ ಮೂರು ವರ್ಷದ ಪುಟ್ಟ ಮಗುವಿನ ಬಾಯಿಯೊಳಗೆ ಪಟಾಕಿ ಇಟ್ಟು ಸುಟ್ಟ ಪರಿಣಾಮವಾಗಿ ಮಗು ಇಂದು ಸಾವು ಬದುಕಿನ ಮಧ್ಯೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

ಮೀರತ್[ನ.08]: ದೀಪಾವಳಿಗೆ ಹಬ್ಬದ ಒಂದು ದಿನದ ಮೊದಲು ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಘಟನೆಯೊಂದು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೀರತ್ನ ಸರದ್ ನಾ ಎಂಬಲ್ಲಿ ಯುವಕನೊಬ್ಬ ಚಾಕಲೇಟ್ ಎಂದು ಹೇಳಿ ಮೂರು ವರ್ಷದ ಮಗುವಿನ ಬಾಯಿಯೊಳಗೆ ಬಾಂಬ್ ಪಟಾಕಿ ಇಟ್ಟು ಬೆಂಕಿ ಕೊಟ್ಟಿದ್ದಾನೆ. ಬಾಂಬ್ ಪಟಾಕಿ ಮಗುವಿನ ಬಾಯಿಯೊಳಗೆ ಸ್ಫೋಟಗೊಂಡ ಪರಿಣಾಮ ನಾಲಗೆ ತುಂಡಾಗಿದ್ದು, ಮುಖಕ್ಕೂ ಗಂಭೀರ ಗಾಯಗಳಾಗಿವೆ. 'ಆರೋಪಿ ಈ ಹಿಂದೆಯೂ ನಮ್ಮ ಮನೆಗೆ ಬರುತ್ತಿದ್ದ ಆದರೆ ನಮ್ಮ ಮಗುವಿನ ಮೇಲೆ ಆತನಿಗೆ ಕೋಪವಿದೆ ಎಂಬುವುದು ನಮ್ಮ ಅರಿವಿಗೆ ಬಂದಿರಲಿಲ್ಲ' ಎಂಬುವುದು ತಾಯಿಯ ಮಾತಾಗಿದೆ.

ಘಟನೆ ನಡೆದ ಮರುಕ್ಷಣವೇ ಸ್ಥಳೀಯರು ಸೇರಿ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮಗುವಿನ ತಂದೆ ಹಳ್ಳಿಯ ಯುವಕನೊಬ್ಬನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ 'ಮೀರತ್ ನ ಮಿಲಕ್ ಹಳ್ಳಿಯ ನಿವಾಸಿ ಶಶಿ ಕುಮಾರ್ ಎಂಬವರ ಮೂರು ವರ್ಷದ ಮಗು ಆಯುಷಿ ಸೋಮವಾರದಂದು ತಡರಾತ್ರಿ ಮನೆಯ ಹೊರಗೆ ಆಡುತ್ತಿದ್ದಳು. ಈ ವೇಳೆ ಮನೆಗೆ ಆಗಮಿಸಿದ ಹಳ್ಳಿಯ ಓರ್ವ ಯುವಕ ಮಗುವಿನ ಬಾಯಿಯೊಳಗೆ ಬಾಂಬ್ ಪಟಾಕಿ ಇಟ್ಟು ಸಿಡಿಸಿದ್ದಾನೆ' ಎಂದು ತಿಳಿದು ಬಂದಿದೆ.

ಪಟಾಕಿ ಸಿಡಿದ ಸದ್ದು ಕೇಳಿ ಹೊರಗೋಡಿ ಬಂದಾಗ ಆಯುಷಿ ಒದ್ದಾಡುತ್ತಿರುವುದು ಕಂಡು ಬಂದಿದೆ. ಆ ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮಗುವಿನ ಮುಖಕ್ಕೆ 50ಕ್ಕೂ ಅಧಿಕ ಹೊಲಿಗೆಗಳನ್ನು ಹಾಕಲಾಗಿದ್ದು, ಗಂಟಲಿನಲ್ಲಿ ಸೋಂಕಾಗಿದೆ.

ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು 'ಮಗುವಿನ ತಂದೆ ನೀಡಿರುವ ದೂರು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದೇವೆ. ಬಳಿಕ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ. ನಾವೂ ಆತನಿಗಾಗಿ ಹುಡುಕಾಟ ಆರಂಭಿಸಿದ್ದೇವೆ' ಎಂದಿದ್ದಾರೆ.

click me!