ಇಂವಾ ಯಾವ ಊರಿನ ಚೆಲುವಾ..? ಇಂದು ಸಿರಿಸಂಪಿಗೆ ನಾಟಕಕಾರ Chandrashekara Kambara ಜನ್ಮದಿನ

By Suvarna News  |  First Published Jan 2, 2022, 2:15 PM IST

ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರರಿಗೆ ಈಗ 85 ವರ್ಷ. ಹಳ್ಳಿಗಳಲ್ಲೇ ಕನಸುಗಳೂ ಕಸುವುಗಳೂ ಇರುವುದು, ಶಹರದಲ್ಲಿ ಅಂಥಾ ಕನಸು, ಛಲ ಇರೋದಿಲ್ಲ ಅನ್ನುವ ಕಂಬಾರರು ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹನೀಯರು. 


ಚಂದ್ರಶೇಖರ ಕಂಬಾರ (Chandrashekara Kambara) ಹುಟ್ಟಿದ್ದು ಜನವರಿ 2, 1937ರಲ್ಲಿ. ಬ್ರಿಟೀಷ್‌ ಆಳ್ವಿಕೆಯಿದ್ದ ಕಾಲದಲ್ಲಿ ಬಾಂಬೆ ಪ್ರೆಸಿಡೆನ್ಸಿ ಆಳ್ವಿಕೆಗೆ ಒಳಪಟ್ಟಿದ್ದ ಬೆಳಗಾವಿಯ ಗೋಡಗೇರಿಯಲ್ಲಿ ಅವರು ಹುಟ್ಟಿದ್ದು. ಈಗ 85ರ ಹರೆಯದಲ್ಲೂ ಅದೇ ಉತ್ಸಾಹ, ಕ್ರಿಯಾಶೀಲತೆಗಳಿಂದ ಕೆಲಸ ಮಾಡುವ ಕಂಬಾರರು ಎಲ್ಲ ಯುವಕರಿಗೆ ಮಾದರಿ.

ಜ್ಞಾನಪೀಠ (Jnanapitha) ಪ್ರಶಸ್ತಿ, ಸಾಹಿತ್ಯ ಅಕಾಡೆಮಿ (Academy) ಪ್ರಶಸ್ತಿ, ಪದ್ಮಶ್ರೀ (Padmashri), ಪಂಪ ಪ್ರಶಸ್ತಿ ಪುರಸ್ಕೃತರು. ಕಳೆದ ವರ್ಷ ಬಿಡುಗಡೆಯಾದ ಅವರ ಕೃತಿ 'ಚಾಂದ್ ಬೀ ಸರಕಾರ' ಉತ್ತರ ಕರ್ನಾಟಕದ ಪ್ರಸಿದ್ಧ ರಂಗನಟಿ ಚಾಂದ್ ಬೀ ಸರಕಾರ ಬದುಕಿನ ಕುರಿತಾದದ್ದು. ದೇವದಾಸಿ ಪರಂಪರೆಯ ದಲಿತ ಹೆಣ್ಣು ಮಗಳು ಚಾಂದ್ ಬೀ ಸರ್ಕಾರ ರಂಗಭೂಮಿಯಲ್ಲಿ ಯಾವ ರೀತಿ ಉತ್ತುಂಗಕ್ಕೆ ಏರಿದರು, ರಂಗಭೂಮಿಯಲ್ಲಿ ಆಕೆಯ ನಟನೆ ಕಂಡ ಹಿರಿಯರು ಅವಳ ಕಾಲಿಗೆರಗಿದ್ದೂ ಇದೆ. ಅಂಥಾ ನಟಿ ತಾನು ಶಾಲೆ ಕಲಿಯದಿದ್ದರೂ ತನ್ನೂರಿಗೆ ಶಾಲೆ ಕಟ್ಟಿಸಿ ಸಾವಿರಾರು ಮಕ್ಕಳು ವಿದ್ಯೆ ಪಡೆಯುವಂತೆ ಮಾಡಿದ್ದು ಸಣ್ಣ ಸಾಧನೆ ಅಲ್ಲ.

Latest Videos

ಚಾಂದ್‌ ಬೀ ಸರಕಾರಳಂಥಾ, ಮಹಮ್ಮದ್ ಗವಾನ್ ನಂಥಾ ಐತಿಹಾಸಿಕ ವ್ಯಕ್ತಿಗಳ ಬದುಕನ್ನು ಕಟ್ಟಿಕೊಟ್ಟ ಕಂಬಾರರಿಗೆ ಹಳ್ಳಿಯೇ ಸ್ವರ್ಗ. ಅವರ ಕೃತಿಗಳಿಗೆ ಪ್ರೇರಣೆ ನೀಡಿದ್ದು ಜನಪದ. ಜೋಕುಮಾರ ಸ್ವಾಮಿ, ಕಾಡುಕುದುರೆ, ಮಹಾಮಾಯಿ, ಸಿರಿ ಸಂಪಿಗೆ ಸೇರಿ ೨೫ಕ್ಕೂ ಅಧಿಕ ನಾಟಗಳನ್ನು ಇವರು ಬರೆದಿದ್ದಾರೆ. ಸಿಂಗಾರೆವ್ವ ಮತ್ತು ಅರಮನೆ, ಸೂರ್ಯ ಶಿಕಾರಿ ಸೇರಿದಂತೆ ಅನೇಕ ಕಾದಂಬರಿ ಬರೆದಿದ್ದಾರೆ. 'ಹೇಳತೀನಿ ಕೇಳ', 'ಮರೆತೇನೆಂದರ ಮರೆಯಲಿ ಹ್ಯಾಂಗ' ಮೊದಲಾದ ಅನೇಕ ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. 'ಮರೆತೇನೆಂದರೆ ಮರೆಯಲಿ ಹ್ಯಾಂಗ, ಮಾವೋತ್ಸೆ ತುಂಗ' ಇವರ ಪ್ರಸಿದ್ಧ ಕವಿತೆ. ಹಾಗೇ 'ದೂರ ನಾಡಿನ ಹಕ್ಕಿ', 'ಸಾವಿರದ ಶರಣವ್ವ ಕರಿಮಾಯಿ ತಾಯಿ' ಇತ್ಯಾದಿ ಅನೇಕ ರಂಗಗೀತೆಗಳು ಕಲಾವಿದರ ಬಾಯಲ್ಲಿವೆ. 

undefined

ತಾನು ಹುಟ್ಟಿ ಬೆಳೆದ ಊರಿನಲ್ಲಿ ಕೇಳುತ್ತ ಬೆಳೆದ ಕತೆಗಳು ಅವರೊಳಗೂ ಕತೆ ಹುಟ್ಟುವಂತೆ ಮಾಡಿದವು. ಕಂಬಾರರು ಎಷ್ಟೇ ಓದಿಕೊಂಡರೂ ವಿದೇಶಗಳಲ್ಲೆಲ್ಲ ಅಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬಂದರೂ ಇಂದಿಗೂ ಅವರ ಕಣ್ಣಿಗೆ ಶ್ರೇಷ್ಠವಾಗಿ ಕಾಣುವುದು ಹಳ್ಳಿಯೇ. ಅವರ ಕೃತಿ ಓದಿಕೊಂಡವರಿಗೆ 'ಶಿವಾಪುರ' ಬಹಳ ಪರಿಚಿತ. ಅವರ ಕತೆ, ನಾಟಕಗಳೆಲ್ಲ ನಡೆಯುವುದು ಶಿವಾಪುರ ಅನ್ನುವ ಹಳ್ಳಿಯಲ್ಲಿ. ಹಾಗೊಂದು ಹಳ್ಳಿಯನ್ನು ನೀವು ಗೂಗಲ್ ಮ್ಯಾಪ್ ಹಾಕಿ ಹುಡುಕಿದರೆ ಸಿಗಲಿಕ್ಕಿಲ್ಲ. ಏಕೆಂದರೆ ಇದು ಕಂಬಾರರ ಕಲ್ಪನೆಯಲ್ಲಿ ಅರಳಿದ ಹಳ್ಳಿ. ಶಿವಾಪುರ ನಮಗೆ ನಿಮಗೆಲ್ಲ ಕನೆಕ್ಟ್ ಆಗುವ ನಮ್ಮದೇ ಹಳ್ಳಿ. ನಿಮ್ಮೂರನ್ನೂ, ನಿಮ್ಮೂರಿನ ಜನರನ್ನೂ ಶಿವಾಪುರದೊಳಗೆ ನೋಡಬಹುದು. ಶಿವಾಪುರ ನಮ್ಮೊಳಗೇ ಇರುವ ಹಳ್ಳಿ ಅಂತಾರೆ ಕಂಬಾರರು.

Nana Patekar Birthday: ನಾನಾ ಪಾಟೇಕರ್ ಸರಳ ಜೀವನ ನೆಡೆಸಲು ಕಾರಣವೇನು ಗೊತ್ತಾ?

ಆರಂಭದಿಂದ ಇಂದಿನವರೆಗೂ ಅವರು ಬಂಡವಾಳ ಶಾಹಿಯನ್ನು ವಿರೋಧಿಸುತ್ತಲೇ ಬಂದವರು. ಬಂಡವಾಳ ಶಾಹಿತ್ವದ ಸವಾಲುಗಳನ್ನು ಸ್ವೀಕರಿಸುವ ತಾಕತ್ತು ಇರುವುದು ಹಳ್ಳಿಗಳಿಗೆ ಅನ್ನೋದು ಅವರ ಮಾತು. 'ಹಳ್ಳಿಗಳಿಗೆ ಸಮೃದ್ಧ ಜನಪದದ ಹಿನ್ನೆಲೆ ಇದೆ. ನಮ್ಮತನ ಅನ್ನೋದಿದೆ, ಸಾಂಸ್ಕೃತಿಕ ವೈವಿಧ್ಯಗಳಿವೆ. ಆದರೆ ಇದ್ಯಾವುದೂ ಸಿಟಿಗಳಲ್ಲಿಲ್ಲ. ಇಲ್ಲಿರುವ ಹಲವರು ಹಳ್ಳಿಗಳನ್ನು ನಿರಾಕರಿಸಿ ಬಂದವರು. ಇವರಿಗೆ ಕನಸುಗಳಿಲ್ಲ' ಎನ್ನುವ ಕಂಬಾರರು, 'ಹಳ್ಳಿಯವರಿಗೆ ಏನೂ ಗೊತ್ತಿಲ್ಲ ಅಂದುಕೊಳ್ಳಬೇಡಿ. ಹೊಸತನವನ್ನು ಸ್ವೀಕರಿಸಿ ನಮ್ಮತನವನ್ನೂ ಉಳಿಸಿಕೊಂಡು ಸಮನ್ವಯ ಸಾಧಿಸುತ್ತಾ ತಮ್ಮಲ್ಲಿ ಅಳವಡಿಸಿಕೊಂಡು ಹೋಗುವುದು ಅವರಿಗೆ ಗೊತ್ತು. ಇಂಥಾ ಸಂಸ್ಕೃತಿ ನಮಗೆ ಬೇಕು. ಇದರಲ್ಲೇ ನಾವು ಬದುಕಬೇಕು' ಎನ್ನುತ್ತಾರೆ. 

ಹೊಸ ವರ್ಷದಲ್ಲಿ ಕಂಬಾರರ ಪುಸ್ತಕ ಓದಿ. ಅವರ ನಾಟಕಗಳು, ಕವಿತೆಗಳನ್ನು ಓದುತ್ತಿದ್ದರೆ ನಮ್ಮ ಹಳ್ಳಿಗಳ ಶಕ್ತಿ ಏನು, ಅಂಥಾ ಹಳ್ಳಿಗಳನ್ನು ಕಡೆಗಣಿಸಿ ನಾವೀಗ ಯಾವ ಅಪಾಯ ಮೈಗೆಳೆದುಕೊಳ್ಳುತ್ತಿದ್ದೇವೆ ಅನ್ನೋದು ನಮಗೆ ಗೊತ್ತಾಗುತ್ತೆ. ಜೊತೆಗೆ ಹಳ್ಳಿಯ ಸೊಗಸಿನಲ್ಲಿ ಅರಳಿದ ಈ ಪುಸ್ತಕಗಳನ್ನು ಓದುತ್ತಿದ್ದರೆ ಯಾವುದೋ ಕಾಲದ ಯಾವುದೋ ಹಳ್ಳಿಯೊಳಗೆ ಕಳೆದು ಹೋದ ಅನುಭವ ನಮ್ಮನ್ನು ಆವರಿಸುತ್ತದೆ. 

Vidya Balan Birthday : ಫೇವರೇಟ್‌ ಸಿಂಗರ್‌ ಕಚೇರಿಯಲ್ಲೇ ಬದಲಾದ ವಿದ್ಯಾ ಬಾಲನ್‌ ಅದೃಷ್ಟ!

ಕಂಬಾರರ ಜನ್ಮದಿನ ಇಂದು. ಅವರಿಗೆ ಶುಭ ಕೋರೋಣ.

 

click me!