ಕೇರಳ ಲಿಟ್ ಫೆಸ್ಟ್: ಜೋರಾಗಿದೆ ಕನ್ನಡ ಪುಸ್ತಕಗಳ ಮೆರವಣಿಗೆ, ಕನ್ನಡಿಗರಿಗೆ ಮನ್ನಣೆ!

By Kannadaprabha News  |  First Published Jan 19, 2020, 2:31 PM IST

ಮತ್ತೆ ಕಡಲೂರಿಗೆ ಬಂದೆ. ಸುಮಾರು ವರ್ಷಗಳ ಕಾಲ ಕಡಲ ನಗರಿಯಲ್ಲಿ ಕಳೆದರೂ ನನಗೆ ಕಡಲ ಬಗ್ಗೆ ಇನ್ನೂ ಮುಗಿಯದ ಸೆಳೆತ. ಕಡಲ ಜೋಗುಳ, ಅದರ ಆರ್ಭಟ, ಅದರ ಮುನಿಸು, ಅದರ ರಮಿಸುವಿಕೆ ಎಲ್ಲವೂ ಗೊತ್ತು. ಕಡಲ ದಂಡೆಯಲ್ಲಿ ಅಡ್ಡಾಡುತ್ತಾ ಅದರ ಈ ಎಲ್ಲಾ ಅವತಾರವನ್ನೂ ಗಂಟೆಗಟ್ಟಲೆ ರೆಕಾರ್ಡ್‌ ಮಾಡಿದವನು ನಾನು. ಹಾಗಿರುವಾಗ ಮತ್ತೆ ಕಡಲ ಸಾಂಗತ್ಯಕ್ಕೆ ಒಂದು ನೆಪ ಸಿಕ್ಕರೆ ಬಿಟ್ಟೇನು ಹೇಗೆ? ಅದೂ ಪುಸ್ತಕದ ಕಾರಣವಾಗಿದ್ದರೆ?


ಜಿ ಎನ್‌ ಮೋಹನ್‌

ಹೀಗೆ ಒಂದು ಕೈನಲ್ಲಿ ಪುಸ್ತಕ ಪ್ರೀತಿಯನ್ನೂ ಇನ್ನೊಂದು ಕೈನಲ್ಲಿ ಕಡಲ ಕನಸನ್ನೂ ಹಿಡಿದು ನಾನು ಸೇರಿಕೊಂಡಿದ್ದು ಕಲ್ಲಿಕೋಟೆಯನ್ನು. ಕಲ್ಲಿಕೋಟೆ ಅಲಿಯಾಸ್‌ ಕೋಳಿಕ್ಕೋಡ್‌ ಅಲಿಯಾಸ್‌ ಕ್ಯಾಲಿಕಟ್ಟನ್ನು.

Tap to resize

Latest Videos

undefined

ರಾತ್ರಿ 3 ಗಂಟೆಗೂ ಹೆಚ್ಚು ತಡಮಾಡಿದ ವಿಮಾನದ ಕಾರಣದಿಂದಾಗಿ ತೂಗುಗಣ್ಣಲ್ಲಿಯೇ ಕಲ್ಲಿಕೋಟೆ ಪ್ರವೇಶ ಮಾಡುತ್ತಿದ್ದ ನನಗೆ ಒಂದು ಕ್ಷಣದಲ್ಲಿ ನನ್ನ ಅಷ್ಟೂನಿದ್ದೆಯನ್ನು ತೊಡೆದುಹಾಕಿದ್ದು ಒಂದು ಬೋರ್ಡು ಎಂದರೆ ನೀವು ನಂಬಬೇಕು. ಹೀಗೆಲ್ಲೋ ಕುಲುಕುತ್ತಾ, ಅಲ್ಲಿನ ಹಾವು ರಸ್ತೆಯಲ್ಲಿ ಹೊರಳುತ್ತಾ ಸಾಗಿದ್ದ ಟ್ಯಾಕ್ಸಿ ಮತ್ತೊಂದು ಹೊರಳು ಹೊರಳುವಾಗ ಥಟ್ಟನೆ ಅಲ್ಲೊಂದು ಅಂಗಡಿಯ ಬೋರ್ಡು ಕಾಣಿಸಿತು. ಅದರಲ್ಲಿ ಇದ್ದ ಹೆಸರು ಬೇಪುರ. ಅರೆ! ಬೇಪುರ... ಥಟ್ಟನೆ ನನ್ನ ನಿದ್ದೆ ಎಲ್ಲಾ ಓಡಿತು. ದಶಕಗಳಿಂದ ನಾನು ಕನಸುತ್ತಿದ್ದ ಜಾಗ ಈಗ ನನಗೇ ಗೊತ್ತಿಲ್ಲದಂತೆ ಅಲ್ಲಾವುದ್ದೀನನ ಆದ್ಭುತ ದೀಪದಿಂದ ಹೊಮ್ಮಿದ ಜೀನಿಯಂತೆ ನನ್ನ ಕಣ್ಣೆದುರು ನಿಂತಿತ್ತು.

’ಬೇಪುರದ ಸುಲ್ತಾನ’ ಎಂದೇ ಹೆಸರಾಗಿ ಹೋದ, ಮಲಯಾಳಂ ಸಾಹಿತ್ಯವನ್ನು ಅಕ್ಷರಶಃ ದಶಕಗಟ್ಟಲೆ ಆಳಿದ, ಭಾರತದ ಎಲ್ಲಾ ಭಾಷೆಗಳಿಗೂ ಮಲಯಾಳವನ್ನು ಸಲೀಸಾಗಿ ಕೈ ಹಿಡಿದು ನಡೆಸಿಕೊಂಡು ಬಂದು ಬಿಟ್ಟಆ ಅಜ್ಜ ಮೋಟು ಬೀಡಿಯ ಜೊತೆಗಾರ, ಗ್ರಾಮಾಫೋನಿನ ಸಂಗಾತಿ ವೈಕಂ ಮಹಮದ್‌ ಬಷೀರ್‌ ಯಾರಿಗೆ ತಾನೇ ಗೊತ್ತಿಲ್ಲ.

ಆ ಕ್ಷಣಕ್ಕೆ ನಾನು ನನ್ನ ತಡೆಯಲಾಗದ ಸಂತಸವನ್ನು ಹೊಟ್ಟೆಯಲ್ಲಿಟ್ಟುಕೊಳ್ಳಲು ಸಿದ್ಧನಿರಲೇ ಇಲ್ಲ. ಹಾಗಾಗಿ ಟ್ಯಾಕ್ಸಿಯ ಡ್ರೈವರನ್ನೇ ಮಾತಿಗೆಳೆದೆ. ’ಬಷೀರ್‌’ ಎಂದೆ. ಅವನಿಗೂ ಇನ್ನಿಲ್ಲದ ಹುಕಿ ಬಂತು. ಸರ್‌, ಬಷೀರ್‌ ಕಥೆಗಳಲ್ಲಿ ಎಲ್ಲಿ ಕೈಯಾಡಿಸಿದರೂ ಸಿಗುವುದು ಪಕ್ಕಾ ನಮ್ಮ ಕೋಳಿಕ್ಕೋಡ್‌ ಭಾಷೆ ಎಂದ. ನಾನು ಬಿಟ್ಟಬಾಯಿ ಬಿಟ್ಟಂತವನಾಗಿದ್ದೆ. ಆತ ಅಲ್ಲಿಗೂ ನಿಲ್ಲಿಸಲಿಲ್ಲ. ಈ ಬೇಪುರಕ್ಕೆ ಬಂದ ಮೇಲೆಯೇ ಬಷೀರ್‌ ಮದುವೆಯಾಗಿದ್ದು. ಅವರಿಗೆ ಹೆಂಡತಿಯ ಮೇಲೆ ಎಷ್ಟುಪ್ರೀತಿ ಎಂದರೆ ಆಕೆಯನ್ನು ’ಫೇಬಿ’ ಎಂದೇ ಕರೆಯುತ್ತಿದ್ದರು. ಆಕೆಯ ಹೆಸರು ಫಾತಿಮಾ, ಇವರ ಹೆಸರು ಬಷೀರ್‌. ಈ ಎರಡೂ ಅಕ್ಷರ ಬೆಸುಗೆ ಆಗಿ ಫೇಬಿ ಎಂದ.

ಬಷೀರ್‌ ತಾರುಣ್ಯಕ್ಕೆ ಕಿಚ್ಚು ಹಚ್ಚಿದವರು. ಗೂನು ಬೆನ್ನಿನ ಹುಡುಗಿಯನ್ನೂ ಪ್ರೇಮಿಸುವಂತೆ ಮಾಡಿದವರು, ಜೈಲಿನಲ್ಲಿಯೂ ಪ್ರೀತಿ ಪ್ರೇಮ ಪ್ರಣಯ ಕಂಡವರು. ಅಂತಹ ಸುಲ್ತಾನ ಫೇಬಿ ಎನ್ನುವ ನಾಮಕರಣಕ್ಕೆ ಮುಂದಾಗದೇ ಹೋದರೆ...!

ಬೆಳ್ಳಂಬೆಳಗ್ಗೆ ಕಟ್ಟಂಚಾಯ ಕುಡಿಯಲು ರಸ್ತೆಬದಿಯ ಹೋಟೆಲು ಹೊಕ್ಕವನಿಗೆ ಕಂಡದ್ದು ನೇಂದ್ರಬಾಳೆ. ಅದರ ಪೋಡಿಯನ್ನು ಒಂದು ಕಟ್ಟಂಚಾಯ ಸಮೇತ ಒಳಗಿಳಿಸುವ ವೇಳೆಗೆ ನನ್ನ ಮೂಗಿಗೆ ಬಡಿದದ್ದು ಚಕ್ಕೆ ಲವಂಗದ ವಾಸನೆ. ಮಧ್ಯಾಹ್ನದ ಅಡುಗೆಗೆ ಬೇಕಾದ ತಯಾರಿ ಶುರುವಾಗಿತ್ತೇನೋ, ತೆಳುವಾಗಿ ಅಡುಗೆ ಮನೆಯಿಂದ ಹೊರಟ ಸಂಬಾರ ಪದಾರ್ಥಗಳ ಘಮ ಗಾಳಿಯಲ್ಲಿ ಈಜಾಡಿ ನನ್ನ ಮೂಗು ಸೇರಿಕೊಂಡಿತು. ಥಟ್ಟನೆ ನನಗೆ ನೆನಪಾಗಿದ್ದು ನಮ್ಮ ವಸುಧೇಂದ್ರ.

ಮೊನ್ನೆ ತಾನೇ ಬೆಂಗಳೂರಿನ ’ಸಪ್ನಾ’ದಲ್ಲಿ ವಸುಧೇಂದ್ರ ತನ್ನ ಹೊಸ ಕಾದಂಬರಿ ’ತೇಜೋ ತುಂಗಭದ್ರಾ’ಕ್ಕೆ ಹಸ್ತಾಕ್ಷರ ಹಾಕಲು ಕುಳಿತಾಗ ನಾನು ಜೊತೆಯಾಗಿದ್ದೆ. ವಸು, ತೇಜೋ ತುಂಗಭದ್ರಾದ ಕಥೆಯನ್ನು ಬಿಚ್ಚಿಡುತ್ತಾ ಸಾಂಬಾರ ಪದಾರ್ಥಗಳೇ ಕಡಲಲ್ಲಿ ಹೊಸ ಹಾದಿಯನ್ನು ಹುಡುಕುವಂತೆ ಮಾಡಿದವು ಎಂದಿದ್ದ. ವಾಸ್ಕೋ ಡ ಗಾಮ ಹಡಗು ಹತ್ತಿ ದಶಕಗಳ ಕಾಲ ಭಾರತದ ದಾರಿಯನ್ನು ಹುಡುಕಲು ಯತ್ನಿಸಿದ್ದು ಇದೇ ಸಾಂಬಾರ ಪದಾರ್ಥಗಳಿಗಾಗಿ. ಸಾಂಬಾರ ಪದಾರ್ಥಗಳಿಗೆ ಚಿನ್ನದ ಮೌಲ್ಯವಿತ್ತು. ರಾತ್ರೋರಾತ್ರಿ ಒಂದು ದೇಶದ ಗತಿಯನ್ನೇ ಬದಲಾಯಿಸಿಬಿಡಬಹುದಾದ ಶಕ್ತಿಯೊಂದು ಆ ಸಾಂಬಾರ ಪದಾರ್ಥಗಳಲ್ಲಿತ್ತು.

ಹಾಗಾಗಿಯೇ ಹಲವು ದೇಶಗಳು ಭಾರತವನ್ನು ಹುಡುಕಲು ಇನ್ನಿಲ್ಲದಂತೆ ಯತ್ನಿಸಿದವು. ಹಾಗೆ ಯಶಸ್ಸು ಕಂಡದ್ದು ವಾಸ್ಕೋ ಡ ಗಾಮ. ಆತ ಬಂದು ಸೇರಿದ್ದು ಇದೇ ಕಲ್ಲಿಕೋಟೆಯನ್ನು. ಮಸಾಲೆ ಪದಾರ್ಥಗಳ ರಾಜ ಎಂದೇ ಹೆಸರಾಗಿದ್ದ ಕಲ್ಲಿಕೋಟೆ ಜಗತ್ತಿನ ಚಿನ್ನದ ಗಣಿಯಂತಾಗಿಹೋಯಿತು. ಕಟ್ಟಂಚಾಯ ಎದುರಿಗಿಟ್ಟುಕೊಂಡು, ಮೂಗಿಗೆ ಮಸಾಲೆ ವಾಸನೆ ಸೇರಿಸಿಕೊಳ್ಳುತ್ತಿದ್ದ ನಾನೂ ಒಂದು ಕ್ಷಣ ವಾಸ್ಕೋ ಡ ಗಾಮನ ನೌಕೆಯನ್ನು ಏರಿಯೇಬಿಟ್ಟಿದ್ದೆ.

ಅಧೋರಾತ್ರಿಯಲ್ಲಿಯೇ ಟ್ಯಾಕ್ಸಿ ಚಾಲಕನ ಸಾಹಿತ್ಯ ಜ್ಞಾನದ ಝಲಕ್‌ ಪಡೆದ ನನಗೆ ಅದು ಕೇರಳ ಸಾಹಿತ್ಯ ಉತ್ಸವ ನಡೆಯುತ್ತಿದ್ದ ಕಡಲ ದಂಡೆಗೆ ಹೋಗಲು ಆಟೋ ಹತ್ತಿದಾಗಲೂ ಮುಂದುವರೆಯುತ್ತದೆ ಎಂದುಕೊಂಡಿರಲಿಲ್ಲ. ಮಲಯಾಳ ಮಾತನಾಡಲಾಗದೆ ತಬ್ಬಿಬ್ಬಾಗಿದ್ದ ನನ್ನನ್ನು ಯಾವ ಊರಿನವರು ಎಂದು ಡ್ರೈವರ್‌ ಕೇಳಿದ. ಬೆಂಗಳೂರು ಎಂದೆ. ತಕ್ಷಣ ಅವನಿಗೆ ಹುಕಿ ಬಂದಂತೆ ಕೃಷ್ಣ ಆಲನಹಳ್ಳಿ ಎಂದ. ಬೆಂಗಳೂರು-ಕರ್ನಾಟಕ-ಕನ್ನಡ ಆತನಿಗೆ ತಕ್ಷಣ ನಮ್ಮ ’ಪರಸಂಗ’ದ ಸೃಷ್ಟಿಕರ್ತನನ್ನು ನೆನಪಿಸಿತ್ತು. ಆಲನಹಳ್ಳಿ ಕೃಷ್ಣ ಹಾಗೂ ನಾನು ಒಮ್ಮೆ ಬಾದಾಮಿ ಹೌಸ್‌ ನಲ್ಲಿ ಮಾತನಾಡುತ್ತಾ ಕುಳಿತಾಗ ತನ್ನ ಎಂದಿನ ಸ್ಟೈಲ್‌ ನಲ್ಲಿ ನೀನು ಕೇರಳದಲ್ಲಿ ನೋಡಬೇಕು. ಇಲ್ಲಿಗಿಂತ ನಾನು ಅಲ್ಲೇ ಫೇಮಸ್‌ ಎಂದಿದ್ದ.. ಹೌದೌದು ಎನ್ನುವಂತೆ ಇಲ್ಲಿ ಈಗ ಆಟೋ ಡ್ರೈವರ್‌ ಸಾಕ್ಷ್ಯ ಒದಗಿಸುತ್ತಿದ್ದ.

’ಪರಸಂಗದ ಗೆಂಡೆತಿಮ್ಮ’ ತಲೆ ಮೇಲೆ ಹೊತ್ತು ತರುತ್ತಿದ್ದ ಗೂಡೆಯಂತೆ ಕೃಷ್ಣ ಆಲನಹಳ್ಳಿ ಕನ್ನಡ ಮತ್ತು ಮಲಯಾಳದ ನಡುವೆ ಗೂಡೆ ಹೊತ್ತು ತಂದರು ಎಂದು ಬೆಂಗಳೂರಿನಲ್ಲಿರುವ ಕೇರಳ ಸೊಸೈಟಿ ಕೃಷ್ಣ ಆಲನಹಳ್ಳಿಯ ಬಗ್ಗೆ ಹಮ್ಮಿಕೊಂಡಿದ್ದ ಸಂಕಿರಣದಲ್ಲಿ ಎಚ್‌ ಎಲ್‌ ನಾಗೇಗೌಡರು ಮಾತನಾಡಿದ್ದು ನೆನಪಾಯ್ತು.

ಕಡಲ ದಂಡೆಯಲ್ಲಿ ನಿಜಕ್ಕೂ ಅಕ್ಷರಶಃ ಅಕ್ಷರ ಪ್ರೇಮಿಗಳು ಇನ್ನೊಂದೇ ತೆರೆಯಂತೆ ಮೊರೆಯುತ್ತಿದ್ದರು. ಒಂದೆಡೆ ಖ್ಯಾತ ಸಾಹಿತಿಗಳು ತಮ್ಮ ಬರವಣಿಗೆಯ ಲೋಕ ಬಿಚ್ಚಿಡುತ್ತಿದ್ದರೆ ಇನ್ನೊಂದೆಡೆ ಮಲಯಾಳ ಸಾಹಿತ್ಯದ ಆಳ ಅಗಲವನ್ನು ಅಳೆಯುತ್ತಿದ್ದರು. ಲೇಖಕರೊಂದಿಗೆ ಸಂವಾದ ಒಂದು ಕಡೆಯಾದರೆ, ಮತ್ತೊಂದು ಕಡೆ ವಿದೇಶದಿಂದ ಬಂದಿದ್ದ ಬರಹಗಾರರು ತಮ್ಮ ಲೋಕದ ಕಂತೆ ಹರಡಿ ಕುಳಿತಿದ್ದರು. ಇದೆಲ್ಲಕ್ಕಿಂತಲೂ ಜನ ಕ್ಯೂ ನಿಂತು ಕಾಯುತ್ತಿದ್ದುದು ತಮ್ಮ ನೆಚ್ಚಿನ ಪುಸ್ತಕಗಳ ಮೇಲೆ ಅದೇ ಸಾಹಿತಿಗಳ ಹಸ್ತಾಕ್ಷರ ಪಡೆಯಲು.

ಮಲಯಾಳ ಪುಸ್ತಕಗಳ ವಿನ್ಯಾಸ ಎಂದರೆ ನನಗೆ ಒಂದು ಹಿಡಿ ಹೆಚ್ಚೆ ಪ್ರೀತಿ. ’ಡಿ ಸಿ ಬುಕ್ಸ್‌’ ಪ್ರಕಟಿಸಿದ ಖ್ಯಾತ ಸಾಹಿತಿ ಕೆ ಆರ್‌ ಮೀರಾ ಅವರ ’ಭಗವಾಂಟೆ ಮರಣಂ’ ಕೃತಿಯನ್ನು ನನ್ನ ಕಚೇರಿಯಲ್ಲಿ ಹತ್ತೂ ಸಮಸ್ತರಿಗೆ ಮತ್ತೆ ಮತ್ತೆ ತೋರಿಸುತ್ತಾ ಕೂರುತ್ತಿದ್ದೆ. ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗೆಗಿನ ಈ ಕೃತಿ ಗುಂಡು ನೇರ ಪುಸ್ತಕದ ಎದೆ ಹೊಕ್ಕು ಹೊರಬಂದಂತಿತ್ತು. ಹಾಗಾಗಿ ಇನ್ನಷ್ಟುಹೊಸದು ಆಯ್ದುಕೊಳ್ಳಲು ಅಲ್ಲಿನ ವಿಸ್ತಾರ ಪುಸ್ತಕ ಮಳಿಗೆಗೆ ಕಾಲಿಟ್ಟೆ.

ಈ ಸಾಹಿತ್ಯ ಉತ್ಸವಕ್ಕೆ ಕನ್ನಡದಿಂದ ಬಂದಿರುವವನು ನಾನೊಬ್ಬನೇ ಎಂದುಕೊಂಡಿದ್ದೆ. ಆದರೆ ನಾನು ಅಲ್ಲಿ ಕಾಲಿಕ್ಕುವ ವೇಳೆಗಾಗಲೇ ಯು ಆರ್‌ ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಪ್ರಕಾಶ್‌ ರೈ, ವಿವೇಕ್‌ ಶಾನಭಾಗ್‌, ವಸುಧೇಂದ್ರ, ಕೃಷ್ಣ ಆಲನಹಳ್ಳಿ ಮಳಿಗೆಯಲ್ಲಿದ್ದರು.

ಗಿನ್ನೀಸ್ ದಾಖಲೆಗಾಗಿ ಕೇರಳದಲ್ಲಿ 6.5 ಕಿ.ಮೀ ಉದ್ದದ ಕೇಕ್!

ಚಂದನ್‌ ಗೌಡ ಅವರು ಯು ಆರ್‌ ಅನಂತಮೂರ್ತಿಯವರ ಜೊತೆ ನಡೆಸಿದ ಸಂದರ್ಶನದ ಕೃತಿ, ಇತ್ತೀಚೆಗೆ ಕೇರಳದಲ್ಲಿ ಜರುಗಿದ ಚಿತ್ರೋತ್ಸವದಲ್ಲಿ ಹೊರತಂದ ಗಿರೀಶ್‌ ಕಾರ್ನಾಡರ ಬಗೆಗಿನ ಕೃತಿ, ವಿವೇಕ್‌ ಶಾನಭಾಗ್‌ ರ ಘಾಚರ್‌ ಘೋಚರ್‌ ವಸುಧೇಂದ್ರರ ಮೋಹನಸ್ವಾಮಿ, ಪ್ರಕಾಶ್‌ ರೈ ಅವರ ಇರುವುದೆಲ್ಲವ ಬಿಟ್ಟು ಮತ್ತು ಅವರವರ ಭಾವಕ್ಕೆ, ಕೃಷ್ಣ ಆಲನಹಳ್ಳಿಯ ಪರಸಂಗದ ಗೆಂಡೆತಿಮ್ಮ... ಮಲಯಾಳಿ ಸಾಹಿತಿಗಳ ಆಕ ಪಕ್ಕ ಮಾತನಾಡುತ್ತಾ ಕುಳಿತಿದ್ದವು.

’ಡಿ ಸಿ ಬುಕ್ಸ್‌’ ಮಲಯಾಳ ಪುಸ್ತಕ ಲೋಕದ ದೈತ್ಯ. ಪುಸ್ತಕ ಹೇಗೆ ಮಾಡಬೇಕು, ಅದನ್ನು ಹೇಗೆ ಮಾರಾಟ ಮಾಡಬೇಕು ಎನ್ನುವ ಎರಡಕ್ಕೂ ಮಾದರಿ. ಕೇರಳದಲ್ಲಿ ಶಿಕ್ಷಕನಾಗಿದ್ದ ಡಿ ಸಿ ಕಿಳಕೇಮುರಿ ಇಡೀ ರಾಜ್ಯದಲ್ಲಿ ಗ್ರಂಥಾಲಯ ಚಳವಳಿ ಆರಂಭವಾಗಲು ಕಾರಣರಾಗಿ ಹೋದರು. 1942ರಲ್ಲಿಯೇ ಆರಂಭವಾದ ಈ ಚಳವಳಿ ಪ್ರತಿಯೊಬ್ಬ ಕೇರಳಿಗರಲ್ಲಿ ಸಾಹಿತ್ಯದ ಬುನಾದಿಯನ್ನು ಹಾಕಿಬಿಟ್ಟಿತು. 1945ರ ವೇಳೆಗಾಗಲೇ ಕೇರಳದ ಗ್ರಾಮಗಳಲ್ಲಿ 8 ಸಾವಿರ ಗ್ರಂಥಾಲಯಗಳು ತಲೆ ಎತ್ತಿ ಅಲ್ಲಿನ ಗ್ರಾಮಸ್ಥರ ಮನದೊಳಗೆ ಸಾಹಿತ್ಯದ ಕನಸು ನೆಲೆಯೂರುವಂತೆ ಮಾಡಿತ್ತು.

ಪುಸ್ತಕ ಪ್ರತಿಯೊಬ್ಬರ ಕೈ ಸೇರುವಂತಾಗಬೇಕು ಎನ್ನುವ ಕಾರಣಕ್ಕಾಗಿ ಆಗ ಇದ್ದ ರಟ್ಟಿನ ಪುಸ್ತಕ ಸಂಸ್ಕೃತಿಯ ಎದುರು ಸಾದಾ ಮುಖಪುಟದ ಚಳವಳಿ ಆರಂಭಿಸಿ ಯಶಸ್ವಿಯಾದರು. ಆಗಿನ ತಿರುವಾಂಕೂರು ಸರ್ಕಾರದ ಮೇಲೆ ಯಾವುದೇ ಕಾರಣಕ್ಕೂ ಪುಸ್ತಕ ಮಾರಾಟದ ಮೇಲೆ ತೆರಿಗೆ ವಿಧಿಸುವಂತಿಲ್ಲ ಎಂದು ಒತ್ತಡ ಹೇರಿ ಯಶಸ್ವಿಯಾದರು. ಅದು ಅಷ್ಟಕ್ಕೇ ನಿಲ್ಲಲಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರೂ ಪುಸ್ತಕ ಮಾರಾಟದ ಮೇಲೆ ತೆರಿಗೆ ಹೇರದಂತೆ ನೋಡಿಕೊಂಡರು.

ಇಂತಹ ಪುಸ್ತಕ ಲೋಕದ ಹರಿಕಾರ ಡಿ ಸಿ ಕಿಳಕೇಮುರಿ ಅವರ ಪ್ರತಿಷ್ಠಾನದಿಂದ ನಡೆಯುತ್ತಿರುವ ಉತ್ಸವ ಇದು. ಈ ವರ್ಷದ್ದು ಅದರ ಐದನೆಯ ಆವೃತ್ತಿ.

ಕೇರಳ ಪ್ರವಾಸೋದ್ಯಮ ಟ್ವೀಟ್‌ನಲ್ಲಿ ಬೀಫ್: ಊಟಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದ ಸಚಿವ!

ಈ ಬಾರಿಯ ಉತ್ಸವದಲ್ಲಿ 12 ದೇಶಗಳ ಸಾಹಿತಿಗಳಿದ್ದಾರೆ. ಸ್ಪೇನ್‌ ಈ ಬಾರಿಯ ಅತಿಥಿ ದೇಶ. ತಮಿಳು ಸಾಹಿತ್ಯಕ್ಕೆ ಪ್ರಧಾನ ಗಮನ. ಪರಿಸರ ಮತ್ತು ಹವಾಮಾನ ಬದಲಾವಣೆ ಪ್ರಧಾನ ಥೀಮ್‌.

ಕೈನಲ್ಲಿ ಪುಸ್ತಕ ಹಿಡಿದು ಓದಲಾಗದ ಭಾಷೆಯನ್ನು ಮುಟ್ಟಿಮುಟ್ಟಿನೋಡುತ್ತಾ ಇದ್ದವನಿಗೆ ಎದುರುಗಡೆ ಅಂಗಳದಲ್ಲಿ ವೈಕಮ್ಮರೇ ಕಂಡುಬಿಟ್ಟರು. ’ಕೇರಳಕ್ಕೆ ಬರೆಯುವ ಪ್ರೇಮ ಪತ್ರಗಳು’ ಎನ್ನುವ ಹೆಸರಿನಲ್ಲಿ ರಿತೇಶ್‌ ಮೆನನ್‌ ಸಾಹಿತ್ಯಕ್ಕೆ ನೆನಪುಗಳ ಬೆಸುಗೆ ಹಾಕುತ್ತಿದ್ದಾರೆ. ಬೇಪುರದ ಸುಲ್ತಾನನ ನೆಲದಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಉತ್ಸವಕ್ಕೆ ವೈಕಂ ಇಲ್ಲದಿದ್ದರೆ ಹೇಗೆ? ಹಾಗಾಗಿಯೇ ವೈಕಂ ಮಹಮದ್‌ ಬಷೀರರ ಪ್ರೀತಿಯ ಪಾತ್ರಗಳಾದ ಪಾತುಮ್ಮ, ಆ ಆಡು, ಬಷೀರರ ಪ್ರೀತಿಯ ಕನ್ನಡಕ, ಗ್ರಾಮಾಫೋನ್‌ ಗಳ ಚಿತ್ರಗಳು ಎಲ್ಲರನ್ನೂ ಜೈ ಬೀಸಿ ಕರೆಯುತ್ತಿದ್ದವು.

ನಾನೂ ಪಾತುಮ್ಮನ ಆಡು ಹಾಗೂ ಬಾಲ್ಯಕಾಲ ಸಖಿ ಓದಿದ ನೆನಪುಗಳನ್ನು ಇನ್ನಷ್ಟುಜತನವಾಗಿಸಿಕೊಳ್ಳಲು ಆ ಎಲ್ಲ ಸ್ಮರಣಿಕೆಗಳನ್ನೂ ಗೊಂಬೆಯಂಗಡಿಯಲ್ಲಿ ನಿಂತ ಹುಡುಗನಂತೆ ಬಾಚಿ ಬಾಚಿ ನನ್ನ ಹೆಗಲ ಜೋಳಿಗೆಗೆ ಸೇರಿಸಿಕೊಂಡೆ.

click me!