ವ್ಯಾಸರಾಯ ಕಲ್ಯಾಣ ಪ್ರಸಂಗ!

By Kannadaprabha News  |  First Published Aug 21, 2022, 2:36 PM IST

ಮುಂಬಯಿ ಕನ್ನಡಿಗ, ಕತೆಗಾರ, ಕಾದಂಬರಿಕಾರ ವ್ಯಾಸರಾವ್‌ ನಿಂಜೂರರ ಆತ್ಮಕಥನದ ಒಂದು ಅಧ್ಯಾಯ ಇದು. ತೆಂಕನಿಡಿಯೂರಿನ ಕುಳುವಾರಿಗಳು ಕೃತಿಯಿಂದ ಎಲ್ಲರ ಮನಗೆದ್ದ ನಿಂಜೂರರ ಆತ್ಮಚರಿತ್ರೆಯ ಪುಟಗಳು ಕೂಡ ಕಾದಂಬರಿಯಂತೆಯೇ ಇವೆ. ಇಲ್ಲಿ ಅವರು ತಮ್ಮ ಮದುವೆಯ ಪ್ರಸಂಗವನ್ನು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಅವರು ತಮ್ಮ ಬದುಕನ್ನು ಎಳೆದ ತೇರು ಎಂದು ಕರೆದಿರುವುದು ಕೂಡ ಬದುಕಿನ ಕುರಿತ ಅವರ ನಿಲುವನ್ನು ಹೇಳುವಂತಿದೆ.


ನನ್ನ ದೊಡ್ಡ ಅಣ್ಣನಿಗೆ ನಾನು ಬೇಗನೇ ಮದುವೆಯಾಗಬೇಕೆನ್ನುವ ಇರಾದೆ ಇತ್ತು. ಇದರಲ್ಲಿ ಸ್ವಲ್ಪ ಸ್ವಾರ್ಥದ ಸುಳಿವು ಇದ್ದುದನ್ನೂ ಗಮನಿಸದಷ್ಟುನಾನು ಹೆಡ್ಡನಾಗಿರಲಿಲ್ಲ. ಒಂದಿಷ್ಟುವರದಕ್ಷಿಣೆ ಸಿಕ್ಕಿದರೆ, ಇನ್ನೊಂದು ಹೊಟೇಲು ತೆರೆಯ ಬಹುದು, ಇಲ್ಲವೆ ಸ್ವಲ್ಪ ಸಮಯ ದರ್ಬಾರು ನಡೆಸಿ ಹಣ ಪುಡಿ ಮಾಡಬಹುದು ಎನ್ನುವ ಪುಟ್ಟಆಸೆ ಆತನದು. ನಾನು ಊರಿಗೆ ಹೋದಾಗಲೆಲ್ಲ ಶ್ರೀಮಂತರ ಮನೆಯ ಹುಡುಗಿಯರನ್ನು ನೋಡಲು ಕರೆದೊಯ್ಯುತ್ತಿದ್ದ. ನನಗೆ ಇದು ಹಿಂಸೆ ಎನಿಸುತ್ತಿತ್ತು. ಒಮ್ಮೆ ಅಣ್ಣನಲ್ಲಿ ನನ್ನಲ್ಲಿರುವ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ, ನಾನು ವರದಕ್ಷಿಣೆ ಪಡೆದು ಮದುವೆಯಾಗುವುದಿಲ್ಲ ಎಂದು ಹೇಳಿಬಿಟ್ಟೆ. ನನಗೆ ರಾಮಚಂದ್ರಣ್ಣನ ಸಪೋರ್ಚ್‌ ಬೇರೆ ಇತ್ತು. ಆದರೂ ಆತ ಹುಡುಗಿಯರ ತಲಾಷ್‌ ಮಾಡುವುದನ್ನು ಬಿಡಲಿಲ್ಲ. ನನಗಾದರೂ ತಂದೆಯ ಸ್ಥಾನದಲ್ಲಿರುವ ಅವನ ಹಣದ, ಹುಡುಗಿಯರ ಬೇಟೆ ಸಲ್ಲದು ಎಂದು ಖಡಾಖಂಡಿತವಾಗಿ ಹೇಳಲಾಗದಿದ್ದರೂ, ರಾಮಚಂದ್ರಣ್ಣ ಈ ಕೆಲಸ ಮಾಡಿದ.

ಮುಂಬಯಿಯಲ್ಲಿ ನನಗೆ ಹಾಗೂ ಹಾಫ್‌ಕಿನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ರಿಸಚ್‌ರ್‍ ಮಾಡುತ್ತಿದ್ದ ನನ್ನ ಹಳೆಯ ಒಡನಾಡಿ ಮಧ್ಯಸ್ಥರಿಗೂ ಮದುವೆ ಮಾಡಿಸಬೇಕೆನ್ನುವ ಹುರುಪು ನಮ್ಮಿಬ್ಬರ ಆತ್ಮೀಯರೂ ಹಿರಿಯರೂ ಆದ ಬೈಕಾಡಿ ಸುಬ್ಬರಾಯರಿಗಿತ್ತು. ಅವರು ಮುಂಬಯಿಯ ಪ್ರತಿಷ್ಠಿತ ಕನ್ನಡಿಗರಾಗಿದ್ದುದಷ್ಟೇ ಅಲ್ಲ, ಬಾಂಬೇ ಸೌತ್‌ ಕೆನರಾ ಬ್ರಾಹ್ಮಿನ್ಸ್‌ ಅಸೋಸಿಯೇಶನ್‌ನ ಸೆಕ್ರಟರಿಯೂ ಆಗಿದ್ದರು.

Latest Videos

undefined

ಅಮೆರಿಕದಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ; ಗಿನ್ನೆಸ್ ದಾಖಲೆ

ಒಂದು ಕಡೆ ಹುಡುಗಿ ನೋಡುವ ಶಾಸ್ತ್ರವೂ ಆಯಿತು. ಎರಡು ಮೂರು ದಿನಗಳ ಬಳಿಕ ಸುಬ್ಬರಾಯರು, ‘ಆ ಜನ, ಕಚ್ಚೆ ಕೋಮಣವಿಲ್ಲದ ಹುಡುಗನಿಗೆ ಯಾರು ಕನ್ಯೆ ಕೊಡುತ್ತಾರೆ ಎಂದರು ಮಾರಾಯ’ ಎಂದು ನನ್ನ ಬಳಿ ದೂರಿದರು. ನನ್ನ ಬಡತನವನ್ನು ಹಂಗಿಸಿದ್ದರೂ ಆ ಕನ್ಯಾಪಿತೃ ಹೇಳಿದ್ದರಲ್ಲಿ ಸುಳ್ಳಿರಲಿಲ್ಲ. ನನಗೇನು ಬೇಸರವಾಗಲಿಲ್ಲ. ಒಂದು ದಿನ ನಾನು ಹಾಗೂ ಮಧ್ಯಸ್ಥ - ಹೀಗೆ ಈರ್ವರೂ ಹುಡುಗಿ ನೋಡಲು ತನ್ನ ಜೊತೆ ಬರಬೇಕೆಂದು ಸುಬ್ಬರಾಯರು ತಾಕೀತು ಮಾಡಿದರು. ಒಂದೇ ಹುಡುಗಿ. ಆಕೆಯ ಆಯ್ಕೆಯಂತೆ ಮುಂದೆ ಮದುವೆ. ಇಬ್ಬರನ್ನೂ ಆಕೆ ಒಪ್ಪದಿದ್ದರೆ ಮುಂದೆ ಬೇರೆ ಹುಡುಗಿಯರ ಹುಡುಕಾಟ. ಹೆಚ್ಚು ಕಡಿಮೆ ಇದು ಸ್ವಯಂವರ ವ್ಯವಸ್ಥೆಯಂತಿತ್ತು. ನಾವೀರ್ವರೂ ಬೈಕಾಡಿ ಸುಬ್ಬರಾಯರೊಂದಿಗೆ ವಧು ಪರೀಕ್ಷೆಗಾಗಿ ಮುಂಬಯಿಯ ಪೋರ್ಚ್‌ನಲ್ಲಿರುವ ವೆಲ್‌ಕಮ್‌ ಹೊಟೇಲಿನ ಮಾಲೀಕರಾದ ಗಣಪತಿ ರಾಯರ ಶಿವಾಜಿ ಪಾರ್ಕಿನ ಮನೆಗೆ ಚಿತ್ತೆ ೖಸಿದೆವು. ಆಗ ಪರಕಾರ ಕುಪ್ಪಸ ಧರಿಸಿದ್ದ ಹುಡುಗಿಯೊಬ್ಬಳು ಹಜಾರದಲ್ಲಿ ಪೊರಕೆ ಸೇವೆ ನಡೆಸುತ್ತಿದ್ದಳು. ಬಂದ ಗಳಿಗೆ ಚೆನ್ನಾಗಿಲ್ಲವೆಂದು ಮಧ್ಯಸ್ಥ ನನ್ನ ಕಿವಿಯಲ್ಲಿ ಪಿಸುಗುಟ್ಟಿದ. ಅಷ್ಟರಲ್ಲೇ ಅದ್ಯಾವ ಮಾಯೆಯಿಂದಲೋ, ಅದೇ ಹುಡುಗಿ ತನ್ನ ಡ್ರೆಸ್‌ ಬದಲಿಸಿ, ಸುಬ್ಬರಾಯರು ಮತ್ತು ಗಣಪತಿ ರಾಯರು ಉಭಯಕುಶಲೋಪರಿ ನಡೆಸುತ್ತಿದ್ದಂತೆ, ಕಾಫಿ, ತಿಂಡಿಯೊಂದಿಗೆ ಪ್ರತ್ಯಕ್ಷಳಾಗಿ ಬಿಟ್ಟಳು. ಸುಬ್ಬರಾಯರು ಹುಡುಗಿಯನ್ನು ತಾರೀಫು ಮಾಡಲು ತೊಡಗಿದರು. ‘ನೀವು ಕಂಡಿರಲ್ಲ. ಹುಡುಗಿಯಲ್ಲಿ ಏನೂ ಊನವಿಲ್ಲ. ಮುಂಬಯಿಯಲ್ಲೇ ಹುಟ್ಟಿಬೆಳೆದರೂ, ಕನ್ನಡದಲ್ಲೇ ವಿದ್ಯಾಭ್ಯಾಸ ಮಾಡಿದ್ದಾಳೆ. ಮನೆ ಕೆಲಸದಲ್ಲಿ ಜಾಣೆ. ಸಂಸಾರವನ್ನು ಮುಚ್ಚಟೆಯಾಗಿ ನೋಡಿಕೊಳ್ಳುತ್ತಾಳೆ. ನಿಮ್ಮಿಬ್ಬರಲ್ಲಿ ಯಾರು ಪಸಂದಾಗುತ್ತಾರೆ ಎಂದು ನಾನು ಆಕೆಯನ್ನು ಕೇಳಿ ಹೇಳುತ್ತೇನೆ. ಇಬ್ಬರು ಕೂಡ ಅವಳಿಗೆ ಇಷ್ಟವಾಗದಿದ್ದಲ್ಲಿ ಬೇರೆ ಹುಡುಗಿಯರಿಗೇನು ಬರವಿಲ್ಲ’ ಎಂಬಿತ್ಯಾದಿ ಅವರ ಮಾತುಗಳು ನಮ್ಮಿಬ್ಬರ ಕಿವಿಯ ಸನಿಹದಲ್ಲಿ ಮೆತ್ತಗಿನ ದನಿಯಲ್ಲಿ ಸಾಗಿತ್ತು. ನನಗಾದರೂ ಮದುವೆಯಾಗುವುದು ಅವಶ್ಯವಾಗಿತ್ತು. ಯಾಕೆಂದರೆ ಊರಿನಲ್ಲಿ ಅಮ್ಮ ಮತ್ತು ಅಣ್ಣಂದಿರ ಬಲವಂತ, ಮೇಲಾಗಿ ನನಗೆ ಬಿಎಆರ್‌ಸಿಯ ವಸತಿ ಸಂಕುಲದಲ್ಲಿ ಕ್ವಾರ್ಟರ್ಸ್‌ ಸಿಗುವ ಸಂಭವ ಖಚಿತವಿತ್ತು. ಹುಡುಗಿಯಾದರೊ ತನ್ನನ್ನು ವರಿಸಲು ನಾನೇ ಯೋಗ್ಯನಾದ ವ್ಯಕ್ತಿ ಎಂದು ಆರಿಸಿ ತನ್ನ ಹೆತ್ತವರಿಗೂ, ಸುಬ್ಬರಾಯರಿಗೂ ತಿಳಿಸಿಬಿಟ್ಟಳು. ಮಧ್ಯಸ್ಥನಿಗೆ ಏನೇನೂ ಬೇಸರ ವಾಗಲಿಲ್ಲ. ಕಾರಣ, ಇದಾಗಲೇ ಆತ ತನ್ನ ಸಹೋದ್ಯೋಗಿಯೊಬ್ಬಳನ್ನು ಮದುವೆಯಾಗು ವುದಾಗಿ ನಿರ್ಧರಿಸಿದ್ದ. ಅದಕ್ಕೆ ಅವನ ಮತ್ತು ಹುಡುಗಿಯ ಮನೆಯವರೂ ಸಮ್ಮತಿಸಿದ್ದರು. ಹಿರಿಯರಾದ ಸುಬ್ಬರಾಯರ ಆಣತಿ ಮೀರಬಾರದು ಎನ್ನುವುದಕ್ಕಾಗಿ ಈ ಸ್ವಯಂವರ ನಾಟಕದಲ್ಲಿ ಪಾಲುದಾರನಾಗಿದ್ದ. ಒಂದೊಮ್ಮೆ ಹುಡುಗಿ ಆತನನ್ನೇ ಆರಿಸಿದ್ದಲ್ಲಿ ನಾಟಕ ವಿಷಾದಾಂತವಾಗುತ್ತಿದ್ದುದು ಖಂಡಿತ.

ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ ಪುಣ್ಯಕೋಟಿ ಕಥೆ; ಜೋಗಿ ವಿಮರ್ಶೆ

ಹಲವಾರು ಹುಡುಗಿಯರನ್ನು ಕಂಡು ‘ಪ್ರೀತಿಸುತ್ತೇನೆ’ ಎನ್ನುವ ಭ್ರಮೆಯಲ್ಲಿದ್ದ, ಪೀಚಲು ದೇಹದ ನನ್ನನ್ನು ಮುಂಬಯಿಯ ಸುಪ್ರಸಿದ್ಧ ದಕ್ಷಿಣ ಭಾರತೀಯ ಹೊಟೇಲಿನ ಮಾಲೀಕರಾದ ಶ್ರೀಮಾನ್‌ ಗಣಪತಿ ರಾಯರ ಪುತ್ರಿ ಮೆಚ್ಚಿದುದು ಸಣ್ಣ ಮಾತೇ? ನನ್ನ ಒಪ್ಪಿಗೆಯನ್ನು ತಿಳಿಸಿಬಿಟ್ಟೆ.

ನಾನು ನನ್ನ ಭಾವೀ ಮಾವನವರಲ್ಲಿ ಆಗಲೇ ಸ್ಪಷ್ಟವಾಗಿ ನನ್ನ ಪೂರ್ವಾಪರ ತಿಳಿಸಿದೆ. ನನಗೆ ಬರುವ ಸಂಬಳ ಮುನ್ನೂರರ ಗಡಿ ದಾಟಿಲ್ಲ. ನಾನು ಸಿಗರೇಟು ಸೇದುತ್ತೇನೆ. ಪಾರ್ಟಿಗಳಲ್ಲಿ ಗುಂಡು ಹಾಕುವುದೂ ಉಂಟು ಎಂಬುದನ್ನೆಲ್ಲ ಹೇಳಿದೆ. ಗಣಪತಿ ರಾಯರು ತುಂಬಾ ಒಳ್ಳೆಯ ಮನುಷ್ಯ. ಒಳ್ಳೆಯ ಹಾಸ್ಯ ಪ್ರವೃತ್ತಿಯವರು. ಸುಬ್ಬರಾಯರಿಗೆ ಅವರು ಹೇಳಿದರಂತೆ. ‘ಹುಡುಗ ಪ್ರಾಮಾಣಿಕ, ಯಾವುದೇ ಮುಚ್ಚುಮರೆ ಇಲ್ಲದೆ ಇದ್ದುದನ್ನು ಇದ್ದ ಹಾಗೆಯೇ ಹೇಳಿದ್ದಾನೆ’.

ನನ್ನ ಹಿರಿಯಣ್ಣ ನಾನು ವರದಕ್ಷಿಣೆ ತೆಗೆದುಕೊಳ್ಳುವ ಮಾತನ್ನೇ ಆಡಿಲ್ಲ ಏಕೆ ಎಂದು ಕಾರ್ಡು ಮುಖೇನ ತನ್ನ ಕೋಪ ವ್ಯಕ್ತಪಡಿಸಿದ್ದಕ್ಕೆ ವರದಕ್ಷಿಣೆ ಬೇಡುವುದಿದ್ದಲ್ಲಿ ನನಗೆ ಮದುವೆಯೇ ಬೇಡ ಎಂದು ಉತ್ತರಿಸಿದ್ದೆ. ಅಂತೂ ಅಣ್ಣಂದಿರಿಬ್ಬರು ನಿಶ್ಚಯ ತಾಂಬೂಲಕ್ಕೆ ಮುಂಬಯಿಗೆ ಆಗಮಿಸಿದರು. ಗಣಪತಿ ರಾಯರ ಸರಳತೆ, ಹಾಸ್ಯ ಪ್ರವೃತ್ತಿ, ಭರ್ಜರಿ ಊಟೋಪಚಾರಕ್ಕೆ ಮಾರುಹೋದ ದೊಡ್ಡಣ್ಣ ವರದಕ್ಷಿಣೆಯ ಬಗ್ಗೆ ಚಕಾರವೆತ್ತಲಿಲ್ಲ. ಎಷ್ಟಾದರೂ ಗಣಪತಿ ರಾಯರಂತೆಯೇ ಹೊಟೇಲು ಸಾಹುಕಾರನಾದ ತಾನು ವರದಕ್ಷಿಣೆ ತೆಗೆದುಕೊಳ್ಳುವ ಪ್ರಸ್ತಾಪ ಮಾಡುವುದು ತನ್ನ ಭರಾಮಿಗೆ ಕಡಿಮೆ ಎಂದು ಭಾವಿಸಿರಬೇಕು. ನಮ್ಮ ಎಂಗೇಜ್‌ಮೆಂಟ್‌ ಸೆರಮನಿ ಅತ್ಯಂತ ಸರಳವಾಗಿ ನಡೆಯಿತು. ದೇವರೆದುರು ಪ್ರಾರ್ಥಿಸಿ ಉಂಗುರ ವಿನಿಮಯವಷ್ಟೇ. ಶ್ರೀ ಮೂಲ್ಕಿ ಬೈಕಾಡಿ ಸುಬ್ಬರಾಯರು, ಕುಮಾರಸ್ವಾಮಿ, ಮಧ್ಯಸ್ಥರು ಹಾಗೂ ನನ್ನ ಅಣ್ಣಂದಿರು- ಇಷ್ಟುಜನ ನಿಶ್ಚಯ ತಾಂಬೂಲಕ್ಕೆ ಸಾಕ್ಷಿಯಾಗಿದ್ದರು. ಆ ಬಳಿಕ ಪಾಯಸದೂಟ. 1968ರ ಮೇ ಒಂದರಂದು ಮದುವೆ ಎಂದು ನಿಶ್ಚಯವಾಯಿತು. ನಿಶ್ಚಿತಾರ್ಥ ಮತ್ತು ಮದುವೆಯ ದಿನಾಂಕದ ನಡುವೆ ಸುಮಾರು ನಾಲ್ಕು ತಿಂಗಳ ಅಂತರವಿತ್ತು. ನನ್ನ ಪೇಯಿಂಗ್‌ ಗೆಸ್ಟ್‌ ಮನೆಯ ಕೆ.ಆರ್‌. ಮೂಲ್ಕಿಯವರ ಮನೆಗೂ ನನ್ನ ಭಾವೀ ಪತ್ನಿ ಭಾರತಿ ತನ್ನ ಕಸಿನ್‌ಗಳೊಂದಿಗೆ ಹಲವಾರು ಬಾರಿ ಭೇಟಿ ನೀಡಿದ್ದಳು. ನಾನೂ ಅವಳ ಮನೆಗೆ ಆಗಾಗ ಹೋಗುವುದಿತ್ತು. ಎಂ.ಎಸ್‌, ಬಾಲಮುರಳಿಕೃಷ್ಣ ಮುಂತಾದವರ ಸಂಗೀತ ಕಛೇರಿಗೂ ಆಕೆ ನನ್ನ ಜೊತೆಯಾಗುತ್ತಿದ್ದಳು.

ನೆನಪಿಡಿ, ಇವುಗಳ ಮೇಲೆ ಹಣ ಹೂಡುವುದು ಇನ್ವೆಸ್ಟ್‌ಮೆಂಟ್ ಅಲ್ಲ!

ಈ ನಡುವೆ ಕೆಲವು ವಿಘ್ನ ಸಂತೋಷಿಗಳು ನಮ್ಮ ಮದುವೆಗೆ ಕಲ್ಲು ಹಾಕುವ ಪ್ರಯತ್ನವನ್ನೂ ನಡೆಸಿದರು. ನಾನು ವಾಸಿಸುತ್ತಿದ್ದ ರಿಸವ್‌ರ್‍ ಬ್ಯಾಂಕ್‌ ಕ್ವಾರ್ಟರ್ಸ್‌ ಮುಂಬಯಿಯ ಕುಖ್ಯಾತ ರೆಡ್‌ ಲೈಟ್‌ ಸ್ಟ್ರೀಟ್‌ಗಳಾದ ಶುಕ್ಲಾಜಿ ಸ್ಟ್ರೀಟ್‌, ಫರಾಸ್‌ ರೋಡ್‌ಗಳಿಗೆ ಅನತಿ ದೂರದಲ್ಲಿ ಇತ್ತು. ಬಿ.ಎ.ಆರ್‌.ಸಿ.ಗೆ ಸಂದರ್ಶನಕ್ಕಾಗಿ ಬರುವ ಅನೇಕ ವಿದೇಶೀ ವಿಜ್ಞಾನಿಗಳನ್ನು ಅವರ ಕೋರಿಕೆಯ ಮೇರೆಗೆ ಶುಕ್ಲಾಜಿ ಸ್ಟ್ರೀಟ್‌, ಕಾಮಾಟಿಪುರ, ಫರಾಸ್‌ರೋಡ್‌, ಗೋಲ್‌ ಪೀಟಾಗಳಿಗೆಲ್ಲ ಟ್ಯಾಕ್ಸಿಯಲ್ಲಿ ಕರೆದೊಯ್ದು, ನಾನು ತಿರುಗಾಡಿಸಿದ್ದುಂಟು. ಹಾಡುಹಗಲೇ ತಲೆ ಹಿಡುಕರು, ಬೆಲೆವೆಣ್ಣುಗಳು ನಮ್ಮ ಕೈ ಹಿಡಿದು ಎಳೆದದ್ದೂ ಉಂಟು. ಇದಲ್ಲದೆ ಬೈಕುಲಾದ ಪ್ರಧಾನ ಪೋಸ್ಟ್‌ ಆಫೀಸು ಇರುವುದು ಫರಾಸ್‌ ರೋಡಿನ ಪಕ್ಕದಲ್ಲೆ. ಅಮ್ಮನಿಗೆ ಹಣ ಮನಿಯಾರ್ಡರ್‌ ಮಾಡಲೋ, ಪತ್ರವನ್ನು ಪೋಸ್ಟ್‌ ಮಾಡಲೋ ನಾನು ಆಗಾಗ ಈ ಪೋಸ್ಟಾಫೀಸಿನತ್ತ ಹೋಗುವುದು ಅನಿವಾರ್ಯವಾಗಿತ್ತು.

ಕುಖ್ಯಾತ ಕೆಂಪು ದೀಪ ಸ್ಥಾನದ ಸಮೀಪ ನಾನು ಠಳಾಯಿಸುವುದನ್ನು ಕಂಡ ಯಾರೋ ಅಜ್ಞಾತ ಸುಭಗ, ‘ನಿಮ್ಮ ಭಾವೀ ಅಳಿಯ ಒಳ್ಳೇ ಖಯಾಲಿ ಮನುಷ್ಯ. ಹೊತ್ತಿಲ್ಲ ಗೊತ್ತಿಲ್ಲ. ಸೂಳೆಗೇರಿಯ ಸುತ್ತಮುತ್ತ ಗಿರಕಿ ಹೊಡೆಯುತ್ತಾನೆ’ ಎನ್ನುವ ಅಮೋಘ ಸಂದೇಶವನ್ನು ನನ್ನ ಭಾವೀ ಮಾವನವರಿಗೆ ಮುಟ್ಟಿಸಿದನಂತೆ. ‘ಗಾಳಿ ಮರದ ಹಾಗೆ ಉದ್ದವಾಗಿದ್ದು, ತಿಂಗಳಾನುಗಟ್ಟಲೆ ಉಪವಾಸ ಮಾಡಿದವನ ಹಾಗೆ ಸಪೂರವಾಗಿದ್ದರೂ, ಅವನು ಗಂಡಸು ಹೌದು ಎನ್ನುವುದು ಸಾಬೀತಾಯಿತು’ ಎಂದು ಗಣಪತಿ ರಾಯರು ಬಾಯ್ತುಂಬ ನಕ್ಕರಂತೆ. ಈ ವಿಷಯವನ್ನು ನನ್ನ ಮದುವೆಯ ಬಳಿಕ ಅವರೇ ನನಗೆ ಹೇಳಿದರು.

‘ಫಿರ್ಯಾದು ಕೊಟ್ಟವರ ಮಾತಿನಲ್ಲಿ ಹುರುಳಿಲ್ಲವೆಂದಲ್ಲ. ನಾನು ಆ ಕಡೆ ಅಡ್ಡಾಡಿದ್ದುಂಟು. ಅಡ್ಡಾಡಿದ ಮಾತ್ರಕ್ಕೆ ನಾನು ಅಲ್ಲಿನ ಹೆಣ್ಣುಗಳ ಸಹವಾಸ ಮಾಡಬೇಕೆಂದಿಲ್ಲ’ ಎಂದೆಲ್ಲ ನಾನು ನೀಡಿದ ಸಮಜಾಯಿಷಿಗೆ ‘ನೋಟದಲ್ಲೇ ಬಸಿರಾಗುವುದುಂಟೇ? ಅದೆಲ್ಲ ಮರೆತುಬಿಡಿ. ಕಸುಬಿಲ್ಲದ ನಾಲಿಗೆ ಎತ್ತೆತ್ತಲೊ ಹೊರಳುತ್ತದೆ’ ಎಂದರು ಮಾವನವರು.

click me!