ನಾವೇಕೆ ಮಕ್ಕಳಿಗೆ ಪುರಾಣದ ಕತೆ ಹೇಳಬೇಕು?

By Suvarna News  |  First Published Jan 19, 2020, 11:11 AM IST

ಜೀವನ ನಡೆಸಲು ಸಾವಿರಾರು ಮಾರ್ಗಗಳಿವೆ. ಹಾಗಾಗಿ ಪೋಷಕರು ತನ್ನ ಕನಸನ್ನು ಮಕ್ಕಳ ಮೇಲೆ ಹೇರಬಾರದು. ಒಬ್ಬ ಒಳ್ಳೆಯ ಮನುಷ್ಯ ಆಗುವಂತೆ ಮಕ್ಕಳನ್ನು ಬೆಳೆಸಬೇಕು. ಅದಕ್ಕಾಗಿ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರು ವಿದ್ಯಾವಂತರಾಗಿರಬೇಕು. ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯದ ಅರಿವು ಅವರಿಗಿರಬೇಕು.


ಮಕ್ಕಳ ಗ್ರಹಿಕಾ ಶಕ್ತಿ ತುಂಬಾ ಚಿಕ್ಕದಿರುತ್ತದೆ. ಆದರೆ ಆ ಸಮಯದಲ್ಲಿ ಉತ್ತಮವಾದ ಮೌಲ್ಯಯುತ ಪಾಠ ಹೇಳಿಕೊಡಬೇಕಾದ್ದು ಪೋಷಕರ ಕರ್ತವ್ಯವೂ ಆಗಿರುತ್ತದೆ. ಏಕೆಂದರೆ ಆ ಎಲ್ಲಾ ಮೌಲ್ಯಗಳೇ ಮುಂದೆ ಅವರ ಭವಿಷ್ಯವನ್ನು ರೂಪಿಸುತ್ತವೆ. ಆದರೆ ನೀವು ಯಾವಾಗಲೂ ಸತ್ಯವನ್ನೇ ಹೇಳಬೇಕು, ಕಠಿಣ ಪರಿಶ್ರಮ ಪಡಬೇಕು ಎಂದು ಮಕ್ಕಳಿಗೆ ಧರ್ಮೋಪದೇಶ ಮಾಡುತ್ತಿದ್ದರೆ ಅದು ಕೆಲಸಕ್ಕೆ ಬರುವುದಿಲ್ಲ.

ಪದೇ ಪದೇ ಇದನ್ನೇ ಹೇಳುತ್ತಿದ್ದರೆ ಮಕ್ಕಳಿಗೆ ಬೇಸರ ಉಂಟಾಗುತ್ತದೆ. ಆದರೆ ಅದೇ ಸತ್ಯ, ಪರಿಶ್ರಮ, ಸಾತ್ವಿಕತೆಯ ಮೌಲ್ಯವನ್ನು ಸಾರುವ ಕತೆಗಳನ್ನು ಹೇಳಿದರೆ ಮಕ್ಕಳಿಗೆ ಬೇಸರ ಆಗುವುದಿಲ್ಲ. ಈ ಮೂಲಕ ಅವರಲ್ಲಿ ಮೌಲ್ಯಗಳನ್ನು ಬಿತ್ತಿದಂತೆಯೂ ಆಗುತ್ತದೆ.

Tap to resize

Latest Videos

undefined

ಉದ್ಯೋಗಸ್ಥೆ ಅಮ್ಮನಿಗಿಂತ ಮನೇಲಿರೋ ಅಮ್ಮಂಗೆ ಎಷ್ಟು ಕಷ್ಟ ಗೊತ್ತಾ?

ರಾವಣನಿಗೆ 10 ತಲೆ ಇತ್ತೆಂದರೆ..

ನಾನು ಸಾಕಷ್ಟುಪೌರಾಣಿಕ ಕತೆಗಳನ್ನು ಓದಿದ್ದೇನೆ. ಕಾರಣ ನಾನು ಬೆಳೆದು ಬಂದ ಪರಿಸರವೇ ಹಾಗಿತ್ತು. ಆಗ ಟೀವಿ, ರೇಡಿಯೋ, ಇಂಟರ್‌ನೆಟ್‌ ಇರಲಿಲ್ಲ. ಇನ್ನು ನಾನು ಬೆಳೆದ ಹಳ್ಳಿಯಲ್ಲಿ ದೊರಕುತ್ತಿದ್ದುದು ಬರೀ ಪೌರಾಣಿಕ ಪುಸ್ತಕಗಳೇ. ಹಾಗಾಗಿ ನಾನು ಅವನ್ನೇ ಹೆಚ್ಚು ಓದಿದೆ. ಪೌರಾಣಿಕ ಕತೆಗಳು ಒಂದು ರೀತಿಯ ಸಂಕೇತಗಳಷ್ಟೆ. ಅಂದರೆ ರಾವಣನಿಗೆ 10 ತಲೆ ಇತ್ತು ಎಂದರೆ, ದೈಹಿಕವಾಗಿ ಹತ್ತು ತಲೆ ಇತ್ತು ಎಂದರ್ಥವಲ್ಲ.

ಒಂದು ಸಮಸ್ಯೆಗೆ ಆತನಲ್ಲಿ 10 ಪರಿಹಾರದ ವಿಧಾನಗಳಿದ್ದವು ಎಂದು ಅರ್ಥೈಸಿಕೊಳ್ಳಬಹುದು. ಪೌರಾಣಿಕ ಕತೆಗಳನ್ನು ಬರೆದವರು ಪುರುಷರು. ಅದರಲ್ಲಿ ಹೆಚ್ಚಾಗಿ ಹೇಳಿರುವುದೂ ಪುರುಷರು ಮತ್ತು ಯುದ್ಧದ ಬಗ್ಗೆ. ಆದರೆ ಅಲ್ಲಿಯೂ ಪುರುಷರ ನಿರ್ಧಾರಗಳ ಮೇಲೆ ಪ್ರಭಾವ ಬೀರಿರುವ ಮಹಿಳೆಯರಿದ್ದಾರೆ. ಪುರುಷರಿಗಿಂತ ವಿಭಿನ್ನವಾಗಿ ನಿರ್ಧಾರ ತೆಗೆದುಕೊಳ್ಳುವ ಹೆಂಗಸರಿದ್ದಾರೆ.

ನನ್ನ ಬಾಲ್ಯದಲ್ಲಿ ನಮ್ಮ ಅಜ್ಜ-ಅಜ್ಜಿ ತುಂಬಾ ಪ್ರಭಾವ ಬೀರಿದ್ದಾರೆ. ಲೋಕಪ್ರೀತಿಯ ಪಾಠ ಕಲಿತಿದ್ದು ನನ್ನ ಅಜ್ಜ-ಅಜ್ಜಿಯಿಂದ. ಸಾಮಾನ್ಯವಾಗಿ ಇಂಥ ಪೌರಾಣಿಕ ಕತೆಗಳನ್ನು ಹಿಂದೆ ಅಜ್ಜ-ಅಜ್ಜಿಯರು ತಮ್ಮ ಮೊಮ್ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಆದರೆ ಇಂದು ತಂದೆ ತಾಯಿಯಾಗಲೀ ಅಜ್ಜ-ಅಜ್ಜಿಯಾಗಲೀ ಮಕ್ಕಳಿಗೆ ಕತೆ ಹೇಳುವ ಪರಂಪರೆ ಮರೆಯಾಗುತ್ತಿದೆ. ಆದರೆ ಪೌರಾಣಿಕ ಕತೆಗಳು ಭಾರತದ ಸಂಸ್ಕೃತಿಯ ಭಾಗ. ನಾನು ಈ ಬಗ್ಗೆ ಪುಸ್ತಕ ಬರೆದಿದ್ದು ಮಕ್ಕಳಿಗಾಗಿ ಅಲ್ಲ, ಅಪ್ಪ ಅಮ್ಮಂದಿರಿಗಾಗಿ. ಇದನ್ನು ಅಮ್ಮಂದಿರು ಮೊದಲು ಓದಬೇಕು, ಅನಂತರ ಮಕ್ಕಳು ಓದಬೇಕು.

ಮನೋಸ್ಥೈರ‍್ಯ ತುಂಬುತ್ತವೆ

ಪೌರಾಣಿಕ ಕತೆಗಳು ವಾಸ್ತವ ಬದುಕಿಗೆ ಅನೇಕ ರೀತಿಯಲ್ಲಿ ನೆರವಾಗುತ್ತವೆ. ಏಕೆಂದರೆ ಸ್ವತಃ ನಾನೂ ಕೂಡ ಕಷ್ಟದಲ್ಲಿರುವ ಸಂದರ್ಭದಲ್ಲಿ ಹಲವಾರು ಅವತಾರಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದ ಕೃಷ್ಣನನ್ನು ನೆನಪಿಸಿಕೊಳ್ಳುತ್ತೇನೆ. ಜೀವನ ಎಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಎದುರಾಗುತ್ತವೆ. ಆ ಸಂದರ್ಭದಲ್ಲಿ ಪೌರಾಣಿಕ ಕತೆಗಳು ಎದ್ದು ನಿಲ್ಲುವ ಬಲ ನೀಡುತ್ತವೆ.

ಅಂಥ ದೇವಾನುದೇವತೆಗಳಿಗೇ ಕಷ್ಟಗಳು ಬಂದಿದ್ದವು ಎಂದಮೇಲೆ ನಮ್ಮಂತಹ ಸಾಮಾನ್ಯ ಮನುಷ್ಯರಿಗೆ ಕಷ್ಟಗಳು ಬರುವುದು ಸಾಮಾನ್ಯ ಎಂಬ ಮನೋಸ್ಥೈರ‍್ಯವನ್ನು ಪುರಾಣದ ಕತೆಗಳು ನಮ್ಮಲ್ಲಿ ತುಂಬುತ್ತವೆ. ಹಾಗೆಯೇ ಕೆಲವೊಂದು ಮೌಲ್ಯಗಳನ್ನೂ ಬಿತ್ತುತ್ತವೆ. ರಾಮ ಎಂದೂ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂಬುದು ತಂದೆ ತಾಯಿಯ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ.

ಗ್ರೀಕ್‌ ಪೌರಾಣಿಕ ಕತೆಗಳು ಜಗತ್ಪ್ರಸಿದ್ಧಿ ಪಡೆದಿವೆ. ಆದರೆ ನಮ್ಮ ಪೌರಾಣಿಕ ಕತೆಗಳೇನೂ ಕಮ್ಮಿ ಇಲ್ಲ. ಅವುಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸಲೇಬೇಕು. ಇದು ನಮ್ಮ ಸಂಸ್ಕೃತಿಯ ಭಾಗ. ಏಕೆಂದರೆ ಇವತ್ತು ನಾವು ಬರೆಯುವ ಕತೆಗಳು ಒಂದು ಇಪ್ಪತ್ತೈದು ವರ್ಷ ಇರಬಹುದು. ಆದರೆ ಪೌರಾಣಿಕ ಕತೆಗಳು ಶತಶತಮಾನಗಳವರೆಗೆ ಉಳಿಯುತ್ತವೆ. ಒಂದಂತೂ ಸತ್ಯ, ಎವಗ್ರೀನ್‌ ಕತೆ ಎಂಬುದು ಎಲ್ಲೂ ಇಲ್ಲ, ಎವಗ್ರೀನ್‌ ಸಾಹಿತ್ಯ ಇರಬಹುದು. ಹಾಗಾಗಿ ಪೌರಾಣಿಕ ಕತೆಗಳನ್ನು ಓದಿ, ಮಕ್ಕಳಿಗೂ ಹೇಳಿ, ಮುಂದಿನ ಜನಾಂಗಕ್ಕೂ ಕೊಡುಗೆಯಾಗಿ ನೀಡಬೇಕು.

ತಂದೆಗೆ ಕ್ಯಾನ್ಸರ್, ಚಿಕಿತ್ಸೆಗಾಗಿ ಆಟೋ ಓಡಿಸ್ತಿದ್ದಾಳೆ ದಿವ್ಯಾಂಗ ಮಗಳು!

ಅಜ್ಜ-ಅಜ್ಜಿ ಮೊಮ್ಮಕ್ಕಳಿಗೆ ಕತೆ ಹೇಳ್ಬೇಕು

‘ಗ್ರಾಂಡ್‌ ಪೇರೆಂಟ್ಸ್‌ ಮತ್ತು ಗ್ರಾಂಡ್‌ ಚಿಲ್ಡ್ರನ್‌ ಬಾಂಡ್‌ ಟುಗೆದರ್‌ ಬಿಕಾಸ್‌ ದೆ ಹ್ಯಾವ್‌ ಅ ಕಾಮನ್‌ ಎನಿಮಿ’ ಎನ್ನುವ ಮಾತಿದೆ. ಸುಮ್ಮನೆ ತಮಾಷೆಗೆ ಈ ಮಾತು ಹೇಳುತ್ತೇನೆ. ಈ ಕಾಮನ್‌ ಎನಿಮಿ ಯಾರು? ಅಪ್ಪ-ಅಮ್ಮ! ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧ ಇರುತ್ತದೆ. ಆದರೆ ಮಕ್ಕಳ ಬಗ್ಗೆ ಪೋಷಕರಿಗೆ ಇರುವಷ್ಟುಜವಾಬ್ದಾರಿ ಅವರಿಗೆ ಇರುವುದಿಲ್ಲ. ನಾನು ಅಜ್ಜಿಯಾದಾಗ ತುಂಬಾ ಖುಷಿಪಟ್ಟೆ.

ಏಕೆಂದರೆ ನನಗೆ ಯಾವುದೇ ಜವಾಬ್ದಾರಿ ಇರಲಿಲ್ಲ. ಬರೀ ಮೊಮ್ಮಕ್ಕಳೊಂದಿಗೆ ಕಾಲ ಕಳೆದು ಖುಷಿಪಡುವುದಷ್ಟೆ. ಆದರೆ ಆ ಸಮಯದಲ್ಲಿ ನೀವು ಪ್ರಬುದ್ಧರಾಗಿರುತ್ತೀರಿ, ಅಲ್ಲದೆ ವಯಸ್ಸಾಗಿರುತ್ತದೆ. ಜೀವನದ ಅನುಭವಗಳು ಅನೇಕ ಪಾಠ ಕಲಿಸಿರುತ್ತವೆ. ಹಾಗಾಗಿ ಆ ಎಲ್ಲಾ ಅನುಭವಗಳನ್ನು ಕತೆಯ ರೂಪದಲ್ಲಿ ಕಟ್ಟಿಕೊಟ್ಟು ಮಕ್ಕಳನ್ನು ರೂಪಿಸಬೇಕು. ಆಗ ಮೊಮ್ಮಕ್ಕಳೊಂದಿಗಿನ ಬಂಧವೂ ಗಟ್ಟಿಯಾಗುತ್ತದೆ. ಅದೇ ಕುಟುಂಬ.

ಮೊದಲು ನಾವು ಓದಬೇಕು

ಮಕ್ಕಳಿಗೆ ಬರೀ ಓದು ಓದು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಾಗೆ ಹೇಳಿದರೆ ಅವರು ಕೇಳುವುದೂ ಇಲ್ಲ. ಅವರಿಗೆ ಓದು ಎನ್ನುವುದಕ್ಕಿಂತ ಮೊದಲು ನಾವು ಓದಲು ಆರಂಭಿಸಬೇಕು. ನಮ್ಮ ಮನೆಯಲ್ಲಿ ನಾನು ಓದಲು ಆರಂಭಿಸಿದ ಬಳಿಕ ಮಗಳು ಓದಲು ಆರಂಭಿಸುತ್ತಾಳೆ, ಅವಳನ್ನು ನೋಡಿ ಮೊಮ್ಮಗಳೂ ಓದಲು ಆರಂಭಿಸುತ್ತಾಳೆ. ನಮ್ಮ ಮನೆಯಲ್ಲಿ ಅಜ್ಜಿ ಎಂದರೆ ಪುಸ್ತಕ ಎಂದಾಗಿದೆ. ಇನ್ನು ಓದಲು ಇಷ್ಟವೇ ಇರದ ಮಕ್ಕಳಿಗೆ ಕಷ್ಟದ ಪುಸ್ತಕ ಕೊಟ್ಟು ಓದು ಎಂದರೆ ಓದುವ ಅಭ್ಯಾಸವೇ ದೂರಾಗುವ ಅಪಾಯ ಇರುತ್ತದೆ.

ಆಗ ಅವರಿಗೆ ಯಾವ ರೀತಿಯ ಪುಸ್ತಕ ಇಷ್ಟವೋ ಅದೇ ರೀತಿಯ ಪುಸ್ತಕ ಕೊಡಬೇಕು. ಕಷ್ಟದ ಪುಸ್ತಕಗಳ ಬದಲಿಗೆ ಸರಳವಾದ ಪುಸ್ತಕ ಕೊಡಬೇಕು. ಉದಾಹರಣೆಗೆ ಮಗು 4ನೇ ತರಗತಿ ಓದುತ್ತಿದೆ ಎಂದರೆ 3ನೇ ತರಗತಿಯ ಪುಸ್ತಕ ನೀಡಬೇಕು.

ಇನ್ನೊಬ್ಬರೊಂದಿಗೆ ಹೋಲಿಸಬೇಡಿ

ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಹಾಗಾಗಿ ಸ್ಪರ್ಧಾತ್ಮಕತೆಯೂ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಮಕ್ಕಳನ್ನು ಇನ್ನೊಂದು ಮಗುವಿನ ಜೊತೆಗೆ ಹೋಲಿಕೆ ಮಾಡಬಾರದು. ಹಾಗೆಯೇ ವಿಷಯವನ್ನು ಮೊದಲು ಅರ್ಥಮಾಡಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿ ಹೇಳಬೇಕು. ಆಗ ಆಟೋಮ್ಯಾಟಿಕಲಿ ಅಂಕಗಳು ಬಂದೇ ಬರುತ್ತವೆ. ನನ್ನ ಅಪ್ಪ-ಅಮ್ಮ ‘ನೀನು ಎಷ್ಟುಅಂಕವನ್ನಾದರೂ ಪಡೆ, ಆದರೆ ಮೊದಲು ವಿಷಯವನ್ನು ಅರ್ಥ ಮಾಡಿಕೋ’ ಎನ್ನುತ್ತಿದ್ದರು.

ಮಕ್ಕಳಿಗೆ ನೀನು ಇಂಜಿನಿಯರ್‌ ಆಗಲೇಬೇಕು, ವಿದೇಶಕ್ಕೆ ಹೋಗಲೇಬೇಕು ಎನ್ನುವ ಒತ್ತಡ ಹಾಕಬೇಡಿ. ಪ್ರತಿಯೊಬ್ಬರಿಗೂ ಒಂದೊಂದು ಜೀವನ ಇದ್ದೇ ಇದೆ. ಜೀವನ ನಡೆಸಲು ಸಾವಿರಾರು ಮಾರ್ಗಗಳಿವೆ. ಇದಲ್ಲದಿದ್ದರೆ ಇನ್ನೊಂದು ರೀತಿ ಜೀವನ ನಡೆಸಲು ಅವಕಾಶವಿದೆ ಎನ್ನುವುದನ್ನು ಪೋಷಕರು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದು ಮಗುವಿಗೆ ಶಿಕ್ಷಣ ನೀಡುವುದಕ್ಕಿಂತ ಮುಖ್ಯ. ಹಾಗೆಯೇ ನಿಮ್ಮ ಕನಸನ್ನು ಅವರ ಮೇಲೆ ಹೇರಬೇಡಿ.

ಹಿಂಗೆ ಮಾಡಿದ್ರೆ ಕಿರಿಕ್ ಮಾಡದೆ ಡ್ರೆಸ್ ಹಾಕೊಳ್ತಾರೆ ಮಕ್ಕಳು

ನಾನು ಡಾಕ್ಟರ್‌; ನನ್ನ ಮಗುವೂ ಡಾಕ್ಟರ್‌ ಆಗಬೇಕೆಂದು ಬಯಸಬೇಡಿ. ಒಬ್ಬ ಒಳ್ಳೆ ಮನುಷ್ಯ ಆಗುವಂತೆ ಬೆಳೆಸಿ. ಅದಕ್ಕಾಗಿ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರು ವಿದ್ಯಾವಂತರಾಗಿರಬೇಕು, ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯದ ಅರಿವು ಅವರಿಗಿರಬೇಕು. ಅವರು ತಪ್ಪು ಮಾಡಿದಾಗ ಅದನ್ನು ಸರಿ ಮಾಡಿ, ಮುಂದೆ ಆ ತಪ್ಪು ಮಾಡದಂತೆ ತಿಳಿ ಹೇಳಿ. ಅದು ಬಿಟ್ಟು ಅಕ್ಕಪಕ್ಕದ ಮಕ್ಕಳೊಂದಿಗೆ ಹೋಲಿಸಿ ಜರಿಯಬೇಡಿ. ಇನ್ನೊಂದು ಮುಖ್ಯ ಅಂಶ ಎಂದರೆ ತಂದೆ ತಾಯಿ ತಮ್ಮ ಮಕ್ಕಳ ಆತ್ಮೀಯ ಸ್ನೇಹಿತರೂ ಆಗಿರಬೇಕು.

ಜೀವನ ನಡೆಸಲು ಸಾವಿರಾರು ಮಾರ್ಗಗಳಿವೆ. ಹಾಗಾಗಿ ಪೋಷಕರು ತನ್ನ ಕನಸನ್ನು ಮಕ್ಕಳ ಮೇಲೆ ಹೇರಬಾರದು. ಒಬ್ಬ ಒಳ್ಳೆಯ ಮನುಷ್ಯ ಆಗುವಂತೆ ಮಕ್ಕಳನ್ನು ಬೆಳೆಸಬೇಕು. ಅದಕ್ಕಾಗಿ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರು ವಿದ್ಯಾವಂತರಾಗಿರಬೇಕು. ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯದ ಅರಿವು ಅವರಿಗಿರಬೇಕು.

ಕೃಪೆ: ದ ಇಂಡಿಯನ್‌ ಎಕ್ಸ್‌ಪ್ರೆಸ್‌ ಪಾಡ್‌ಕಾಸ್ಟ್‌

click me!