ಈ ದಿನಗಳಲ್ಲಿ ಹೆಚ್ಚು ಹೆಚ್ಚು ಯುವತಿಯರು ಅವಿವಾಹಿತರಾಗಿ ಉಳಿಯಲು ಬಯಸುತ್ತಿದ್ದಾರೆ. ಈ ಅವಿವಾಹಿತ ಸ್ಟೇಟಸ್ಸನ್ನು ಕ್ರಾಂತಿಕಾರಿ ಎಂದು ನೋಡುವುದಕ್ಕಿಂತ ವಿಕಾಸದ ಹಂತವಾಗಿ ನೋಡಬೇಕು ಎನ್ನುತ್ತಾರೆ ತಜ್ಞರು.
ಒಮ್ಮೆ ಗೂಗಲ್‌ನಲ್ಲಿ ಅನ್‌ಮ್ಯಾರೀಡ್, ಸಿಂಗಲ್ ಎಂದು ಟೈಪಿಸಿ ನೋಡಿ. ಅದು ಸೀದಾ ಮಹಿಳೆಯರ ವಿಷಯಕ್ಕೇ ಹೋಗುತ್ತದೆ. ಗಂಡ ಮಕ್ಕಳಿಲ್ಲದೆ ಮಹಿಳೆ ಖುಷಿಯಾಗಿರಬಹುದಾ, ಅವಿವಾಹಿತ ಮಹಿಳೆಯರು ಹೆಚ್ಚು ಸಂತೋಷಿಗಳು, ಸಿಂಗಲ್ ಆಗಿರುವ ಆಯ್ಕೆ ಮಾಡಿಕೊಂಡ ಮಹಿಳೆಯರು, ಅವಿವಾಹಿತ ಮಹಿಳೆಯರ ಬದುಕು 50ರಲ್ಲಿ ಹೇಗಿರುತ್ತದೆ ಇಂಥವೇ ಲೇಖನಗಳ ಪಟ್ಟಿ ಸ್ಕ್ರಾಲ್ ಮಾಡಿದಷ್ಟೂ ಸಿಗುತ್ತದೆ. ಅದ್ಯಾಕೋ ಗೂಗಲ್‌ಗೆ ಅನ್‌ಮ್ಯಾರೀಡ್, ಸಿಂಗಲ್ ಯುವಕರ ಬಗ್ಗೆ ಕಾಳಜಿಯೇ ಇಲ್ಲ.
ಹೋಗಲಿ ಬಿಡಿ, ವಿಷಯ ಅದಲ್ಲ. ವಿಷಯ ಏನಪ್ಪಾ ಅಂದ್ರೆ, ಲೈಫಲ್ಲಿ ಸೆಟಲ್ ಆಗುವುದು ಯಾವಾಗ, ಮುಂದಿನ ಯೋಜನೆ ಏನು, ಏನು ಮಾಡಬೇಕೆಂದುಕೊಂಡಿದಿಯಾ ಎಂದೆಲ್ಲ ಪೋಷಕರು ಹಿಂದೆ ಮುಂದೆ ತಿರುಗಿಸಿ ಕೇಳಿದ್ದೇ ಕೇಳುವುದಿದೆ. ಇಂಥ ಪ್ರಶ್ನೆಗಳಿಂದ ಈಗಿನ ಯುವತಿಯರು ಸಿಡಿಮಿಡಿಗೊಳ್ಳುತ್ತಿದ್ದಾರಂತೆ. ಕಾರಣ ಏನು ಗೊತ್ತಾ? ಈ ಎಲ್ಲ ಪ್ರಶ್ನೆಗಳ ಹಿಂದಿನ ಗೂಢಾರ್ಥ ಮದುವೆ ಯಾವಾಗ ಆಗ್ತೀಯಾ ಎಂಬುದೇ ಆಗಿರುತ್ತದೆ ಎಂಬುದು! ಅಯ್ಯೋ, ಮದುವೆ ಬಗ್ಗೆ ವಯಸ್ಸಿನ ಹುಡುಗೀರಿಗೆ ಕೇಳಿದ್ರೆ ಸಿಟ್ಯಾಕೆ ಆಗ್ಬೇಕು ಅಂತೀರಾ?
undefined
ಈಗೀಗ ಮದುವೆ ಗೊಡವೆಯೇ ಬೇಡ, ನಾವು ಸಿಂಗಲ್ ಏಂಜೆಲ್ ಆಗೇ ಖುಷಿಯಾಗಿದೀವಿ ಅನ್ನೋ ಯುವತಿಯರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ನಗರದ ವಿದ್ಯಾವಂತ ಯುವತಿಯರು ಅವಿವಾಹಿತರಾಗಿರಲು ಬಯಸುತ್ತಿದ್ದಾರೆ. 2001ರಿಂದ 2011ರ ನಡುವೆ ಶೇ.39ರಷ್ಟು ಸಿಂಗಲ್ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು 2011ರ ಸೆನ್ಸಸ್ ತಿಳಿಸಿದೆ. ಓಹೋ, ಈ ಪಾಟಿ ಯುವತಿಯರು ಸಿಂಗಲ್ ಆಗಿರೋದಕ್ಕೇ ನಮಗೆ ಹುಡುಗಿ ಸಿಗ್ತಿಲ್ಲ ಅಂತ ಯುವಕರ ಹೃದಯ ಈಗ ಬಡಬಡಿಸುತ್ತಿರಬಹುದು.
ಆದರೆ ಕಾರಣ?
ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ, ಸ್ವಂತ ಜೀವನದ ಮೇಲೆ ಸಂಪೂರ್ಣ ಹಿಡಿತ, ಗೆಳೆಯರು ಹಾಗೂ ಹಕ್ಕುಗಳ ಕುರಿತ ಹೆಚ್ಚಿನ ತಿಳಿವಳಿಕೆ, ಬದುಕನ್ನು ಬಯಸಿದಂತೆ ಬದುಕುವ ಆಸೆ- ಎಲ್ಲವೂ ಸೇರಿ ಮಹಿಳೆಯರು ಸಂತೋಷವಾಗಿ ಸಿಂಗಲ್ ಆಗಿರುವ ತೀರ್ಮಾನ ತೆಗೆದುಕೊಳ್ಳಲು ಕಾರಣವಾಗುತ್ತಿದೆ.
ಗರ್ಭಿಣಿಯರ ಕಾಡೋ ಹೊಟ್ಟೆ ನೋವು, ಮಗುವಿನ ಮೇಲಾಗೋ ಎಫೆಕ್ಟ್...
ಇತ್ತೀಚೆಗೆ ಪತ್ರಕರ್ತೆ ಕಲ್ಪನಾ ಶರ್ಮ ಬರೆದ ಪುಸ್ತಕ- 'ಸಿಂಗಲ್ ಬೈ ಚಾಯ್ಸ್- ಹ್ಯಾಪಿಲಿ ಅನ್‌ಮ್ಯಾರೀಡ್ ವಿಮೆನ್!' ನಲ್ಲಿ ವಿವಾಹಕ್ಕೆ ಬಂಧನದಿಂದ ಹೊರಗುಳಿವ ದಿಟ್ಟ ನಿರ್ಧಾರ ಮಾಡಿದ 13 ಮಹಿಳೆಯರ ಕುರಿತ ಪ್ರಬಂಧಗಳಿವೆ. ಬೇರೆ ಬೇರೆ ಅನುಭವಗಳ ಹಿನ್ನೆಲೆಯಿದ್ದರೂ ಅವಿವಾಹಿತರಾಗಿಯೇ ಉಳಿದ, ಹಾಗೂ ಇದರಿಂದ ಕಳೆದುಕೊಂಡಿದ್ದೇನೂ ಇಲ್ಲ ಎಂದು ನಂಬಿರುವ ಮಹಿಳೆಯರ ಕತೆಗಳಿವು. ಎಲ್ಲರ ಮಾತು ಒಂದೇ- ಸಿಂಗಲ್ ಆಗಿರುವುದೇನು ಬೋರಿಂಗ್ ಅಲ್ಲ ಎಂಬುದು.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಬಿಹೇವಿಯರಲ್ ಸೈನ್ಸ್ ಪ್ರೊಫೆಸರ್ ಪಾಲ್ ಡೋಲನ್ ಕೂಡಾ, ತಮ್ಮ ಅಧ್ಯಯನವು ಅವಿವಾಹಿತ ಸಿಂಗಲ್ ಮಹಿಳೆಯರು ಹೆಚ್ಚು ಸಂತೋಷವಾಗಿರುತ್ತಾರೆ ಎಂಬುದನ್ನು ಸಾಬೀತು ಪಡಿಸಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವರು ಗಂಡಮಕ್ಕಳು ಮಾಡಿಕೊಂಡ ಓರಗೆಯ ಸ್ನೇಹಿತೆಯರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎನ್ನುತ್ತಾರೆ.
"ನೀವು ಯುವಕನಾಗಿದ್ದರೆ, ಮದುವೆಯಾಗಿ, ಯುವತಿಯಾದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ" ಎಂದು ಸಲಹೆ ನೀಡುತ್ತಾರೆ ಅವರು. ಪುರುಷರು ವಿವಾಹವಾಗುತ್ತಿದ್ದಂತೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ, ಚೆನ್ನಾಗಿ ದುಡಿದು ಮಲಗಿದರಾಯ್ತು. ಆದರೆ, ಮಹಿಳೆಯರ ವಿಷಯ ಹಾಗಲ್ಲ, ಅಲ್ಲಿಯವರೆಗೆ ಆರಾಮಾಗಿ ಅಡ್ಡಾಡಿಕೊಂಡವರನ್ನು ಎಳೆತಂದು ಉದ್ಯೋಗ, ಮನೆಗೆಲಸ, ಗಂಡ, ಮಗು, ಅತ್ತೆ ಮಾವ ಎಲ್ಲರನ್ನು ನೋಡಿಕೊಳ್ಳುವ ಜವಾಬ್ದಾರಿಗಳ ಮೂಟೆಯನ್ನೇ ಹೊರಿಸಲಾಗುತ್ತದೆ. ಹೀಗಾಗಿ, ವಿವಾಹಿತ ಮಹಿಳೆಯರಿಗಿಂತ ಪುರುಷರು ಹೆಚ್ಚು ಆಯಸ್ಸು ಹೊಂದಿರುತ್ತಾರೆ. ಜನಸಮುದಾಯದಲ್ಲಿ ಅವಿವಾಹಿತ ಮಹಿಳೆಯರೇ ಹೆಚ್ಚು ಸಂತೋಷವಾಗಿರುವುದು ಎನ್ನುವುದು ಅವರ ವಿವರಣೆ.
ಯುವತಿಯರೇನಂತಾರೆ?
ಇನ್ನು ಈ ಬಗ್ಗೆ ಇಂದಿನ ಯುವತಿಯರನ್ನು ಕೇಳಿದರೆ, ಸಮಾಜವು ಮದುವೆಯನ್ನು ಪ್ರೀತಿಯಲ್ಲಿರುವುದು ಹಾಗೂ ಆತ್ಮಸಂಗಾತಿಯೊಂದಿಗೆ ಬದುಕುವುದು ಎಂದು ನೋಡುವುದಕ್ಕಿಂತಾ, ವಯಸ್ಸಾದ ತಂದೆತಾಯಿಗೆ ಹೊರೆ ಕಡಿಮೆ ಮಾಡುವುದು ಎಂಬಂತೆ ನೋಡುತ್ತದೆ ಎಂದು ಸಿಟ್ಟಾಗುವ ಕೆಲವರು, ತಮ್ಮೊಂದಿಗೆ ತಂದೆತಾಯಿಯನ್ನು ಕೂಡಾ ನೋಡಿಕೊಳ್ಳುವಷ್ಟು ನಾವು ಶಕ್ತರಿದ್ದೇವೆ, ಅದಕ್ಕಾಗಿ ಮದುವೆಯಾಗಬೇಕಿಲ್ಲಎನ್ನುತ್ತಾರೆ. ಇನ್ನು ಕೆಲ ಯುವತಿಯರು, ಬಾಲ್ಯದಿಂದ ಜವಾಬ್ದಾರಿಗಳನ್ನು ಹೊತ್ತೂ ಹೊತ್ತೂ ಸಾಕಾಗಿದೆ. ಅದರೊಂದಿಗೆ ಈ ಮದುವೆ ಮಕ್ಕಳ ಜವಾಬ್ದಾರಿ ಬೇಡವೇ ಬೇಡ, ಇರುವುದೊಂದು ಬದುಕು- ಅದನ್ನು ಬೇಕಾದಂತೆ ಬದುಕುತ್ತೇನೆ ಎನ್ನುತ್ತಾರೆ.
ನೀತಾ ಅಂಬಾನಿಗೆ ಮಕ್ಕಳೇ ಆಗಲ್ಲ ಎಂದಿದ್ದರಂತೆ ಡಾಕ್ಟರ್!
ಇನ್ನೂ ಕೆಲವರು ಕನಸಿನ ರಾಜಕುಮಾರ ಸಿಗುವವರೆಗೂ ಕಾಯುತ್ತೇವೆ, ಸಿಗದಿದ್ದರೂ ಪರವಾಗಿಲ್ಲ, ಆದರೆ ತಪ್ಪು ಆಯ್ಕೆಯಿಂದ ಜೀವನಪೂರ್ತಿ ನರಳುವುದು ಸಾಧ್ಯವಿಲ್ಲ ಎನ್ನುತ್ತಾರೆ.
ಮತ್ತೆ ಕೆಲ ಯುವತಿಯರು ತಮ್ಮ ಪ್ಯಾಶನ್, ಕನಸುಗಳನ್ನು ಸಾಕಾರಗೊಳಿಸಲು ಮದುವೆಯಾದರೆ ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಇನ್ನು ತಂಗಿಯ ಮದುವೆಯಾಗಬೇಕೆಂದೋ, ಸುರಕ್ಷತೆಯ ದೃಷ್ಟಿಯಿಂದಲೋ ಅಥವಾ ಸಮಾಜಕ್ಕಾಗಿ ಮದುವೆಯಾಗುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದು ಇವರ ದಿಟ್ಟ ನಿಲುವು.
ಈ ಅವಿವಾಹಿತ ಸ್ಟೇಟಸ್ಸನ್ನು ಮುಂಚಿನಂತೆ ಕ್ರಾಂತಿಕಾರಿ ಎಂದು ನೋಡುವುದಕ್ಕಿಂತ ವಿಕಾಸದ ಹಂತವಾಗಿ ನೋಡಬೇಕು ಎನ್ನುತ್ತಾರೆ ತಜ್ಞರು.
ಅಮೆರಿಕದ ಅಧ್ಯಯನವೊಂದರ ಪ್ರಕಾರ, ವಿವಾಹಿತ ಮಹಿಳೆಯರು ಸರಾಸರಿ ಪ್ರತಿದಿನ 2.95 ಗಂಟೆಗಳನ್ನು ಮನೆಗೆಲಸದಲ್ಲಿ ಕಳೆಯುತ್ತಾರೆ. ಅಮೆರಿಕದಲ್ಲೇ ಇಷ್ಟಾದರೆ, ಮನೆಯ ಸಂಪೂರ್ಣ ಜವಾಬ್ದಾರಿ ಹೆಗಲಿಗೇರಿಸಿಕೊಳ್ಳುವ ಭಾರತದ ಮಹಿಳೆಯರು ಅದೆಷ್ಟು ಗಂಟೆಗಳನ್ನು ಮನೆಗೆಲಸದಲ್ಲಿ ಕಳೆಯುತ್ತಾರೋ?
ಭಾರತದಲ್ಲಿ ಮದುವೆಯೇ ಜೀವನದ ಅಂತಿಮ ಗುರಿ, ಕೀ ಟು ಹ್ಯಾಪಿನೆಸ್ ಎಂಬಂತೆ ಹೆಣ್ಣುಮಕ್ಕಳನ್ನು ಬೆಳೆಸುತ್ತಾರೆ. ಹಾಗಾದರೆ, ಅಷ್ಟೊಂದು ವರದಕ್ಷಿಣೆ, ದೌರ್ಜನ್ಯ ಕೇಸ್‌ಗಳೇಕೆ ದಾಖಲಾಗುತ್ತವೆ? ದಾಖಲಾಗದ್ದು ಲೆಕ್ಕವಿಲ್ಲದಷ್ಟು ಕತೆಗಳು ಸುತ್ತಮುತ್ತಲೇ ಕಾಣುತ್ತವೆ. ಅವುಗಳನ್ನು ನೋಡಿ ಅರ್ಥ ಮಾಡಿಕೊಳ್ಳದವರಷ್ಟು ದಡ್ಡರಲ್ಲ ಈಗಿನ ನಗರದ ನವ ನಾರಿಯರು.
ಒಟ್ಟಿನಲ್ಲಿ ಮಹಿಳಾ ಸಮಾಜ ಬದಲಾವಣೆಯ ಹಾದಿ ಹಿಡಿದಿದೆ. ಅವರವರ ಬದುಕು, ಅವರವರ ಆಯ್ಕೆ, ಯಾವುದನ್ನೂ ಒಬ್ಬರ ಮೇಲೆ ಹೇರದೆ, ಅದನ್ನು ಗೌರವಿಸುವುದು ಉಳಿದ ಸಮಾಜದ ಕರ್ತವ್ಯ ಅಲ್ಲವೇ?