ಪ್ರವಾಸೋದ್ಯಮ ಸೃಸ್ಟಿಸಲಿ ಮೈಲುಗಲ್ಲು!

By Web Desk  |  First Published Apr 30, 2019, 3:23 PM IST

ನಮ್ಮದು ಸಮೃದ್ಧ ನಾಡು. ಹಸಿರನ್ನೇ ಹೊದಿಕೆಯನ್ನಾಗಿಸಿಕೊಂಡಿರುವ ಪಶ್ಚಿಮಘಟ್ಟಗಳು, ಕರಾವಳಿ, ಮಲೆನಾಡು, ನದಿ, ಕೆರೆ, ತೊರೆಗಳು, ನೂರಾರು ದೇವಾಲಯಗಳು ರಾಜ್ಯದ ಸೌಂದರ್ಯದ ಕಣಜದಂತಿವೆ. ಆದರೆ, ಅವುಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸರ್ಕಾರ ಎಡುವುತ್ತಿದೆ. ಇದನ್ನು ಅಭಿವೃದ್ಧಿ ಪಡಿಸಲು ಹೆಚ್ಚೇನು ಬೇಕಿಲ್ಲ. ಸುಲಭ ಉಪಾಯಗಳನ್ನು ಅನುಸರಿಸಿದರೆ ಸಾಕು. 


ಸೌಕರ್ಯವಿಲ್ಲದಿದ್ದರೆ ಸಂಕಷ್ಟ
ನಾವು ಎಲ್ಲಿಗಾದರೂ ಪ್ರವಾಸ ಕೈಗೊಳ್ಳುವ ಮೊದಲು ಅಲ್ಲಿನ ರಸ್ತೆ ಸರಿ ಇದೆಯೇ? ಉಳಿದುಕೊಳ್ಳಲು ವ್ಯವಸ್ಥೆ ಇದೆಯೇ? ಊಟ-ತಿಂಡಿ, ನೀರಿನ ವ್ಯವಸ್ಥೆ ಹೇಗಿದೆ? ಎಲ್ಲದಕ್ಕಿಂತ ಮುನ್ನ ಶೌಚಾಲಯಗಳ ವ್ಯವಸ್ಥೆ ಹೇಗಿದೆ? ಎಂಬುದರ ಸಂಪೂರ್ಣ ಮಾಹಿತಿಗಳನ್ನು ತಿಳಿದೇ ಅಲ್ಲಿಗೆ ಧಾವಿಸುತ್ತೇವೆ. ಮೂಲಸೌಕರ್ಯಗಳೇ ಇಲ್ಲವೆಂದರೆ ಕಷ್ಟಪಟ್ಟು ದುಡಿದ ಹಣ ವ್ಯಯಿಸಿ ಪ್ರಯಾಸದ ಪ್ರವಾಸಕ್ಕೆ ಯಾರೊಬ್ಬರು ಇಚ್ಛಿಸರು. ಹಾಗಾಗಿಯೇ ರಾಜ್ಯದ ಎಷ್ಟೋ ಅನನ್ಯ ಪ್ರವಾಸಿ ತಾಣಗಳು ಪ್ರವಾಸಿಗರ ಕೊರತೆಯಿಂದ ಮೂಲೆಗುಂಪಾಗಿವೆ. ದಾರಿ ಕಾಣದಂತಿರುವ ರಸ್ತೆಗಳಿಗೊಂದು ದಾರಿ ತೋರಿ, ಎಲ್ಲಾ ಪ್ರವಾಸಿ ತಾಣಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆಯನ್ನು ನಿಯಂತ್ರಿಸಿ, ಪ್ರವಾಸಿ ತಾಣಗಳ ಸಮೀಪವೇ ಸರ್ಕಾರದಿಂದಲೇ ಕಡಿಮೆ ದುಡ್ಡಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುವುದರಲ್ಲಿ ಸಂಶಯವೇ ಇಲ್ಲ. ಇದರೊಂದಿಗೆ ಪ್ರತಿ ಪ್ರವಾಸಿ ತಾಣದಲ್ಲೂ ಶೌಚಾಲಯಗಳನ್ನು ನಿರ್ಮಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ.

ಪ್ರಚಾರವೂ ಅಗತ್ಯ
ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ ಬರಬಾರದೆಂದರೆ ರಾಜಸ್ಥಾನ್ ಪ್ರವಾಸೋದ್ಯಮಕ್ಕೆ ಅಮಿತಾಬ್ ಬಚನ್ ರಾಯಭಾರಿಯನ್ನಾಗಿಸಿ ಪ್ರಚಾರ ಕೊಡಿಸಿದಂತೆ, ನಮ್ಮ ರಾಜ್ಯದ ಪ್ರವಾಸೋದ್ಯಮಕ್ಕೆ ಸ್ಟಾರ್ ನಟರನ್ನು ರಾಯಭಾರಿಯನ್ನಾಗಿ ಹೆಚ್ಚಿನ ಪ್ರಚಾರ ನೀಡಿದರೆ, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು.

Tap to resize

Latest Videos

ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?: ಇಂಟೆರೆಸ್ಟಿಂಗ್ ಮಾಹಿತಿ

ಶಿಸ್ತುಬದ್ಧತೆ
ಜಲಪಾತಗಳು, ಬೀಚ್‌ಗಳು ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಶಿಸ್ತುಬದ್ಧವಾಗಿ ನಡೆದುಕೊಳ್ಳುವುದಿಲ್ಲ. ಅಲ್ಲಲ್ಲೇ ತ್ಯಾಜ್ಯಗಳನ್ನೆಲ್ಲಾ ಬಿಸಾಡುತ್ತಾರೆ. ವಿದೇಶಿ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕುವಂಥ ಕೆಲಸಗಳು ಅತಿ ತುರ್ತಾಗಿ ಆಗಬೇಕಿದೆ. ಇದರಲ್ಲಿ ಪ್ರವಾಸಿಗರ ಜವಾಬ್ದಾರಿಯೂ ಹೆಚ್ಚಾಗಿರುತ್ತದೆ.

ಸುರಕ್ಷತೆ ಅನಿವಾರ್ಯ
ಯುವಕರು ಜಲಪಾತಗಳು, ಬೀಚ್‌ಗಳಿಗೆ ಹೋದಾಗ ಹುಮ್ಮಸ್ಸಿನಲ್ಲಿ ನೀರಿಗಿಳಿದು, ಮುಳುಗಿ ಸಾವಿನ ಹಾದಿ ಹಿಡಿಯುವವರೇ ಹೆಚ್ಚು. ಆಳ ಹಾಗೂ ಅನಾಹುತಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಜತೆಗೆ ಪ್ರತಿ ಪ್ರವಾಸಿ ತಾಣಕ್ಕೂ ಸರ್ಕಾರದಿಂದಲೇ ಪರಿಣತ ಗೈಡ್‌ಗಳನ್ನು ನಿಯೋಜಿಸಬೇಕು. ಇವರು ಪ್ರವಾಸಿಗರಿಗೆ ಸ್ಥಳದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಭದ್ರತೆ ಒದಗಿಸುವಷ್ಟು ಸಮರ್ಥರಾಗಿರಬೇಕು.

ಮನರಂಜನೆ
ಪ್ರತಿ ತಾಣದಲ್ಲೂ ಅಲ್ಲಿನ ವಾತಾವರಣಕ್ಕೆ ಸೂಕ್ತವಾಗುವ ಬೋಟಿಂಗ್, ಫಿಶಿಂಗ್, ಸಫಾರಿ, ಸ್ಕೂಬಾ, ಡೈವಿಂಗ್‌ನಂಥ ಸಾಹಸ ಚಟುವಟಿಕೆಗಳನ್ನು ಆಯೋಜಿಸುವತ್ತ ಚಿತ್ತ ಹರಿಸಬೇಕು. ಇದರಿಂದ ಪ್ರವಾಸಿಗರಿಗೆ ಮನರಂಜನೆಯೂ ಸಿಗುತ್ತದೆ. ಸರ್ಕಾರದ ಖಜಾನೆಯೂ ತುಂಬುತ್ತದೆ.

ಹೊತ್ತಗೆ
ಪ್ರತಿ ಜಿಲ್ಲೆಯಿಂದಲೂ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ಅವುಗಳ ಸಂಪೂರ್ಣ ಮಾಹಿತಿಯನ್ನೊಳಗೊಂಡ ಒಂದು ಹೊತ್ತಗೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಹೊರತರುವುದು ಒಳಿತು. ಅದ ರೊಂದಿಗೆ ಇಲಾಖೆಯ ವೆಬ್‌ಸೈಟ್ ನಲ್ಲೂ ಸುಲಭವಾಗಿ ಎಲ್ಲಾ ಬಗೆಯ ಮಾಹಿತಿ ಲಭಿಸುವಂತೆ ಅನುವು ಮಾಡಬೇಕಿದೆ.
ಕೇರಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನೀರಿನ ಬಳಕೆ ಮಾಡಿಕೊಂಡಂತೆ ರಾಜ್ಯದಲ್ಲಿರುವ ನದಿಗಳನ್ನು ಬಳಸಿಕೊಂಡು ಹಿನ್ನೀರಿನ ಪ್ರವಾಸೋದ್ಯಮಕ್ಕೆ ಅನುವು ಮಾಡಬೇಕು. ಅಲ್ಲದೇ ಆಗಾಗ್ಗೆ ಆಹಾರಮೇಳ, ಉತ್ಸವಗಳನ್ನು ಆಯೋಜಿಸುವುದರ ಮೂಲಕ ಪ್ರವಾಸಿಗರನ್ನು ಆಕರ್ಷಿಸಬಹುದು. ಇಲಾಖೆಯಿಂದಲೇ ಪ್ಯಾಕೇಜ್ ಟೂರ್‌ಗಳನ್ನು ಆಯೋಜಿಸಬೇಕು.

ಇಲ್ಲಿ ದೇವರಿಗಲ್ಲ ಪೂಜೆ, ಬದಲಿಗೆ ಪ್ರಾಣಿಗಳಿಗೆ!

ಉದ್ಯೋಗ ಸೃಷ್ಟಿ
ವನ್ಯಜೀವಿ ಪ್ರವಾಸೋದ್ಯಮ, ಅರಣ್ಯಗಳು, ಜಲಪಾತಗಳು, ದೇವಾಲಯಗಳು, ಕಡಲತೀರಗಳು, ಪಶ್ಚಿಮ ಘಟ್ಟಗಳು, ಕಲೆ ಮತ್ತು ಸಂಸ್ಕೃತಿ, ಆಹಾರ ಪ್ರವಾಸೋದ್ಯಮ ಹೀಗೆ ವಿಭಾಗಗಳಾಗಿ ವಿಂಗಡಿಸಿ, ಒಂದೊಂದು ವಿಭಾಗದ\ ಅಭಿವೃದ್ಧಿಗೆ ಇಂತಿಷ್ಟು ಹಣ, ಸಿಬ್ಬಂದಿಯನ್ನು ನಿಯೋಜಿಸಿದರೆ ಸುಲಭವಾಗಿ ಕ್ರಿಯಾ ಯೋಜನೆಗಳನ್ನು ರೂಪಿಸಿ, ಕಾರ್ಯರೂಪಗೊಳಿಸಲು ನೆರವಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚುತ್ತದೆ.

 

 

click me!