
ಡಾರ್ಜಿಲಿಂಗ್ ಟೀ, ಮೈಸೂರು ಅಗರಬತ್ತಿ, ಕಾಶ್ಮೀರದ ಪಶ್ಮಿನಾ, ಮಹಾರಾಷ್ಟ್ರದ ವರ್ಲಿ ಚಿತ್ರಕಲೆಗಳು, ಧಾರವಾಡ ಪೇಡ, ಲಖನೌನ ಚಿಕಾನ್ ಕಲೆ, ಹೈದರಾಬಾದ್‌ನ ಹಲೀಮ್ ಹೀಗೆ ಕೆಲ ವಿಷಯಗಳನ್ನು ಅವುಗಳ ಸ್ಥಳದ ಹೆಸರಿನೊಂದಿಗೇ ಗುರುತಿಸುವುದು ಅಭ್ಯಾಸವಾಗಿದೆ. ಇದು ಜನರ ಮನಸ್ಸಿನಲ್ಲಿ ಆ ಪ್ರದೇಶಕ್ಕೆ ಸೇರಿದ್ದು ಎಂಬುದನ್ನು ಉಳಿಸುವುದಲ್ಲದೆ, ಉತ್ಕೃಷ್ಟವಾದುದು ಎಂಬುದನ್ನೂ ಸೂಚಿಸುತ್ತದೆ. ಈಗ ಇದೇ ಸಾಲಿಗೆ ಅವಲಕ್ಕಿ ಸೇರುತ್ತಿದೆ. ಆದರೆ, ಇದು ಕರ್ನಾಟಕದ್ದಲ್ಲ, ಇಂಡೋರ್‌ನ ಪ್ರಖ್ಯಾತ ತಿನಿಸಾದ ಇಂಡೋರಿ ಪೋಹಾ. ಈ ತಿಂಡಿಗಳು, ಕಲೆಗಳು ತಮ್ಮ ಹೆಸರಿನೊಂದಿಗೆ ಊರುಗಳನ್ನೂ ಸೇರಿಸಿಕೊಳ್ಳಲು ಬೇಕಾದುದು ಭೌಗೋಳಿಕ ಮಾನ್ಯತೆ. ಈ ಭೌಗೋಳಿಕ ಸೂಚ್ಯಂಕ ಮಾನ್ಯತೆಯನ್ನು ಪಡೆಯುವಲ್ಲಿ ಇಂಡೋರಿ ಪೋಹಾ ಸಧ್ಯ ಸರತಿ ಸಾಲಿನ ಮುಂದಿನಲ್ಲಿ ನಿಂತಿದೆ.
ಏನಿದು ಭೌಗೋಳಿಕ ಸೂಚ್ಯಂಕ ಮಾನ್ಯತೆ?
ಪ್ರಾಂತ್ಯವೊಂದಕ್ಕೆ ಸೇರಿದ ಉತ್ಪನ್ನವು ಆಯಾ ಪ್ರಾಂತ್ಯದ ನಿರ್ದಿಷ್ಟ ಗುಣಮಟ್ಟ, ಪರಿಮಳ, ವಿಶಿಷ್ಠ ರುಚಿ ಹೊಂದಿದ್ದರೆ ಅಥವಾ ಅದರ ರೂಪುರೇಷೆ ಆ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿದ್ದರೆ ಅದಕ್ಕೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆಯಬಹುದು. ಮತ್ತದು ಸುಲಭವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಬಹುದಲ್ಲದೆ, ಬೇರೆಯವರು ತಮ್ಮನ್ನು ಕಾಪಿ ಮಾಡದಂತೆ ಕಾನೂನು ಸಹಾಯ ಪಡೆಯಬಹುದು. ಆಯಾ ಭಾಗದ ಸಂಸ್ಕೃತಿಯ, ಪರಂಪರೆಯ, ಬದುಕಿನ ರೀತಿಯ ಭಾಗವಾಗಿ ಈ ವಸ್ತುವನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ ನಮ್ಮೆಲ್ಲರ ಮನೆಯಲ್ಲೂ ಅವಲಕ್ಕಿ ತಯಾರಿಸುತ್ತೇವೆ. ಆದರೆ, ಇಂಡೋರಿ ಪೋಹಾದ ಗುಣಮಟ್ಟ, ರುಚಿ ಇದಕ್ಕಿಂತಲೂ ಭಿನ್ನ. ನಾವು ಇದನ್ನು ಇಂಡೋರಿ ಪೋಹಾ ಹೆಸರಿನಲ್ಲಿ ಮಾರಾಟ ಮಾಡಲಾಗುವುದಿಲ್ಲ. ಕಾಪಿರೈಟ್, ಪೇಟೆಂಟ್ ಮುಂತಾದ ಮುದ್ರೆಯಂತೆಯೇ ಈ ಭೌಗೋಳಿಕ ಸೂಚ್ಯಂಕ ಮಾನ್ಯತೆ(ಜಿಐ)ಯನ್ನು ಬಳಸಬಹುದು. ಅಂದ ಹಾಗೆ, ಭಾರತದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಜಿಐ ಪಡೆದ ರಾಜ್ಯವಾಗಿದೆ ಎಂಬುದು ತಿಳಿದಿರಬೇಕಾದ ವಿಷಯ. ಇಲ್ಲಿನ ಮೈಸೂರು ಮಲ್ಲಿಗೆ, ಗಂಧದ ಸೋಪ್, ಚನ್ನಪಟ್ಟಣದ ಬೊಂಬೆಗಳು, ಬ್ಯಾಡಗಿ ಮೆಣಸು, ನಂಜನಗೂಡಿನ ಬಾಳೆಹಣ್ಣು, ಕೊಡಗಿನ ಕಿತ್ತಳೆ, ಉಡುಪಿ ಮಟ್ಟುಗುಳ್ಳ, ಇಳಕಲ್ ಸೀರೆ, ಮೈಸೂರು ವೀಳ್ಯದೆಲೆ, ಮೊಣಕಾಲ್ಮೂರು ಸೀರೆ ಇತ್ಯಾದಿ ಉತ್ಪನ್ನಗಳು ಜಿಐ ಟ್ಯಾಗ್ ಪಡೆದಿವೆ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಹಾಗೂ ಒರಿಸ್ಸಾ ರಾಜ್ಯಗಳ ನಡುವೆ ರಸಗುಲ್ಲಾ ನಮ್ಮದು ಎಂಬ ವಿಷಯಕ್ಕೆ ಕಿತ್ತಾಟ ನಡೆದಿತ್ತು. ಈ ಸಂಬಂಧ ಜಿಐ ಪಡೆಯಲು ಎರಡೂ ರಾಜ್ಯಗಳೂ ಮುಗಿಬಿದ್ದವು. ಪುರಿ ಜಗನ್ನಾಥನ ರಥಯಾತ್ರೆಯಲ್ಲಿ 12ನೇ ಶತಮಾನದಿಂದಲೇ ರಸಗುಲ್ಲವನ್ನು ಪ್ರಸಾದ ಹಂಚಲಾಗುತ್ತಿದೆ ಎಂದು ಒರಿಸ್ಸಾ ವಾದಿಸಿದರೆ, 1868ರಲ್ಲಿ ಕೋಲ್ಕೊತಾದಲ್ಲಿ ನವೀನ್‌ಚಂದ್ರದಾಸ್ ಎಂಬವರು ರಸಗುಲ್ಲಾ ಕಂಡು ಹಿಡಿದರು ಎಂದು ಬಂಗಾಳ ವಾದಿಸಿತು. ರಸಗುಲ್ಲಾ ಬಿಡಿ, ಈಗ ಅವಲಕ್ಕಿ ವಿಷಯಕ್ಕೆ ಬರೋಣ. ಪೋಹಾ ಭಾರತಾದಾದ್ಯಂತ ಫೇಮಸ್ ಬ್ರೇಕ್‌ಫಾಸ್ಟ್. ಮಾಡುವುದೂ ಈಸಿ, ತಿನ್ನುವುದು ಮತ್ತೂ ಈಸಿ, ಕರಗಿಸಲು ಖಂಡಿತಾ ಕಷ್ಟಪಡಬೇಕಾಗಿಲ್ಲ.
ಸವಿದು ನೋಡಿ ರಾಜಸ್ಥಾನಿ ಖಾದ್ಯಗಳ ರಸಗವಳ!
ಮಧ್ಯಪ್ರದೇಶದ ಫೇವರೇಟ್ ತಿಂಡಿ ಇಂಡೋರಿ ಪೋಹಾದ ಹೊರತಾಗಿ ಮಾಳ್ವಾ ಪ್ರದೇಶದ ನಮಹಾಲಿನ ಶಿಖಂಜಿ, ಏಲಕ್ಕಿಯ ಸೇವ್, ಕಟ್ಟಾ ಮೀಟಾ ಸ್ನ್ಯಾಕ್ ಕೂಡಾ ದೇಶಾದ್ಯಂತ ಜನಪ್ರಿಯವಾಗಿದೆ. ಸಧ್ಯ ಇಂಡೋರ್‌ನ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ ಅಭಿವೃದ್ಧಿ ಸಂಸ್ಥೆಯು ಈ ನಾಲ್ಕು ತಿಂಡಿಗಳ ತಯಾರಕರು ಹಾಗೂ ಮಾರಾಟಗಾರರ ಪರವಾಗಿ ಜಿಐ ಟ್ಯಾಗ್ ಪಡೆಯಲು ಸಹಾಯ ಮಾಡುತ್ತಿದೆ.
ಜಿಐ ಟ್ಯಾಗ್ ಸಿಕ್ಕಿದರೆ ಮಾಳ್ವಾ ಪ್ರದೇಶದ ಈ ನಾಲ್ಕು ತಿಂಡಿಗಳಿಗೆ ಜಾಗತಿಕ ಮನ್ನಣೆ ಹಾಗೂ ಖ್ಯಾತಿ ಸಿಗುತ್ತದೆ. ಇದು ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗಿಗೆ ಮಾತ್ರವಲ್ಲ, ಈ ಉತ್ಪನ್ನಗಳ ಡೂಪ್ಲಿಕೇಟ್ ಮಾಡುವುದನ್ನು ಕೂಡಾ ಕಾನೂನಾತ್ಮಕವಾಗಿ ತಡೆಯಲು ಸಹಾಯಕವಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಸಹಾಯಕ ನಿರ್ದೇಶಕ ನೀಲೇಶ್ ತ್ರಿವೇದಿ.
ಜಿಐ ಟ್ಯಾಗ್ ಪಡೆಯೋದು ಹೇಗೆ?
ವಸ್ತುವೊಂದಕ್ಕೆ ಭೌಗೋಳಿಕ ಮಾನ್ಯತೆ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. ಇದಕ್ಕಾಗಿ ಚೆನ್ನೈನಲ್ಲಿರುವ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರಿ ಆಫೀಸ್‌ಗೆ ಅರ್ಜಿ ಸಲ್ಲಿಸುವಾಗ ಸಾಕಷ್ಟು ಪ್ರೂಫ್‌ಗಳನ್ನು ನೀಡಬೇಕು.
ಟೇಸ್ಟ್‌ಬಡ್ ಬಡಿದೇಳಿಸುವ ಮಸಾಲಾ ಟೀ ಮಾಡಿ ನೋಡಿ
ಅವಲಕ್ಕಿ ಡಯಟ್ ಫುಡ್ಡಾ?
ಸಾಮಾನ್ಯವಾಗಿ ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿರುತ್ತದೆ ಎಂದು ಅದನ್ನು ದೂರವಿಡುವುದಿದೆ. ಆದರೆ, ಇವೆಲ್ಲವೂ ನೀವದನ್ನು ಹೇಗೆ ತಯಾರಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ ನ್ಯೂಟ್ರಿಶನ್ ತಜ್ಞರು. ಹೆಚ್ಚು ತರಕಾರಿಗಳನ್ನು ಸೇರಿಸಿದರೆ ಫೈಬರ್ ಹೆಚ್ಚುತ್ತದೆ, ಕಾರ್ಬೋಹೈಡ್ರೇಟ್ ಕಡಿಮೆಯಾಗುತ್ತದೆ. ಇದನ್ನು ಎಲ್ಲರೂ ಅಳುಕಿಲ್ಲದೆ ಸೇವಿಸಬಹುದು ಎನ್ನುತ್ತಾರವರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.