ಪ್ರತಿ ದಿನ ಹೊರ ಹೋಗುವಾಗ ಕಾಜಲ್, ಲಿಪ್‌ಸ್ಟಿಕ್ ಬೇಡವೆಂದುಕೊಂಡರೂ, ಸನ್‌ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳದೆ ಹೊರಗೆ ಕಾಲಿಡುವುದಿಲ್ಲ. ಸೂರ್ಯನ UVಕಿರಣಗಳು ಬಹಳ ಕೆಟ್ಟದ್ದು ಎಂಬುದು ತಿಳಿದಿರುವುದರಿಂದ ಬಿಸಿಲಿನಲ್ಲಿ ಸನ್‌ಸ್ಕ್ರೀನ್ ಇಲ್ಲದೆ ನಡೆಯುವ ಆಲೋಚನೆಯೇ ಭಯ ಹುಟ್ಟಿಸಿಬಿಡುತ್ತದೆ. ಆದರೆ, ಸೂರ್ಯನ ಕಿರಣಗಳು ನಿಜವಾಗಿಯೂ ಸನ್‌ಸ್ಕ್ರೀನ್ ಕಂಪನಿಗಳು ಹೆದರಿಸುವಷ್ಟು ಕೆಟ್ಟದ್ದೇ?
ಜಾಗತಿಕ ಜನಸಂಖ್ಯೆಯ ಶೇ.70ರಷ್ಟು ಮಂದಿ ಈಗ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಏಕೆ ಗೊತ್ತೇ? ಅವರ ದೇಹಕ್ಕೇ ಬಿಸಿಲೇ ತಾಕುತ್ತಿಲ್ಲ. ಹೌದು, ಸೂರ್ಯರಶ್ಮಿಯಿಂದ ನಮಗೆ ವಿಟಮಿನ್ ಡಿ ದೊರಕುತ್ತದೆ.
ಹಾಗಿದ್ದರೆ ಸನ್‌ಸ್ಕ್ರೀನ್ ಏಕೆ ಬೇಕು?
ಸೂರ್ಯನ ಕಿರಣಗಳು ಮೈ ಸೋಕಿದಾಗ ನಮ್ಮ ದೇಹ ವಿಟಮಿನ್ ಡಿಯನ್ನು ಉತ್ಪಾದಿಸುತ್ತದೆ. ಇದು ದೇಹ ಕ್ಯಾಲ್ಶಿಯಂ ಹೀರಿಕೊಳ್ಳಲು ಅಗತ್ಯ. ಇದು ಮೂಳೆಗಳು, ಹೃದಯ, ಮೆದುಳು ಎಲ್ಲದರ ಆರೋಗ್ಯಕ್ಕೂ ಅಗತ್ಯ. ಸುಮಾರಾಗಿ ಈ ವಿಟಮಿನ್ ಡಿ ನಾವು ಸೇವಿಸುವ ಬೇರೆ ಆಹಾರಗಳಲ್ಲಿ ಇರುವುದಿಲ್ಲ.
ಆದರೆ, ಅವಶ್ಯಕ ವಿಟಮಿನ್ ಡಿ ಪಡೆಯಲು ಎಷ್ಟು ಬಿಸಿಲು ನಮಗೆ ಬೇಕೆಂದರೆ ಅದು ಒಬ್ಬೊಬ್ಬರಿಗೆ ಒಂದೊಂದು ಮಟ್ಟಿಗೆ ಬೇಕಾಗುತ್ತದೆ. ನೀವು ದಪ್ಪ ಚರ್ಮದವರಾಗಿದ್ದರೆ, ದಿನಕ್ಕೆ 5ರಿಂದ 8 ನಿಮಿಷ ಹೊರಗೆ ಬಿಸಿಲಿಗೆ ಕಾಲಿರಿಸಿದರೆ ಸಾಕು. ಗೋಧಿ ಬಣ್ಣದವರಾಗಿದ್ದರೆ 15-20 ನಿಮಿಷಗಳ ಸೂರ್ಯಕಾಂತಿ ದೇಹಕ್ಕೆ ಬೇಕು. ಇನ್ನು ಕಪ್ಪು ಬಣ್ಣದವರಾದರೆ, ಹೆಚ್ಚಿನ ಸಮಯ ಸೂರ್ಯನ ಬಿಸಿಲಿಗೆ ಮೈಯೊಡ್ಡಬೇಕು. ಏಕೆಂದರೆ ಕಪ್ಪು ಚರ್ಮದವರು ಹೆಚ್ಚಿನ ಯುವಿ ಕಿರಣಗಳನ್ನು ಹ್ಯಾಂಡಲ್ ಮಾಡಬಲ್ಲರು.
ಮುಖದ ಸೌಂದರ್ಯಕ್ಕೆ ಚಾಕೋಲೇಟ್ ಎಂಬ ಮಂತ್ರ!
ಹಾಗಾದರೆ ಸೂರ್ಯನ ಬಿಸಿಲಿಗೆ ಮೈ ತಾಕಿಸಲು ಯಾವ ಸಮಯ ಬೆಸ್ಟ್?
ಆಸಕ್ತಿಕರ ವಿಷಯವೆಂದರೆ ನಮ್ಮಲ್ಲಿ ಬಹುತೇಕರು ಬೆಳಗಿನ ತೆಳುವಾದ ಬಿಸಿಲೇ ಬೆಸ್ಟ್ ಎಂದುಕೊಂಡಿದ್ದಾರೆ. ಆದರೆ, ಇತ್ತೀಚಿನ ಅಧ್ಯಯನಗಳ ಪ್ರಕಾರ ಮಧ್ಯಾಹ್ನದ ಬಿಸಿಲು ವಿಟಮಿನ್ ಡಿ ಪಡೆಯಲು ಹೆಚ್ಚು ಉಪಯುಕ್ತ.
ಬಿಸಿಲಿನಿಂದ ಆರೋಗ್ಯಕ್ಕೆ ಇಷ್ಟೆಲ್ಲ ಲಾಭಗಳಿದ್ದಾಗ, ಸನ್‌ಸ್ಕ್ರೀನ್ ಲೋಶನ್ ಕಂಪನಿಗಳು ನಿಮ್ಮನ್ನು ಹೆದರಿಸುವುದೇಕೆ?
ಏಕೆಂದರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ, ಅತಿಯಾದ ಬಿಸಿಲು ಚರ್ಮದ ಕ್ಯಾನ್ಸರ್ ತರಬಹುದು ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಅದರಲ್ಲೂ ಬಿಳಿ ಚರ್ಮದವರು ಕಪ್ಪು ಬಣ್ಣದವರಿಗಿಂತ ಬೇಗ ಯುವಿ ಕಿರಣಗಳ ಅಪಾಯಕ್ಕೆ ಸಿಲುಕುತ್ತಾರೆ. ಇನ್ನು ಕೆಲವು ಸಂಶೋಧನೆಗಳಂತೆ 20 ವರ್ಷದೊಳಗೇ ಚರ್ಮ ಬಿಸಿಲಿನಿಂದ ಹೆಚ್ಚು ಡ್ಯಾಮೇಜ್‌ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಅದೂ ಅಲ್ಲದೆ, ಪ್ರತಿದಿನ ಸ್ವಲ್ಪ ಹೆಚ್ಚು ಹೊತ್ತು ಬಿಸಿಲಿನಲ್ಲಿರುವವರಿಗಿಂತ ಇದ್ದಕ್ಕಿದ್ದಂತೆ ಹೆಚ್ಚು ಸಮಯ ಬಿಸಿಲಿಗೆ ಮೈ ಒಡ್ಡುವವರಿಗೆ ಸ್ಕಿನ್ ಕ್ಯಾನ್ಸರ್ ಬರುವ ಸಂಭವ ಜಾಸ್ತಿ. ಹೀಗಾಗಿಯೇ ಸನ್‌ಸ್ಕ್ರೀನ್ ಬೇಕಾಗುವುದು.
ಆಯ್ಕೆ ಸರಿಯಾಗಿರಲಿ
ಜಿಂಕ್ ಹಾಗೂ ಟಿಟಾನಿಯಂ ಇರುವ ಸನ್‌ಸ್ಕ್ರೀನ್‌ಗಳು, ಎಸ್‌ಪಿಎಫ್ 30ಕ್ಕಿಂತಾ ಹೆಚ್ಚಿರುವ ಸನ್‌ಸ್ಕ್ರೀನ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇವು ಯುವಿ ಕಿರಣಗಳಿಂದ ಬರಬಹುದಾದ ಸ್ಕಿನ್ ಕ್ಯಾನ್ಸರ್‌ಗೆ ತಡೆ ಒಡ್ಡುತ್ತವೆ. ಆದರೆ, ಆಕ್ಸಿಬೆಂಜೋನ್, ಬೆಂಜೋಫಿನೋನ್ಸ್, ರೆಟಿನೈಲ್ ಪಾಲ್ಮಿಟೇಟ್, ಪ್ಯಾರಾಬೆನ್‌ಗಳನ್ನು ಹೊಂದಿರುವ ಸನ್‌ಸ್ಕ್ರೀನ್‌ಗಳನ್ನು ದೂರವಿಡಿ. ಇವುಗಳಿಂದಲೇ ಸ್ಕಿನ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎನ್ನುತ್ತವೆ ಕೆಲ ಸಂಶೋಧನೆಗಳು. ಇವುಗಳ ಬದಲಿಗೆ ಕೊಬ್ಬರಿ ಎಣ್ಣೆ, ಬೆಣ್ಣೆ, ಕ್ಯಾರೆಟ್ ಎಣ್ಣೆಗಳನ್ನು ಕೂಡಾ ಕೈಕಾಲಿಗೆ ಹಚ್ಚಿಕೊಂಡು ಯುವಿ ಕಿರಣಗಳ ಹಾನಿಯಿಂದ ತಪ್ಪಿಸಿಕೊಳ್ಳಬಹುದು.
ಮನೆಯ ಶೇ.50ರಷ್ಟು ಧೂಳು ನಮ್ಮ ಮೃತ ಚರ್ಮದ್ದು...!?