ತಾಪಮಾನ ಏರಿದೆ. ಸೆಕೆ ಹೆಚ್ಚಿದೆ. ಹಾಗಾಗಿ ಹಲವರು ಮನೆಯಲ್ಲೂ ಎಸಿ ಹಾಕಿಸುತ್ತಿದ್ದಾರೆ. ಆಫೀಸಿನಲ್ಲಿ ದಿನದ ಮುಕ್ಕಾಲು ಪಾಲನ್ನು ಎಸಿಯಲ್ಲೇ ಕಳೆದು, ಮನೆಯಲ್ಲೂ ಅದೇ ತಂಪು ಗಾಳಿಗೆ ಮೈಯೊಡ್ಡುತ್ತಾ ಮಲಗುತ್ತಿದ್ದಾರೆ. ಆದರೆ ನೆನಪಿಡಿ, ಎಸಿ ಎಂಬುದು ನಿಮ್ಮ ಕೂದಲು ಹಾಗೂ ಚರ್ಮದ ವಿಷಯದಲ್ಲಿ ಕೋಲ್ಡ್ ಬ್ಲಡೆಡ್ ಕಿಲ್ಲರ್...
ಕಳೆದ ಕೆಲ ವರ್ಷಗಳಲ್ಲಿ ತಾಪಮಾನ ಮತ್ತಷ್ಟು ಏರಿದೆ. ಜನರು ಫ್ಯಾನ್‌ನ ಬಿಸಿಗಾಳಿಗೆ ಬೇಸತ್ತು ಮನೆಯ ಕೋಣೆಗಳಿಗೂ ಎಸಿ ಹಾಕಿಸುತ್ತಿದ್ದಾರೆ. ಎಸಿ ಎಂಬುದು ಲಕ್ಷುರಿ ಎಂಬಲ್ಲಿಂದ ಈಗ ಅಗತ್ಯ ವಸ್ತು ಎಂಬಲ್ಲಿಗೆ ಬಂದು ನಿಂತಿದೆ. ಕಚೇರಿಯಲ್ಲೂ ಎಸಿ, ಕಾರ್‌ನಲ್ಲೂ ಎಸಿ, ಮನೆಯಲ್ಲೂ ಎಸಿ. 24 ಗಂಟೆ ಈ ಎಸಿಯಲ್ಲೇ ಇದ್ದರೆ ಒಳಿತಿಗಿಂತ ಕೆಡುಕೇ ಹೆಚ್ಚು. ಎಸಿಯು ನಿಮ್ಮ ಕೂದಲು ಹಾಗೂ ಚರ್ಮದ ಮೇಲೆ ಅದೆಂಥಾ ದುಷ್ಪರಿಣಾಮಗಳನ್ನು ಬೀರುತ್ತದೆ ಬಲ್ಲಿರಾ?
ನಿಮಗೆ ತಿಳಿದಿರಲಿ, ಏರ್ ಕಂಡೀಶನರ್ ಆನ್ ಇರುವ ಕೋಣೆಯು ಮರುಭೂಮಿಯಷ್ಟೇ ಒಣ ಹಾಗೂ ಶುಷ್ಕವಾಗಿರುತ್ತದೆ. ಏರ್ ಕಂಡೀಶನರ್ ಕೋಣೆಯ ಗಾಳಿಯಲ್ಲಿರುವ ಎಲ್ಲ ತೇವಾಂಶವನ್ನು ಎಳೆದುಕೊಳ್ಳುವುದೇ ಇದಕ್ಕೆ ಕಾರಣ. ಹಾಗೆ ಎಳೆಯುವಾಗ ಎಸಿಗೆ ಯಾವ ಮಾಯಿಶ್ಚರೈಸರ್ ಎಳೆಯಬೇಕು, ಯಾವುದನ್ನು ಎಳೆಯಬಾರದು ಎಂಬ ಬೇಧ ಗೊತ್ತಿಲ್ಲ. ಹೀಗಾಗಿ ಅದು ನಿಮ್ಮ ತ್ವಚೆಯ ಮಾಯಿಶ್ಚರೈಸರ್‌ನ್ನು ಕೂಡಾ ಎಳೆದುಕೊಂಡು ಬಿಡುತ್ತದೆ. ಹೀಗಾಗಿ ಚರ್ಮ ಶುಶ್ಕವಾಗುತ್ತದೆ. ನೀವದಕ್ಕೆ ಪ್ರತಿನಿತ್ಯ ಸರಿಯಾದ ಕಾಳಜಿ ನೀಡಲಿಲ್ಲವೆಂದರೆ ಚರ್ಮದ ಒಳಗಿನ ಲೇಯರ್‌ಗಳನ್ನೂ ಎಸಿ ಉಳಿಸಲಾರದು. ಅದೂ ಡ್ರೈ ಆದಾಗ ತುರಿಕೆ ಆರಂಭವಾಗುತ್ತದೆ. ಪದರ ಪದರ ಎದ್ದು ಬರುತ್ತದೆ. ನೋಡಲು ಹಾವು ಪೊರೆ ಬಿಟ್ಟಂತೆ ಕಾಣಲಾರಂಭಿಸುತ್ತದೆ. ನಂತರದಲ್ಲಿ ಇತರೆ ಚರ್ಮರೋಗಗಳೂ ಶುರುವಾಗುತ್ತವೆ ಎನ್ನುತ್ತಾರೆ ತಜ್ಞರು.
ಡಿಸಿ ಮನಸ್ಸು ಮಲ್ಲಿಗೆ: ಪುನಶ್ಚೇತ ಶಿಬಿರಕ್ಕೆ ಏಸಿ ರವಾನೆ
ನೀರು ರಕ್ತ ಸಂಚಲನಕ್ಕೆ ಬಹು ಮುಖ್ಯ. ಎಸಿಯಿಂದಾಗಿ ದೇಹವು ನೀರಿನಂಶ ಕಳೆದುಕೊಳ್ಳುತ್ತಾ ಬಂದರೆ ಅದರಿಂದ ಚರ್ಮದ ಎಲಾಸ್ಟಿಸಿಟಿ ಹೋಗುತ್ತದೆ. ಆಗ ಚರ್ಮ ಸುಕ್ಕಾಗುತ್ತದೆ. ನಿಧಾನವಾಗಿ ನಿಮ್ಮ ಇರುವ ವಯಸ್ಸಿಗಿಂತಾ ಬಹುಪಾಲು ದೊಡ್ಡವರಂತೆ ಕಾಣಲಾರಂಭಿಸುತ್ತೀರಿ. ಮಧ್ಯವಯಸ್ಸಿಗೇ ಮುಪ್ಪಡರಿದಂತೆ ಕಾಣುವುದು ಯಾರಿಗಾದರೂ ಇಷ್ಟವಾಗುವುದೇ ಹೇಳಿ?
ಬಿಸಿ, ಎಸಿ ಮಿಕ್ಸ್ ಮ್ಯಾಚ್ ಮಾಡಿದರೆ ಅದು ಮಿಸ್ ಮ್ಯಾಚ್!
ಸಾಮಾನ್ಯವಾಗಿ ನಾವೆಲ್ಲರೂ ಹೊರಗೆ ಬಿಸಿಲಿನಲ್ಲಿ ನಡೆದು ಆಫೀಸಿನ ಎಸಿ ಕೋಣೆಗೆ ಹೋಗುತ್ತೇವೆ. ಇಲ್ಲವೇ ಕಚೇರಿಯ ಎಸಿ ಕೋಣೆಯಿಂದ ಸೀದಾ ಸುಡುವ ಸೂರ್ಯನ ಕೆಂಗಣ್ಣಿಗೆ ಬಲಿಪಶುವಾಗುತ್ತೇವೆ. ಹೀಗೇ ತಕ್ಷಣದಲ್ಲಿ ಬಿಸಿಯಿಂದ ತಂಪು ಹಾಗೂ ತಂಪಿನಿಂದ ಬಿಸಿಗೆ ಶಿಫ್ಟ್ ಆಗುವುದು ದೇಹಕ್ಕೆ ಒತ್ತಡದಾಯಕ. ಇದು ಮುಖದ ಚರ್ಮದ ಮೇಲೆ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತದೆ. ಮಾಲಿನ್ಯ, ಸಡನ್ ಬದಲಾಗುವ ಹವಾಮಾನ, ಡಯಟ್, ಲೈಫ್‌ಸ್ಟೈಲ್ ಎಲ್ಲವೂ ಸೇರಿ ಚರ್ಮದ ಮುಪ್ಪಿಗೆ ಕಾರಣವಾಗುತ್ತವೆ. ಬಹುಷಃ ನಮ್ಮ ಇಂದಿನ ಜೀವನಶೈಲಿಯಲ್ಲಿ ಚರ್ಮವು ಸದಾ ಕಾಲ ಈ ಪರಿಸರ ಹಾಗೂ ಟೆಕ್ನಾಲಜಿಯೊಂದಿಗೆ ಹೋರಾಡುತ್ತಲೇ ಇರಬೇಕು. ಇವೆಲ್ಲವೂ ಚರ್ಮದ ಆರೋಗ್ಯಕ್ಕೆ ಮಾರಕವೇ.
ಹೀಗೆ ಶುಷ್ಕಗೊಂಡು ಜೀವನದ ಆಸೆ ತೊರೆದ ಚರ್ಮದ ಮೇಲೆ ನಿಂತ ಕೂದಲಿನ ಬುಡವೂ ಅಲುಗಾಡತೊಡಗುತ್ತದೆ. ಬಾಚಣಿಕೆ ಅದನ್ನು ಒತ್ತಿ ಕೂರಿಸಲು ಹೋದಷ್ಟು ಬಾರಿ ಅದು ಕಿತ್ತು ಕೈಗೆ ಬರುತ್ತದೆ. ಕೂದಲು ಹಾಗೂ ಚರ್ಮದ ಯೌವನ ಕಳೆದುಕೊಂಡ ಮೇಲೆ ನೀವು ಅಪ್ಪನೆನಿಸಿಕೊಳ್ಳುವ ಹೊತ್ತಿಗೆ ಅಜ್ಜ ಎನಿಸಿಕೊಂಡರೂ ಆಶ್ಚರ್ಯವಿಲ್ಲ.
ಹಾಗಿದ್ದರೆ ನೀವೇನು ಮಾಡಬೇಕು?
- ಖಂಡಿತಾ ಕಚೇರಿಯ ಎಸಿ ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ. ಬೇಕೋ ಬೇಡವೋ ಅವು ಆನ್‌ನಲ್ಲಿಯೇ ಇರುತ್ತವೆ. ಆದರೆ, ನೀವದರ ಅವಲಂಬನೆಯಿಂದ ಹೊರಬನ್ನಿ. - ಮನೆಯಲ್ಲಾದರೂ ಎಸಿಯಿಲ್ಲದೆ ಆರಾಮಾಗಿರುವುದು ಅಭ್ಯಾಸ ಮಾಡಿಕೊಳ್ಳಿ.
- ಚರ್ಮ ಡ್ರೈ ಆಗಿರುವೆಡೆ ಸೋಪ್ ಹಾಗೂ ನೀರಿನ ಬಳಕೆ ಮಿತಿಗೊಳಿಸಿ.
- ಮಾಯಿಶ್ಚರ್ ಹೆಚ್ಚಿರುವ ಲೋಶನ್ಸ್ ಬಳಸಿ. ಕ್ರೀಮ್ಸ್ ಬಳಕೆ ಬೇಡ. ಲೋಶನ್ಸ್ ವಾಟರ್ ಬೇಸ್ಡ್ ಆಗಿರುವುದರಿಂದ ಚರ್ಮಕ್ಕೆ ಹೆಚ್ಚಿನ ಮಾಯಿಶ್ಚರ್ ಒದಗಿಸುತ್ತವೆ. ಕ್ರೀಮನ್ನು ಬೇಕಿದ್ದರೆ ಲೋಶನ್ ಹಚ್ಚಿದ ಬಳಿಕ ಹಚ್ಚಬಹುದು. ಇವು ಆಯಿಲ್ ಬೇಸ್ಡ್ ಆಗಿದ್ದು, ಮಾಯಿಶ್ಚರ್‌ನ್ನು ಚರ್ಮದ ಮೇಲೆ ಲಾಕ್ ಮಾಡುತ್ತವೆ.
- ಆಗಾಗ ನೀರು ಕುಡಿಯುತ್ತಲೇ ಇರಿ. ಎಸಿಯಿರುವ ಕೋಣೆಯಲ್ಲಿ ಕುಳಿತಾಗ ನೀರು ಕುಡಿಯಲು ನೆನಪಾಗದಿರಬಹುದು. ಹೀಗಾಗಿ, ಈ ಸಮಯದಲ್ಲಿ ರಿಮೈಂಡರ್ ಇಟ್ಟುಕೊಂಡು ನೀರು ಕುಡಿದರೂ ತೊಂದರೆಯಿಲ್ಲ. ಬಾಯಾರಿಕೆ ಆಗುವವರೆಗೆ ಕಾಯಬೇಡಿ. ಚರ್ಮ ಕಳೆದುಕೊಂಡ ನೀರನ್ನು ಮರಳಿಸಿ.
- ಎಸಿಯು ಕೋಣೆಯ ತೇವಾಂಶ ಎಳೆದುಕೊಳ್ಳುವುದರಿಂದ ಕೋಣೆಯಲ್ಲಿ ಹಲವೆಡೆ ಬಟ್ಟಲಿನಲ್ಲಿ ನೀರನ್ನು ಇಡಿ. ಆಗ ಎಸಿಯು ನಿಮ್ಮ ಚರ್ಮದ ತಂಟೆಗೆ ಬರದೆ ಬಟ್ಟಲಿನಿಂದ ನೀರನ್ನು ಎಳೆದುಕೊಳ್ಳುತ್ತದೆ.