ಪರಿಸರಕ್ಕೆ ಹಾನಿಕರ ಪ್ಯಾಡ್‌ಗೊಂದು ಪರ್ಯಾಯ ಮೆನ್ಸ್‌ಟ್ರುಯಲ್ ಕಪ್ಸ್!

By Web Desk  |  First Published Jul 22, 2019, 12:25 PM IST

ಮೆಡಿಕಲ್-ಗ್ರೇಡ್ ಸಿಲಿಕಾನ್‌ನಿಂದ ತಯಾರಾಗುವ ಮೆನ್ಸ್‌ಟ್ರುಯಲ್ ಕಪ್ಸ್, ಪ್ಯಾಡ್‌ನಂತೆ ರಕ್ತವನ್ನು ಹೀರಿಕೊಳ್ಳದೆ, ಸಂಗ್ರಹಿಸುತ್ತದೆ. ಇದು ಪರಿಸರಸ್ನೇಹಿಯಷ್ಟೇ ಅಲ್ಲ, ಸೇಫ್ ಕೂಡಾ ಎನ್ನುತ್ತಿದೆ ಹೊಸ ಅಧ್ಯಯನ.
 


ವಿಶ್ವದಲ್ಲಿ ಸುಮಾರು 1.9 ಶತಕೋಟಿ ಮಹಿಳೆಯರು ಮುಟ್ಟಿನ ವಯಸ್ಸಿನವರಾಗಿದ್ದು, ಇವರೆಲ್ಲರೂ ವರ್ಷದ 65 ದಿನಗಳನ್ನು ಮುಟ್ಟಿನ ಬ್ಲೀಡಿಂಗ್ ನಿರ್ವಹಿಸುವುದರಲ್ಲಿ ಕಳೆಯುತ್ತಾರೆ. ಆದರೂ ಕೂಡಾ ಈ ಕ್ಷೇತ್ರದಲ್ಲಿ ಆಯ್ಕೆಗಳು ಕಡಿಮೆ ಇವೆ. ಬಹುತೇಕ ಮಹಿಳೆಯರು ಮುಟ್ಟಿನ ಸಮಯದ ಬ್ಲೀಡಿಂಗ್ ನಿಭಾಯಿಸಲು ಬಟ್ಟೆ ಹಾಗೂ ಸ್ಯಾನಿಟರಿ ಪ್ಯಾಡ್ ಬಳಸುವುದು ತಿಳಿದೇ ಇದೆ. ಇದರಲ್ಲಿ ಕೆಲವೊಮ್ಮೆ ಸೋರುವ, ತುರಿಕೆ, ಉರಿ ತರುವ ಅಪಾಯವಿರುತ್ತದೆ. ಅಲ್ಲದೆ, ಪ್ಯಾಡ್‌ಗಳು ಪರಿಸರಕ್ಕೆ ಮಾರಕ ಕೂಡಾ. ಆದರೆ, ಅವುಗಳಿಗೆ ಪರ್ಯಾಯವಾದರೂ ಏನು ಎಂದು ತಿಳಿಯದೆ ಅನಿವಾರ್ಯವಾಗಿ ಬಳಸುತ್ತಿರುವವರು ಹಲವರು. 

ಪೀರಿಯಡ್ಸ್‌‌ ನೋವಿದ್ಯಾ? ಡಯಟ್ ಹೀಗಿರಲಿ...

Tap to resize

Latest Videos

ಇಂಥವರಿಗೆಲ್ಲ ಸಂತಸದ ಸುದ್ದಿಯಿದೆ. ಅದೇ ಮೆನ್ಸ್‌ಟ್ರುಯಲ್ ಕಪ್. ಬಹುತೇಕ ಮಹಿಳೆಯರಿಗೆ ಮೆನ್ಸ್‌ಟ್ರುಯಲ್ ಕಪ್ ಬಗ್ಗೆ ತಿಳಿದಿಲ್ಲ. ತಿಳಿದವರೂ ಬಳಸಲು ಭಯ ಬೀಳುತ್ತಾರೆ. ಆದರೆ ಇತ್ತೀಚೆಗೆ ಲ್ಯಾನ್ಸೆಟ್ ಅಧ್ಯಯನವು ಇವುಗಳ ಬಳಕೆ ಸಂಪೂರ್ಣ ಸುರಕ್ಷಿತ ಎಂದು ವರದಿ ನೀಡಿದ್ದು, ಮೆನ್ಸ್‌ಟ್ರುಯಲ್ ಕಪ್ ಬಳಸಲು ಮಹಿಳೆಯರನ್ನು ಪ್ರೇರೇಪಿಸಿದೆ.

ಏನಿದು ಮೆನ್ಸ್‌ಟ್ರುಯಲ್ ಕಪ್?

ಮೆಡಿಕಲ್-ಗ್ರೇಡ್ ಸಿಲಿಕಾನ್‌, ರಬ್ಬರ್ ಅಥವಾ ಲ್ಯಾಟೆಕ್ಸ್‌ನಿಂದ ತಯಾರಾಗುವ ಸಣ್ಣ ಕಪ್‌ನಂತಿರುವ ಇವು ಯೋನಿಯ ಮೇಲೆ ಲಾಕ್ ಆಗಿ ಕುಳಿತು ಮುಟ್ಟಿನ ರಕ್ತ ಸಂಗ್ರಹಿಸುತ್ತವೆ. 8-10 ಗಂಟೆಗಳ ಕಾಲ ಒಂದನ್ನು ಬಳಸಬಹುದು. ನಂತರ ವಾಶ್ ಮಾಡಿ ಮರುಬಳಕೆ ಮಾಡಬಹುದು. ವಿವಿಧ ಆಕಾರ, ಗಾತ್ರ ಹಾಗೂ ದಪ್ಪಗಳಲ್ಲಿ ಇವು ಸಿಗುತ್ತವೆ. ಅಭ್ಯಾಸ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಬಹುದು. ಆದರೆ, ಸರಿಯಾದ ಸೈಜ್ ಕಂಡುಕೊಂಡರೆ ನಂತರದಲ್ಲಿ ಲೀಕೇಜ್ ಇಲ್ಲದ, ಮತ್ತೆ ಮತ್ತೆ ಕೊಳ್ಳುವ ಅವಶ್ಯಕತೆ ಇಲ್ಲದ ಮೆನ್ಸ್‌ಟ್ರುಯಲ್ ಕಪ್ ಹೆಚ್ಚು ಕಂಫರ್ಟ್ ಎನಿಸತೊಡಗುತ್ತದೆ. ಏಕೆಂದರೆ ಇವನ್ನು ಧರಿಸಿರುವುದು ಅನುಭವಕ್ಕೇ ಸಿಗದು. ಅಲ್ಲದೆ ನೀವು ಹಾರಿ, ಕುಣಿದು ಕುಪ್ಪಳಿಸಿದರೂ ಕಪ್ ಇದ್ದಲ್ಲಿಂದ ಕೊಂಚವೂ ಕದಲದು. ಜೊತೆಗೆ ಅವು ಪರಿಸರ ಸ್ನೇಹಿ ಕೂಡಾ. ಪ್ಯಾಡ್‌ಗಳು ಒದ್ದೆಯನ್ನು ಹೀರುತ್ತವಾದರೆ, ಇವು ಸಂಗ್ರಹಿಸುತ್ತವೆ. ಇವನ್ನು ನೀವು ಸುಮಾರು 10 ವರ್ಷಗಳ ಕಾಲ ಬಳಸಬಹುದು. ಇಷ್ಟಕ್ಕೂ ಮೆನ್ಸ್‌ಟ್ರುಯಲ್ ಕಪ್ಸ್ ಏನೂ ಹೊಸತಲ್ಲ. 99 ದೇಶಗಳಲ್ಲಿ 199 ಬ್ರ್ಯಾಂಡ್‌ಗಳ ಕಪ್‌ಗಳು ದೊರೆಯುತ್ತವೆ. ಆದರೆ, ಈ ಕುರಿತ ಜಾಗೃತಿ ಕೊರತೆ ಇದೆ ಅಷ್ಟೆ. 

ಲ್ಯಾನ್ಸೆಟ್ ಸ್ಟಡಿ

'ಮೆನ್ಸ್‌ಟ್ರುಯಲ್ ಕಪ್ ಯೂಸ್, ಲೀಕೇಜ್, ಅಕ್ಸೆಪ್ಟಬಲಿಟಿ, ಸೇಫ್ಟಿ ಆ್ಯಂಡ್ ಅವಾಯ್ಲೇಬಲಿಟಿ: ಎ ಸಿಸ್ಟೆಮ್ಯಾಟಿಕ್ ರಿವ್ಯೂ ಆ್ಯಂಡ್ ಮೆಟಾ ಅನಾಲಿಸಿಸ್' ಎಂಬ ಅಧ್ಯಯನವು ಈ ಕುರಿತ ಮೊದಲ ಜಾಗತಿಕ ಅಧ್ಯಯನವಾಗಿದೆ. ಇದು ಮೆನ್ಸ್‌ಟ್ರುಯಲ್ ಕಪ್ ಟ್ಯಾಂಪಾನ್ಸ್ ಅಥವಾ ಡಿಸ್ಪೋಸೇಬಲ್ ಪ್ಯಾಡ್‌ಗಿಂತಲೂ ಹೆಚ್ಚು ಸುರಕ್ಷಿತ, ಅವುಗಳಂತೆ ಇದರಲ್ಲಿ ಲೀಕೇಜ್ ಇರುವುದಿಲ್ಲ ಎಂದು ತಿಳಿಸಿದೆ. ಇದನ್ನು ಬಳಸಿದ ಶೇ.70ರಷ್ಟು ಮಹಿಳೆಯರು ತಾವದರ ಬಳಕೆ ಮುಂದುವರೆಸುವುದಾಗಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ. 

ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?

ವಿಶ್ವಾದ್ಯಂತ ಬಹುತೇಕ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಸಿಗುವುದಿಲ್ಲ, ಮತ್ತೆ ಕೆಲವರಿಗೆ ಪ್ರತೀ ತಿಂಗಳು ಅದನ್ನು ಕೊಳ್ಳುವಷ್ಟು ಹಣವಿರುವುದಿಲ್ಲ. ಹೀಗಾಗಿ ಬಹಳಷ್ಟು ಹುಡುಗಿಯರು, ಮಹಿಳೆಯರು ಶಾಲೆ, ಉದ್ಯೋಗ ತಪ್ಪಿಸಬೇಕಾಗಿ ಬರುತ್ತದೆ. ಜೊತೆಗೆ, ಸ್ವಚ್ಛತೆ ಕಡಿಮೆಯಾಗಿ ಮೂತ್ರನಾಳ ಸೋಂಕು ಕಾಣಿಸಿಕೊಳ್ಳಬಹುದು. ಆದ್ದರಿಂದಲೇ ಸುರಕ್ಷಿತವಾದ, ಕೊಳ್ಳಬಹುದಾದ, ಬಹುಕಾಲ ಬಳಕೆಗೆ ಯೋಗ್ಯವಾದ ಮೆನ್ಸ್‌ಟ್ರುಯಲ್ ಕಪ್ ಲಕ್ಷಾಂತರ ಮಹಿಳೆಯರ ಜೀವನ ಬದಲಾಯಿಸಬಲ್ಲದು ಎಂಬುದು ಸಂಶೋಧನಕಾರರ ಮಾತು. 
ಪರಿಸರ ಸ್ನೇಹಿ

ಮೆನ್ಸ್‌ಟ್ರುಯಲ್ ಕಪ್‌ಗಳನ್ನು ಸುಮಾರು 10 ವರ್ಷಗಳ ಕಾಲ ಬಳಸಬಹುದಾದ್ದರಿಂದ ಹಣವೂ ಉಳಿತಾಯವಾಯಿತು. ಜೊತೆಗೆ, ನೀವು ಒಮ್ಮೆ ಬಳಸಿ ಬಿಸಾಡುವ ಪ್ಯಾಡ್‌ಗಳಷ್ಟು ಪ್ಲ್ಯಾಸ್ಟಿಕ್ ವೇಸ್ಟ್‌ನ ಶೇ. 0.4ರಷ್ಟು ಭಾಗ ಮಾತ್ರ ಮೆನ್ಸ್‌ಟ್ರುಯಲ್ ಕಪ್ ಬಳಕೆಯಿಂದ 10 ವರ್ಷಗಳಲ್ಲಿ ಸಂಗ್ರಹವಾಗುತ್ತದೆ. ಅಂದರೆ, ಮೂರು ದಿನದಲ್ಲಿ ಪರಿಸರಕ್ಕೆ ಸೇರಿಸುವ ಪ್ಲ್ಯಾಸ್ಟಿಕ್ ಕಸ ಸುಮಾರು ಜೀವಿತಾವಧಿವರೆಗೆ ಬಳಸಿದಾಗ ಆಗಬಹುದು. ಪರಿಸರದ ಕಾಳಜಿ ದೃಷ್ಟಿಯಿಂದಲೂ ಇವು ಉತ್ತಮ.

click me!