
ಗುಜರಾತ್ ಎಂಬುದು ಟ್ರಾವೆಲ್ಲರ್ಸ್‌ಗೆ ಆಲ್ ರೌಂಡ್ ಪ್ಯಾಕೇಜ್ ಇದ್ದಂತೆ. ಇಲ್ಲಿ ನೀವು ಹತ್ತು ಹಲವು ಅನುಭವಗಳನ್ನು ಸಾರಾಸಗಟಾಗಿ ನಿಮ್ಮ ಬದುಕಿನ ಬುಟ್ಟಿಗೆ ತುಂಬಿಕೊಳ್ಳಬಹುದು. ವನ್ಯಜೀವಿಗಳು, ವಾಸ್ತುಶಿಲ್ಪ, ಆಹಾರ ವೈವಿಧ್ಯ, ಕಲೆ, ವಿಶಿಷ್ಠ ಹಬ್ಬಗಳು, ನೋಡುವಂಥ ತಾಣಗಳು, ಸರ್ದಾರರ ಉಕ್ಕಿನ ಪ್ರತಿಮೆ, ಎಲ್ಲಕ್ಕಿಂತ ಹೆಚ್ಚಾಗಿ ಗಾಂಧೀಜಿಯ ತವರೂರು... ಗುಜರಾತ್ ನಿಮ್ಮೆಲ್ಲ ಅಭಿರುಚಿಗಳನ್ನೂ ತಣಿಸಬಲ್ಲದು. ಇಲ್ಲಿ ನೀವೇನೇನು ಮಾಡಬೇಕು ಗೊತ್ತಾ?
ಬಾಲಿಯಲ್ಲಿ ನೋಡಲೇಬೇಕಾದ ಹಿಂದೂ ದೇವಾಲಯಗಳಿವು...
ಅಹಮದಾಬಾದ್
ಭಾರತದ ಮೊದಲ ವಿಶ್ವ ಪಾರಂಪರಿಕ ನಗರ ಎನಿಸಿಕೊಂಡಿರುವ ಅಹಮದಾಬಾದ್ ನಿಮ್ಮ ಗುಜರಾತ್ ಟ್ರಿಪ್‌ನ ಮೊದಲ ಭೇಟಿಯಲ್ಲಿ ಹೋಗಲೇಬೇಕಾದ ಸ್ಥಳ. ಇಲ್ಲಿನ ಶತಮಾನಗಳ ಹಳೆಯ ಮಸೀದಿಗಳು, ದೇವಾಲಯಗಳು, ಅದ್ಭುತ ಮ್ಯೂಸಿಯಂಗಳು ಜೊತೆಗೆ, ಮರೆಯಲಾಗದ ಡೈನಿಂಗ್ ಸೀನ್. ಇವೆಲ್ಲವನ್ನೂ ಅನುಭವಿಸಬೇಕೆಂದರೆ ಒಂದೆರಡು ದಿನ ಅಹಮದಾಬಾದ್‌ನಲ್ಲಿ ತಿರುಗಾಡಲೇಬೇಕು. ನೀವು ಫುಡೀಯಾಗಿದ್ದಾರೆ ರಾತ್ರಿ ಬಜಾರ್‌ಮ ಸ್ಟ್ರೀಟ್ ಫುಡ್ಡನ್ನೂ, ಗೋಪಿ ಡೈನಿಂಗ್ ಹಾಲ್‌ನ ಥಾಲಿಯನ್ನೂ ತಪ್ಪಿಸಿಕೊಳ್ಳಲೇಕೂಡದು.
ಸ್ಥಳೀಯ ಗೈಡ್ ಕರೆದುಕೊಂಡು ಇಲ್ಲಿನ ಕ್ಯಾಲಿಕೋ ಟೆಕ್ಸ್‌ಟೈಲ್ ಮ್ಯೂಸಿಯಂ, ಹುತೀಸಿಂಗ್ ಟೆಂಪಲ್, ಗಾಂಧೀಜಿಯ ಮುಂಚಿನ ಹೆಡ್‌ಕ್ವಾರ್ಟರ್ ಸಾಬರಮತಿ ಆಶ್ರಮ, ಜಮಾ ಮಸೀದಿ ಹಾಗೂ ಸಿದ್ದಿ ಸಯೀದ್ ಮಸೀದಿಯನ್ನು ತಿರುಗಾಡಿ ಬನ್ನಿ. ಇನ್ನೂ ಸಮಯವಿದೆ ಎಂದಾದರೆ ಮೊಧೆರಾ ಸನ್ ಟೆಂಪಲ್ ಹಾಗೂ ರಾಣಿ ಕಿ ವಾವ್ ನೋಡಿಯೇ ಬನ್ನಿ.
ಚೆನ್ನೈ ಸಾಗರದಲ್ಲಿ ಕಂಡ ನೀಲಿ ಅಲೆಗಳ ರಹಸ್ಯ!
ಕಛ್‌ನ ಕ್ರಾಫ್ಟ್ ವಿಲೇಜ್
ಶತಮಾನಗಳಿಂದ ಕಛ್‌ನ ಪುರುಷರು ಹಾಗೂ ಮಹಿಳೆಯರು ಕರಕುಶಲತೆಯಲ್ಲಿ ಪಳಗುತ್ತಾ ಪರ್ಫೆಕ್ಷನ್ ಸಾಧಿಸಿದ್ದಾರೆ ಎಂದರೂ ತಪ್ಪಾಗಲಾರದು. ಭಾರತದ ಅತ್ಯಂತ ಶ್ರೀಮಂತ ಹಾಗೂ ಅತ್ಯುತ್ತಮ ಗುಣಮಟ್ಟದ ಬಟ್ಟೆಗಳು ಇಲ್ಲಿ ತಯಾರಾಗುತ್ತವೆ. ಇದರೊಂದಿಗೆ ಮರದ ಕೆತ್ತನೆ, ಬ್ಲಾಕ್ ಪ್ರಿಂಟಿಂಗ್, ಮಡಕೆ ಮಾಡುವುದು, ಬೆಲ್ ತಯಾರಿಕೆ ಮುಂತಾದುವುಗಳಲ್ಲಿ ತೊಡಗಿರುವ ಈ ಹಳ್ಳಿಯನ್ನು ನೋಡುವುದೇ ಕಣ್ಣಿಗೆ ಹಬ್ಬ.
ಲೋಕಲ್ ಗೈಡ್ ಕರೆದುಕೊಂಡು ಈ ಹಳ್ಳಿಗಳುದ್ದಕ್ಕೂ ಸುತ್ತಾಡಿ. ದ ಲಿವಿಂಗ್ ಆ್ಯಂಡ್ ಲರ್ನಿಂಗ್ ಡಿಸೈನ್ ಸೆಂಟರ್ ಕ್ರಾಫ್ಟ್ಸ್ ಮ್ಯೂಸಿಯಂಗೆ ಭೇಟಿ ನೀಡಿ. ಇದು ನಿಮಗೆ ಇಲ್ಲಿನ ಜನರ ಸೃಜನಶೀಲತೆಯ ಪರಿಚಯ ಮಾಡಿಕೊಡದೆ ಇರಲಾರದು. ಭುಜ್ ಸುತ್ತಮುತ್ತ ಇರುವ ಮಹಿಳಾ ವಿಕಾಸ್ ಸಂಘಟನ್, ಕಲಾ ರಕ್ಷಾ, ಸೃಜನ್ ಆ್ಯಂಡ್ ಖಾಮಿರ್ ಕೋಪರೇಟಿವ್ಸ್‌ಗೆ ಹೋಗಿ ಬನ್ನಿ.
ಹಬ್ಬಗಳು
ಗುಜರಾತಿ ಆಹಾರ ವೈವಿಧ್ಯ ಭಾರತದಾದ್ಯಂತ ಜನಪ್ರಿಯತೆ ಪಡೆದಿದೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದರಂತೂ ನಾಲಿಗೆಗೂ ಹಬ್ಬ, ಕಣ್ಣಿಗೂ ಹಬ್ಬ. ಸೆಪ್ಟೆಂಬರ್, ಅಕ್ಟೋಬರ್ ಸಮಯದಲ್ಲಿ ನಡೆವ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹಿಂದೂ ಭಕ್ತರ ಸಮೂಹ ನೃತ್ಯಗಳು, ಗರ್ಭಾ ಹಾಗೂ ದಾಂಡಿಯಾ ರಾಸ್ ನಿಮ್ಮನ್ನು ಮಂತ್ರಮುಗ್ಧಗೊಳಿಸುವುದರಲ್ಲಿ ಅನುಮಾನವಿಲ್ಲ. ಇನ್ನು ಜನವರಿಯಲ್ಲಿ ನಡೆವ ಗಾಳಿಪಟ ಉತ್ಸವವನ್ನಂತೂ ಜಗತ್ತೇ ಬೆರಗಾಗಿ ವೀಕ್ಷಿಸುತ್ತದೆ.
ಇಡೀ ಗುಜರಾತ್‌ನ ಆಕಾಶವೆಲ್ಲ ಗಾಳಿಪಟಗಳ ಬಣ್ಣಗಳಿಂದ ಮುಚ್ಚಿ ಹೋಗಿರುವುದನ್ನು ನೋಡುವುದೇ ಸ್ವರ್ಗಾನುಭವ. ಇನ್ನುವ ನವೆಂಬರ್‌ನಲ್ಲಿ ಕಛ್‌ನಲ್ಲಿ ನಡೆವ ರಣ್ ಉತ್ಸವದಲ್ಲಿ ಏನುಂಟು ಏನಿಲ್ಲ? ಎಲ್ಲ ವಿಧದ ನೃತ್ಯ, ಸಂಗೀತ ವೈಭವಗಳೂ ಇಲ್ಲಿ ಮೈದಾಳುತ್ತವೆ. ಅಲ್ಲದೆ, ಇಲ್ಲಿನ ರಣ್ ಪ್ರದೇಶದಲ್ಲಿ 7500 ಚ.ಕಿಮೀ ದೂರ ಉಪ್ಪು ಹಾಗೂ ಮರಳು ಮಿಶ್ರಿತ ಮರುಭೂಮಿ ನೋಡಿಬನ್ನಿ.
ಗಿರ್ ರಾಷ್ಟ್ರೀಯ ಉದ್ಯಾನ
ಈ 1412 ಚದರ ಕಿಲೋಮೀಟರ್‌ಗಳ ಅಭಯಾರಣ್ಯದಲ್ಲಿ ಏಷ್ಯಾಟಿಕ್ ಸಿಂಹಗಳನ್ನು ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಚೆನ್ನಾಗಿ ಕಾಣಬಹುದು. 1960ಕ್ಕೆ ಹೋಲಿಸಿದರೆ ಈಗ ಇಲ್ಲಿನ ಸಿಂಹಗಳ ಸಂಖ್ಯೆ ಡಬಲ್ ಆಗಿದೆ. ಆದರೆ, ಇದಕ್ಕಾಗಿ ನೀವು ಮುಂಚಿತವಾಗಿಯೇ ಸಫಾರಿ ಬುಕ್ ಮಾಡಿಕೊಂಡಿರಬೇಕು. ಬೆಳ್ಳಂಬೆಳಗ್ಗೆ ಹೋದರೆ, ಚಿರತೆ, ಕೃಷ್ಣಮೃಗ, ಜಿಂಕೆಗಳು ಮುಂತಾದ ಪ್ರಾಣಿಗಳೂ ನಿಮ್ಮ ಮುಂದೆ ಸುಳಿಯುತ್ತವೆ.
ಆಹಾ... ಏನ್ ಸ್ವಾದ, ಭೌಗೋಳಿಕ ಮಾನ್ಯತೆ ಪಡೆಯಿತು ನಮ್ಮ ಪ್ರಸಾದ!
ಶತೃಂಜಯ
ಜೈನರ ಅತಿ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ಶತೃಂಜಯಕ್ಕೆ ಗುಡ್ಡವೇರಿ ಹೋಗಬೇಕು. ಸುಮಾರು 3300 ಮೆಟ್ಟಿಲುಗಳನ್ನೇರಿ ಆದಿನಾಥನ ದರ್ಶನಕ್ಕೆ ಸಾಗುವ ಅನುಭವ ಎಲ್ಲರಿಗೂ ವಿಶೇಷವಾದದ್ದೇ. ಚೆಂದದ ಕೆತ್ತನೆಯಿಂದ ಕಂಗೊಳಿಸುವ ಈ ದೇವಾಲಯ ಕಣ್ಣಿಗೆ ಹಬ್ಬ, ಬೆಟ್ಟದ ಮೇಲೆ ಸುಳಿವ ತಂಪಾದ ಗಾಳಿ, ಸುತ್ತಲಿನ ದೃಶ್ಯವೈಭವ ಎಲ್ಲವೂ ಅದ್ಬುತ. ಅದರಲ್ಲೂ ಕಾರ್ತಿಕ ಪೂರ್ಣಿಮಾ ಹಬ್ಬದಂದು ಇಲ್ಲಿ ಭೇಟಿ ನೀಡಿದರೆ ಭಕ್ತರು ಕಿಕ್ಕಿರಿದು ಸೇರುತ್ತಾರೆ.
ಏಕತಾ ಪ್ರತಿಮೆ
ಗುಜರಾತ್‌ನ ಕಿರೀಟಕ್ಕಿಟ್ಟ ಮುಕುಟಮಣಿಯಂತೆ ಸರ್ದಾರ್ ವಲ್ಲಭಭಾಯ್ ಪಟೇಲರ 182 ಮೀಟರ್ ಉದ್ದದ ಪ್ರತಿಮೆ ನಿಂತಿದೆ. ಹತ್ತಿರದಲ್ಲೇ ಸರ್ದಾರ್ ಸರೋವರ್ ಡ್ಯಾಂ ಇದೆ. ಭಾರತದ 562 ಪ್ರಾಂತ್ಯಗಳನ್ನು ಒಗ್ಗೂಡಿಸಿದ ಖ್ಯಾತಿ ಪಟೇಲರದ್ದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.