ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಗಣಪತಿ ಕೂರಿಸಬಹುದಾ? ಜಮೀರ್ ಉತ್ತರಿಸಿದ್ದು ಹೀಗೆ

Published : Jul 08, 2022, 07:17 PM IST
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಗಣಪತಿ ಕೂರಿಸಬಹುದಾ? ಜಮೀರ್ ಉತ್ತರಿಸಿದ್ದು ಹೀಗೆ

ಸಾರಾಂಶ

* ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ * ಶಾಸಕ ಜಮೀರ್‌ ಅಹಮದ್‌ ನೇತೃತ್ವದಲ್ಲಿ ಮುಖಂಡರ ಸಭೆ * ನಾಗರೀಕರ ಸಭೆ ಗೊಂದಲದಲ್ಲೇ ಅಂತ್ಯ

ಬೆಂಗಳೂರು, (ಜುಲೈ.08): ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಅಂತ್ಯ ಕಾಣಿಸಬೇಕಿದ್ದ ನಾಗರೀಕರ ಸಭೆ ಗೊಂದಲದಲ್ಲೇ ಅಂತ್ಯವಾಯಿತು. ಈದ್ಗಾ ಮೈದಾನದ ಮಾಲೀಕರು ಬಿಬಿಎಂಪಿಯಾ? ವಕ್ಫಾ ? ಎಂಬ ಗೊಂದಲ ಹಾಗೇ ಉಳಿಯಿತು‌. ಸಭೆಯ ನೇತೃತ್ವ ವಹಿಸಿದ್ದ ಶಾಸಕ ಜಮೀರ್ ಅಹ್ಮದ್, ಸುದೀರ್ಘವಾಗಿ ಮಾತನಾಡಿದರೂ ಸಾರ್ವಜನಿಕರ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗಲಿಲ್ಲ.

ಆಟಕ್ಕೆ ಓಕೆ:-
ಎಲ್ಲರೂ ಆಟದ ಮೈದಾನ ಉಳಿಸಿ, ಉಳಿಸಿ ಅಂತ ಸಭೆ ಮಾಡಿದ್ರು. ಆಟದ ಮೈದಾನ ಎಲ್ಲಿ ಹೋಗಿದೆ? ಆಟದ ಮೈದಾನವನ್ನ ಯಾರು ತೆಗೆದಿದ್ದಾರೆ? ಎಂಎಲ್ ಎ, ಬಿಬಿಎಂಪಿ, ವಕ್ಫ್ ಬೋರ್ಡ್ ಯಾರಾದ್ರೂ ಹೇಳಿಕೆ ಕೊಟ್ಟಿದ್ರಾ..? ಎಂದು ಶಾಸಕ ಜಮೀರ್ ಅಹ್ಮದ್ ಸಭೆಗೆ ಪ್ರಶ್ನೆ ಹಾಕಿದ್ರು.

ಚಾಮರಾಜಪೇಟೆ ಮೈದಾನ ಬಿಬಿಎಂಪಿ ಆಸ್ತಿ ಎಂಬ ದಾಖಲೆ ಪತ್ತೆ?

ಆಟ ಆಡೋಕೆ ಜಾಗ ಕೊಡೊಲ್ಲ ಅಂತ ಯಾರಾದ್ರೂ ಹೇಳಿದ್ದಾರಾ? ನನ್ನ ಪ್ರಾಣ ಇರೋವರೆಗೂ ಮೈದಾನ ತೆಗೆಯಲು ಸಾಧ್ಯವೇ ಇಲ್ಲ. ಆಟದ ಮೈದಾನವಾಗಿಯೇ ಉಳಿಯುತ್ತೆ ಎಂದು ಜಮೀರ್ ಸ್ಪಷ್ಟಪಡಿಸಿದರು. 1871 ರಿಂದ ಈದ್ಗಾ ಮೈದಾನವಾಗಿ ಇದೆ. ನಾನು ಹುಟ್ಟೆ ಇರಲಿಲ್ಲ ಅವಾಗಿಂದ ಇದು ಆಟದ ಮೈದಾನವಾಗಿಯೆ ಇದೆ.

ನನ್ನಿಂದಲೇ‌ ಧ್ವಜಾರೋಹಣ:-
ಚಾಮರಜಪೇಟೆಯವರು ಯಾರೂ ನನ್ನ ವಿರುದ್ಧ ಮಾತನಾಡೋಲ್ಲ. ನನ್ನ‌ ವಿರುದ್ಧ ಮಾತನಾಡೋರು ಚಾಮರಾಜಪೇಟೆಯವರೇ ಅಲ್ಲ. ಕೋವಿಡ್ ಸಮಯದಲ್ಲಿ ೫೮೦ ಶವಗಳನ್ನ ಎತ್ತಿದ್ದೀವಿ. ಇಷ್ಟೆಲ್ಲಾ ಮಾತನಾಡೋರು ಕೋವಿಡ್ ಸಮಯದಲ್ಲಿ ಎಲ್ಲಿ ಇದ್ರು ಎಂದು ಜಮೀರ್ ಪ್ರಶ್ನಿಸಿದ್ರು.

ಈ ವರ್ಷದಿಂದ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಲಾಗುವುದು. ನನ್ನ ನೇತೃತ್ವದಲ್ಲಿಯೇ ಗಣರಾಜ್ಯೊತ್ಸವ, ಸ್ವಾತಂತ್ಯ ದಿನಾಚರಣೆ ಆಚರಣೆ ಮಾಡ್ತಿವಿ. ಎದೆ ತಟ್ಟಿಕೊಂಡು ಧ್ವಜಾರೋಹಣ ಮಾಡಿಯೇ ಸಿದ್ದ ಎಂದರು ಶಾಸಕ ಜಮೀರ್.

ಬಂದ್ ಬೇಡ:-
ಯಾವ ಹಿನ್ನಲೆಯಲ್ಲಿ ಚಾಮರಾಜಪೇಟೆ ಬಂದ್ ಗೆ ಕರೆ ಕೊಟ್ರೋ ಗೊತ್ತಿಲ್ಲ. ಬಂದ್ ಬೇಕಾ‌ ಎಂಬ ಶಾಸಕರ ಪ್ರಶ್ನೆಗೆ ಸಭೆಯಲ್ಲಿದ್ದ ನಾಗರೀಕರು‌. ಬಂದ್ ಬೇಡ ಎಂದರು.

ಗಣಪತಿ ಕೂರಿಸಬಹುದಾ...?:
ನಮ್ಮ ಇಡೀ ಚಾಮರಾಜ ಪೇಟೆಯಲ್ಲಿ ಗಣೇಶ ಕೂರಿಸೋದಕ್ಕೆ ಎಲ್ಲಿ ಗ್ರೌಂಡ್ ಇದೆ ಹೇಳಿ ಎಂಬ ನಾಗರೀಕರ ಪ್ರಶ್ನೆಗೆ ಜಮೀರ್, ಇಷ್ಟು ವರ್ಷದಿಂದ ಇಲ್ಲದಿರುವ ವಿಚಾರ ಇವಾಗ ಯಾಕೆ ?? ಎಂದು ಮರು ಪ್ರಶ್ನೆ ಕೇಳಿ ಸುಮ್ಮನಾಗಿಸಿದರು.

ಕುರಿ ಸಂತೆ ಎತ್ತಂಗಡಿ..? :
ಕುರಿಗಳ ವ್ಯಾಪಾರದಿಂದ ಸುತ್ತಮುತ್ತ ದೇವಸ್ಥಾನಕ್ಕೆ ತೊಂದರೆ ಆಗ್ತಾ ಇದೆ. ಮಕ್ಕಳ ಆಟಕ್ಕು ಸಮಸ್ಯೆ ಆಗ್ತಾ ಇದೆ. ಹಾಗಾಗಿ ಅದನ್ನು ಬೇರೆಡೆ ಸ್ಥಳಾಂತರಿಸುವಂತೆ  ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರ ಮನವಿಗೆ, ಅವರನ್ನು ಕರೆದು ನಾನು ಮಾತನಾಡಿದ್ದೇನೆ. ಮತ್ತೊಮ್ಮೆ ಅವರಿಗೆ ವಾರ್ನ್ ಮಾಡುತ್ತೆನೆ ಬೇರೆ ಕಡೆ ವ್ಯವಸ್ಥೆ ಆಗುವವರೆಗೂ ಸರಿಯಾಗಿ ಇರುವಂತೆ ಹೇಳುತ್ತೇನೆ ಎಂದು ಜಮೀರ್ ಉತ್ತರಿಸಿದರು‌.

ಗೈರು -ಹಾಜರು :-
ಮಾಜಿ ಕಾರ್ಪೊರೇಟರ್ ಗಳಾದ ಕೋಕಿಲಾ ಚಂದ್ರಶೇಖರ್, ಸುಜಾತ, ಡಿ.ಸಿ ರಮೇಶ್, ಬಿಟಿ ಶ್ರೀನಿವಾಸ್ ಮೂರ್ತಿ, ಚಂದ್ರಶೇಖರ್, ಅಲ್ತಾಫ್ ಖಾನ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು. ಸಂಸದ ಪಿ.ಸಿ‌ ಮೋಹನ್ , ಮಾಜಿ ಕಾರ್ಪೊರೇಟರ್ ಬಿವಿ ಗಣೇಶ್, ಮಾಜಿ ಶಾಸಕಿ  ಪ್ರಮೀಳಾ ನೇಸರ್ಗಿ ಅವರನ್ನು ಆಹ್ವಾನಿಸಿದ್ದರು ಸಭೆಗೆ ಬಂದಿರಲಿಲ್ಲ.

ಮಾಧ್ಯಮಗಳ ಮೇಲೆ ಉರಿದು ಹೊರನಡೆದರು
ದಾಖಲೆ ಎಸೆದರು, ಮಾಧ್ಯಮಗಳ ಮೇಲೆ ಉರಿದರು, ಹೊರನಡೆದರು - ಇದು ಶಾಸಕ ಜಮೀರ್ ಅಹ್ಮದ್ ಅವರ ಇವತ್ತಿನ ನಡವಳಿಕೆಯ ಒನ್ ಲೈನ್ ವರದಿ.

ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಬಗೆಹರಿಸಲು ಸೇರಿದ್ದ ಸಭೆಯಲ್ಲಿ ಶಾಸಕ ಜಮೀರ್, ನಾನು ಹೇಳಿದ್ದೇ ಸರಿ. ನೀವು ಏನು ಕೇಳಂಗಿಲ್ಲ ಎಂಬಂತೆ ನಡೆದುಕೊಂಡರು.

ಚಾಮರಾಜಪೇಟೆಯವರು ನನ್ನ ಪ್ರಶ್ನೆ ಮಾಡೋಲ್ಲ. ಪ್ರಶ್ನೆ ಮಾಡೋರು ಚಾಮರಾಜಪೇಟೆಯವರೇ ಅಲ್ಲ ಅಂತ ಫರ್ಮಾನು ಹೊರಡಿಸಿದರು ಶಾಸಕ‌ ಜಮೀರ್ ಸಾಹೇಬರು. ಸಭೆ ಮುಗಿದ ಮೇಲೆ‌ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆ ಗರಂ ಆದ ಜಮೀರ್ ಸಾಹೇಬರು, ಮುಂದೊಡ್ಡಿದ ದಾಖಲೆಗಳನ್ನು ಕಿತ್ತೆಸದರು.  ಅಲ್ಲದೇ ಗೊಂದಲ ಸೃಷ್ಟಿಗೆ ಮಾಧ್ಯಮಗಳು ಕಾರಣ ಎಂದು ಜಮೀರ್ ತೀರ್ಪು ನೀಡಿದರು.

ಚಾಮರಾಜಪೇಟೆ ಆಟದ ಮೈದಾನದ ಕಸ ಎತ್ತೋದಿಲ್ಲ ಅನ್ನುವ ಬಿಬಿಎಂಪಿ ಚೀಫ್‌ ಕಮಿಷನರ್ ಹೇಳಿಕೆ ಕೋಟ್ ಮಾಡಿದ ಜಮೀರ್, ಕಸ ಎತ್ತೋದಿಲ್ಲ ಅಂದ್ರೆ ಏನ್ ಅರ್ಥ? ಅದು ಬಿಬಿಎಂಪಿ ಆಸ್ತಿ ಅಲ್ಲ ಎಂದು ಶಾಸಕ ಜಮೀರ್‌ ಕೋಪದಿಂದ್ಲೇ‌ ವಿಶ್ಲೇಷಿಸಿದರು.
ಗಣೇಶ ಉತ್ಸವ, ಶಿವರಾತ್ರಿಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಜಮೀರ್ ಉತ್ತರ ನೀಡದೆ ಮಾಧ್ಯಮದವರ ಮೇಲೆಯೇ ಕಿರುಚಾಡಿದರು. 

2023 ರ ಚುನಾವಣಾ ಗಿಮಿಕ್ ನಿಂದ ಇಷ್ಟೆಲ್ಲಾ ಸಮಸ್ಯೆ ಉಂಟಾಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಇಂಥ ವಿವಾದ ಎದ್ದಿದೆ. ಇದರ ಹಿಂದೆ ಯಾರು ಇದ್ದಾರೆ ಅನ್ನೋದು ನನಗೆ ಗೊತ್ತಿದೆ. 2006 ರಲ್ಲಿ ನಡೆದ ಸಭೆಯಲ್ಲಿ ಇತರ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಲಾಗಿತ್ತು. ಅದಾದ ಬಳಿಕ ಸಿಎಂ ಅವಕಾಶ ನೀಡಲ್ಲ ಅಂತ ಹೇಳಿದ್ರು. ಹೀಗಾಗಿ ಆಚರಣೆಗೆ ಅವಕಾಶ ನೀಡಲಿಲ್ಲ ಎಂದೂ ಸಮಜಾಯಿಷಿ ನೀಡಿದ್ರು.
ಎಲ್ಲಾ ಗೊಂದಲ ನೀವೇ ಸೃಷ್ಟಿಸೋದು ಎಂದು ಗರಂ ಆಗಿ ವೇದಿಕೆಯಿಂದ ಕಾಲ್ಕಿತ್ತರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ