* ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ನಡೆದ ಘಟನೆ
* ಜಿಂಕೆ ಮರಿಯನ್ನು ಹಿಡಿದು ಕಡಿಯಲು ಯತ್ನಿಸಿದ್ದ ನಾಯಿಗಳು
* ಯುವಕರ ಮಾನವೀಯತೆಗೆ ಅಭಿನಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಹಾನಗಲ್ಲ(ಆ.04): ಕಾಡಿನಿಂದ ನಾಡಿಗೆ ಬಂದ ಪುಟ್ಟ ಯನ್ನು ನಾಯಿಗಳು ಬೆನ್ನಟ್ಟಿದ್ದನ್ನು ಕಂಡ ಕೊಪ್ಪರಸಿಕೊಪ್ಪದ ಯುವಕರು ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿ ಮಾನವೀಯತೆ ಮರೆದ ಘಟನೆ ಮಂಗಳವಾರ ಸಂಭವಿಸಿದೆ.
ಮುಂಡಗೋಡು ತಾಲೂಕಿನ ಕಾತೂರು ಜಂಗಲ್‌ನಿಂದ ಆಹಾರ ಅರಸಿ ಬಂದ ಚಿಕ್ಕ ಜಿಂಕೆಯೊಂದು ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಪ್ಲಾಟ್ ಬಳಿ ಬಂದಾಗಜಿಂಕೆ ಮರಿಯನ್ನು ಹಿಡಿದು ಕಡಿಯಲು ಯತ್ನಿಸಿವೆ. ಇದನ್ನು ನೋಡಿದ ಕೊಪ್ಪರಸಿಕೊಪ್ಪ ಗ್ರಾಮದ ಬಸವರಾಜ ವಡ್ಡರ, ಲಕ್ಷ್ಮಣ ವಡ್ಡರ, ಬಸವರಾಜ ಚಲ್ಲಾಳ, ಇಸ್ಮಾಯಿಲ್ ಕೊಪ್ಪರಸಿಕೊಪ್ಪ ಮೊದಲಾದ ಯುವಕರು ನಾಯಿಗಳನ್ನು ಬೆನ್ನಟ್ಟಿ ಓಡಿಸಿ ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ. ನಂತರ ಜಿಂಕೆ ಮರಿಗೆ ನೀರು ಕುಡಿಸಿ ಗಾಯವಾದ ಭಾಗಗಳಿಗೆ ಪ್ರಥಮ ಚಿಕಿತ್ಸೆ ಮೂಲಕ ಉಪಚಾರ ಮಾಡಿದ್ದಾರೆ. ಚೇತರಿಸಿಕೊಂಡ ನಂತರ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಜಂಟಿ ಕಾರ್ಯಚರಣೆ ಯಶಸ್ವಿ: ಬದುಕುಳಿದ ಜಿಂಕೆ ಮರಿ..!
ಜಿಂಕೆ ಮರಿಯನ್ನು ಯುವಕರಿಂದ ಪಡೆದ ಅರಣ್ಯ ಇಲಾಖೆಯ ಬಮ್ಮನಹಳ್ಳಿಯ ಉಪ ವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ ಬೇವಿನಕಟ್ಟಿ ಹಾಗೂ ಅರಣ್ಯ ರಕ್ಷಕ ಮಂಜುನಾಥ ಚವ್ಹಾಣ, ಅರಣ್ಯ ವೀಕ್ಷಕ ಎಂ.ಬಿ. ಬಾಳಿಹಳ್ಳಿ ಅವರು ಅದನ್ನು ಟಾಟಾ ಏಸ್‌ನಲ್ಲಿ ತೆಗೆದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿಬಂದಿದ್ದಾರೆ. ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಯುವಕರ ಮಾನವೀಯತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅಭಿನಂದಿಸಿದೆ.