* ಬೆಂಗಳೂರಿನ ಮೂಡಲಪಾಳ್ಯ ಸಮೀಪ ನಡೆದ ಘಟನೆ
* ಅತಿ ವೇಗದಿಂದ ಅಪಘಾತ
* ಹೆಲ್ಮೆಟ್ ಹಾಕದ ಕಾರಣ ತಲೆಗೆ ಗಂಭೀರ ಪೆಟ್ಟು
ಬೆಂಗಳೂರು(ಜೂ.01): ಮೂಡಲಪಾಳ್ಯ ಸಮೀಪ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಟ್ಟೇಗಾರಪಾಳ್ಯದ ಬಿ.ಸಿ.ಮಿಥುನ್ (18) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತ ತೇಜಸ್ ಹಾಗೂ ಮತ್ತೊಂದು ಬೈಕ್ ಸವಾರ ಕೆಂಪೇಗೌಡ ನಗರದ ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತನ್ನ ಸ್ನೇಹಿತನ ಜತೆ ಕಾವೇರಿ ಲೇಔಟ್ 6ನೇ ಅಡ್ಡರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru Acid Attack: ನನ್ನ ಹಾಗೆ ಆತನೂ ನರಳಬೇಕು: ಸಂತ್ರಸ್ತೆಯ ಆಕ್ರೋಶ
ಹೆಲ್ಮೆಟ್ ಹಾಕದೆ ಆಪತ್ತು
ತನ್ನ ಕುಟುಂಬದ ಜತೆ ಪಟ್ಟೇಗಾರಪಾಳ್ಯದಲ್ಲಿ ನೆಲೆಸಿದ್ದ ಮಿಥುನ್, ಔಷಧಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಕಾವೇರಿ ಲೇಔಟ್‌ನಲ್ಲಿ ತನ್ನ ಸ್ನೇಹಿತನ ಜತೆ ಸ್ಕೂಟರ್ ಅನ್ನು ಅತಿವೇಗದಿಂದ ಓಡಿಸಿಕೊಂಡು ಮಿಥುನ್ ತೆರಳುತ್ತಿದ್ದ. ಆಗ 6ನೇ ಅಡ್ಡರಸ್ತೆ ಬಳಿ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡ ಮಿಥುನ್, ಏಕಾಏಕಿ ಕೆಳಗೆ ಬಿದ್ದು ಬಲ ಬದಿಗೆ ಉರುಳಿದ್ದಾನೆ. ಆಗ ಎದುರಿನಿಂದ ಬರುತ್ತಿದ್ದ ಕಿರಣ್, ಅನಿರೀಕ್ಷಿತ ಘಟನೆಯಿಂದ ನಿಯಂತ್ರಿಸಲಾಗದೆ ಮಿಥುನ್‌ಗೆ ಬೈಕ್ ಗುದ್ದಿಸಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಿಥುನ್ ಮೃತಪಟ್ಟಿದ್ದಾನೆ. ಬೈಕ್ ಸವಾರಿ ವೇಳೆ ಆತ ಹೆಲ್ಮಟ್ ಹಾಕದ ಕಾರಣ ತಲೆಗೆ ಗಂಭೀರ ಪೆಟ್ಟಾಗಿತು. ಇದರಿಂದ ತೀವ್ರ ರಕ್ತಸ್ರಾವವಾಗಿ ಮಿಥುನ್ ಮೃತಪಟ್ಟಿದ್ದಾನೆ. ಗಾಯಾಳುಗಳು ಸುರಕ್ಷಿತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪಟ್ಟೇಗಾರಪಾಳ್ಯ ವ್ಯಾಪ್ತಿಯಲ್ಲಿ ದಿನ ಪತ್ರಿಕೆಗಳ ವಿತರಕನಾಗಿ ಸಹ ಮಿಥುನ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.