
ಯಾದಗಿರಿ (ಜು.06): ಜಿಲ್ಲೆಯ ಶೆಟ್ಟಿಕೇರಾ ಗ್ರಾಮದಲ್ಲಿ ಮೊಹರಂ ದಿನದ ಅಂಗವಾಗಿ ಆಗ್ನಿಕುಂಡ ತುಳಿದ ಕೆಲವೇ ಗಂಟೆಗಳಲ್ಲಿ ಪೂಜಾರಿ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಹಳ್ಳೆಪ್ಪ ಪೂಜಾರಿ (44) ಎಂದು ಗುರುತಿಸಲಾಗಿದೆ. ಅವರು ಗ್ರಾಮದಲ್ಲಿ ನಡೆಯುತ್ತಿದ್ದ ಮೊಹರಂ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅಗ್ನಿಕುಂಡ ತುಳಿದ ನಂತರ ಸ್ವಲ್ಪ ಆಯಾಸ ಸ್ಥಿತಿಯಲ್ಲಿದ್ದ ಅವರು ಮನೆಯತ್ತ ಹೊರಟು ಮನೆ ತಲುಪುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. ಗ್ರಾಮಸ್ಥರು ತಕ್ಷಣ ಸ್ಥಳೀಯ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲು ಯತ್ನಿಸಿದರೂ, ತುರ್ತು ಚಿಕಿತ್ಸೆಗೆ ಅವಕಾಶ ಸಿಗದೇ ಹೃದಯಾಘಾತದ ಪರಿಣಾಮದಿಂದ ಮಾರ್ಗಮಧ್ಯದಲ್ಲಿಯೇ ಹಳ್ಳೆಪ್ಪ ಪೂಜಾರಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಹಿಂದಿನ ಹೃದಯಾಘಾತದ ಲಕ್ಷಣಗಳು ಗೋಚರವಾಗದಿರುವುದು ಹಾಗೂ ತಕ್ಷಣ ಚಿಕಿತ್ಸೆ ಸಿಗದಿರುವುದು ಇಡೀ ಗ್ರಾಮದಲ್ಲಿ ಭಾರೀ ಆತಂಕ ಉಂಟುಮಾಡಿದೆ. ಆರೋಗ್ಯವಂತ ವ್ಯಕ್ತಿಯ ಹಠಾತ್ ಸಾವಿನಿಂದ ಯಾದಗಿರಿ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ವಿರುದ್ಧ ಜನಮನದಲ್ಲಿ ಆತಂಕ ಮತ್ತಷ್ಟು ಗಂಭೀರವಾಗಿದೆ. 'ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಂದಿದ್ದರೆ ಜೀವ ಉಳಿಸಬಹುದಿತ್ತು ಎಂದು ಗ್ರಾಮಸ್ಥರ ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮನೆ ಯಜಮಾನನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.