
ಬೆಂಗಳೂರು(ಅ.15): ವಿಶ್ವದ ಅತಿದೊಡ್ಡ ಪ್ರಯಾಣಿಕರ ವಿಮಾನ ಎಮಿರೇಟ್ಸ್ ಏರ್‌ಲೈನ್ಸ್‌ನ ಏರ್‌ಬಸ್ ಎ-380 (ಇಕೆ 562) ಡಬಲ್ ಡೆಕ್ಕರ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಂದಿಳಿದಿದೆ. ದಕ್ಷಿಣ ಭಾರತದ ವಿಮಾನ ನಿಲ್ದಾಣವೊಂದಕ್ಕೆ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ವಿಮಾನವು ಪ್ರಯಾಣಿಕರೊಂದಿಗೆ ಯೋಜಿತ ನೆಲ ಸ್ಪರ್ಶ ಮಾಡಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.11ಕ್ಕೆ ಹಾರಾಟ ಆರಂಭಿಸಿದ ಈ ಸೂಪರ್ ಜಂಬೋ ಜೆಟ್ 2,693 ಕಿ.ಮೀ. ಪ್ರಯಾಣಿಸಿ ಸಂಜೆ 3.30ರ ಸುಮಾರಿಗೆ ಬೆಂಗಳೂರಿನಲ್ಲಿ ಭೂ ಸ್ಪರ್ಶ ಮಾಡಿತು.ಆ ಬಳಿಕ ಸಂಜೆ 6.40ಕ್ಕೆ ವಿಮಾನ ನಿರ್ಗಮಿಸಿದೆ.
ಹೆಚ್ಚುವರಿ ಆಸನ:
ಏರ್‌ಬಸ್ ನಿರ್ಮಿತ ಎ-380 ವಿಮಾನವು 52.7 ಮೀಟರ್ ಉದ್ದ, 24.1 ಮೀಟರ್ ಎತ್ತರವಿದೆ. 575 ಟನ್‌ನಷ್ಟು ಭಾರವಿದೆ. ಸಾಮಾನ್ಯ ಬೋಯಿಂಗ್ 777 ವಿಮಾನಗಳಿಗಿಂತ ಶೇ.45ರಷ್ಟು ಹೆಚ್ಚುವರಿ ಆಸನಗಳನ್ನು ಈ ದೈತ್ಯ ವಿಮಾನ ಹೊಂದಿದೆ. ಅದರ ಜೊತೆಗೆ ಐಷಾರಾಮಿ ಸೌಲಭ್ಯಗಳೂ ಈ ವಿಮಾನದಲ್ಲಿವೆ.
ಉಚಿತವಾಗಿ 5 ಲಕ್ಷ ಏರ್ ಟಿಕೆಟ್ ನೀಡ್ತಿದೆಯಂತೆ ಹಾಂಗ್ ಕಾಂಗ್ ಸರ್ಕಾರ!
ಐಷಾರಾಮಿ ವಿಮಾನ
ಸುಮಾರು 500ಕ್ಕಿಂತ ಹೆಚ್ಚು ಜನರನ್ನು ಹೊತ್ತೊಯ್ಯಬಲ್ಲ ಈ ಡಬಲ್ ಡೆಕ್ಕರ್ ವಿಮಾನದಲ್ಲಿ ಇತರ ವಿಮಾನಗಳಲ್ಲಿ ಇರುವುದಕ್ಕಿಂತ ಹೆಚ್ಚು ಜಾಗವಿದೆ. ಹಾಗೆಯೇ ಪ್ರಯಾಣಿಕರಿಗೆ 13.3 ಇಂಚಿನ ಎಚ್‌ಡಿ ಸೌಲಭ್ಯ ಹೊಂದಿದ್ದು, ಆನ್‌ಬೋರ್ಡ್ ವಿಶ್ರಾಂತಿ ಜಾಗ, ಸಂಪೂರ್ಣ ಚಪ್ಪಟೆಯಾದ ಆಸನ, ಸ್ಪಾ ಸೇರಿದಂತೆ ಐಷಾರಾಮಿ ವ್ಯವಸ್ಥೆ ವಿಮಾನದೊಳಗೆ ಲಭ್ಯವಿದೆ.
ಯಶಸ್ವಿ ಲ್ಯಾಂಡಿಂಗ್
ಈ ವಿಮಾನ ಬರುವ ಮುಂಚಿತವಾಗಿ ಏರ್‌ಪೋರ್ಟ್‌ನ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ಲ್ಯಾಂಡಿಂಗ್, ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಿದ್ದರು. ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಪ್ರಕ್ರಿಯೆ ಮುಗಿಸುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ ಜಗತ್ತಿನ ಅತಿ ದೊಡ್ಡ ವಿಮಾನವನ್ನು ನಿರ್ವಹಿಸುವ ಸಾಮರ್ಥ್ಯವಿದೆ ಎಂಬುದು ಖಾತರಿ ಆಗಿದ್ದರಿಂದ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು.
ಭಾರತದಲ್ಲಿ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳು ಮಾತ್ರ ಎ-380 ಅನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಈ ಪೈಕಿ ದುಬೈ- ಮುಂಬೈ ಮಧ್ಯೆ ಈ ವಿಮಾನ ನಿರಂತರವಾಗಿ ಹಾರಾಟ ನಡೆಸುತ್ತಿದೆ. ಈ ಮೊದಲು ನಿಗದಿಯಾಗಿದ್ದಂತೆ ಪ್ರಾಯೋಗಿಕ ಹಾರಾಟಕ್ಕಾಗಿ ಅಕ್ಟೋಬರ್ 30ಕ್ಕೆ ಈ ವಿಮಾನ ಬೆಂಗಳೂರಿಗೆ ಬರಬೇಕಿತ್ತು. ಆದರೆ ಎರಡು ವಾರ ಮುಂಚಿತವಾಗಿ ಬಂದು ವಾಪಾಸ್ ಆಗಿದೆ.