
ಬೆಂಗಳೂರು: ಮಹಿಳೆಯರ ಮೇಲೆ ಪೊಲೀಸ್ ಅಧಿಕಾರಿಗಳಿಂದ ನಡೆದಿರುವ ದೌರ್ಜನ್ಯ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಆಯೋಗ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕೃತ ಪತ್ರ ಕಳುಹಿಸಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಅನ್ಯಾಯಕ್ಕೆ ಒಳಗಾದ ರೈತರ ಪರವಾಗಿ ನ್ಯಾಯಕ್ಕಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದರು. ಅಲ್ಲಿ ಸುಳ್ಳು ಕೇಸ್‌ನಲ್ಲಿ ರೈತರನ್ನು ಬಂಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರಿಗೆ ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕಿದ ಘಟನೆ ನಡೆದಿದೆ.
ನೆಲಮಂಗಲ ಠಾಣೆಯ ಇನ್ಸ್‌ಪೆಕ್ಟರ್ ನರೇಂದ್ರ ಬಾಬು ಕಾರ್ಯಕರ್ತರ ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿರುವುದು ವರದಿಯಾಗಿದೆ. ಅಲ್ಲದೆ, ವೀಡಿಯೋ ಚಿತ್ರೀಕರಣ ಮಾಡಿದವರಿಗೆ ಆಕ್ಷೇಪ ವ್ಯಕ್ತಪಡಿಸಿರುವುದೂ ತಿಳಿದುಬಂದಿದೆ.
ಈ ನಡುವೆ, ಮಾದನಾಯಕನಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಒಬ್ಬ ಮಹಿಳೆಯ ಮೊಬೈಲ್ ಕಸಿದುಕೊಂಡು, ಸಾರ್ವಜನಿಕವಾಗಿ ನಡು ರಸ್ತೆಯಲ್ಲಿ ಅವಳನ್ನು ದರದರನೆ ಎಳೆದುಕೊಂಡು ಹೋಗಿ ದೌರ್ಜನ್ಯವೆಸಗಿರುವ ಘಟನೆ ಕೂಡಾ ಬಹಿರಂಗವಾಗಿದೆ. ಮಹಿಳೆಯರ ಗೌರವಕ್ಕೆ ಧಕ್ಕೆ ತಂದುಕೊಂಡಿರುವ ಈ ಘಟನೆ ಅಮಾನುಷ ಕೃತ್ಯವೆಂದು ಪರಿಗಣಿಸಲಾಗಿದೆ.
ಮಹಿಳೆಯ ಮೇಲೆ ನಡೆದಿರುವ ಈ ದೌರ್ಜನ್ಯವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. ಆಯೋಗವು ಇದನ್ನು ಗಂಭೀರ ಘಟನೆ ಎಂದು ಪರಿಗಣಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಮಹಿಳಾ ಆಯೋಗದಿಂದ ಗ್ರಾಮಾಂತರ ಎಸ್.ಪಿ.ಗೆ ಕಳುಹಿಸಲಾದ ಪತ್ರದಲ್ಲಿ, ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲನೆ ನಡೆಸಬೇಕು ಘಟನೆಗೆ ಕಾರಣಕರ್ತರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಅತೀ ಶೀಘ್ರದಲ್ಲಿ ಕಳುಹಿಸಬೇಕು. ಎಂಬಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಮಹಿಳೆಯರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣಗಳು ಸಮಾಜದಲ್ಲಿ ಭಾರಿ ಆಕ್ರೋಶ ಹುಟ್ಟಿಸುತ್ತಿರುವ ಸಂದರ್ಭದಲ್ಲಿ, ಮಾದನಾಯಕನಹಳ್ಳಿ ಘಟನೆಯೂ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಮಹಿಳಾ ಆಯೋಗದ ಕಠಿಣ ನಿಲುವಿನಿಂದಾಗಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.