BIG 3: ಕೃಷಿ ಪಂಪ್ಸೆಟ್‌ಗೆ ಉಚಿತ ವಿದ್ಯುತ್ ಪಡೆಯಲು ಹಲವು ವರ್ಷಗಳಿಂದ ಅಲೆದಾಟ!

By Manjunath NayakFirst Published Sep 21, 2022, 3:29 PM IST
Highlights

BIG 3 Mangaluru Story: ಕೊಳವೆ ಬಾವಿಯ ಪಂಪ್ಸೆಟ್‌ಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ‌ಕಚೇರಿಗೆ ಮನವಿ ಸಲ್ಲಿಸಿದ್ರೆ ಅಲ್ಲಿನ ಅಧಿಕಾರಿಗಳು ವಿದ್ಯುತ್ ‌ಸಂಪರ್ಕ ಸಾಧ್ಯವಿಲ್ಲ ಅಂತ ಅರ್ಜಿ ತಿರಸ್ಕಾರ ಮಾಡಿದ್ದಾರೆ.

ಮಂಗಳೂರು (ಸೆ. 21): ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು.‌ ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ, ಜನಪ್ರತಿನಿಧಿಗಳು‌ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು.‌ ಆದರೆ, ಸಮಾಜದ ಕಟ್ಟ ಕಡೆಯ ಮತ್ತು ಅಳಿವಿನಂಚಿನಲ್ಲಿರೋ ಸಮುದಾಯವೊಂದು ಕೃಷಿ ಪಂಪ್ಸೆಟ್ ಗೆ ಉಚಿತ ವಿದ್ಯುತ್ ಪಡೆಯಲು ಹಲವು ವರ್ಷಗಳಿಂದ ಅಲೆದಾಡ್ತಿದೆ. ಈ ಮಹಿಳೆಯ ಹೆಸರು ಲೀಲಾ. ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಮಂಗಳೂರು ತಾಲೂಕಿನ ‌ಕುಪ್ಪೆಪದವು ಬಳಿಯ ಕಿಲೆಂಜಾರು ಗ್ರಾಮದ ನಿವಾಸಿ. ಸಮಾಜದ ಕಟ್ಟ ಕಡೆಯ ಕೊರಗ ಸಮುದಾಯಕ್ಕೆ ಸೇರಿದ ಲೀಲಾರವರು ಇರೋ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಬದುಕು ಸಾಗಿಸೋಕೆ ಒಂದಿಷ್ಟು ಆದಾಯದ ಕನಸು ಕಂಡಿದ್ದರು. ಹೀಗಾಗಿ ಆರು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ‌ನೆಟ್ಟು ನೀರಿಗಾಗಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಮೂಲಕ ಬೋರ್ವೆಲ್‌ಗೆ ಅರ್ಜಿ ಸಲ್ಲಿಸಿದ್ದರು. 

ಅದರಂತೆ ಗಂಗಾ ಕಲ್ಯಾಣ ಯೋಜನೆಯಡಿ ಇವರ ಕೃಷಿ ಭೂಮಿಯಲ್ಲಿ ಕೊಳವೆ ಬಾವಿ ತೋಡಲು ಅನುದಾನ ಬಿಡುಗಡೆ ಆಯ್ತು. ಸರ್ಕಾರದ ಯೋಜನೆ ಮೂಲಕ 2017ರಲ್ಲಿ ಇವರ ಕೃಷಿ ಭೂಮಿಯಲ್ಲಿ 90 ಲಕ್ಷ ವೆಚ್ಚದ ಕೊಳವೆ ಬಾವಿ, ನೀರಿನ ಟ್ಯಾಂಕ್, ಹಾಗೂ ಬೋರ್ವೆಲ್‌ಗೆ ಎರಡು ಎಚ್. ಪಿ. ಪಂಪ್ ಸೆಟ್ ಕೂಡ ಅಳವಡಿಕೆ ಮಾಡಿ ಕೊಡಲಾಗಿದೆ. ಕೊರಗ ಸಮುದಾಯದ ಯೋಜನೆ ಫಲಾನುಭವಿಯಾದ ಕಾರಣ ಅಧಿಕಾರಿಗಳೇ ಮುಂದೆ ನಿಂತು ಎಲ್ಲವನ್ನೂ ‌ಮಾಡಿಕೊಟ್ಟಿದ್ದಾರೆ. 

ಕೃಷಿ ಪಂಪ್ಸೆಟ್‌ಗೆ ಉಚಿತ ವಿದ್ಯುತ್ ಅಲೆದಾಟ: ಆದ್ರೆ, ಇಷ್ಟೆಲ್ಲಾ ಆಗಿ ಕೊಳವೆ ಬಾವಿಯ ಪಂಪ್ಸೆಟ್‌ಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ‌ಕಚೇರಿಗೆ ಮನವಿ ಸಲ್ಲಿಸಿದ್ರೆ ಅಲ್ಲಿನ ಅಧಿಕಾರಿಗಳು ವಿದ್ಯುತ್ ‌ಸಂಪರ್ಕ ಸಾಧ್ಯವಿಲ್ಲ ಅಂತ ಅರ್ಜಿ ತಿರಸ್ಕಾರ ಮಾಡಿದ್ದಾರೆ. ‌ಕೆಲವೊಂದು ತಾಂತ್ರಿಕ ಕಾರಣ ನೀಡಿ ಅರ್ಜಿ ರಿಜೆಕ್ಟ್ ಮಾಡಿದ್ದಾರೆ. ಅಸಲಿಗೆ ಇವರ ಕೊಳವೆ ಬಾವಿಗೂ ಪಂಚಾಯತ್‌ನ ಕೊಳವೆ ಬಾವಿಗೂ ಕೇವಲ 100 ಮೀ ಅಂತರವಷ್ಟೇ ಇದೆ ಅನ್ನೋದು ಮೆಸ್ಕಾಂವಾದ. ‌ನಿಯಮದ ಪ್ರಕಾರ 250 ಮೀ ಹೆಚ್ಚಿದ್ದರೆ ಮಾತ್ರ ನಾವು ಕರೆಂಟ್ ಕೊಡೋದು ಅಂತ ಪಟ್ಟು ಹಿಡಿದು ಕೂತಿದ್ದಾರೆ‌ ಅಧಿಕಾರಿಗಳು. 

ಹೀಗಾಗಿ ಈ ವಯೋವೃದ್ದೆ ಲೀಲಾ 2017ರಿಂದ ಈವರೆಗೆ ಸುಮಾರು ಐದು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ಸುತ್ತು ಹಾಕುತ್ತಲೇ ಇದ್ದಾರೆ. ಮೆಸ್ಕಾಂ ಎಇ, ಎಇಇ, ಜೆಇ ಹಾಗೂ ಮೆಸ್ಕಾಂ ಕೇಂದ್ರ ಕಚೇರಿಗೂ ಹತ್ತಾರು ಬಾರಿ ಹೋಗಿದ್ದಾರೆ. ಗಿರಿಜನ ಅಭಿವೃದ್ಧಿ ಯೋಜನೆ ಕಚೇರಿ, ತಾಲೂಕು ಕಚೇರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೂ ಹಲವು ಬಾರಿ ಸುತ್ತಿ ‌ಬಂದ ವಯೋವೃದ್ದೆ ಅಕ್ಷರಶಃ ಸೋತು ಸೊರಗಿ ಕೂತಿದ್ದಾರೆ. 

BIG 3: ರಾಣೆಬೆನ್ನೂರಿನ ಅನಾಥ ಅಂಗನವಾಡಿ: ಬಡವರ ಮಕ್ಕಳು ಮಾಡಿದ ಪಾಪವೇನು?

ಈ ನಡುವೆ ಕೃಷಿ ಭೂಮಿಗೆ ನೀರಿಲ್ಲದ ಕಾರಣ ನೆಟ್ಟಿದ್ದ 500 ಅಡಿಕೆ ಗಿಡಗಳ ಪೈಕಿ 250ಕ್ಕೂ ಅಧಿಕ ಗಿಡಗಳು ಸತ್ತು ಹೋಗಿವೆ. ಸದ್ಯ ಉಳಿದಿರೋ ಗಿಡಗಳನ್ನು ಉಳಿಸೋ ಅನಿವಾರ್ಯತೆ ಹಿನ್ನೆಲೆಯಲ್ಲಿ ಇಳಿವಯಸ್ಸಲ್ಲೂ ಕೊಡದಲ್ಲಿ ನೀರು ಎತ್ತಿಕೊಂಡು ಹೋಗಿ ಅಡಕೆ ಗಿಡಗಳನ್ನು ರಕ್ಷಿಸೋ ಕೆಲಸ ಮಾಡ್ತಿದಾರೆ. 

ಸಣ್ಣಪುಟ್ಟ ಕೂಲಿ ಕೆಲಸದ ಆದಾಯವೇ ಆಧಾರ: ಒಬ್ಬ ಮಗನೂ ಕೂಲಿ ಕೆಲಸದ ಮಧ್ಯೆ ತಾಯಿಯ ನೆರವಿಗೆ ನಿಂತು ನಿತ್ಯ ಬಾವಿಯ ನೀರು ಇಲ್ಲವೇ ಕುಡಿಯಲು ಬಳಸುವ ಪೈಪ್ ಲೈನ್ ನೀರನ್ನು ಸ್ವಲ್ಪ ಸ್ವಲ್ಪ ಅಡಿಕೆ ಗಿಡಗಳಿಗೆ ಹಾಯಿಸಿ ಜೀವಂತವಾಗಿಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ನೀರಿಲ್ಲದೇ ಸ್ನಾನದ ನೀರು, ಬಟ್ಟೆ ಮತ್ತು ಪಾತ್ರೆ ತೊಳೆಯುವ ನೀರನ್ನ ಉಳಿಸಿಕೊಂಡು ತೋಟಕ್ಕೆ ಬಿಡುವ ಕೆಲಸ ಮಾಡಿದ್ರೂ 250 ಅಡಿಕೆ ಗಿಡಗಳ ಜೊತೆಗೆ ಹತ್ತಾರು ತರಕಾರಿ ಗಿಡಗಳೂ ಸಂಪೂರ್ಣ ನಾಶವಾಗಿ ‌ಹೋಗಿದೆ ಅಂತ ಕಣ್ಣೀರಿಡ್ತಾರೆ‌ ಲೀಲಾ. 

ಇನ್ನು,  ಲೀಲಾರದ್ದು ಸಂಕಷ್ಟದ ಬದುಕು. ಹಲವು ವರ್ಷಗಳ ಹಿಂದೆ ಕುಟುಂಬಕ್ಕೆ ಸಿಕ್ಕ ಎರಡು ಎಕರೆ ಜಾಗ ಮತ್ತು ಸಣ್ಣದೊಂದು ಮನೆ ಬಿಟ್ಟರೆ ಇಬ್ಬರು ಮಕ್ಕಳ ಸಣ್ಣಪುಟ್ಟ ಕೂಲಿ ಕೆಲಸದ ಆದಾಯವೇ ಇವರಿಗೆ ಆಧಾರ. ಹೀಗಾಗಿ ಆರು ವರ್ಷದ ಹಿಂದೆ ಇವರ ಎರಡು ಎಕರೆ ಜಾಗದ ಸ್ವಲ್ಪ ‌ಜಾಗವನ್ನ ಸಾಲ-ಶೂಲ ಮಾಡಿ ದಾನಿಗಳ ನೆರವು ಪಡೆದು ಸಮತಟ್ಟು ಮಾಡಿಸಿ ಆದಾಯಕ್ಕಾಗಿ 500 ಅಡಿಕೆ ಗಿಡಗಳನ್ನು ನೆಟ್ಟರೂ 250 ಗಿಡಗಳು ಈಗ ಉಳಿದಿಲ್ಲ. 

ಇನ್ನು ಈ ಕೊಳವೆ ಬಾವಿ ಯೋಜನೆ ಸರ್ಕಾರದ ಗಿರಿಜನ ಅಭಿವೃದ್ಧಿ ಯೋಜನೆ ಮೂಲಕವೇ ಮಂಜೂರಾಗಿದ್ದು. ಎಲ್ಲಾ ‌ನಿಯಮದಂತೆ‌ ತನ್ನ ಭೂಮಿಯಲ್ಲಿ ಬೋರ್ ವೆಲ್ ತೋಡಲು ಲೀಲಾ ಸ್ಥಳೀಯ ಕುಪ್ಪೆಪದವು ಪಂಚಾಯತ್ ನ ನಿರಾಪೇಕ್ಷಣಾ ಪತ್ರ ಕೂಡ ಪಡೆದಿದ್ದಾರೆ. ಈ ನಿರಾಪೇಕ್ಷಣಾ ಪತ್ರದಲ್ಲಿ ಕಪ್ಪೆ ಪದವು ಪಂಚಾಯತ್ ಕೊಳವೆ ಬಾವಿ ತೋಡಲು ಅನುಮತಿ ನೀಡಿದೆ. 

ಕುಪ್ಪೆಪದವು ಪಂಚಾಯತ್ ತನ್ನ ನಿರಾಪೇಕ್ಷಣಾ ಪತ್ರದಲ್ಲಿ, ಲೀಲಾರವರ ಸ್ಥಳ ಪರಿಶೀಲನೆ ಮಾಡಿದ್ದು, ಇವರು ಕೊಳವೆ ಬಾವಿ ತೋಡುವ 500 ಮೀ. ದೂರದಲ್ಲಿ ಯಾವುದೇ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳು ಇರುವುದಿಲ್ಲ ಎಂದು ಲಿಖಿತ ಅನುಮತಿ ಕೂಡ ನೀಡಿದೆ. ‌ಹೀಗಿದ್ದರೂ ಮೆಸ್ಕಾಂ ಮಾತ್ರ 250 ಮೀ‌ ಅಂತ ನಿಯಮ ಹೇಳಿಕೊಂಡು ಐದು ವರ್ಷಗಳಿಂದ ಪಂಪ್ ಸೆಟ್‌ಗೆ ವಿದ್ಯುತ್ ನೀಡಿಲ್ಲ.  

ಅಸಲಿಗೆ ಸರ್ಕಾರವೇ ಕೊಳವೆ ಬಾವಿ ತೋಡಿದ್ದು, ತೋಡುವ ವೇಳೆಯೇ ಇಂಥ ನಿಯಮಗಳನ್ನು ಗಣನೆಗೆ ‌ತೆಗೆದುಕೊಳ್ಳಬೇಕಿತ್ತು. ನಿಯಮದ ಪ್ರಕಾರ ಸದ್ಯ ಇರೋ ಪಂಚಾಯತ್ ಕೊಳವೆ ಬಾವಿಯಿಂದ ಇಂತಿಷ್ಟು ಮೀಟರ್ ದೂರ ಮತ್ತೊಂದು ಕೊಳವೆ ಬಾವಿ ಇರಬೇಕು ಅನ್ನೋ ಸಾಮಾನ್ಯ ಜ್ಞಾನ ಕೊಳವೆ ಬಾವಿಗೆ‌ ನಿರಾಪೇಕ್ಷಣಾ ಪತ್ರ ಕೊಟ್ಟ ಪಂಚಾಯತ್ ಅಧಿಕಾರಿಗಳಿಗೂ ಇರಬೇಕಿತ್ತು. 

ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಕೊರಗ ಕುಟುಂಬವೊಂದರ ಕೃಷಿ ಭೂಮಿ ನೀರಿಲ್ಲದೇ ಸೊರಗಿ ಹೋಗ್ತಿದೆ‌. ಇಳಿವಯಸ್ಸಲ್ಲೂ ಈ ವಯೋವೃದ್ದೆ ಕೃಷಿಯನ್ನ ರಕ್ಷಿಸಿಕೊಳ್ಳಲು ಹೆಣಗಾಡ್ತಿದಾರೆ. ಇನ್ನು ಸರ್ಕಾರಿ ಅಧಿಕಾರಿಗಳು ಮತ್ತು ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿಗಳೂ ಈ ಎಡವಟ್ಟಿನ ಪಾಲುದಾರರು. ಪಂಚಾಯತ್ ಎನ್.ಓ‌.ಸಿ ಕೊಟ್ಟು ಕೈ ತೊಳೆದುಕೊಂಡಿದೆ ಅಷ್ಟೇ. 

Big 3 Impact: ಪರಿಷತ್ತಲ್ಲೂ ಪ್ರತಿಧ್ವನಿಸಿದ ಬಿಗ್‌ 3 ವರದಿ: ಯಾದಗಿರಿಯ ಪೋಸ್ಟ್‌ ಮಾರ್ಟಂ ಅವ್ಯವಸ್ಥೆಗೆ ಮುಕ್ತಿ

ಆದರೆ ಐದು ವರ್ಷಗಳಿಂದ ಕೊಳವೆ ಬಾವಿಯ ಎಲ್ಲಾ  ಕೆಲಸ ಆಗಿದ್ದರೂ ಕರೆಂಟ್ ಕೊಟ್ಟಿಲ್ಲ. ಹಾಗೊಂದು ವೇಳೆ ನಿಯಮಗಳೇ ಅಡ್ಡ ಬರೋದೇ ಆದರೂ ಅಧಿಕಾರಿಗಳು ಮಾಡಿದ ತಪ್ಪಿಗೆ ಬೆಲೆ ತೆರಬೇಕಿದೆ‌. ಲೀಲಾರ ಎರಡು ಎಕರೆ ಜಾಗದಲ್ಲಿ ನಿಯಮ ಪಾಲಿಸಿಯೇ ಬೇರೆಲ್ಲಾದರೂ ಬೋರ್ ವೆಲ್ ತೋಡಲಿ ಅನ್ನೋದು ಸ್ಥಳೀಯರ ಆಗ್ರಹ. 

ಇನ್ನು ಇವಿಷ್ಟೇ ಅಲ್ಲ, ಪಂಚಾಯತ್ ಬೋರ್ವೆಲ್ನ 100 ಮೀ‌ ಸಮೀಪದಲ್ಲೇ ಕುಪ್ಪೆಪದವು ಗ್ರಾಮದಲ್ಲಿ ಹಲವು ಕೃಷಿ ಪಂಪ್ ಸೆಟ್ ಅಳವಡಿಸಿದ ಬೋರ್ ವೆಲ್ಗಳಿವೆ.ಆದರೆ, ಶ್ರೀಮಂತರು ಅನ್ನೋ ಕಾರಣಕ್ಕಾಗಿ ಅವರಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಆದರೆ ಕೊರಗರು ಅನ್ನೋ ಕಾರಣಕ್ಕೆ ಈ ರೀತಿ ನಿರ್ಲಕ್ಷ್ಯ ಮಾಡಲಾಗಿದೆ ಅನ್ನೋದು ಸ್ಥಳೀಯರ ಆಕ್ರೋಶ. 

ಒಟ್ಟಾರೆ ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳಲು ಹವಣಿಸಿದ್ದ ಕೊರಗ ಕುಟುಂಬಕ್ಕೆ ಮೆಸ್ಕಾಂ ಶಾಕ್ ಕೊಡುತ್ತಲೇ ಇದೆ. ನಿಯಮದ ಹೆಸರಲ್ಲಿ ವಿದ್ಯುತ್ ಕೊಡದೇ ಕೃಷಿ ನಾಶವಾಗುವ ಹಂತ ತಲುಪಿದೆ. ಶ್ರೀಮಂತರ ಕೃಷಿ ಪಂಪ್ ಸೆಟ್ ಗಳಿಗೆ ನಿಯಮ ಗಾಳಿಗೆ ತೂರುವ ಅಧಿಕಾರಿಗಳು ಬಡವರ ಹೆಸರಿನಲ್ಲಿ ಮಾತ್ರ ನಿಯಮದ ಕಾರಣ ಕೊಡ್ತಾ ಇದಾರೆ. 

ಹಾಗೊಂದು ವೇಳೆ ನಿಯಮವೇ ದೊಡ್ಡದು ಅಂತ ಅನಿಸಿದ್ರೆ ಈ ಕೊರಗ ಕುಟುಂಬದ ಭೂಮಿಯಲ್ಲೇ ಮತ್ತೊಂದು ಜಾಗ ಗುರುತಿಸಿ ನಿಯಮದ ಪ್ರಕಾರವೇ ಮತ್ತೊಂದು ಕೊಳವೆ ಬಾವಿ ತೋಡಿ ಕೊಡಲಿ. ಅಥವಾ ಇದೇ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಿ ಅನ್ನೋದು ಬಿಗ್ 3 ಆಗ್ರಹ

click me!