ಲಾಕ್‌ಡೌನ್‌ನಿಂದ ಗೂಡ್ಸ್‌ ವಾಹನದಲ್ಲಿಯೇ ಬಾಣಂತಿ ವಾಸ..!

By Kannadaprabha News  |  First Published May 3, 2020, 9:57 AM IST

ಧಾರವಾಡ ಸಮೀಪದ ಬಣದೂರು ಬಯಲಿನಲ್ಲೇ ಅಲೆಮಾರಿಗಳ ಪರದಾಟ| ಕೊರೋನಾ ಹೊಡೆತಕ್ಕೆ ತೊಂದರೆಗೀಡಾದ ಹೆಳವರು| ಊರೂರು ಅಲೆದಾಡಿ ಕುಟುಂಬಗಳ ವಂಶಾವಳಿ ಮಾಹಿತಿ ನೀಡುವ ಹೆಳವರ ಕುಟುಂಬಗಳು ಬಣದೂರು ಗ್ರಾಮದಲ್ಲಿ ಲಾಕ್‌| ಮೊದಲಿನಿಂದಲೂ ಈ ಊರಿನಲ್ಲಿ ಅನೇಕ ಹೆಳವರ ಜನಾಂಗದವರು ವಾಸವಾಗಿದ್ದಾರೆ| 


ಧಾರವಾಡ(ಮೇ.03): ಕೊರೋನಾ ವೈರಸ್‌ ಹಾವಳಿಯಿಂದ ಲಾಕ್‌ಡೌನ್‌ ಆಗಿದ್ದು ಬಹುತೇಕರು ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಅದರಲ್ಲೂ ಅಲೆಮಾರಿಗಳ ಬದುಕು ಬೀದಿಗೆ ಬಿದ್ದಿದೆ. ಇತ್ತ ಎರಡು ವಾರದ ಬಾಣಂತಿ ತಮ್ಮೂರಿಗೆ ಮರಳಲು ಆಗದೆ ಗೂಡ್ಸ್‌ ವಾಹನದಲ್ಲಿಯೇ ಹಸುಗೂಸನ್ನು ಇಟ್ಟುಕೊಂಡು ವಾಸಿಸುತ್ತಿದ್ದಾಳೆ.

ಊರೂರು ಅಲೆದಾಡಿ ಕುಟುಂಬಗಳ ವಂಶಾವಳಿ ಮಾಹಿತಿ ನೀಡುವ ಹೆಳವರ ಕುಟುಂಬಗಳು ಬಣದೂರು ಗ್ರಾಮದಲ್ಲಿ ಲಾಕ್‌ ಆಗಿದೆ. ಮೊದಲಿನಿಂದಲೂ ಈ ಊರಿನಲ್ಲಿ ಅನೇಕ ಹೆಳವರ ಜನಾಂಗದವರು ವಾಸವಾಗಿದ್ದಾರೆ. ಅಂಥವರ ಭೇಟಿಗೆ ಬಂದಿದ್ದ ಅನೇಕ ಕುಟುಂಬಗಳ ಪೈಕಿ ಹಾವೇರಿ ಮೂಲದ ಸರಸ್ವತಿ ಹಾಗೂ ಅವರ ತಾಯಿ ಬಸಮ್ಮ ಎಂಬುವರು ತೊಂದರೆಯಲ್ಲಿ ಸಿಲುಕಿದ್ದಾರೆ.

Tap to resize

Latest Videos

ರಂಜಾನ್‌ ಮಾರುಕಟ್ಟೆಗೆ ಕೊರೋನಾ ಗುನ್ನ: ಬಿಕೋ ಎನ್ನುತ್ತಿದೆ ಮಾರ್ಕೆಟ್‌..!

ಗೂಡ್ಸ್‌ ವಾಹನವನ್ನೇ ಮನೆ ಮಾಡಿಕೊಂಡು ಅದರಲ್ಲೇ ಸರಸ್ವತಿ ಹಸುಗೂಸನ್ನು ಪಾಲನೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಮುಂಚೆ ಉಳಿದ ಹೆಳವರೊಂದಿಗೆ ಬಂದ ಸರಸ್ವತಿ ಬಣದೂರು ಗ್ರಾಮದ ಹೊರ ವಲಯದಲ್ಲಿ ಟೆಂಟ್‌ ಹಾಕಿದ್ದರು. ಇನ್ನೇನು ತಮ್ಮ ತಮ್ಮ ಊರುಗಳನ್ನು ಸೇರಬೇಕು ಎನ್ನುವಾಗಲೇ ಕೊರೋನಾದಿಂದಾಗಿ ಲಾಕ್‌ಡೌನ್‌ ಜಾರಿಯಾಯಿತು. ಕಳೆದ ಎರಡು ವಾರದ ಹಿಂದಷ್ಟೇ ಸರಸ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಹೆಳವರ ಇತರೆ ಕುಟುಂಬದ ಸದಸ್ಯರು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದರು. ಆದರೆ ಮರಳಿ ಬಣದೂರಿಗೆ ಬಂದ ಬಾಣಂತಿ ಹಾಗೂ ಕೂಸಿಗೆ ಮನೆಯ ಆಶ್ರಯವಿಲ್ಲದ್ದಕ್ಕೆ ಇದೀಗ ಗೂಡ್ಸ್‌ ಗಾಡಿಯಲ್ಲಿಯೇ ಆಶ್ರಯ ಪಡೆಯುವಂತಾಗಿದೆ.
ಇನ್ನು, ಸರಸ್ವತಿಯ ಪತಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಲಾಕ್‌ ಆಗಿದ್ದು, ಬಸ್‌ ಹಾಗೂ ಇತರ ವಾಹನದ ವ್ಯವಸ್ಥೆ ಇಲ್ಲದೇ ಬರಲಾಗುತ್ತಿಲ್ಲ. ಹೀಗಾಗಿ ಸರಸ್ವತಿಗೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಅದೇ ಗೂಡ್ಸ್‌ ವಾಹನದಲ್ಲಿಯೇ ತನ್ನ ಹಸುಗೂಸಿನೊಂದಿಗೆ ದಿನಗಳನ್ನು ದೂಡುತ್ತಿದ್ದಾಳೆ.

ಈ ಸಮಸ್ಯೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿ​ಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದರಿಂದ ಗ್ರಾಮಕ್ಕೆ ಬಂದ ಸಿಬ್ಬಂದಿ ಆಹಾರದ ಕಿಟ್‌ ನೀಡಿದ್ದಾರೆ. ಅಲ್ಲದೇ ವೃದ್ಧರ ಹಾಗೂ ಮಕ್ಕಳ ಆರೋಗ್ಯದ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ. ಇನ್ನು ಬಾಣಂತಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ, ಆಕೆಗೂ ಬಾಣಂತಿ ಕಿಟ್‌ ನೀಡಿದ್ದಾರೆ. ಸದ್ಯಕ್ಕೆ ಅವರ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗಿದೆಯಾದರೂ ಲಾಕ್‌ಡೌನ್‌ ವಿಸ್ತರಣೆಯಾಗಿದ್ದು ಸಮಸ್ಯೆ ಹೆಚ್ಚಾಗುವುದು ಖಚಿತ ಎಂದು ಜನಾಂಗದ ಮುಖಸ್ಥ ಪ್ರಕಾಶ ಆತಂಕ ವ್ಯಕ್ತಪಡಿಸಿದರು.
 

click me!