
ಅಥಣಿ(ಏ.30) ಹದಿನೈದು ವರ್ಷಗಳ ಹಿಂದೆ ನೂರಾರು ಕನಸುಗಳೊಂದಿಗೆ ಅದ್ದೂರಿ ಮದುವೆಯಾಗಿದ್ದ ಮಹಿಳೆಯೋರ್ವಳು ಇಂದು ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮ೧ಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ ನಡೆದಿದೆ.
ಸಂಗೀತಾ ಗಾಡಿವಡ್ಡರ್ (35) ಎಂಬಾಕೆ ವೆಂಕಟೇಶ್ ಎಂಬಾತನ ಕೈಹಿಡಿದು 15 ವಸಂತಗಳು ಉರುಳಿದ್ದವು. ಸಂಸಾರ ಅಂದ ಮೇಲೆ ಸಣ್ಣಪುಟ್ಟ ಜಗಳ ಸಹಜ ಅಂದುಕೊಂಡಿದ್ದ ಸಂಗೀತಾ ಪಾಲಿಗೆ, ಕಳೆದ ಕೆಲವು ವರ್ಷಗಳು ನರಕದ ದರ್ಶನ ಮಾಡಿಸಿದ್ದವು. ಇದಕ್ಕೆಲ್ಲಾ ಕಾರಣವಾಗಿದ್ದು ವೆಂಕಟೇಶನ ಹಣದ ದಾಹ ಎಂಬ ಮಾತು ಕೇಳಿಬರುತ್ತಿದೆ.
ಒಂದೊಳ್ಳೆ ಮನೆ ಕಟ್ಟಬೇಕೆಂಬ ಆಸೆ ವೆಂಕಟೇಶನದಾಗಿತ್ತು. ಆದರೆ ಅದಕ್ಕೆ ಕೊಡಬೇಕಾಗಿದ್ದುದ್ದು ಪತ್ನಿ ಸಂಗೀತಾ ತವರು ಮನೆಯವರು! 'ನಿನ್ನ ತವರು ಮನೆಯಿಂದ ಎರಡು ಲಕ್ಷ ರೂಪಾಯಿ ಹಣ ತರಲೇಬೇಕು' ಎಂದು ವೆಂಕಟೇಶ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹಣದ ವಿಚಾರವಾಗಿ ಶುರುವಾದ ಗಂಡ-ಹೆಂಡತಿ ನಡುವಿನ ಜಗಳ ಮನೆಯಲ್ಲಿ ಪ್ರತಿದಿನವೂ ಬೆಂಕಿಯಂತೆ ಉರಿಯುತ್ತಿತ್ತು.
ಕಳೆದ ರಾತ್ರಿ ನಡೆದದ್ದೇನು?
ಕಳೆದ ರಾತ್ರಿ ಕೂಡ ದಂಪತಿಗಳ ನಡುವೆ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗಂಡನ ಅತಿಯಾದ ಕಿರುಕುಳ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಬೇಸತ್ತ ಸಂಗೀತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿದ್ದಾರೆ.
ಸಂಗೀತಾ ತಾಯಿಯ ಗಂಭೀರ ಆರೋಪ:
ಮಗಳ ಸಾವು ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಕಸ್ತೂರಿ ಅವರ ಆಕ್ರಂದನ ಮುಗಿಲು ಮುಟ್ಟಿದೆ. 'ನನ್ನ ಮಗಳು ಆತ್ಮ೧ಹತ್ಯೆ ಮಾಡಿಕೊಳ್ಳುವವಳಲ್ಲ. ಹಣ ತಂದಿಲ್ಲ ಎಂಬ ಕಾರಣಕ್ಕೆ ಅವಳನ್ನು ಮನಬಂದಂತೆ ಹೊಡೆದು, ಬಳಿಕ ಅವರೇ ನೇಣು ಹಾಕಿದ್ದಾರೆ' ಎಂದು ಕಸ್ತೂರಿ ಗಂಭೀರವಾಗಿ ಆರೋಪಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಬೇಕೆಂದು ಕಣ್ಣೀರು ಹಾಕುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ
ವಿಷಯ ತಿಳಿದ ತಕ್ಷಣ ಅಥಣಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 15 ವರ್ಷಗಳ ಸುದೀರ್ಘ ದಾಂಪತ್ಯ ಹಗ್ಗದ ತುದಿಯಲ್ಲಿ ಅಂತ್ಯವಾಗಿದ್ದು ಮಾತ್ರ ದುರಂತದ ಸಂಗತಿ.