
ರಾಯಚೂರು (ಜು.16): ಗ್ರಾಮೀಣ ಪ್ರದೇಶದಲ್ಲಿ ಸ್ನಾನ ಮಾಡುವ ಕೋಣೆ ಮನೆಯ ಹೊರಭಾಗದಲ್ಲಿ ನಿರ್ಮಾಣ ಮಾಡಿರುತ್ತಾರೆ. ಅದೇ ರೀತಿ ಮನೆಯ ಹೊರಭಾಗದಲ್ಲಿ ನಿರ್ಮಿಸಲಾಗಿದ್ದ ಕೋಣೆಯಲ್ಲಿ ಮಹಿಳೆ ಸ್ನಾನ ಮಾಡುತ್ತಿದ್ದುದನ್ನು ಅದೇ ಗ್ರಾಮದ ವ್ಯಕ್ತಿಯೊಬ್ಬ ಇಳುಕಿ ನೋಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಎರಡೂ ಕುಟುಂಬದವರು ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ.
ಈ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾ. ಮೂಡಲಗುಂಡಾ ಗ್ರಾಮದಲ್ಲಿ ಜು.6ರಂದು ನಡೆದಿದೆ. ಇಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಬಳಿಯಿದ್ದ ಸ್ನಾನದ ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಈ ವೇಳೆ ಸ್ನಾನದ ಕೋಣೆಗೆ ಇದ್ದ ಕಿಟಕಿಯ ಬಳಿ ಹೋದ ವ್ಯಕ್ತಿಯೊಬ್ಬ ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡಲು ಇಣಿಕಿದ್ದಾನೆ. ಆಗ ಯಾರೋ ಕಿಟಕಿಯ ಬಳಿ ಬಂದು ಇಣುಕಿದ್ದಾರೆ ಎಂಬುದನ್ನರಿತ ಮಹಿಳೆ, ಕೂಡಲೇ ಬಟ್ಟೆಯನ್ನು ಮೈಗೆ ಸುತ್ತಿಕೊಂಡು ಮೇಲೆದ್ದು ನೋಡಿದ್ದಾರೆ. ಆಗ ತಮ್ಮೂರಿನ ವ್ಯಕ್ತಿಯೇ ಇಣುಕಿ ನೋಡಿದ್ದು ಗೊತ್ತಾಗಿದೆ. ಆದರೆ, ಮನೆ ಮಂದಿಯೆಲ್ಲಾ ಕೆಲಸಕ್ಕೆ ಹೋಗಿದ್ದರಿಂದ ಸಹಾಯಕ್ಕಾಗಿ ನೆರೆಹೊರೆಯವರನ್ನು ಕೂಗಿದ್ದಾರೆ. ಅಷ್ಟೊತ್ತೊಗಾಗಲೇ ಕಿಟಕಿಯಲ್ಲಿ ಇಣುಕಿದ್ದವನು ಅಲ್ಲಿಂದ ಕಾಲ್ಕಿತ್ತಿದ್ದನು.
ಸ್ನಾನದ ನಂತರ ಹೊರಗೆ ಬಂದ ಮಹಿಳೆ ಅಲ್ಲಿ ಇಣುಕಿ ನೋಡಿದ್ದವನನ್ನು ಕರೆದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಸ್ನಾನ ಮಾಡುವಾಗ ಇಣುಕಿ ನೋಡಿ ತಪ್ಪು ಮಾಡಿದ್ದಲ್ಲದೇ ಪುನಃ ತನಗೇ ಎದುರು ಮಾತನಾಡುತ್ತಿದ್ದಾನೆ ಎಂದು ಕೋಪಗೊಂದ ಮಹಿಳೆ ತಪ್ಪಿತಸ್ಥನಿಗೆ ಕೋಲಿನಿಂದ ಹೊಡೆಯಲು ಮುಂದಾಗುತ್ತಾರೆ. ಇದರಿಂದ ಕೋಪಗೊಂಡ ವ್ಯಕ್ತಿಯೂ ಕೂಡ ಮಹಿಳೆಯ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಇದರಿಂದ ಮಹಿಳೆಯ ಕುಟುಂಬದವರು ಬರುತ್ತಾರೆ. ಇಡೀ ಕುಟುಂಬವೇ ತಮ್ಮ ಮನೆಯ ಸದಸ್ಯನನ್ನು ಹೊಡೆಯುತ್ತಿದ್ದಾರೆ ಎಂದು ವ್ಯಕ್ತಿಯ ಕುಟುಂಬದವರೂ ಬರುತ್ತಾರೆ. ಆಗ ಎರಡೂ ಕುಟುಂಬಗಳ ಮಹಿಳೆಯರು ಹಾಗೂ ಪುರುಷರು ಪರಸ್ಪರ ಕೈಗೆ ಸಿಕ್ಕ ದೊಣ್ಣೆ, ಕಲ್ಲು ಸೇರಿದಂತೆ ಇತರೆ ವಸ್ತುಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ.
ಇನ್ನು ಸ್ನಾನದ ಕೋಣೆಯಲ್ಲಿ ಇಣುಕಿ ನೋಡಿದ ವ್ಯಕ್ತಿಯ ವಿರುದ್ಧ ಮಹಿಳೆ ಹಾಗೂ ಅವರ ಕುಟುಂಬದವರು ದೂರು ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಮಹಿಳೆಯರ ಕುಟುಂಬದವರ ವಿರುದ್ಧ ತಪ್ಪಿತಸ್ಥನೆಂದು ಹೇಳಲಾಗುತ್ತಿರುವ ವ್ಯಕ್ತಿಯ ಮನೆಯವರು ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಇದೀಗ ಮಹಿಳಾ ಸಂಘಟನೆಗಳು ಮಹಿಳೆ ಪರ ಹೋರಾಟಕ್ಕೆ ಮುಂದಾಗಿದ್ದಾರೆ.
ಘಟನೆಯ ಸಂಕ್ಷಿಪ್ತ ವಿವರ:
ಮೂಡಲಗುಂಡಾ ಗ್ರಾಮದಲ್ಲಿ ರಾಧಿಕಾ ಎಂಬ ಮಹಿಳೆ ಸ್ನಾನ ಮಾಡುವಾಗ ರಾಮಣ್ಣ ಎಂಬುವರು ಇಣುಕಿ ನೋಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಇದೇ ರಾಧಿಕಾಳನ್ನೇ ಎಳೆದಾಡಿ ರಾಮಣ್ಣ ಹಲ್ಲೆ ನಡೆಸಿದ್ದಾನೆ. ರಾಮಣ್ಣನ ಮೇಲೆ ಮಹಿಳೆ ಹಲ್ಲೆಗೆ ಮುಂದಾಗುತ್ತಿದ್ದಂತೆ ರಾಮಣ್ಣನ ಜೊತೆಗೆ ಬಂದಿದ್ದ ಯಲ್ಲಪ್ಪ ಸೇರಿಕೊಂಡು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಇದೀಗ ಜಾಲಹಳ್ಳಿ ಠಾಣೆಯಲ್ಲಿ ರಾಮಣ್ಣ ಹಾಗೂ ಯಲ್ಲಪ್ಪ ವಿರುದ್ಧ ದಾಖಲು ಆಗಿದೆ. ಈ ಕೇಸ್ ದಾಖಲಾಗುತ್ತಿದ್ದಂತೆ ರಾಧಿಕಾಳ ಸಂಬಂಧಿಕರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲು ಮಾಡಲಾಗಿದೆಯಂತೆ.
ಇದೀಗ ಎರಡೂ ಕುಟುಂಬಗಳ ಸದಸ್ಯರು ಮಾರಾಮಾರಿ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಆಧರಿಸಿ ಮಹಿಳಾಪರ ಸಂಘಟನೆಗಳು ತಾಲೂಕು ಮಟ್ಟದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆಯನ್ನು ಪ್ರಶ್ನಿಸಿ ಪ್ರತಿಭಟನೆ ಮಾಡುವುದಕ್ಕೆ ಚಿಂತನೆ ಮಾಡಿದ್ದಾರೆ. ಇದನ್ನು ಮಹಿಳಾ ಆಯೋಗಕ್ಕೂ ಕೊಂಡೊಯ್ಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.