ಹುಬ್ಬಳ್ಳಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಪ್ರತ್ಯಕ್ಷ !

By Kannadaprabha NewsFirst Published Sep 6, 2019, 12:52 PM IST
Highlights

ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಬಳಿಕ ಅವರ ವಿಮಾನವೂ ಪತನವಾಗಿ ಶತ್ರುದೇಶದಲ್ಲಿ ಬಂಧಿಯಾಗಿ ಬಳಿಕ ಬಿಡುಗಡೆಯಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. 

ಹುಬ್ಬಳ್ಳಿ [ಸೆ.06] : ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಯಾರಿಗೆ ತಾನೇ ಗೊತ್ತಿಲ್ಲ. ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಬಳಿಕ ಅವರ ವಿಮಾನವೂ ಪತನವಾಗಿ ಶತ್ರುದೇಶದಲ್ಲಿ ಬಂಧಿಯಾಗುತ್ತಾರೆ. ಬಳಿಕ ಪಾಕಿಸ್ತಾನ ಅವರನ್ನು ಬಿಡುಗಡೆಗೊಳಿಸುತ್ತದೆ. ಅವರ ಶೌರ್ಯಕ್ಕೆ ಭಾರತ  ಸರ್ಕಾರ ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಎಲ್ಲ ದೃಶ್ಯಗಳು ಇದೀಗ ಹುಬ್ಬಳ್ಳಿಯ ಗಣೇಶೋತ್ಸವದಲ್ಲಿ ಬಿಂಬಿಸಲಾಗಿದೆ. ಇಲ್ಲಿನ ಹಿರೇಪೇಟೆ, ಭೂಸಪೇಟೆ, ಕಂಚಗಾರ ಗಲ್ಲಿಯ ಶ್ರೀ ಗಣೇಶ ಉತ್ಸವ ಮಂಡಳಿ ಈ ಸಲ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಈ ದೃಶ್ಯಗಳನ್ನು ಬಿಂಬಿಸಿದೆ. ಇಲ್ಲೂ ಪಾಕ್ ವಿಮಾನಗಳನ್ನು ಹೊಡೆದುರುಳಿಸುವುದು. ಅಲ್ಲಿ ಅಭಿನಂದನ್ ವಿಮಾನ ಪತನವಾಗುವುದು ಹೀಗೆ ಎಲ್ಲ ಯುದ್ಧದ ಹಾಗೂ ಅಭಿನಂದನ ಶೌರ್ಯದ ದೃಶ್ಯಾವಳಿಗಳು ಇಲ್ಲಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಲಾಗಿದೆ. 

ಕೊನೆಗೆ ವಾಘಾ ಗಡಿ ಮೂಲಕ ಭಾರತ ದೇಶಕ್ಕೆ ಮರಳಿದ ಸಂತಸದ ಕ್ಷಣಗಳೊಂದಿಗೆ ಈ ದೃಶ್ಯಾವಳಿ ಮುಕ್ತಾಯವಾಗುತ್ತದೆ. ಇಲ್ಲಿನ ಗಣೇಶ ಉತ್ಸವ ಮಂಡಳಿಯು ಪ್ರತಿವರ್ಷ ಅತ್ಯಂತ ವಿಶಿಷ್ಟ ಹಾಗೂ ವಿಶೇಷವಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಪ್ರಸ್ತುತ ಸಂಗತಿಗಳನ್ನೇ ಆಧರಿಸಿ ರೂಪಕಗಳನ್ನು ರೂಪಿಸುತ್ತದೆ. ಕಳೆದ 46 ನೇ ವರ್ಷದ ಹಿಂದೆ ರಾಘಣ್ಣ ಸವಣೂರು, ಗುರುಸಿದ್ದಪ್ಪ ಮಟ್ಟಿ, ಸುಭಾಸ ಸವಣೂರು, ಕೃಷ್ಣಪ್ಪ ಚೆನ್ನಗೇರಿ, ಅಪ್ಪಣ್ಣ ಬೆಂಡಿಗೇರಿ, ಮೋಹನ ಸವಣೂರು, ಸುಭಾಸ ಬಾಗಲಕೋಟೆ, ಜಡೇಪ್ಪ ಜಾಬಿನ, ಚಂದ್ರಶೇಖರ ಲಕ್ಕುಂಡಿ ಸೇರಿದಂತೆ ಮತ್ತಿತರರು ಸೇರಿ ಈ ಗಣೇಶ ಉತ್ಸವ ಮಂಡಳಿಯನ್ನು ಪ್ರಾರಂಭಿಸಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈವರೆಗೆ ಹೈಕೋರ್ಟ್ ಪೀಠ ಸ್ಥಾಪನೆ, ನೈರುತ್ಯ ರೈಲ್ವೆ ವಲಯಕ್ಕಾಗಿ ನಡೆದ ಹೋರಾಟದ ಸನ್ನಿವೇಶ,, ಹುಬ್ಬಳ್ಳಿ-ರೈಲ್ವೆ, ಅಮರನಾಥ ಯಾತ್ರೆ, ಕಳಸಾ-ಬಂಡೂರಿ ನಾಲಾ ಜೋಡಣೆ ಹೀಗೆ ಪ್ರಸ್ತುತ ಸಾಮಾಜಿಕ ಸಂಗತಿಗಳ ಸನ್ನಿವೇಶಗಳನ್ನು ರೂಪಿಸುತ್ತಾ ಬಂದಿರುವುದು ವಿಶೇಷ. 2009 ರಲ್ಲಿ ಅಂಕೋಲಾ-ಹುಬ್ಬಳ್ಳಿ ರೈಲು ಸಂಚಾರದ ಸನ್ನಿವೇಶ ಸೃಷ್ಟಿಸಿದ್ದರೆ,  2016 ರಲ್ಲಿ ಕಳಸಾ-ಬಂಡೂರಿ ನಾಲಾ ಜೋಡಣೆಯ ಸನ್ನಿವೇಶವನ್ನು ಪ್ರದರ್ಶಿಸಿತ್ತು. ಮಹದಾಯಿ ಹೋರಾಟಗಾರರನ್ನೇ ಕರೆಯಿಸಿ ವಿಶೇಷ ಮಾಡಿಸಲಾಗಿತ್ತು. 

click me!