ಮಡಿಕೇರಿ (ಜ.04): ದೇವಾಲಯ (Temple) ನಿರ್ವಹಣೆಯನ್ನು ಧರ್ಮದವರಿಗೆ ನೀಡುವ ವಿಚಾರದಲ್ಲಿ ಪ್ರತಿಪಕ್ಷಗಳು ಗಾಬರಿ ಯಾಕೆ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ (Shrinivasa Poojary) ಹೇಳಿದ್ದಾರೆ. ಬೇರೆ ಧರ್ಮಗಳ ದೇವಾಲಯವನ್ನು ಅವರೇ ನಿರ್ವಹಣೆ ಮಾಡುವಾಗ ಹಿಂದೂ (Hindu) ಧರ್ಮದ ದೇವಾಲಯವನ್ನು ನೀಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೊಡಗು ಜಿಲ್ಲೆಯ ಪಾಲಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ (Karnataka) ರಾಜ್ಯದಲ್ಲಿ 34,636 ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳು ಸರ್ಕಾರದ ಅಧೀನದದಲ್ಲಿವೆ. ಇದರಲ್ಲಿ ಸುಮಾರು 150-160 ಎ ದರ್ಜೆಯಲ್ಲಿದ್ದರೆ, 200 ದೇವಾಲಯಗಳು ಬಿ ದರ್ಜೆ ಮತ್ತು ಸುಮಾರು 33,000ದಷ್ಟು ದೇವಾಲಯಗಳು ಸಿ ದರ್ಜೆಯಲ್ಲಿವೆ. ಅದರಲ್ಲಿ ಎಣ್ಣೆಗೆ, ಬತ್ತಿಗೆ ಕಷ್ಟಇರುವ ದೇವಾಲಯಗಳೂ ಇದೆ. ಕೆಲವರು ಖಾಸಗಿಯಾಗಿ ಸಮಿತಿ ಮಾಡಿ ದೇವಾಲಯ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದ್ದಾರೆ. ಬೇರೆ ಧರ್ಮಗಳ ದೇವಾಲಯವನ್ನು ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ದೇವಾಲಯವನ್ನು ಭಕ್ತರಿಗೆ ಕೊಟ್ಟರೆ ಏನು ತಪ್ಪು ಎಂದು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಆ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದೆ ಎಂದರು ಶ್ರೀನಿವಾಸ ಪೂಜಾರಿ.
undefined
ಭಕ್ತರಿಗೆ (Devotees) ನೀಡಿದರೂ ಅದಕ್ಕೆ ಗೈಡ್‌ಲೈನ್ ಇರುತ್ತದೆ. ಸಮಸ್ಯೆಯಾದಾಗ ಸರ್ಕಾರದ (Govt ) ಮೇಲುಸ್ತುವಾರಿ ಅದನ್ನು ಗಮನಿಸುತ್ತದೆ. ಏನು ಮಾಡಬೇಕೆಂದು ಇನ್ನೂ ನಿರ್ಧಾರವಾಗದಿದ್ದರೂ ಯೋಚನೆ ಮಾಡಿರುವಂತದ್ದು ಸತ್ಯ. ಈ ವಿಚಾರದಲ್ಲಿ ಪ್ರತಿಪಕ್ಷಗಳು ಗಾಬರಿ ಯಾಕೆ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಅವರ ಯೋಚನೆ ಏನಿರಬೇಕೆಂದರೆ, ಎಲ್ಲಾ ಧರ್ಮದವರಿಗೆ ನೀಡಿದ ಮೇಲೆ ಹಿಂದೂ ಧರ್ಮಕ್ಕೆ (Hindu) ಯಾಕೆ ನೀಡುವುದಿಲ್ಲ ಎಂದು ಅವರೇ ಪ್ರಶ್ನೆ ಮಾಡುತ್ತಾರೆ ಅಂದುಕೊಂಡಿದ್ದೆ. ಆದರೆ, ಅವರು ಯಾವ ರೀತಿ ಯೋಚನೆ ಮಾಡುತ್ತಿದ್ದರೋ ಗೊತ್ತಿಲ್ಲ. ಅವರು ಏನೇ ಯೋಚನೆ ಮಾಡಿದರೂ ದೇವಾಲಯವನ್ನು ಅವರ ಧರ್ಮದವರಿಗೆ ನೀಡುವುದರಲ್ಲಿ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ (shrinivas Poojary), ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಸರ್ಕಾರಕ್ಕೆ ವಿರೋಧ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಮರ್ಥವಾಗಿ ಅದಕ್ಕೆ ಉತ್ತರ ಕೊಡುವ ಕೆಲಸ ಮಾಡುತ್ತೇವೆ. ರಾಜ್ಯದ ಜನತೆ ಅವರ ಮಾತನ್ನು ನಂಬುವಂತಹ ಸ್ಥಿತಿಯಲ್ಲಿಲ್ಲ. ಆ ಹಿನ್ನಲೆ ಜನತೆಗೆ ಸತ್ಯವನ್ನು ವಿಧಾನಮಂಡಲದ ಒಳಗೂ ಮನವರಿಕೆ ಮಾಡಿದ್ದೇವೆ. ಹೊರಗೂ ಮಾಡುತ್ತೇವೆ ಎಂದ ಅವರು, ಸಿ.ಟಿ. ರವಿ ಒಳ್ಳೆ ಕೆಲಸ ಮಾಡಿದ್ದಾರೆ ಎಂಬುವುದನ್ನು ಸಿದ್ದರಾಮಯ್ಯ (Siddaramaiah) ಯಾವತ್ತಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಪಾಸಿಟಿವಿಟಿ ಶೇ.5ಕ್ಕಿಂತ ಹೆಚ್ಚಾದರೆ ಲಾಕ್ಡೌನ್..!
ಸ್ವಾಭವಿಕವಾಗಿ ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ (Positivity) ದರ ಶೇ.1ರೊಳಗೆ ಇದೆ. ಶೇ.5ಕ್ಕಿಂತ ಹೆಚ್ಚಾದರೆ ನಿಶ್ಚಳವಾಗಿ ಲಾಕ್ಡೌನ್ ಮಾಡಬೇಕಾಗುತ್ತದೆ. ಇದರಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಶೇ.1ಕ್ಕಿಂತ ಪಾಸಿಟಿವಿಟಿ ದರ ಹೆಚ್ಚಾಗದಂತೆ ಗಮನಹರಿಸಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಪ್ರವಾಸಿ ತಾಣಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರನ್ನು ನಿರ್ಬಂಧಿಸಿದರೆ ಪ್ರವಾಸೋದ್ಯಮ ಅವಲಂಬಿತರಿಗೆ ಸಮಸ್ಯೆಯಾಗಲಿದೆ. ಹಾಗೆಂದ ಮಾತ್ರಕ್ಕೆ ಪ್ರವಾಸಿಗರು ಕೋವಿಡ್ ನಿಯಮವನ್ನು ಪಾಲಿಸದಿದ್ದರೆ ಸಮಸ್ಯೆಯಾಗಲಿದೆ. ಪ್ರವಾಸಿಗರು ಎರಡು ಹಂತದ ಲಸಿಕೆ ಪಡೆದ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದೆ. ಆದ್ದರಿಂದ ನಿಯಮವನ್ನು ಬಿಗಿಗೊಳಿಸುವ ಕೆಲಸ ಮಾಡುತ್ತೇವೆ. ಬೆಂಗಳೂರಿನಲ್ಲಿ ಕೆಲವೆಡೆ ಪಾಸಿಟಿವಿಟಿ ದರ ಶೇ.1ಕ್ಕಿಂತ ಜಾಸ್ತಿಯಾಗಿದೆ. ಕೊಡಗಿನಲ್ಲಿ 1ಕ್ಕಿಂತ ಅಧಿಕವಾದರೆ ಲಾಕ್ಡೌನ್ ಆತಂಕ ಎದುರಿಸಬೇಕಾಗುತ್ತದೆ. ಹಾಗಾಗಿ ಎಲ್ಲರೂ ಎಚ್ಚರ ವಹಿಸಬೇಕಿದೆ ಎಂದರು.