ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆಯಾಗಿಲ್ಲ. ಇದೀಗ ಬಿಜೆಪಿ ಶಾಸಕರೇ ಇಲ್ಲದ ಈ ಜಿಲ್ಲೆಗೆ ಯಾರು ಉಸ್ತುವಾರಿ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಬೆಂಗಳೂರು [ಆ.19] : ಆ.20 ರ ಮಂಗಳವಾರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ಸಚಿವ ಸಂಪುಟ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಬಿಜೆಪಿ ಶಾಸಕರು ಇಲ್ಲದ ಕಾರಣ ಜಿಲ್ಲೆಗೆ ಉಸ್ತುವಾರಿ ಸಚಿವರು ಯಾರಾಗಲಿದ್ದಾರೆ ಎಂಬ ಕುರಿತು ಜಿಲ್ಲೆಯಲ್ಲಿ ಚರ್ಚೆ ಆರಂಭವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 12 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿರುವುದು ಕೇವಲ ಒಂದು ವರ್ಷ ಮಾತ್ರ. ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಜಿಲ್ಲೆಯಲ್ಲಿರುವ ಒಟ್ಟು 5 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಆರಿಸಿ ಬಂದಿದ್ದರೂ ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಲಭಿಸಲಿಲ್ಲ.
ಸ್ಥಳಿಯರಿಗೆ ಸಿಗದ ಅವಕಾಶ: ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 12 ವರ್ಷಗಳೇ ಕಳೆದಿದ್ದು, ಈ ಅವಧಿಯಲ್ಲಿ ನಾಲ್ಕು ಸರ್ಕಾರಗಳು ಆಡಲಿತ ನಡೆಸಿದ್ದರೆ, 7 ಮಂದಿ ಮುಖ್ಯ ಮಂತ್ರಿಗಳು ಬದಲಾಗಿದ್ದಾರೆ. ಆದರೆ ಜಿಲ್ಲೆಗೆ ಮಾತ್ರ ಸಚಿವ ಸ್ಥಾನ ಸಿಗಲೇ ಇಲ್ಲ ಎಂಬುದು ವಿಶೇಷ. ಇನ್ನು ಇತ್ತೀಚಿಗಷ್ಟೇ ಪತನವಾದ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿ ಯಲ್ಲಿಯೂ ಜಿಲ್ಲೆಯಿಂದ ನಾಲ್ಕು ಮಂದಿ ಶಾಸಕರು ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಗೌರಿಬಿದನೂರು ಶಾಸಕ ಎನ್.ಎಚ್. ಶಿವಸಂಕರರೆಡ್ಡಿ ಅವರಿಗೆ ಸಚಿವ ಸ್ಥಾನ ಲಭ್ಯವಾದರೂ ಅದು ಹೆಚ್ಚು ಕಾಲ ಉಳಿಯಲಿಲ್ಲ.
ಆದರೆ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿ ಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲ ಬಾರಿಗೆ ಜಿಲ್ಲೆಗೆ ಸಚಿವ ಭಾಗ್ಯ ಒದಗಿಬಂತು. ಗೌರಿಬಿದನೂರು ಶಾಸಕ ಎನ್.ಎಚ್. ಶಿವಸಂಕರರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿ ಕೊಂಡರು. ಆದರೆ ಒಂದೇ ವರ್ಷದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವ ಮೂಲಕ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಈಗಲೂ ಇಲ್ಲ ಬಿಜೆಪಿ ಶಾಸಕರು!: ನಾಳೆ ರಾಜ್ಯ ಸರ್ಕಾರದ ಸಂಪುಟ ರಚನೆ ನಡೆಯಲಿದ್ದು, ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಇಲ್ಲದ ಕಾರಣ ಜಿಲ್ಲೆಗೆ ಮಂತ್ರಿ ಭಾಗ್ಯ ಗಗನಕುಸುಮವಾಗಲಿದೆ. ಆದರೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಡಾ.ಕೆ. ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಜೊತೆಗೆ ತಮ್ಮ ಮುಂದಿನ ನಡೆ ಪ್ರಧಾನಿ ಮೋದಿಯ ಕಡೆ ಎಂದು ಘೋಷಣೆ ಮಾಡಿದ್ದಾರೆ. ಹಾಗಾಗಿ ಉಪ ಚುನಾವಣೆ ಬಂದು ಸುಧಾಕರ್ ಅವರು ಶಾಸಕರಾಗಿ ಮರು ಆಯ್ಕೆ ಆಗುವವರೆಗೂ ಜಿಲ್ಲೆಗೆ ಸಚಿವ ಸ್ಥಾನ ಮರೀಚಿಕೆಯಾಗುವುದು ಖಚಿತ.
ಮತ್ತೆ ಹೊರಗಿನವರೇ ಜಿಲ್ಲಾ ಉಸ್ತುವಾರಿ ಹೊರಬೇಕಾದ ಅನಿವಾರ್ಯತೆ ಜಿಲ್ಲೆಗೆ ಒದಗಿ ಬರಲಿದೆ. ಹೊರಗಿನವರೇ ಉಸ್ತುವಾರಿ ಸಚಿವರಾಗುವುದರಿಂದ ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಸ್ತುತ ಸರ್ಕಾರದಲ್ಲಾದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯತ್ತ ಆಸಕ್ತಿ ಹೊಂದಿರುವ ವ್ಯಕ್ತಿ ಜಿಲ್ಲೆಯ ಉಸ್ತುವಾರಿ ಹೊರುವ ಮೂಲಕ ನಿರಂತರ ಬರದಿಂದ ಪರದಾಡುತ್ತಿರುವ ಜಿಲ್ಲೆಗೆ ಆಸರೆಯಾಗಲಿ ಎಂಬುದು ಜಿಲ್ಲೆಯ ಜನತೆಯ ಆಶಯವಾಗಿದೆ.