ಮೈಸೂರು ಮೃಗಾಲಯದಿಂದ 7 ವಷರ್ದ ಬಿಳಿ ಹುಲಿ ಆಗಮನ| ಪ್ರಾಣಿಪ್ರಿಯರಲ್ಲಿ ಹೆಚ್ಚಿದ ಖುಷಿ|ಝೂಯಾಲಾಜಿಕಲ್ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ| ಸೆಪ್ಟೆಂಬರ್ ಎರಡನೇ ವಾರದಿಂದ ಬಿಳಿ ಹುಲಿ ವೀಕ್ಷಣೆಗೆ ಅವಕಾಶ ದೊರೆಯುವ ಸಾಧ್ಯತೆ|
ಸಿದ್ಧಲಿಂಗಸ್ವಾಮಿ ವೈ.ಎಂ.
ಬಳ್ಳಾರಿ(ಆ.26): ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಈಗಾಗಲೇ ಪ್ರಸಿದ್ಧಿ ಪಡೆಯುತ್ತಿರುವ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಯಾಲಾಜಿಕಲ್ ಪಾರ್ಕ್‌ಗೆ ಹೊಸ ಅತಿಥಿಯ ಆಗಮನವಾಗಿದ್ದು, ಪ್ರವಾಸಿಗರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಇಮ್ಮುಡಿಗೊಳಿಸಿದೆ. ಹೌದು, ವಿಶ್ವವಿಖ್ಯಾತ ಹಂಪಿಗೆ ಸಮೀಪದಲ್ಲಿರುವ ಈ ಝೂಯಾಲಾಜಿಕಲ್ ಪಾರ್ಕ್ಗೆ ಮೈಸೂರಿನಲ್ಲಿದ್ದ ಬಿಳಿ ಹುಲಿ ಸೇರ್ಪಡೆಯಾಗಿದ್ದು, ಮತ್ತಷ್ಟು ಮೆರುಗು ಹೆಚ್ಚಿಸಿದೆ.
ಸಾಮಾನ್ಯವಾಗಿ ವನ್ಯಜೀವಿಗಳನ್ನು ನೋಡಬೇಕೆಂದರೆ, ಅದರಲ್ಲೂ ಹುಲಿ, ಬಿಳಿ ಹುಲಿಗಳನ್ನು ವೀಕ್ಷಿಸಲು ಮೈಸೂರು ಝೂಗೆ ಹೋಗಬೇಕು. ಆದರೆ, ಅದೇ ಮೈಸೂರು ಮೃಗಾಲಯದಿಂದ ಕಳೆದ ವಾರ 7 ವರ್ಷದ ಅರ್ಜುನ ಎಂಬ ಹೆಸರಿನ ಬಿಳಿ ಹುಲಿ ಜತೆಗೆ ಏಳು ತೋಳಗಳು ಕಮಲಾಪುರ ಝೂ ಕುಟುಂಬ ಸೇರಿವೆ. ಸದ್ಯ ಝೂನಲ್ಲಿ ಹುಲಿ, ಸಿಂಹ, ಚಿರತೆ, ಕತ್ತೆಕಿರುಬ, ನರಿ ಸೇರಿದಂತೆ ವಿವಿಧ ವನ್ಯಜೀವಿಗಳಿವೆ. ಈ ಸಾಲಿಗೆ ಬಿಳಿ ಹುಲಿಯೂ ಸೇರ್ಪಡೆಯಾಗಿರುವುದು ಪ್ರಾಣಿಪ್ರಿಯರಲ್ಲಿ ಮತ್ತಷ್ಟು ಖುಷಿ ಹೆಚ್ಚಿಸುವಂತೆ ಮಾಡಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಕಮಲಾಪುರ ಬಿಟ್ಟರೆ, ಗದಗ ತಾಲೂಕಿನ ಬಿಂಕದಕಟ್ಟಿಯಲ್ಲಿ ಮೃಗಾಲಯವಿದೆ. ಆದರೆ, ಇಲ್ಲಿಯೂ ಕೆಲ ಪ್ರಾಣಿಗಳಷ್ಟೆ ಇವೆ. ಬಿಳಿ ಹುಲಿ ಇಲ್ಲ. ಹೀಗಾಗಿ ಈ ವರೆಗೆ ಈ ಭಾಗದ ಜನತೆಗೆ ನೋಡುವ ಸೌಭಾಗ್ಯ ದೊರಕಿರಲಿಲ್ಲ. ಮಕ್ಕಳು ನೋಡಬೇಕೆಂದು ಹಠ ಹಿಡಿದರೆ, ಅನಿವಾರ್ಯವಾಗಿ ದೂರದ ಮೈಸೂರಿಗೆ ಪ್ರಯಾಣಿಸಬೇಕಿತ್ತು. ರಾಜ್ಯದಲ್ಲಿ ಒಂಭತ್ತು ಮೃಗಾಲಯಗಳಿದ್ದು, ಈ ಪೈಕಿ ಮೈಸೂರು ಮೃಗಾಲಯದಲ್ಲಿ ಮಾತ್ರ ಬಿಳಿ ಹುಲಿಯಿದೆ. ಅಲ್ಲಿಯೇ ಕ್ರಾಸ್ ಬ್ರೀಡ್ ಮಾಡಿದ 7 ವರ್ಷದ ಗಂಡು ಬಿಳಿ ಹುಲಿಯನ್ನು ಇದೀಗ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಯಾಲಾಜಿಕಲ್ ಪಾರ್ಕ್ಗೆ ಕರೆ ತರಲಾಗಿದೆ.
ಬಳ್ಳಾರಿ ಜಿಪಂನಲ್ಲಿ ಮಹಿಳೆಯರದ್ದೇ ದರ್ಬಾರ್..!
ಈಗಾಗಲೇ ಬಗೆಬಗೆಯ ವನ್ಯಜೀವಿಗಳು ಕಮಲಾಪುರದ ಝೂಗೆ ಸೇರ್ಪಡೆಯಾಗುತ್ತಿರುವುದರಿಂದ ಆಕರ್ಷಣೀಯ ಕೇಂದ್ರವಾಗುತ್ತಿದ್ದು, ಇದರಿಂದ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಇದುವರೆಗೆ ಮೈಸೂರಿನಲ್ಲಿದ್ದ ಬಿಳಿ ಹುಲಿಯು ಇನ್ನು ಮುಂದೆ ಇಲ್ಲಿನ ವಾತಾವರಣ ಹಾಗೂ ಹಾಲಿ ಇರುವ ಹುಲಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದಕ್ಕೆ ಸಮಯ ಹಿಡಿಯಲಿದ್ದು, ಕೆಲ ದಿನಗಳವರೆಗೆ ಹುಲಿ ಚಲನವಲನದ ಮೇಲೆ ನಿಗಾ ವಹಿಸಬೇಕು. ವಾತಾವರಣ ಬದಲಾಗುವುದರಿಂದ ನಿತ್ಯ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ. ಹುಲಿ ಆಗಮಿಸಿ 10 ದಿನ ಕಳೆದಿದ್ದು, ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಪಕ್ಕದಲ್ಲಿ ಹಂಪಿಯೂ ಇರುವುದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿಯೇ ತೆರಳುತ್ತಾರೆ. ಇದೀಗ ಬಿಳಿ ಹುಲಿ ಬಂದಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಂಭವವಿದೆ.
ಸೆಪ್ಟೆಂಬರ್ ಎರಡನೇ ವಾರದಿಂದ ವೀಕ್ಷಣೆಗೆ ಅವಕಾಶ
ಸೆಪ್ಟೆಂಬರ್ ಎರಡನೇ ವಾರದಿಂದ ಬಿಳಿಹುಲಿ ವೀಕ್ಷಣೆಗೆ ಅವಕಾಶ ದೊರೆಯುವ ಸಾಧ್ಯತೆಯಿದ್ದು, ಇದರಿಂದ ಝೂಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗುವ ಸಂಭವವಿದೆ.
ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಯಾಲಾಜಿಕಲ್ ಪಾರ್ಕ್‌ಗೆ ಬಿಳಿ ಹುಲಿಯನ್ನು ತಂದಿರುವುದು ತುಂಬಾ ಸಂತಸ ಉಂಟುಮಾಡಿದೆ. ಅಲ್ಲದೇ ಬಿಳಿ ಹುಲಿ ನೋಡಲು ಈ ಭಾಗದಲ್ಲಿ ಅವಕಾಶ ದೊರೆತಿರುವುದಕ್ಕೆ ಮತ್ತಷ್ಟು ಖುಷಿ ಹೆಚ್ಚಿಸುವ ಸಂಗತಿಯಾಗಿದೆ ಎಂದು ವೀರೇಶ್ ಎಂಬುವರು ತಿಳಿಸಿದ್ದಾರೆ.
ಅರ್ಜುನ ಎಂಬ ಹೆಸರಿನ 7 ವರ್ಷದ ಬಿಳಿ ಹುಲಿಯನ್ನು ಮೈಸೂರು ಮೃಗಾಲಯದಿಂದ ನಮ್ಮ ಕಮಲಾಪುರದ ಝೂಗೆ ಕರೆತರಲಾಗಿದ್ದು, ಇದರಿಂದ ಝೂಯಾಲಾಜಿಕಲ್ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.