ರಾಜ್ಯದ ಹಲವೆಡೆ ಕುಂಭದ್ರೋಣ ಮಳೆಯಾಗುತ್ತಿದ್ದು, ಮಳೆಗೆ ಜನಜೀವನ ತತ್ತರಿಸಿದೆ. ಹಲವೆಡೆ ಜನರ ಬದುಕು ಮುಳುಗಿದೆ. ಇದೀಗ ಇನ್ನೂ ಎರಡು ದಿನ ಅಲರ್ಟ್ ನೀಡಲಾಗಿದೆ.
ಬೆಂಗಳೂರು (ಸೆ.21): ರಾಜ್ಯದಲ್ಲಿ ಮುಂದಿನ ಎರಡು ದಿನ ಧಾರಾಕಾರ ಮಳೆ ಮುಂದುವರಿಯಲಿದ್ದು, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ಅತ್ಯಧಿಕ ಮಳೆ ಬೀಳುವ ನಿರೀಕ್ಷೆ ಹಿನ್ನೆಲೆ ’ರೆಡ್ ಅಲರ್ಟ್’ ಎಚ್ಚರಿಕೆ ನಿಡಲಾಗಿದೆ.
ಕರಾವಳಿ ಜಿಲ್ಲೆಗಳಿಗೆ ಸೆ.21 ಹಾಗೂ 22 ರಂದು ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೆ. 21ರಂದು ‘ರೆಡ್ ಅಲರ್ಟ್’ ನೀಡಲಾಗಿದೆ. ಸೆ. 22ರಂದು ಪುನಃ ಮಲೆನಾಡು ಜಿಲ್ಲೆಗಳಲ್ಲಿ ಅತೀ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
38 ವರ್ಷಗಳ ದಾಖಲೆ ಮಳೆ, ಉಡುಪಿ ಸಂಪೂರ್ಣ ಜಲಾವೃತ! .
ಭಾರಿ ಮಳೆ ಸಾಧ್ಯತೆ ಹಿನ್ನೆಲೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಸೆ.21ರಂದು ‘ಆರೆಂಜ್ ಅಲರ್ಟ್’ ಹಾಗೂ ಪುನಃ ಇದೇ ಜಿಲ್ಲೆಗಳಲ್ಲಿ ಸೆ.22 ರಂದು ಭಾರಿ ಮಳೆಯ ಕಾರಣಕ್ಕೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಉಳಿದಂತೆ ರಾಜ್ಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.