ಅಪಾರ್ಟ್‌ಮೆಂಟ್‌ಗೆ ‘ವಾಟರ್‌ ಆಡಿಟ್‌’ ಬಿಸಿ ತುಪ್ಪ: ಕಾವೇರಿ ನೀರಿಗೆ ಅರ್ಜಿ!

Published : Feb 09, 2025, 12:37 PM IST
ಅಪಾರ್ಟ್‌ಮೆಂಟ್‌ಗೆ ‘ವಾಟರ್‌ ಆಡಿಟ್‌’ ಬಿಸಿ ತುಪ್ಪ: ಕಾವೇರಿ ನೀರಿಗೆ ಅರ್ಜಿ!

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿ ನೀರಿನ ಸದ್ಬಳಕೆ ಕುರಿತ ‘ವಾಟರ್‌ ಆಡಿಟ್‌ಗೆ’ ಅವಕಾಶ ಕೊಟ್ಟರಷ್ಟೇ ಅಗತ್ಯವಿರುವಷ್ಟು ಕಾವೇರಿ ನೀರು ಪೂರೈಸುವ ದಿಸೆಯಲ್ಲಿ ಬೆಂಗಳೂರು ಜಲಮಂಡಳಿ ಚಿಂತನೆ ನಡೆಸಿದೆ.   

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಫೆ.09): ರಾಜಧಾನಿ ಬೆಂಗಳೂರಿನಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿ ನೀರಿನ ಸದ್ಬಳಕೆ ಕುರಿತ ‘ವಾಟರ್‌ ಆಡಿಟ್‌ಗೆ’ ಅವಕಾಶ ಕೊಟ್ಟರಷ್ಟೇ ಅಗತ್ಯವಿರುವಷ್ಟು ಕಾವೇರಿ ನೀರು ಪೂರೈಸುವ ದಿಸೆಯಲ್ಲಿ ಬೆಂಗಳೂರು ಜಲಮಂಡಳಿ ಚಿಂತನೆ ನಡೆಸಿದೆ. ಕಳೆದ ವರ್ಷದ ಬರದಿಂದ ಬೆಂಗಳೂರಿನಲ್ಲಿ ಸಾಕಷ್ಟು ನೀರಿನ ಸಮಸ್ಯೆ ಉಂಟಾಗುತ್ತಿದೆ. ಇನ್ನೇನು ಈ ವರ್ಷದ ಬೇಸಿಗೆ ಆರಂಭಗೊಳ್ಳಲಿದ್ದು, ಈಗಾಗಲೇ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ನೀರಿನ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಟ್ಯಾಂಕರ್‌ ನೀರಿನ ಪೂರೈಕೆ ಸಹ ಆರಂಭಗೊಂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕಡ್ಡಾಯವಾಗಿ ಎಲ್ಲಾ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳಬೇಕೆಂದು, ಈ ಮೂಲಕ ಕಾವೇರಿ ಐದನೇ ಹಂತದ ನೀರಿನ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ. 

ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿಯು ನಗರದ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದೆ. ದುಬಾರಿ ಟ್ಯಾಂಕರ್‌ ಮಾಫಿಯಾದಿಂದ ಬೇಸತ್ತಿರುವ ಅಪಾರ್ಟ್‌ಮೆಂಟ್‌ ಒಕ್ಕೂಟದ ಪದಾಧಿಕಾರಿಗಳು ಸಹ ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಉತ್ಸುಕತೆ ತೋರಿದ್ದಾರೆ. ಜತೆಗೆ, ಜಲಮಂಡಳಿ ಕೇಳಿದಷ್ಟು ಹಣ ನೀಡುವುದಕ್ಕೆ ಸಿದ್ಧರಾಗಿದ್ದಾರೆ. ಇದೇ ವೇಳೆ ಈಗಾಗಲೇ ಪೂರೈಕೆಯಾಗುತ್ತಿರುವ ಅಪಾರ್ಟ್‌ಮೆಂಟ್‌ಗಳು ಹೆಚ್ಚುವರಿ ನೀರು ಪೂರೈಕೆಗೆ ಮನವಿ ಮಾಡಿವೆ. ಆದರೆ, ಬೆಂಗಳೂರು ಜಲಮಂಡಳಿಯು ಅದಾಯ ಗಳಿಸುವುದರೊಂದಿಗೆ ನೀರು ಉಳಿತಾಯಕ್ಕೆ ರೂಪಿಸಿಕೊಂಡಿರುವ ವಾಟರ್‌ ಆಡಿಟ್‌ ತಂತ್ರವು ನಗರದ ಅಪಾರ್ಟ್‌ಮೆಂಟ್‌ಗಳಿಗೆ ಬಿಸಿ ತುಪ್ಪಾಗಿ ಪರಿಣಮಿಸಿದೆ.

ಶೀಘ್ರದಲ್ಲೇ ಬರಲಿದೆ ಹಳದಿ ಎಲೆ ರೋಗ ಮುಕ್ತ ಅಡಕೆ ಸಸಿ

ವಾಟರ್‌ ಆಡಿಟ್‌ಗೆ ಒಪ್ಪಿದರೆ ನೀರು: ಕಳೆದ ವರ್ಷ ಬೇಸಿಗೆ ಅವಧಿಯಲ್ಲಿ ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ, ಕೊಳವೆ ಬಾವಿಯ ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆ, ಮಳೆ ನೀರು ಇಂಗು ಗುಂಡಿ ನಿರ್ಮಾಣ ಸೇರಿದಂತೆ ಬೆಂಗಳೂರು ಜಲಮಂಡಳಿ ಜಾರಿಗೊಳಿಸಿದ ಪಂಚಸೂತ್ರಗಳನ್ನು ಅನುಷ್ಠಾನ ಮಾಡಿಕೊಂಡರೆ ಮಾತ್ರ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರಿನ ಸಂಪರ್ಕ ನೀಡಲಾಗುವುದು ಎಂದು ಸ್ಪಷ್ಟವಾಗಿ ಸೂಚಿಸಿದೆ. ಜತೆಗೆ, ಈ ನೀರಿನ ಸದ್ಬಳಕೆ ಬಗ್ಗೆ ಜಲಮಂಡಳಿಯು ವಾಟರ್‌ ಆಡಿಟ್‌ ನಡೆಸಲಿದೆ. ಇದರಲ್ಲಿ ಪಾಸ್‌ ಆದರೆ, ಮಾತ್ರ ಅಪಾರ್ಟ್‌ಮೆಂಟ್‌ಗಳಿಗೆ ಅಗತ್ಯವಿರುವಷ್ಟು ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದೆ.

ಬೇಕಾಬಿಟ್ಟಿ ನೀರಿ ಬಳಕೆಗೆ ಬ್ರೇಕ್‌?: ಅಪಾರ್ಟ್‌ಮೆಂಟ್‌ ನಿವಾಸಿಗಳು ನೀರಿಗಾಗಿ ಎಷ್ಟು ಬೇಕಾದರೂ ಹಣ ವೆಚ್ಚ ಮಾಡಲು ಸಿದ್ಧರಿದ್ದಾರೆ. ಆ ಮಾತ್ರಕ್ಕೆ ಅವರಿಗೆ ಬೇಕಿರುವಷ್ಟು ನೀರು ಕೊಟ್ಟರೆ ಪೋಲಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ನೀರಿನ ಸದ್ಬಳಕೆ ಗಮನಿಸಿ ನೀರು ಪೂರೈಕೆ ಮಾಡುವುದಕ್ಕೆ ಜಲಮಂಡಳಿ ತೀರ್ಮಾನಿಸಿದೆ.

2,643 ಅಪಾರ್ಟ್‌ಮೆಂಟ್‌ಗಳಿಂದ ಕಾವೇರಿ ನೀರಿಗಾಗಿ ಬೇಡಿಕೆ ಅರ್ಜಿ: ನಗರದಲ್ಲಿ 4 ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳಿವೆ. ಈ ಪೈಕಿ 2,643 ಅಪಾರ್ಟ್‌ಮೆಂಟ್‌ಗಳಿಂದ ಕಾವೇರಿ ನೀರಿಗೆ ಸಂಬಂಧಿಸಿದಂತೆ ಅರ್ಜಿಯು ಬೆಂಗಳೂರು ಜಲಮಂಡಳಿಗೆ ಸಲ್ಲಿಕೆಯಾಗಿವೆ. ಇನ್ನೂ 1,252 ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಅರ್ಜಿ ಸಲ್ಲಿಸಿದ ಎಲ್ಲಾ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರಿನ ಸಂಪರ್ಕಕ್ಕೆ ಪಾವತಿಸಬೇಕಾದ ಮೊತ್ತದ ಬಗ್ಗೆ ಡಿಮ್ಯಾಂಡ್‌ ನೋಟ್‌ ನೀಡಲಾಗಿದೆ. ಅರ್ಜಿ ಸಲ್ಲಿಕೆ ಮಾಡದ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕಷ್ಟು ಸಮಸ್ಯೆ, ಗೊಂದಲ ಇರುವುದು ಕಂಡು ಬಂದಿದೆ. ಅದಕ್ಕೂ ಪರಿಹಾರ ನೀಡುವುದಕ್ಕೆ ಜಲಮಂಡಳಿ ಚರ್ಚೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏರ್‌ಶೋನಲ್ಲಿ ಅಮೆರಿಕದ ಎಫ್‌ - 35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ ಆಕರ್ಷಣೆ

ಹೆಚ್ಚುವರಿ ನೀರಿನ ಬೇಡಿಕೆ ಇಡುವ ಅಪಾರ್ಟ್‌ಮೆಂಟ್‌ಗಳಿಗೆ ವಾಟರ್‌ ಆಡಿಟ್‌ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ನೀರಿನ ಮರು ಬಳಕೆ, ಉಳಿತಾಯ ಸೇರಿದಂತೆ ಪಂಚ ಸೂತ್ರ ಅಳವಡಿಕೆ ಬಗ್ಗೆ ಪರಿಶೀಲನೆ ನಡೆಸಿ ಆ ನಂತರ ನೀರು ನೀಡಲಾಗುವುದು.
-ಡಾ। ರಾಮ್‌ ಪ್ರಸಾತ್‌ ಮನೋಹರ್‌, ಅಧ್ಯಕ್ಷ, ಬೆಂಗಳೂರು ಜಲಮಂಡಳಿ.

PREV
click me!

Recommended Stories

ವಿಜಯಪುರದಲ್ಲಿ ವಿಕೃತ ಘಟನೆ, ಹಾಲು ತರಲು ಹೋದ ಮಹಿಳೆಯ ಕಿವಿ ಕತ್ತರಿಸಿ ಚಿನ್ನ ಕದ್ದ ಕಳ್ಳರು!
ಶಿಡ್ಲಘಟ್ಟದ 'ಹನಿ' ಹಿಂದೆ ಹೋದ ಚಿಕ್ಕಬಳ್ಳಾಪುರದ ಬಾಲಾಜಿ, ಟ್ರ್ಯಾಪ್‌ ಆಗಿದ್ದಕ್ಕೆ ಜೀವನವನ್ನೇ ಮುಗಿಸಿದ!