ವಕ್ಫ್‌ ಆಸ್ತಿ: ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಎಂ.ಬಿ.ಪಾಟೀಲ್

By Kannadaprabha News  |  First Published Oct 28, 2024, 4:22 PM IST

ರೈತರು ಆತಂಕಪಡುವ ಅಗತ್ಯವಿಲ್ಲ. ರೈತರಿಗೆ ಅನ್ಯಾಯವಾಗುವುದಿಲ್ಲ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ತುಂಬುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.


ವಿಜಯಪುರ (ಅ.28): ವಕ್ಫ್ ಆಸ್ತಿಗಳ ಬಗ್ಗೆ ಜಿಲ್ಲೆಯಲ್ಲಿ ಅನವಶ್ಯಕ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ, ವಾಸ್ತವದಲ್ಲಿ ಆ ರೀತಿ ಏನೂ ಇಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ. ರೈತರಿಗೆ ಅನ್ಯಾಯವಾಗುವುದಿಲ್ಲ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ತುಂಬುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ನಗರದ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಹಿಂದೂಗಳ ಆಸ್ತಿಯನ್ನು ವಕ್ಫ್‌ ಬೋರ್ಡ್ ಕೊಳ್ಳೆ ಹೊಡೆಯುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ರೈತರ ಆಸ್ತಿಯನ್ನು ಕಸಿದುಕೊಳ್ಳುವ ಯಾವುದೇ ಹಕ್ಕು ವಕ್ಫ್‌ ಬೋರ್ಡ್‌ಗೆ ಇಲ್ಲ.

1974ರಲ್ಲಿ ಆಗಿದ್ದ ವಕ್ಫ್‌ ಗೆಜೆಟ್ ಪ್ರಕಾರ ಇದೀಗ ಅವುಗಳನ್ನು ಇಂದೀಕರಣ ಮಾಡಲು ಮುಂದಾಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಆದರೆ ಕೆಲವು ರಾಜಕಾರಣಿಗಳು ಇದನ್ನೇ ಬಂಡವಾಳ ಮಾಡಿಕೊಂಡು ರೈತರ ಮಧ್ಯೆ ಗೊಂದಲ‌ ಸೃಷ್ಟಿಸುತ್ತಿದ್ದಾರೆ. ಯಾವುದೇ ಸಮಸ್ಯೆಯೇ ಇಲ್ಲದ ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯಕ್ಕೋಸ್ಕರ ಮಾತನಾಡುತ್ತಿದ್ದಾರೆ. ಈಗ ಗೆಜೆಟ್ ಆಗಿರುವ ಆಸ್ತಿಗಳಲ್ಲಿ ಶೇ.100 ಮುಸ್ಲಿಮರ ಆಸ್ತಿಗಳೇ ಇದ್ದು, ಅದರಲ್ಲಿ ಶೇ.30ರಷ್ಟು ಆಸ್ತಿಗಳನ್ನು ಮುಸ್ಲಿಂ ಜನಾಂಗವರು ಮಾರಾಟ ಮಾಡಿದ್ದಾರೆ. ಅದನ್ನು ಖರೀದಿಸಿದ ಹಿಂದೂಗಳಿಗೆ ಮಾತ್ರ ನೋಟಿಸ್‌ ಹೋಗಿವೆ ಎಂದು ಸ್ಪಷ್ಟನೆ ನೀಡಿದರು.

Tap to resize

Latest Videos

undefined

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ: ಸ್ಟಾರ್‌ವಾರ್ ಮಾತ್ರವಲ್ಲ ಕುಟುಂಬ ಕದನಕ್ಕೂ ಸಿದ್ಧ!

ಜಿಲ್ಲೆಯಲ್ಲಿ 14,201 ಎಕರೆ ವಕ್ಫ್ ಆಸ್ತಿಗಳಿವೆ. ಅದರಲ್ಲಿ ಇನಾಂ ಆಕ್ಟ್‌ನಲ್ಲಿ 1459 ಆಸ್ತಿಗಳು ಹಾಗೂ ಲ್ಯಾಂಡ್ ಫಾರ್ಂ ಆಕ್ಟ್‌ನಲ್ಲಿ 907 ಆಸ್ತಿಗಳು ಹೋಗಿವೆ. ಇದೀಗ 11,835 ಸಾವಿರ ಎಕರೆ ಆಸ್ತಿಗಳು ಇಂದೀಕರಣ ಮಾಡದೆ ಇರುವುದರಿಂದ ಅವುಗಳಿಗೆ ಇಂದೀಕರಣಕ್ಕಾಗಿ ಮುಂದಾಗಿದ್ದಾರೆ. ಮುಂದೆ ಸರ್ಕಾರದ ಮಾರ್ಗದರ್ಶನ ಪಡೆದು ಮುಂದುವರಿಯುವುದಾಗಿ ಅವರು ತಿಳಿಸಿದರು. ಸಿಂದಗಿ ತಾಲೂಕಿನ ಯರಗಲ್‌ ಗ್ರಾಮದ ಸರ್ವೇ ನಂ.130ರಲ್ಲಿನ 13 ಎಕರೆ ಜಮೀನು 1974ರಲ್ಲೇ ಗೆಜೆಟ್ ಆಗಿದೆ. ಈ ಸರ್ವೇ ನಂ.130ರ ಕುರಿತು ರೈತರು ಸೂಕ್ತ ದಾಖಲೆಗಳನ್ನು ಕೊಟ್ಟಮೇಲೆ ಅದನ್ನು ವಕ್ಫ್‌ ಆಸ್ತಿ ಎಂದು ನಮೂದಿಸುವ ಪ್ರಕ್ರಿಯೆಯನ್ನು ಕೈ ಬಿಟ್ಟಿದ್ದಾರೆ ಎಂದರು.

ಸಿಂದಗಿಯಲ್ಲಿನ ಗುರುಸಿದ್ದಲಿಂಗ ಸ್ವಾಮಿ ವಿರಕ್ತಮಠದ ಆಸ್ತಿಯ ಸರ್ವೇ ನಂ.1020ರಲ್ಲಿನ 1.36ಎಕರೆ ಜಮೀನನ್ನು ವಕ್ಫ್‌ ಆಸ್ತಿ ಎಂದು ಗೆಜೆಟ್‌ನಲ್ಲಿ ಗುರುತಿಸಲಾಗಿದೆ. ಆದರೆ, ಅಲ್ಲಿನ ವಕ್ಫ್‌ ಆಸ್ತಿ ಸಂಖ್ಯೆ ಸರ್ವೇ ನಂ.1029 ಇದ್ದು ಅದು ತಪ್ಪಾಗಿ 1020 ಎಂದು ನಮೂದು ಆಗಿ ಗೊಂದಲ ಉಂಟಾಗಿತ್ತು. ಅದು ಸಹ ಬಗೆಹರಿಯಲಿದೆ ಎಂದು ಸ್ಪಷ್ಟಪಡಿಸಿದರು. ಇದರಿಂದ ರೈತರಲ್ಲಿ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಅದಕ್ಕಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಕಮೀಟಿ ಮಾಡಲಾಗಿದ್ದು, ತಂಡದಲ್ಲಿ ಎಡಿಸಿ, ಎಸಿಗಳು, ತಹಸೀಲ್ದಾರ್‌ಗಳು ಇದ್ದಾರೆ. ಅವರೆಲ್ಲರೂ ಸೇರಿ 1974ರಲ್ಲಿ ಗೆಜೆಟ್ ಆಗಿದ್ದು ಹಾಗೂ ಅದಕ್ಕೂ ಮೊದಲು ಹತ್ತು ವರ್ಷ ಅಂದರೆ 1964ರಿಂದಲೇ ದಾಖಲೆಗಳನ್ನು ತೆಗೆದು ಪರಿಶೀಲನೆ ಮಾಡಿಸುತ್ತಿದ್ದಾರೆ. 

ಈ ವೇಳೆ ಯಾವುದು ಆಸ್ತಿ ಯಾರದ್ದು ಎಂಬುದು ಗೊತ್ತಾಗಲಿದೆ. ಬಳಿಕ, ಎಲ್ಲ ಗೊಂದಲಗಳು ಬಗೆಹರಿಯಲಿವೆ ಎಂದು ತಿಳಿಸಿದರು. ಬಬಲೇಶ್ವರದಲ್ಲಿ 38 ರೈತರಿಗೆ ನೋಟಿಸ್‌ ಹೋಗಿವೆ. ಅಲ್ಲಿ ತಿಗಣಿಬಿದರಿಯ ಜಾಹಗೀರದಾರ ಎಂಬುವವರ ಆಸ್ತಿಯಿದ್ದು, ಅದರ ಕುರಿತು 1974ರ ಮುಂಚಿನ ದಾಖಲೆಗಳನ್ನು ನೋಡಿ ಪರಿಶೀಲಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಕ್ಫ್ ಅಧಿಕಾರಿ ಮೊಹಸೀನ್ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

ತಿಕೋಟಾ ತಾಲೂಕಲ್ಲಿ ಯಾರಿಗೂ ನೋಟಿಸ್‌ ಕೊಟ್ಟಿಲ್ಲ: ಹೊನವಾಡದಲ್ಲಿನ 1200 ಎಕರೆ ರೈತರ ಭೂಮಿ ವಕ್ಫ್ ಆಸ್ತಿ ಆಗಿದೆ ಎಂದು ವರದಿಯಾಗಿದೆ. ಆ ಊರಿನಲ್ಲಿ ಯಾರಿಗೂ ನೋಟಿಸ್ ನೀಡಿಲ್ಲ, ಇಂದಿಗೂ ಅವರ ಉತಾರ(ಪಹಣಿ)ದಲ್ಲಿ ರೈತರೇ ಮಾಲೀಕರಿದ್ದಾರೆ. 1974ರ ಗೆಜೆಟ್‌ನಲ್ಲಿ ಮಹಾಲ ಭಾಗಾಯತದಲ್ಲಿರುವ ಖಾಜಾ ಅಮೀನ್ ದರ್ಗಾದ ಆಸ್ತಿಯ ಸರ್ವೇ ನಂಬರ್‌ಗಳ ಜೊತೆಗೆ ಹೊನವಾಡ ಎಂದು ಹಾಕಲಾಗಿತ್ತು. ಅದರಿಂದಾಗಿ ಹೊನವಾಡದ ಆಸ್ತಿಗಳನ್ನು ವಕ್ಫ್ ತೆಗೆದುಕೊಳ್ಳುತ್ತಿದೆ ಎಂದು ಗೊಂದಲ ನಿರ್ಮಾಣವಾಗಿತ್ತು. ಆದರೆ, ಆದ ಪ್ರಮಾದವನ್ನು 1979ರಲ್ಲಿಯೇ ವಕ್ಫ್‌ನವರು ಸರಿಪಡಿಸಿದ್ದಾರೆ. ಅಲ್ಲಿ ಕೇವಲ 10.29 ಎಕರೆ ಮಾತ್ರ ಗೆಜೆಟ್ ನೋಟಿಫಿಕೇಷನ್ ಇದೆ. ಹೀಗಾಗಿ ಹೊನವಾಡದಲ್ಲಿ ಮಾತ್ರವಲ್ಲ ಇಡೀ ತಿಕೋಟಾ ತಾಲೂಕಿನಲ್ಲೇ ಯಾರಿಗೂ ನೋಟಿಸ್‌ ಕೊಟ್ಟಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.

ಭಗೀರಥ ಅಂತ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ: ಯೋಗೇಶ್ವರ್‌ಗೆ ಡಿವಿಎಸ್ ಸವಾಲು

433 ರೈತರ ಪೈಕಿ 124 ನೋಟಿಸ್‌: ಜಿಲ್ಲಾದ್ಯಂತ ಒಟ್ಟು 433 ರೈತರಿದ್ದು, ಇದುವರೆಗೂ 124 ನೋಟಿಸ್‌ ನೀಡಲಾಗಿದೆ. ಒಬ್ಬರೇ ಒಬ್ಬ ರೈತನ ಪಹಣಿಯಲ್ಲಿ ಮ್ಯೂಟೇಷನ್ ಕಾಲಂ 9ರಲ್ಲಿ ಒಂದು ಎಕರೆ ಆಸ್ತಿಯೂ ವಕ್ಫ್‌ ಎಂದು ನಮೂದು ಆಗಿಲ್ಲ. ಪಹಣಿ ಕಾಲಂ 11ರಲ್ಲಿ ಇಂಡಿ ತಾಲೂಕಿನಲ್ಲಿ 41 ಸರ್ವೆ ನಂಬರ್‌ನಲ್ಲಿ ಮಾತ್ರ ನೋಟಿಸ್‌ ನೀಡದೆಯೇ ವಕ್ಫ್ ಆಸ್ತಿ ಎಂದು ಇಂದೀಕರಣ ಮಾಡಿದ್ದಾರೆ. ಅದನ್ನು ಈಗ ಇಂಡಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸೊಮೋಟೊ ಕಾಳಜಿ ಮೇಲೆ ಪರಿಶೀಲನೆ ಮಾಡಲಾಗುತ್ತಿದೆ. ಅದರಂತೆ ಚಡಚಣ ತಾಲೂಕಿನಲ್ಲಿ ಕೇವಲ 3 ಪ್ರಕರಣಗಳು ಹೀಗೆ ಆಗಿದ್ದು, ಅವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

click me!