ಮೀಸಲಾತಿ ವಿಚಾರದಲ್ಲಿ ಸರ್ಕಾರಗಳ ಬೇಜವಾಬ್ದಾರಿ ಸಲ್ಲದು: ವಿ.ಎಸ್.ಉಗ್ರಪ್ಪ ಅಸಮಾಧಾನ

Published : May 24, 2026, 06:53 PM IST
VS Ugrappa

ಸಾರಾಂಶ

ಮೀಸಲಾತಿ ಸರಿಯಾಗಿ ಜಾರಿಯಾಗದಿದ್ದರಿಂದ ಶೋಷಿತ ವರ್ಗಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಸಮುದಾಯಗಳನ್ನು ಎಸ್‌ಸಿ, ಎಸ್‌ಟಿಗೆ..

ಹೊಸಪೇಟೆ (ಮೇ.24): ಮೀಸಲಾತಿ ಸರಿಯಾಗಿ ಜಾರಿಯಾಗದಿದ್ದರಿಂದ ಶೋಷಿತ ವರ್ಗಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಸಮುದಾಯಗಳನ್ನು ಎಸ್‌ಸಿ, ಎಸ್‌ಟಿಗೆ ಸೇರಿಸುವ ರಾಜಕೀಯ ಘೋಷಣೆಗಳನ್ನು ಹೇಳಲಾಗುತ್ತಿದೆ. ಎಸ್ಸಿ, ಎಸ್ಟಿ ಪಟ್ಟಿಗೆ ಹೊಸಬರನ್ನು ಸೇರ್ಪಡೆ ಮಾಡುವುದು ಯಾರಪ್ಪನ ಆಸ್ತಿಯಲ್ಲ. ಈಗಾಗಲೇ ಇರುವವರಿಗೇ ತಟ್ಟೆಯಲ್ಲಿ ಅನ್ನವಿಲ್ಲ.

ಇನ್ನು ಹೊಸಬರನ್ನು ಸೇರಿಸುವ ಮುನ್ನ ಆಯಾ ಸಮಾಜಗಳ ಕುಲಶಾಸ್ತ್ರ ಅಧ್ಯಯನ ನಡೆಯಬೇಕು. ಸರ್ಕಾರ ಎಲ್ಲರ ಸ್ಥಿತಿಗತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿ, ತಟ್ಟೆಗೆ ಅನ್ನ ಇಟ್ಟಂತೆ ಮಾಡಿದ್ದ ಸರ್ಕಾರಗಳು, ಈಗ ಅದಕ್ಕೆ ತಡೆಯಾಜ್ಞೆ ಬರುವಂತೆ ಮಾಡಿ ನಮ್ಮ ಬದುಕಿನ ಜೊತೆ ಆಟವಾಡುತ್ತಿರುವುದು ಸರಿಯಲ್ಲ ಎಂದರು.

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನಾಗಮೋಹನ್ ದಾಸ್ ಸಮಿತಿ ವರದಿ ಆಧರಿಸಿ ಮೀಸಲಾತಿ ಹೆಚ್ಚಿಸಲಾಯಿತು. ಇದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಮಾರ್ಚ್ 23ರಂದು 2023ರ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಇದುವರೆಗೆ ಕೇಂದ್ರದಿಂದ ಯಾವುದೇ ಉತ್ತರವಿಲ್ಲ. ಪ್ರಸ್ತುತ ಈ ಶೇ.56 ಮೀಸಲಾತಿಗೆ ಕೋರ್ಟ್ ಸ್ಟೇ ನೀಡಿದ್ದರೂ ಸರ್ಕಾರದ ಅಡ್ವೊಕೇಟ್ ಜನರಲ್ ಸರಿಯಾಗಿ ವಾದ ಮಂಡಿಸಿಲ್ಲ.

ಬೇಜವಾಬ್ದಾರಿ ಮಾಡುತ್ತಿರುವುದು ಸರಿಯಲ್ಲ

ಪ್ರಸ್ತುತ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ಸರಿಯಾಗಿ ಜಾರಿ ಮಾಡಿದರೆ ಎಸ್‌ಸಿ, ಎಸ್‌ಟಿ, ಒಬಿಸಿ ಇವರಿಗೆಲ್ಲ ಉದ್ಯೋಗ ಸಿಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಪ್ರಧಾನಿ, ಮುಖ್ಯಮಂತ್ರಿ ಕೇವಲ ಓಟಿಗಾಗಿ ಸಂವಿಧಾನ ರಕ್ಷಣೆಯ ಮಾತುಗಳನ್ನಾಡುತ್ತಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ನಮ್ಮ ಜೀವನದೊಂದಿಗೆ ಆಟವಾಡುವುದನ್ನು ನಿಲ್ಲಿಸಬೇಕು ಎಂದರು.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳು (ಶೇ.17.01) ಹಾಗೂ ತಳವಾರ, ಪರಿವಾರ ಸೇರಿದಂತೆ 51 ಪರಿಶಿಷ್ಟ ಪಂಗಡಗಳು (ಶೇ.7) ಇದ್ದು, ಒಬಿಸಿ ಶೇ.32 ಇದ್ದಾರೆ. ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿ ಒಟ್ಟು ಶೋಷಿತ ವರ್ಗಗಳ ಜನಸಂಖ್ಯೆ 4 ಕೋಟಿಗಿಂತ ಹೆಚ್ಚಿದ್ದಾರೆ. ಆದರೆ, ರಾಜ್ಯದಲ್ಲಿ ಸದ್ಯ 3.5 ಲಕ್ಷಕ್ಕೂ ಹೆಚ್ಚು ಸುಳ್ಳು ಜಾತಿ ಪ್ರಮಾಣಪತ್ರಗಳು ಸೃಷ್ಟಿಯಾಗಿವೆ ಎಂದು ಕಾರ್ಯಾಂಗದ ವೈಫಲ್ಯದ ವಿರುದ್ಧ ಉಗ್ರಪ್ಪ ಸಿಡಿಮಿಡಿಗೊಂಡರು.

PREV
Read more Articles on
click me!

Recommended Stories

ಕೊಂಕಣ ರೈಲ್ವೆಯ ಮೂಲ್ಕಿ ರೈಲು ನಿಲ್ದಾಣದ ಬಹುದೊಡ್ಡ ಬದಲಾವಣೆ, ಬಹುವರ್ಷದ ಪ್ರಯಾಣಿಕರ ಬಹುದಿನಗಳ ಕನಸು ನನಸು
ಮಣಿಪಾಲದಲ್ಲಿ ರಾಜ್ಯದ ಪ್ರಥಮ ಹೋಮ್ ಅವೇ ಫ್ರಮ್ ಹೋಮ್: ಏನಿದು ಹೊಸ ವ್ಯವಸ್ಥೆ?