ಅಭಿವೃದ್ಧಿ ಕೆಲಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಿ : ಟಿ.ಬಿ.ಜಯಚಂದ್ರ

By Kannadaprabha News  |  First Published Mar 29, 2023, 6:02 AM IST

ಶಿರಾ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ 10 ವರ್ಷಗಳ ನನ್ನ ಅಧಿಕಾರ ಅವಧಿಯಲ್ಲಿ 3250 ಕೋಟಿ ರುಪಾಯಿ ಅನುದಾನವನ್ನು ಕ್ಷೇತ್ರಕ್ಕೆ ತರುವ ಮೂಲಕ ಅಭಿವೃದ್ಧಿ ಮಾಡಿದ್ದೇನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.


  ಶಿರಾ : ಶಿರಾ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ 10 ವರ್ಷಗಳ ನನ್ನ ಅಧಿಕಾರ ಅವಧಿಯಲ್ಲಿ 3250 ಕೋಟಿ ರುಪಾಯಿ ಅನುದಾನವನ್ನು ಕ್ಷೇತ್ರಕ್ಕೆ ತರುವ ಮೂಲಕ ಅಭಿವೃದ್ಧಿ ಮಾಡಿದ್ದೇನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲೂಕಿನ ಗೌಡಗೆರೆ ಹೋಬಳಿಯ ಬೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಚಂಗಾವರ ಗ್ರಾ.ಪಂ.ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಶಿರಾ ಕ್ಷೇತ್ರದ ಜನತೆ ಈ ಬಾರಿ ಗುದ್ದಲಿ ಪೂಜೆ ಶಾಸಕರನ್ನು ಆರಿಸಿಕೊಳ್ಳುತ್ತೀರಾ ಅಥವಾ ಅಭಿವೃದ್ಧಿ ಕೆಲಸ ಮಾಡಿ ಮತ್ತಷ್ಟುಕೆಲಸವನ್ನು ಮಾಡಲು ಯೋಚಿಸಿರುವ ನನಗೆ ಮತ ನೀಡುತ್ತೀರಾ ಯೋಚಿಸಿ. ಬಡವ ಮತ್ತು ರೈತರ ಕಷ್ಟಗಳನ್ನು ಅರಿತು ಉತ್ತಮ ಆಡಳಿತ ನೀಡುವಂತಹ ಕಾಂಗ್ರೆಸ್‌ ಪಕ್ಷಕ್ಕೆ ಈ ಬಾರಿ ರಾಜ್ಯದಲ್ಲಿ ಅಧಿಕಾರ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

Latest Videos

undefined

ದಿನ ಬಳಕೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ ಬಡವರ ಬದುಕಿನ ಮೇಲೆ ಬರೆ ಎಳೆದಿರುವ ಭ್ರಷ್ಟಬಿಜೆಪಿ ಸರ್ಕಾರ ತೊಲಗಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆ ಇರುವಂತೆ ಮಾಡಲು ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚು ಸಂಘಟಿತರಾಗಿ ಕೆಲಸ ಮಾಡಬೇಕಿದೆ ಎಂದರು.

ಪ್ರಧಾನಿಯಿಂದ ಪ್ರಭುತ್ವದ ಕಗ್ಗೊಲೆ

 ಶಿರಾ :  ಪ್ರಧಾನ ಮಂತ್ರಿಗಳು ಪಾರ್ಲಿಮೆಂಟರಿ ಸೆಕ್ರೆಟರಿಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ರಾಹುಲ್‌ಗಾಂಧಿಯವರ ಸಂಸತ್‌ ಸದಸ್ಯತ್ವವನ್ನು ಅರ್ಹಗೊಳಿಸುವ ಕೆಲಸ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಟಿ.ಬಿ.ಜಯಚಂದ್ರ ಆರೋಪಿಸಿದರು.

ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಹುಲ್‌ ಗಾಂಧಿಯವರ ಸದಸ್ಯತ್ವವನ್ನು ಯಾವುದೇ ಶೋಕಾಸ್‌ ನೋಟಿಸ್‌ ನೀಡದೆ ಏಕಾಏಕಿ ರದ್ದುಪಡಿಸಿದ್ದಾರೆ ಎಂದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ? ಪ್ರಜಾಪ್ರಭುತ್ವ ಇವರ ಕೈಯಲ್ಲಿ ಉಳಿಯಲು ಸಾಧ್ಯವೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

ಬೋಗಸ್‌ ಹಕ್ಕು ಪತ್ರ ವಿತರಣೆ: ರಾಜ್ಯ ಕಂದಾಯ ಗ್ರಾಮ ರಚನೆ ಮಾಡುವಲ್ಲಿ ವಿಫಲವಾಗಿದ್ದು, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ಕಾನೂನನ್ನು ಉಲ್ಲಂಘಿಸಿ ಚುನಾವಣೆಯ ಗಿಮಿಕ್‌ಗೋಸ್ಕರ ಬೋಗಸ್‌ ಹಕ್ಕುಪತ್ರಗಳನ್ನು ನೀಡುತ್ತಿದೆ. ಸರ್ಕಾರದ ಅಧಿಕಾರದ ಅವಧಿಯಲ್ಲಿ 2016ರಲ್ಲಿ ದಾಖಲೆರಹಿತ ಜನರು ವಾಸಿಸುವ ಪ್ರದೇಶಗಳನ್ನು ಅಂದರೆ ತಾಂಡಗಳು, ಗೊಲ್ಲರಹಟ್ಟಿಗಳು, ನಾಯಕರಹಟ್ಟಿ, ಕುರುಬರಹಟ್ಟಿ, ಕಾಲೋನಿಗಳನ್ನು ಗುರ್ತಿಸಿ ಕಂದಾಯ ಗ್ರಾಮವನ್ನಾಗಿಸುವ ಗುರಿ ಹೊಂದಿ ಕಾರ್ಯಕ್ರಮ ರೂಪಿಸಿದ್ದು, ಇದಕ್ಕಾಗಿ ಭೂಕಂದಾಯ ಅಧಿನಿಯಮದ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಹು ಉದ್ದೇಶಿತ ಕಾರ್ಯಕ್ರಮವನ್ನು ಹಳ್ಳ ಹಿಡಿಸಿ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದರು.

ಬಣ್ಣಬಣ್ಣದ ಹಕ್ಕುಪತ್ರ: ರಾಜ್ಯ ಸರ್ಕಾರ ಹಕ್ಕುಪತ್ರಗಳಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ವಸತಿ ಸಚಿವರು ಹಾಗೂ ಕ್ಷೇತ್ರದ ಶಾಸಕರ ಫೋಟೋಗಳನ್ನು ಹಾಕಿ ಬಣ್ಣಬಣ್ಣದ ಹಕ್ಕು ಪತ್ರಗಳನ್ನು ವಿತರಿಸಲು ಹೊರಟಿದೆ. ಹಕ್ಕು ಪತ್ರ ವಿತರಣೆಯು ಪ್ರಧಾನಮಂತ್ರಿಗಳ ವ್ಯಾಪ್ತಿಗೆ ಬರುತ್ತದೆಯೇ? ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಹಗಲು ರಾತ್ರಿ ಎನ್ನದೆ ತಹಸೀಲ್ದಾರ್‌ ಅವರು ರಾತ್ರಿ 9 ಗಂಟೆಯವರೆಗೂ ಹಕ್ಕುಪತ್ರಗಳಿಗೆ ಸಹಿ ಹಾಕುತ್ತಾ ಕೆಲಸ ಮಾಡುತ್ತಿದ್ದಾರೆ. ಹಕ್ಕು ಪತ್ರಗಳನ್ನು ಆಯಾ ಗ್ರಾಮಗಳಲ್ಲಿ ಗ್ರಾಮ ಸಭೆ ಮಾಡಿ ಗ್ರಾಮ ಪಂಚಾಯಿತಿಗಳು ವಿತರಣೆ ಮಾಡಬೇಕು. ಆದರೆ ಬಿಜೆಪಿ ಸರ್ಕಾರ ಬೇಕಾಬಿಟ್ಟಿಹಕ್ಕುಪತ್ರಗಳನ್ನು ನೀಡುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಡುಗೊಲ್ಲ ಮುಖಂಡ ಶ್ರೀನಿವಾಸ್‌ ಬಾಬು ಮಾತನಾಡಿ, ಜಯಚಂದ್ರ ಅವರು ಶಾಸಕರಾಗಿದ್ದ ಸಮಯದಲ್ಲಿ ಕಾಡುಗೊಲ್ಲ ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಎಕರೆ ಜಮೀನನ್ನು ಮಂಜೂರು ಮಾಡಿಸಿ 75 ಲಕ್ಷ ಅನುದಾನವನ್ನು ಕೊಟ್ಟಿದ್ದರು. ಅಲ್ಲದೆ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮ ಮಾಡಲು ಶ್ರಮ ಹಾಕಿದ್ದನ್ನು ಮರೆಯಬಾರದು. ಸತ್ತ ಕುರಿಗೆ 5 ಸಾವಿರ ರುಪಾಯಿ ಪರಿಹಾರ ಧನ ನೀಡುವಂತಹ ಯೋಜನೆ ಜಾರಿಗೊಳಿಸಿ ಕುರಿಗಾಯಿಗಳ ಹಿತ ರಕ್ಷಣೆ ಮಾಡಿದ್ದರು ಎಂದರು .

ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಅರ್‌.ಮಂಜುನಾಥ್‌, ಕೆಪಿಸಿಸಿ ಸದಸ್ಯ ಟಿ.ಲೋಕೇಶ್‌, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ್‌, ಎಸ್‌.ಟಿ.ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಬಾಬು, ಚಂಗಾವರ ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಬೊಮ್ಮಕ್ಕ, ಶಂಕರೇಗೌಡ, ಭೂತಮ್ಮ ನಾಗರಾಜ್‌ ಮುಖಂಡರಾದ ಶಿವು ಚಂಗಾವರ, ಕಾಡುಗೊಲ್ಲ ಮುಖಂಡ ಡಿಎಂಪಿ ಕರಿಯಣ್ಣ , ಜಯಪ್ರಕಾಶ್‌, ರಾಮಕೃಷ್ಣ, ಗಿರೀಶ್‌, ಕೃಷ್ಣಪ್ಪ,ನಾಗಮ್ಮ, ಸಂತೋಷ್‌ ,ಹನುಮಂತರಾಯಪ್ಪ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು

click me!