ಭಾರೀ ಮಳೆಯಿಂದ ಕೊಡಗಿನಲ್ಲಿ ಪ್ರವಾಹ ಬಂದ ಪ್ರದೇಶಗಳಲ್ಲಿ ಇದೀಗ ಜನ ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ. ಕೊಡಗಿನಲ್ಲಿ ಇನ್ನೂ ಮಳೆಯಾಗುತ್ತಿದ್ದು, ರೋಗ ಗುಣಮುಖವಾಗುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿ ಸಕಾಲದಲ್ಲಿ ವೈದ್ಯ ಸೇವೆ ದೊರೆಯದೆ ಜನ ತೊಂದರೆ ಪಡುವಂತಾಗಿದೆ.
ಮಡಿಕೇರಿ(ಸೆ.08): ಹವಾಮಾನ ವೈಪರೀತ್ಯ ಬೆನ್ನಲ್ಲೇ ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಾಗರಿಕರು ವಿವಿಧ ರೋಗಗಳಿಂದ ಬಳಲುತ್ತಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆ ರೋಗಿಗಳಿಂದ ತುಂಬಿದೆ.
ಪಟ್ಟಣದ ನೆರೆ ಪೀಡಿತ ಬಡಾವಣೆಗಳ ನಾಗರಿಕರು ಜ್ವರ ಬಾಧೆಗೆ ಒಳಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರೆ ಇನ್ನೊಂದೆಡೆ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲೂ ರೋಗಿಗಳು ಚಿಕಿತ್ಸೆಗಾಗಿ ಮುಗಿಬೀಳುತ್ತಿದ್ದಾರೆ.
ಹಾಸಿಗೆಗಳು ಭರ್ತಿ:
ಕಳೆದ ಕೆಲವು ದಿನಗಳಿಂದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳರೋಗಿಗಳ 50 ಹಾಸಿಗೆಗಳು ಭರ್ತಿಯಾಗಿದೆ. ಹೆಚ್ಚುವರಿ ರೋಗಿಗಳು ತಮ್ಮ ಆರೋಗ್ಯ ಸುಧಾರಣೆಗಾಗಿ ಬದಲಿ ವ್ಯವಸ್ಥೆ ಮಾಡಬೇಕಾಗಿದೆ. ಪಟ್ಟಣದ ಕಾಲನಿಯೊಂದರಲ್ಲಿ ಡೆಂಘೀ ಜ್ವರದ ಬಗ್ಗೆ ಅಲ್ಲಿನ ನಾಗರಿಕರಲ್ಲಿ ಆತಂಕ ಮೂಡಿದ್ದು ಆರೋಗ್ಯ ಇಲಾಖೆಯ ಸಿಬ್ಬಂದಿ ತಂಡ ಸ್ಥಳೀಯ ಬಡಾವಣೆಗಳಿಗೆ ಭೇಟಿ ನೀಡಿ, ದಿನವಿಡೀ ಲಾರ್ವ ಸಮೀಕ್ಷೆಯಲ್ಲಿ ತೊಡಗಿದೆ.
ಖಾಸಗಿ ವೈದ್ಯರು ಡೆಂಘೀ ಪ್ರಕರಣ ಎಂದು ದೃಢೀಕರಿಸಿದರೆ ಸರ್ಕಾರಿ ಆಸ್ಪತ್ರೆ ವೈದ್ಯರು ಮಲೇರಿಯಾಕ್ಕೆ ಔಷಧಿ ನೀಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ್ ಸೂಚನೆ ಮೇರೆಗೆ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್ ಅವರನ್ನು ಕುಶಾಲನಗರಕ್ಕೆ ಕಳುಹಿಸಿದ್ದು ಜ್ವರ ಪ್ರಕರಣ ಕಂಡುಬಂದಿರುವ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಸ್ವಚ್ಛತೆ ಜಾಗೃತಿ:
ಡೆಂಘೀ ವರದಿಯಾದ ಬೆನ್ನಲ್ಲೇ ಕುಶಾಲನಗರ ಆರೋಗ್ಯ ಸಮುದಾಯ ಕೇಂದ್ರ ಆರೋಗ್ಯ ನಿರೀಕ್ಷಕ ಮುಖೇಶ್, ಆರೋಗ್ಯ ಸಹಾಯಕಿ ಡಿ.ಎಂ.ಸುಶೀಲ ಮತ್ತು ಆಶಾ ಕಾರ್ಯಕರ್ತೆಯರ ತಂಡ ಕೆಎಚ್‌ಬಿ ಕಾಲನಿಯ ಪ್ರತಿ ಮನೆಮನೆಗೆ ತೆರಳಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಮನೆಯ ನೀರಿನ ತೊಟ್ಟಿಯಲ್ಲಿ, ಟಯರ್ ಮತ್ತಿತರ ವಸ್ತುಗಳಲ್ಲಿ ಲಾರ್ವಗಳು ತುಂಬಿರುವುದು ರೋಗಗಳಿಗೆ ಕಾರಣವಾಗುತ್ತಿದೆ.
ಪ್ರತಿ ಮನೆಯಲ್ಲಿ ಸ್ವಚ್ಛತೆ ಕಾಪಾಡಿ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಾಗರಿಕರಿಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಡೆಂಘೀಗೆ ಮಲೇರಿಯಾ ಔಷಧಿ:
ಕುಶಾಲನಗರದ ಕೆಎಚ್‌ಬಿ ಕಾಲನಿಯ ನಿವಾಸಿಯೊಬ್ಬರ ಇಬ್ಬರು ಮಕ್ಕಳು ಜ್ವರ ಪೀಡಿತರಾಗಿದ್ದು ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ಮಲೇರಿಯಾಕ್ಕೆ ಔಷಧಿ ನೀಡಿದ್ದಾರೆ. ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾದ ಹಿನ್ನೆಲೆಯಲ್ಲಿ ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂದರ್ಭ ಖಾಸಗಿ ಆಸ್ಪತ್ರೆಯ ವೈದ್ಯರು ಡೆಂಘೀ ಪೀಡಿತ ಜ್ವರ ಎಂದು ದೃಢೀಕರಿಸಿ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದಾರೆ ಎಂದು ಅವರು ದಾಖಲೆ ಸಹಿತ ಮಾಹಿತಿ ಒದಗಿಸಿದ್ದಾರೆ.
viral fever spreads in kodagu flooded areas